ಬುಧವಾರ, ಸೆಪ್ಟೆಂಬರ್ 18, 2019
25 °C

ಒಲಿಂಪಿಯನ್‌ಗಳ ಬಗ್ಗೆ ಗೌರವ

Published:
Updated:
ಒಲಿಂಪಿಯನ್‌ಗಳ ಬಗ್ಗೆ ಗೌರವ

ಬೆಂಗಳೂರು: `ಕ್ರಿಕೆಟ್‌ನಲ್ಲಿ ಒಮ್ಮೆ ವೈಫಲ್ಯ ಅನುಭವಿಸಿದರೆ, ಅದರಿಂದ ಮೇಲೆದ್ದು ಬರಲು ಇನ್ನೊಂದು ಅವಕಾಶ ಲಭಿಸುತ್ತದೆ. ಆದರೆ ಒಲಿಂಪಿಕ್ ಸ್ಪರ್ಧೆಗಳಲ್ಲಿ ವಿಫಲರಾದರೆ ಅದರಿಂದ ಹೊರಬರಲು ಮತ್ತೆ ನಾಲ್ಕು ವರ್ಷ ಕಾಯಬೇಕಾಗುತ್ತದೆ. ಈ ಕಾರಣ ಒಲಿಂಪಿಯನ್‌ಗಳು ಹಾಗೂ ಒಲಿಂಪಿಕ್‌ನ ಕನಸು ಕಾಣುವವರ ಬಗ್ಗೆ ಅಪಾರ ಗೌರವವಿದೆ~ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ನುಡಿದರು.ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಶೂಟರ್ ಅಭಿನವ್ ಬಿಂದ್ರಾ ಅವರ ಜೀವನದ ಅನುಭವಗಳನ್ನು ಒಳಗೊಂಡ `ಎ ಶಾಟ್ ಅಟ್ ಹಿಸ್ಟರಿ; ಮೈ ಅಬ್ಸೆಸಿವ್ ಜರ್ನಿ ಟು ಒಲಿಂಪಿಕ್ ಗೋಲ್ಡ್~ ಪುಸ್ತಕ ಬಿಡುಗಡೆ ಮಾಡಿದ ದ್ರಾವಿಡ್ ಈ ಮಾತುಗಳನ್ನು ಹೇಳಿದರು. ಕ್ರೀಡಾ ಪತ್ರಕರ್ತ ರೋಹಿತ್ ಬ್ರಿಜ್‌ನಾಥ್ ಈ ಪುಸ್ತಕ ಬರೆದಿದ್ದಾರೆ. ಬ್ರಿಜ್‌ನಾಥ್ ಇದೇ ವೇಳೆ ದ್ರಾವಿಡ್ ಮತ್ತು ಬಿಂದ್ರಾ ಜೊತೆ `ಕ್ರೀಡಾ ಮನಸ್ಥಿತಿ~ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು.`ಬಿಂದ್ರಾ ಒಬ್ಬ ಹುಟ್ಟು ಹೋರಾಟಗಾರ. ನಮ್ಮಿಬ್ಬರ ಕ್ರೀಡಾ ಜೀವನ ಕೆಲವೊಂದು ಸಾಮ್ಯತೆಗಳನ್ನು ಹೊಂದಿದೆ~ ಎಂದು ದ್ರಾವಿಡ್ ಸಂವಾದದ ವೇಳೆ ತಿಳಿಸಿದರು.2004ರ ಅಥೆನ್ಸ್ ಒಲಿಂಪಿಕ್ ಕೂಟದಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡದ್ದು ಜೀವನದಲ್ಲಿ ಹೊಸ ತಿರುವಿಗೆ ಹೇಗೆ ಕಾರಣವಾಯಿತು ಎಂಬುದನ್ನು ಬಿಂದ್ರಾ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಥೆನ್ಸ್‌ನಲ್ಲಿ ಬಿಂದ್ರಾ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದರು. ಆದರೆ ಫೈನಲ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಈ ಸೋಲು ದೊಡ್ಡ ಬದಲಾವಣೆಗೆ ಹಾದಿಯೊದಗಿಸಿತು ಎಂಬುದನ್ನು ತಿಳಿಸಿದ್ದಾರೆ.ಒಬ್ಬ ಶೂಟರ್ ಕಠಿಣ ಅಭ್ಯಾಸದಿಂದ ಹೇಗೆ ಯಶಸ್ಸು ಸಾಧಿಸಬಲ್ಲ ಎಂಬುದು ಈ ಪುಸ್ತಕದಲ್ಲಿದೆ. ಪುಸ್ತಕ ಯುವ ಶೂಟರ್‌ಗಳಿಗೆ ಉತ್ತೇಜನ ನೀಡುವ ವಿಶ್ವಾಸವನ್ನು ಬಿಂದ್ರಾ ಹೊಂದಿದ್ದಾರೆ. `ಕ್ರೀಡಾ ಜೀವನದಲ್ಲಿ ಇದುವರೆಗೆ ಎದುರಾದ ಅನುಭವಗಳನ್ನು ಇಲ್ಲಿ ವಿವರಿಸಿದ್ದೇನೆ. ಪುಸ್ತಕ ಭವಿಷ್ಯದ ಅಥ್ಲೀಟ್‌ಗಳಿಗೆ ನೆರವಾಗಬಹುದು~ ಎಂದು ಚಾಂಪಿಯನ್ ಶೂಟರ್ ನುಡಿದರು.`ಒಲಿಂಪಿಕ್‌ನಲ್ಲಿ ಪದಕ ಗೆಲ್ಲಬೇಕೆಂಬ ಕನಸನ್ನು 15 ವರ್ಷಗಳ ಹಿಂದೆಯೇ ಕಂಡಿದ್ದೆ. ಅದು ಈಡೇರಿದಾಗ ಏನು ಮಾಡಬೇಕೆಂದು ತೋಚಲಿಲ್ಲ. ಆದರೆ ಈಗ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಸಿವು ಇದೆ~ ಎಂದರು ಬಿಂದ್ರಾ.

Post Comments (+)