ಒಲಿಂಪಿಯನ್ ಕೆನೆತ್ ಪೊವೆಲ್

ಗುರುವಾರ , ಜೂಲೈ 18, 2019
22 °C

ಒಲಿಂಪಿಯನ್ ಕೆನೆತ್ ಪೊವೆಲ್

Published:
Updated:

ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ವಿಶ್ವದ ಅಗ್ರಮಾನ್ಯ ವೇಗದ ಓಟಗಾರರನ್ನೇ ಹಿಂದಿಕ್ಕಿದ್ದನೆಂದರೆ ಯಾರಾದರೂ ನಂಬಲು ಸಾಧ್ಯವೇ?

ನಂಬಲೇ ಬೇಕು! ಇವರು ಕೆನೆತ್ ಪೊವೆಲ್.ಅದು 1964ರ ಟೋಕಿಯೊ ಒಲಿಂಪಿಕ್ಸ್. 100ಮೀಟರ್ಸ್ ಓಟದ ಹೀಟ್ಸ್‌ನಲ್ಲಿ ಓಡಿದ ಕೆನೆತ್ 4ನೆಯವರಾಗಿ ಗುರಿ ಮುಟ್ಟಿದ್ದರು. ಅಂದು ವಿಶ್ವದ 8ನೇ ಕ್ರಮಾಂಕದ ಓಟಗಾರ ಮಡಗಾಸ್ಕರ್ ದೇಶದ ರೊವೆಲ್ ಮೈಸ್ಟೊ 7ನೇ ಸ್ಥಾನಕ್ಕಿಳಿದಿದ್ದರು.ವಿಶ್ವದ 10ನೇ ಕ್ರಮಾಂಕದ ಓಟಗಾರ ಪೋಲೆಂಡ್‌ನ ಸೈಕಾ 5ನೆಯವರಾಗಿ ಗುರಿ ತಲುಪಿದ್ದರು. ಆದರೆ ನಂತರದ ಹೀಟ್ಸ್‌ನಲ್ಲಿ ಕೆನೆತ್ ಹಿಂದೆ ಬಿದ್ದರು. 1968ರ ಒಲಿಂಪಿಕ್ಸ್‌ನಲ್ಲಿ ರೊವೆಲ್ 100 ಮೀಟರ್ಸ್ ಓಟದ ಫೈನಲ್‌ನಲ್ಲಿ 7ನೇ ಸ್ಥಾನಕ್ಕೇರಿದ್ದರು!ಕೆನೆತ್ ನಮ್ಮವರು. ಕೆಜಿಎಫ್‌ನಲ್ಲೇ ಹುಟ್ಟಿ, ಅಲ್ಲಿಯೇ ಶಿಕ್ಷಣ ಪಡೆದು ತಮ್ಮ 19ನೇ ವಯಸ್ಸಿಗೆ ಹುಟ್ಟೂರು ಬಿಟ್ಟು ಮೊದಲ ಬಾರಿಗೆ ಬೆಂಗಳೂರಿಗೆ ಬಂದವರು. ಮತ್ತೆಂದೂ ಬೆಂಗಳೂರು ಬಿಟ್ಟು ಹೋದವರಲ್ಲ. ಕೆಜಿಎಫ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕ್ರೀಡಾಕೂಟಗಳಲ್ಲಷ್ಟೇ ಪಾಲ್ಗೊಂಡಿದ್ದ ಅನುಭವ ಕೆನೆತ್ ಅವರದಾಗಿತ್ತು.ಬೆಂಗಳೂರಿಗೆ ಬಂದ ಮೇಲೆ ಫ್ರೆಜರ್‌ಟೌನ್‌ನ ಅಣ್ಣಾಸ್ವಾಮಿ ಮೈದಾನದಲ್ಲಿ ಸಂಜೆ ಹೊತ್ತು ಗೆಳೆಯರೊಂದಿಗೆ ಹರಟೆ ಹೊಡೆಯಲು ಹೋಗುತ್ತಿದ್ದರಂತೆ. ಆಗ ಆಕಸ್ಮಿಕವಾಗಿ ಪರಿಚಯವಾದ ಕೃಷ್ಣ ಎಂಬುವವರು `ನೀನೂ ನಮ್ಮ ಅಥ್ಲಟಿಕ್ ತರಬೇತಿ ಶಿಬಿರಕ್ಕೆ ಬಾ~ ಎಂದು ಕರೆದಾಗ, ಕೆನೆತ್ ನಕ್ಕು ಬಿಟ್ಟಿದ್ದರಂತೆ.ಆದರೂ ಕುತೂಹಲದಿಂದ ಮರುದಿನ ಕೃಷ್ಣ ನಡೆಸುತ್ತಿದ್ದ ತರಬೇತಿ ಶಿಬಿರಕ್ಕೆ ಹೋಗಿದ್ದರಂತೆ. ನಂತರ ಆಸಕ್ತಿ ಗರಿ ಕೆದರಿತು. ನಿತ್ಯವೂ ಅಭ್ಯಾಸ ನಡೆಸತೊಡಗಿದರು. ಕೃಷ್ಣ ಆ ದಿನಗಳಲ್ಲಿ ರೇಂಜರ್ಸ್ ಕ್ಲಬ್ ಎಂಬ ಸಂಸ್ಥೆಯನ್ನು ಕಟ್ಟಿ ಅದರ ಮೂಲಕ ತರಬೇತಿ ನೀಡುತ್ತಿದ್ದರು.

 

ಆ 200 ಮೀಟರ್ಸ್ ಟ್ರ್ಯಾಕ್‌ನಲ್ಲಿ ನಿತ್ಯವೂ ಓಡುತ್ತಿದ್ದ ಕೆನೆತ್ ಆರು ತಿಂಗಳು ಕಳೆದ ಮೇಲೆ ಅಂದರೆ 1959ರ ಜುಲೈ 31ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡರು. ಅಲ್ಲಿ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಆ ಕಾಲದ ಚಾಂಪಿಯನ್ ರವಿಮಣಿಯನ್ನು ಹಿಂದಿಕ್ಕಿ ಚಿನ್ನ ಗೆದ್ದರು.ಆ ದಿನಗಳಲ್ಲಿ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ಕಡೆ ನಡೆಯುತ್ತಿದ್ದ ಅಥ್ಲೆಟಿಕ್ ಕೂಟಗಳಲ್ಲೆಲ್ಲಾ ಕೆನೆತ್ ಆಗಿನ `ಮೈಸೂರು~ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. 1962ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸಗೆ ತೆರಳಲಿದ್ದ 19 ಮಂದಿ ಅಥ್ಲೀಟ್‌ಗಳ ತಂಡದಲ್ಲಿ ಇವರು ಸ್ಥಾನ ಗಳಿಸಿದ್ದರು.1966ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸಗೆ ಹೋಗಬೇಕಿದ್ದ 29 ಅಥ್ಲೀಟ್‌ಗಳ ತಂಡದಲ್ಲಿಯೂ ಸ್ಥಾನ ಪಡೆದಿದ್ದರು. ಆ ಎರಡೂ ಸಲ ಹಣಕಾಸಿನ ಸಮಸ್ಯೆಯನ್ನೇ ಮುಂದಿಟ್ಟು, ಕೆಲವು ಅಥ್ಲೀಟ್‌ಗಳನ್ನು ತಂಡದಿಂದ ಕೈಬಿಡಲಾಗಿತ್ತು. ಎರಡೂ ಸಲ ಕೆನೆತ್ ಮೇಲೆಯೇ ಅರ್ಧಚಂದ್ರ ಪ್ರಯೋಗ ಮಾಡಲಾಗಿತ್ತು.ಆದರೆ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿದ್ದ ಭಾರತದ ಅಥ್ಲೀಟ್ಸ್ ತಂಡದಲ್ಲಿ ಕೆನೆತ್ ಸ್ಥಾನ ಪಡೆದಿದ್ದರು. 1964ರ ಅಕ್ಟೋಬರ್ 20 ಮತ್ತು 21ರಂದು ನಡೆದ 4x100 ಮೀಟರ್ಸ್ ರಿಲೆ ಓಟದ ಸ್ಪರ್ಧೆಯಲ್ಲಿ ಭಾರತ ತಂಡ ಸೆಮಿಫೈನಲ್ ತಲುಪಿತ್ತು. ಒಲಿಂಪಿಕ್ಸ್‌ನ ರಿಲೆಯಲ್ಲಿ ಭಾರತ ಅದೊಂದೇ ಸಲ ಅಷ್ಟೆತ್ತರ ಏರಿದ್ದು. ಅಲ್ಲಿ ಎರಡನೇ ಹೀಟ್‌ನಲ್ಲಿ 40.6 ಸೆಕೆಂಡುಗಳಲ್ಲಿ ಓಡಿದ್ದ ಭಾರತದ ಓಟಗಾರರು ಸೆಮಿಫೈನಲ್‌ನಲ್ಲಿ 40.5 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಆದರೆ ಫೈನಲ್ ತಲುಪಲಾಗಲಿಲ್ಲ.ಅಂದು ರಿಲೆಯಲ್ಲಿ ಓಡಿದ್ದ ಆಂಟನಿ ಫ್ರಾನ್ಸಿಸ್ ಕುಟಿನೊ, ಮಖಾನ್ ಸಿಂಗ್, ಕೆನೆತ್ ಪೊವೆಲ್ ಮತ್ತು ರಾಜಶೇಖರನ್ ಪಿಚ್ಚಯ್ಯ ಭಾರತ ಕಂಡ ಶ್ರೇಷ್ಠ ವೇಗದ ಓಟಗಾರರು. ಅಲ್ಲಿ ಅಮೆರಿಕ 39.0 ಸೆಕೆಂಡುಗಳಲ್ಲಿ ಓಡಿ ಒಲಿಂಪಿಕ್ ಚಿನ್ನದ ಜತೆಗೆ ವಿಶ್ವದಾಖಲೆಯನ್ನೂ ಹೊಸದಾಗಿ ಬರೆಯಿತು. ಪೋಲೆಂಡ್ ಮತ್ತು ಫ್ರಾನ್ಸ್ ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಪಡೆದಿದ್ದವು.ಕೆನೆತ್ 1960ರಿಂದ 68ರವರೆಗೆ ಸುಮಾರು ಒಂದು ದಶಕದ ಕಾಲ ರಾಜ್ಯ ಚಾಂಪಿಯನ್ ಆಗಿದ್ದರು. ಇವರು 1965ರಲ್ಲಿ ಪುಣೆಯಲ್ಲಿ ನಡೆದಿದ್ದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ 10.4 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ್ದರು.

 

ಇವರು 1964ರಲ್ಲಿ 10.5 ಸೆಕೆಂಡುಗಳಲ್ಲಿ ಓಡಿ ನಿರ್ಮಿಸಿದ್ದ ರಾಜ್ಯ ದಾಖಲೆ 1995ರವರೆಗೆ ಅಂದರೆ 31 ವರ್ಷಗಳ ಕಾಲ ಅಬಾಧಿತವಾಗಿತ್ತು. 200 ಮೀಟರ್ಸ್ ಓಟದಲ್ಲಿ ಇವರು ನಿರ್ಮಿಸಿದ್ದ 21.1 ಸೆಕೆಂಡುಗಳ ರಾಜ್ಯ ದಾಖಲೆಯನ್ನು 36 ವರ್ಷಗಳ ಕಾಲ ಯಾರಿಗೂ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ.ಕಂಠೀರವ ಕ್ರೀಡಾಂಗಣದಲ್ಲಿ 100 ಮೀ. ಓಟದಲ್ಲಿ ರಾಜ್ಯ ದಾಖಲೆ ನಿರ್ಮಿಸಿ ಸರಿಯಾಗಿ ಒಂದು ದಶಕ ಕಳೆದ ನಂತರ ಇವರಿಗೆ ಏಷ್ಯನ್ ಕ್ರೀಡಾಕೂಟಕ್ಕೆ ಹೋಗಲು ಅವಕಾಶ ಸಿಕ್ಕಿತ್ತು. ಅಲ್ಲಿ 4x100 ಮೀಟರ್ಸ್ ರಿಲೆ ಓಟದಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು.ಆ ತಂಡದಲ್ಲಿ ಕೆನೆತ್ ಜತೆಗೆ ಎ.ಪಿ.ರಾಮಸ್ವಾಮಿ, ರಮೇಶ್ ತೋಡೆ, ಓವೆಲ್ ಥಾಮಸ್ ಓಡಿದ್ದರು. ಅಲ್ಲಿಂದ ವಾಪಸಾದ ನಂತರ ಕೆನೆತ್ ಅಥ್ಲೆಟಿಕ್ ರಂಗದಿಂದ ದೂರವಾದರು. ಭಾರತ ಕಂಡ ಈ ಅನನ್ಯ ಓಟಗಾರನಿಗೆ ಸರ್ಕಾರ 1965ರಲ್ಲಿಯೇ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry