ಬುಧವಾರ, ಅಕ್ಟೋಬರ್ 16, 2019
22 °C

ಒಲುಮೆ ಮತ್ತು ಕುಲುಮೆ

Published:
Updated:

`ನಮ್ಮ ಧಾರಾವಾಹಿಯ ಕಥೆ ಶೀರ್ಷಿಕೆಗೆ ತದ್ವಿರುದ್ಧವಾದುದು. `ನಿನ್ನೊಲುಮೆಯಿಂದಲೇ...~ ಎಂಬ ಹೆಸರನ್ನು ಬೇಕೆಂತಲೇ ಇಟ್ಟಿದ್ದೇವೆ. ದಬ್ಬಾಳಿಕೆ ಮಾಡುವ ಗಂಡಸರನ್ನು ಸರಿದಾರಿಗೆ ತರುವ ಉದ್ದೇಶ ನಮ್ಮದು.ಕನಸು ಕಂಡು ನಿರಾಶರಾದ ಹೆಣ್ಣುಮಗಳ ಕತೆ ಇದು. 40ರ ನಂತರ ಬರುವ ಮತ್ತೊಂದು ಹದಿ ಹರೆಯದಂಥ ಸೂಕ್ಷ್ಮ ವಿಚಾರ ಇಟ್ಟುಕೊಂಡು ಈ ಧಾರಾವಾಹಿಯ ಕಥೆ ಹೆಣೆದಿದ್ದೇನೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಸತ್ಯಕಥೆ~- `ನಿನ್ನೊಲುಮೆಯಿಂದಲೇ..~ ಧಾರಾವಾಹಿಯ ನಿರ್ದೇಶಕ ವಿನು ಬಳಂಜ ತಮ್ಮ ಹೊಸ ಧಾರಾವಾಹಿ ಬಗ್ಗೆ ಹೇಳಿಕೊಂಡಿದ್ದು ಹೀಗೆ.ಇಂಥ ಕತೆಗಳು ಸಮಾಜದ ಮೇಲೆ  ದುಷ್ಪರಿಣಾಮ ಬೀರುವುದಿಲ್ಲವೇ ಎನ್ನುವ ಪ್ರಶ್ನೆ ಪತ್ರಕರ್ತರದು. ಈ ತಕರಾರಿಗೆ ಬಳಂಜ, `ಬಾಡಿಗೆ ತಾಯಿ ವಿಚಾರ ಇದ್ದ `ಜೋಗುಳ~ ಮತ್ತು ದೇವದಾಸಿಯ ಬದುಕನ್ನು ಹೇಳಿದ್ದ `ಗೆಜ್ಜೆಪೂಜೆ~ ಧಾರಾವಾಹಿ ಮಾಡುವಾಗಲು ಕೆಲವರು ವಿರೋಧಿಸಿದರು. ಆದರೆ ಆ ವಿಚಾರಗಳ ಬಗ್ಗೆ ನಾವು ಎಚ್ಚರ ಮೂಡಿಸಿದ್ದೆವು~ ಎಂದು ಸಮರ್ಥನೆ ನೀಡಿದರು.ಧಾರಾವಾಹಿಗೆ ಚಿತ್ರಕತೆ - ಸಂಭಾಷಣೆ ಬರೆದಿರುವ ಸತ್ಯಮೂರ್ತಿ ಆನಂದೂರು, `ನಮ್ಮ ಧಾರಾವಾಹಿ ಸಂಬಂಧಗಳ ನೆಲೆಗಟ್ಟಿನ ಮೇಲೆ ನಿಂತಿದೆ. ಇದು ಒಬ್ಬ ಹೆಂಗಸಿನ ನಿಜವಾದ ಕಥೆ. ಗಂಡ-ಹೆಂಡತಿ ಬೇರೆಯಾಗಲು ಕಾರಣಗಳನ್ನು ಇದರಲ್ಲಿ ತಿಳಿಸಲಾಗಿದೆ.ಗಂಡಸಿನ ಪಾಳೇಗಾರಿಕೆಯಿಂದ ನಲುಗಿದ ಪತ್ನಿ ಮಕ್ಕಳೊಂದಿಗೆ ಸೇರಿ ಸ್ವತಂತ್ರವಾಗಲು ಧೈರ್ಯ ಮಾಡುವ ದಿಟ್ಟತನ ಧಾರಾವಾಹಿಯಲ್ಲಿದೆ. ಗಂಡಸರು ಈ ಧಾರಾವಾಹಿ ನೋಡಿ ಬದಲಾಗಲಿ ಎಂಬುದೇ ನಮ್ಮ ಆಶಯ~ ಎಂದರು.ಧಾರಾವಾಹಿ ನೋಡುವವರು ಹೆಂಗಸರಲ್ಲವೇ? ಗಂಡಸರು ಬದಲಾಗುವ ಮಾತೆಲ್ಲಿ? ಎನ್ನುವ ಪ್ರಶ್ನೆಯನ್ನು ಸತ್ಯಮೂರ್ತಿ ನಗುವಿನಿಂದಲೇ ತಣ್ಣಗಾಗಿಸಿದರು.ಕಿರುತೆರೆಯಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಅಶ್ವಿನಿ- `ಸಿನಿಮಾಗೆ ಬಂದು ನಾಲ್ಕು ವರ್ಷವಾಯಿತು. ಧಾರಾವಾಹಿಗಳಲ್ಲಿ ನಟಿಸುವ ಆಸೆಯಿತ್ತು. ಆದರೂ, ವಿನು ಕತೆ ಹೇಳಿದಾಗ ಆರಂಭದಲ್ಲಿ ಹಿಂಜರಿದಿದ್ದೆ. ಇದೀಗ ಇಂಥ ಪಾತ್ರ ಮಾಡುತ್ತಿರುವ ಬಗ್ಗೆ ಹೆಮ್ಮೆ ಎನಿಸುತ್ತಿದೆ~ ಎಂದರು. ಜ.2ರಿಂದ ಪ್ರತೀ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರ ಆರಂಭಿಸಿದೆ. ಪ್ರಮುಖ ಪಾತ್ರಗಳಲ್ಲಿ ಮಂಜುನಾಥ ಹೆಗ್ಡೆ, ಅಶ್ವಿನಿ, ಅಶೋಕ್ ಹೆಗ್ಡೆ, ಅರವಿಂದ್, ಜ್ಯೋತಿ ರೈ, ಉಷಾ ಭಂಡಾರಿ, ಸೀತಾ ಕೋಟೆ, ಹರ್ಷ, ಸಹನಾ, ಶಾಂತಲಾ ಕಾಮತ್ ಮುಂತಾದವರಿದ್ದಾರೆ. 

 

Post Comments (+)