ಬುಧವಾರ, ಏಪ್ರಿಲ್ 21, 2021
30 °C

ಒಳಗಣ್ಣಿನವರ ಪೆರೇಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳಗಣ್ಣಿನವರ ಪೆರೇಡ್

`ಸೇನೆ ಸೇರಬೇಕೆಂಬುದು ನನ್ನ ಕನಸಾಗಿತ್ತು. ಐಕ್ಯು (ಬುದ್ಧಿಮತ್ತೆ) ಕಡಿಮೆ ಇದೆ ಎಂಬ ಕಾರಣಕ್ಕೆ ಆದು ನನಸಾಗಲಿಲ್ಲ. ನ್ಯೂನತೆ ಮರೆತು ದೇಶಕ್ಕಾಗಿ ಪಥ ಸಂಚಲನ ನಡೆಸುವಾಗ ಹೆಮ್ಮೆ ಎನಿಸುತ್ತದೆ. ಕಳೆದ ಹತ್ತು ವರ್ಷದಿಂದ ಗಣರಾಜ್ಯೋತ್ಸವ ಸೇರಿದಂತೆ 20 ಪೆರೇಡ್‌ಗಳಲ್ಲಿ ಭಾಗವಹಿಸಿದ್ದೇನೆ. ಪ್ರತಿ ಬಾರಿಯೂ ಭಿನ್ನ ಅನುಭವ. ಕಳೆದ ಜನವರಿಯ ಗಣರಾಜ್ಯೋತ್ಸವದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದ್ದಕ್ಕೆ ಪ್ರಥಮ ಬಹುಮಾನ ನೀಡಿದ್ದರು. ಈ ಬಾರಿಯೂ ಅದೇ ನಿರೀಕ್ಷೆ ಇದೆ.~ಮಾತು ಮುಗಿಸಿದ ಉಮೇಶ್ ಕಣ್ಣಂಚಿನಲ್ಲಿದ್ದ ನೀರು ಒರೆಸಿಕೊಂಡರು. ಅವರು `ಸಮರ್ಥನಂ~ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿ. ಆ ಶಾಲೆಯ ಮೂವತ್ತು ಮಂದಿ ಈ ಬಾರಿಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ.ಅದೇ ರೀತಿ ರಮಣ ಮಹರ್ಷಿ ಅಂಧರ ಸಂಸ್ಥೆಯ ವಿದ್ಯಾರ್ಥಿಗಳು ನಲ್ವತ್ತಕ್ಕೂ ಅಧಿಕ ಬಾರಿ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದಾರೆ. ಮೂರು ಬಾರಿ ದ್ವಿತೀಯ ಸ್ಥಾನ ಪಡೆದಿದ್ದು ಹೊರತುಪಡಿಸಿದರೆ, ಮತ್ತ್ಯಾವತ್ತೂ ಮೊದಲ ಸ್ಥಾನ ಬಿಟ್ಟುಕೊಟ್ಟಿಲ್ಲ.`ಪೂರ್ಣ ಅಂಧರನ್ನು ಒಳಗಿನ ಸಾಲುಗಳಿಗೆ ಸೇರಿಸಿ, ಅಲ್ಪ ದೃಷ್ಟಿ ಇರುವವರನ್ನು ಮೊದಲ ಸಾಲಿನಲ್ಲಿ ನಿಲ್ಲಿಸಿ ಪೆರೇಡ್‌ಗೆ ತಯಾರು ಮಾಡಿದ್ದೇವೆ. ಇತರ ಮಕ್ಕಳಿಗೆ ಸಮಾನವಾಗಿ ಹೆಜ್ಜೆ ಹಾಕಿದಾಗ ಅಂಧ ಮಕ್ಕಳಿಗೆ ಭರವಸೆ ಹೆಚ್ಚುತ್ತದೆ.ಕಣ್ಣು ಕಾಣಿಸದಿದ್ದರೂ ಸಾಮರ್ಥ್ಯದಲ್ಲಿ ಕೊರತೆ ಇಲ್ಲ, ಎಲ್ಲರಂತೆ ನಾವೂ ಎಂಬ ಭಾವ ಅವರಲ್ಲಿ ಗಟ್ಟಿಯಾಗುವಂತೆ ಮಾಡುತ್ತೇವೆ. ತಯಾರು ಮಾಡುವಾಗ ಕೆಲವೊಮ್ಮೆ ಸ್ಪರ್ಶ ಅನುಭವದ (ಟಚ್ ಅಂಡ್ ಫೀಲ್) ಮೂಲಕ ಹೆಜ್ಜೆ ಹಾಕಬೇಕಾದ ವಿಧಾನವನ್ನು ಹೇಳಿಕೊಡಬೇಕಾಗುತ್ತದೆ. ಮೈದಾನದಲ್ಲೂ ಅಷ್ಟೇ, ಬ್ಯಾಂಡ್ ಸದ್ದಿನ ಆಧಾರದ ಮೇಲೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಾರೆ.ರಾಜ್ಯದ ವಿಶೇಷ ಮಕ್ಕಳು ಈವರೆಗೆ ನವದೆಹಲಿಯ ಕೆಂಪುಕೋಟೆ ಮೈದಾನದಲ್ಲಿ ಪಥ ಸಂಚಲನ ಮಾಡಿದ್ದಿಲ್ಲ. ನಮ್ಮ ಮಕ್ಕಳನ್ನು ಅಲ್ಲಿ ಕಾಣುವಂತಾಗಬೇಕು ಎಂಬುದೇ ನನ್ನ ಬಯಕೆ~ ಎಂದು ನಿಟ್ಟುಸಿರಿಟ್ಟರು ಶಿಕ್ಷಕ ತಿಮ್ಮಯ್ಯ. ಸ್ವಾತಂತ್ರ್ಯ ದಿನಕ್ಕೂ ಮುನ್ನ ಮಣೇಕ್ ಶಾ ಪೆರೇಡ್ ಗ್ರೌಂಡ್‌ನಲ್ಲಿ ೂರ್ವಸಿದ್ಧತಾ ಪಥಸಂಚಲನ ನಡೆಸಿದ ಬಳಿಕ ಇವರು ಮಾತಿಗೆ ಸಿಕ್ಕರು. ಸಮವಸ್ತ್ರ ಧರಿಸಿ, ತಂಡವನ್ನು ಮುನ್ನಡೆಸುತ್ತಿದ್ದ ಕಮಾಂಡರ್ ನಿರ್ದೇಶನದಂತೆ ಹೆಜ್ಜೆ ಹಾಕುತ್ತಿದ್ದ ಶಿಸ್ತಿನ ಸಿಪಾಯಿಗಳನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡರು. ದೇಶಭಕ್ತಿಯ ಭಾವ ಅಲ್ಲಿ ಸ್ಫುರಿಸಿತ್ತು. ಸ್ವಾತಂತ್ರ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ಎಂದರೆ ಅದೊಂದು ಪ್ರತಿಷ್ಠೆಯ ಸಂಗತಿಯೂ ಹೌದು.ಬಿಎಸ್‌ಎಫ್, ಆರ್‌ಬಿಎಫ್, ಸಿಆರ್‌ಬಿಎಫ್, ಕೆಎಸ್‌ಆರ್‌ಎಫ್, ಸಿಎಆರ್, ತಂಡಗಳು ಸಾಲಾಗಿ ಸಾಗಿ ಗೌರವ ಸೂಚಿಸಿದ ಬಳಿಕ ವಿದ್ಯಾರ್ಥಿಗಳ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಎನ್‌ಸಿಸಿ, ಎನ್‌ಎಸ್‌ಎಸ್, ಕಬ್ಸ್, ಸ್ಕೌಟ್ಸ್ ಅಂಡ್ ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್, ಟ್ರಾಫಿಕ್ ಘಟಕಗಳ ವಿದ್ಯಾರ್ಥಿಗಳೂ ಶಿಸ್ತಿನಿಂದ ಹೆಜ್ಜೆ ಹಾಕಿದರು.ಬಳಿಕ `ಉಳ್ಳಾಲ ಅಬ್ಬಕ್ಕ~ ಗೀತ ನಾಟಕವೂ ಸೇರಿದಂತೆ ಸ್ವಾತಂತ್ರ್ಯದ ದಿನದಂದು ಪ್ರದರ್ಶಿತಗೊಳ್ಳಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಾಭ್ಯಾಸ ನಡೆಸಿದರು. ಗಾಳಿ ಮೈಗೆ ತಾಕುವಷ್ಟೇ ಎತ್ತರದಲ್ಲಿ ಮೂರು ಬಾರಿ ಹಾರಿದ ಹೆಲಿಕಾಪ್ಟರ್ ಕಂಡು ಮಕ್ಕಳು ಚಕಿತರಾದರು.ಈ ಬಾರಿಯ ವಿಶೇಷ

* ಪಥಸಂಚಲನದಲ್ಲಿ 58 ತುಕಡಿಗಳಲ್ಲಿ 1900 ಸಿಬ್ಬಂದಿ/ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.* ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 2300 ಮಕ್ಕಳು ಭಾಗವಹಿಸುವರು* ಜೂಡೋ ಪ್ರದರ್ಶನವೂ ಸೇರಿ 5 ವಿಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ* ಯಾವುದೇ ವಿಪತ್ತು ಎದುರಾದಲ್ಲಿ ಪೂರ್ವತಯಾರಿಯಾಗಿ 130 ವೈದ್ಯಕೀಯ ಸಿಬ್ಬಂದಿಗಳ ನಿಯೋಜನೆಯಾಗಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.