ಗುರುವಾರ , ನವೆಂಬರ್ 21, 2019
21 °C

ಒಳಗೂ-ಹೊರಗೂ ಬಾಂಧವ್ಯ ಬೆಳೆಸಿ: ಐಜಿಪಿ

Published:
Updated:

ಗುಲ್ಬರ್ಗ: ಪೊಲೀಸ್ ಇಲಾಖೆಯ ಹಿರಿಯ-ಕಿರಿಯ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ ಎಂದು ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಮಹ್ಮದ್ ವಜೀರ್ ಅಹ್ಮದ್ ಹೇಳಿದರು.ಗುಲ್ಬರ್ಗ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ಅಧಿಕಾರಿಯನ್ನೇ ಪೊಲೀಸ್ ಕೊಂದ ಘಟನೆಯನ್ನು ಉಲ್ಲೇಖಿಸಿದ ಅವರು, ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಹಿರಿಯ ಅಧಿಕಾರಿಗಳ ಜೊತೆ ಸಮಸ್ಯೆ ಹೇಳಿಕೊಳ್ಳಬೇಕು. ಹಿರಿಯ ಅಧಿಕಾರಿಗಳೂ ಕಿರಿಯ ಪೊಲೀಸರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಅದಕ್ಕೆ ವೈಯಕ್ತಿಕ ಹಾಗೂ ಕೌಟುಂಬಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದರು.ಇಲಾಖೆಯ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹುಮುಖ್ಯ ಎಂದರು. ಜನತೆ ಸ್ವಯಂ ಪ್ರೇರಣೆಯಿಂದ ಪೊಲೀಸರ ಕಲ್ಯಾಣ- ಕಾರ್ಯಕ್ರಮಗಳಿಗೆ ನೆರವಾಗಬೇಕೇ ಹೊರತು ಒತ್ತಾಯದಿಂದ ನೆರವು ಪಡೆಯಬಾರದು ಎಂದರು.`ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು. ಉತ್ತಮ ಸೇವೆ ಸಲ್ಲಿಸುವ ಪೊಲೀಸರನ್ನು ಗೌರವಿಸುವ ಕಾರ್ಯ ಆಗಬೇಕು ಎಂದು ವೀರಣ್ಣ ಕುಂಬಾರ ಅಭಿಪ್ರಾಯಪಟ್ಟರು. ಪೊಲೀಸ್ ಕಾನ್ಸ್‌ಟೇಬಲ್ ಆಗಿ ಜನವರಿ 1972ರಲ್ಲಿ ಸೇವೆಗೆ ಸೇರಿದ ವೀರಣ್ಣ ಕುಂಬಾರ, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಅಕ್ಟೋಬರ್ 2012ರಲ್ಲಿ ರೋಜಾ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ನಿವೃತ್ತಿ ಹೊಂದಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಸತೀಶ್‌ಕುಮಾರ್, ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ಇದ್ದರು.  ಎ, ಬಿ, ಗ್ರಾಮೀಣ, ಆಳಂದ, ಚಿಂಚೋಳಿ ಮತ್ತು ಶಹಾಬಾದ ಉಪವಿಭಾಗಗಳ ಹಾಗೂ ಕೆಎಸ್‌ಆರ್‌ಪಿ, ಡಿಎಆರ್, ಮಹಿಳಾ ತುಕುಡಿಗಳಿಂದ ಪಥಸಂಚಲನ ನಡೆಯಿತು.

ಪ್ರತಿಕ್ರಿಯಿಸಿ (+)