ಶುಕ್ರವಾರ, ಜನವರಿ 24, 2020
21 °C

ಒಳಚರಂಡಿ ಕಾಮಗಾರಿ ಗುಂಡಿಗೆ ಬೈಕ್‌: ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಆಶ್ರಮ ಸಮೀಪದ ರಾವ್‌ ಬಹದ್ದೂರ್‌ ಹಯವದನರಾವ್‌ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಬಿದ್ದ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.ಇಟ್ಟಮಡು ನಿವಾಸಿ ಅಶೋಕ್‌ಕುಮಾರ್‌ (55) ಮೃತಪಟ್ಟವರು. ಮೂಲತಃ ಹಾಸನ ಜಿಲ್ಲೆಯ ಅವರು ‘ಮಹಾಪರ್ವ’, ‘ಪಲ್ಲವಿ ಅನುಪಲ್ಲವಿ’ ಮತ್ತಿತರ ಧಾರಾವಾಹಿಗಳಲ್ಲಿ ನಟಿಸಿದ್ದರು.ರಂಗ ಕಲಾವಿದರಾದ ಅವರು ಹೊಸದುರ್ಗ­ದಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಲು ಶನಿವಾರ ಬೆಳಿಗ್ಗೆ ಇತರೆ ಕಲಾವಿದರೊಂದಿಗೆ ಟೆಂಪೊ ಟ್ರಾವೆಲರ್‌ನಲ್ಲಿ ಹೋಗಿದ್ದರು. ನಾಟಕ ಪ್ರದರ್ಶನ ಮುಗಿದ ಬಳಿಕ ಹೊಸದುರ್ಗದಿಂದ ಭಾನುವಾರ ಬೆಳಗಿನ ಜಾವ ನಗರದ ಚಾಮರಾಜಪೇಟೆಗೆ ಬಂದ ಅವರು, ಸ್ನೇಹಿತನ ಮನೆಯಲ್ಲಿ ನಿಲ್ಲಿಸಿದ್ದ ಬೈಕ್‌ ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಬಿಬಿಎಂಪಿ ಕೆಲಸಗಾರರು ಒಳಚರಂಡಿ ಕಾಮ­ಗಾರಿಗಾಗಿ ರಾವ್‌ ಬಹದ್ದೂರ್‌ ಹಯವದನ­ರಾವ್‌ ರಸ್ತೆಯ ಎಡ ಭಾಗದಲ್ಲಿ ಏಳೆಂಟು ಅಡಿ ಆಳದ ಗುಂಡಿ ತೆಗೆದು ಅದರ ಸುತ್ತ ಬ್ಯಾರಿಕೇಡ್‌ ಹಾಕಿದ್ದರು. ಅದೇ ಮಾರ್ಗವಾಗಿ ಬಂದ ಅಶೋಕ್‌­ಕುಮಾರ್‌, ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ವಾಹನ ಸಮೇತ ಗುಂಡಿಯೊಳಗೆ ಬಿದ್ದ ಅವರ ಹಣೆಗೆ ಪೆಟ್ಟಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಗುಂಡಿಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‘ಶನಿವಾರ ರಾತ್ರಿ ಪತಿಯ ಮೊಬೈಲ್‌ಗೆ ಕರೆ ಮಾಡಿದ್ದಾಗ ಬೆಳಗಿನ ಜಾವ ಮನೆಗೆ ಬರುವುದಾಗಿ ತಿಳಿಸಿದ್ದರು.  ಆದರೆ, ಬೆಳಿಗ್ಗೆ ಎಂಟು ಗಂಟೆಯಾದರೂ ಅವರು ಮನೆಗೆ ಬರಲಿಲ್ಲ. ಬೆಳಿಗ್ಗೆ ಪುನಃ ಕರೆ ಮಾಡಿದಾಗ ಅವರ ಮೊಬೈಲ್‌ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಒಂಬತ್ತು ಗಂಟೆ ಸುಮಾರಿಗೆ ಪೊಲೀಸರು ನನ್ನ ಮೊಬೈಲ್‌ಗೆ ಕರೆ ಮಾಡಿ ಪತಿ ಸಾವನ್ನಪ್ಪಿರುವ ವಿಷಯ ತಿಳಿಸಿದರು’ ಎಂದು ಅಶೋಕ್‌ಕುಮಾರ್‌ ಅವರ ಪತ್ನಿ ಕಲಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.ಘಟನೆ ಸಂಬಂಧ ಬಸವನಗುಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಅನುಮತಿ ಪಡೆದಿದ್ದರು

‘ಬಿಬಿಎಂಪಿ ಅಧಿಕಾರಿಗಳು ಅನುಮತಿ ಪಡೆದು ಹತ್ತು ದಿನಗಳ ಹಿಂದೆ ಆ ಜಾಗದಲ್ಲಿ ಕಾಮಗಾರಿ ಆರಂಭಿಸಿದ್ದರು. ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಕಾಮಗಾರಿಯ ಸ್ಥಳದಲ್ಲಿ ಸೂಚನಾ ಫಲಕಗಳು ಮತ್ತು ಬ್ಯಾರಿ ಕೇಡ್‌ಗಳನ್ನು ಹಾಕಿದ್ದರು’ ಎಂದು ಬಸವನ ಗುಡಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಎನ್‌.ಆರ್‌.ವೆಂಕಟೇಶ್‌ ತಿಳಿಸಿದ್ದಾರೆ.

‘ಅಶೋಕ್‌ಕುಮಾರ್‌, ತುಂಬಾ ವೇಗವಾಗಿ ಬೈಕ್‌ ಚಾಲನೆ ಮಾಡಿಕೊಂಡು ಬಂದು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಬ್ಯಾರಿಕೇಡ್‌ ಸಹ ಗುಂಡಿಯೊಳಗೆ ಬಿದ್ದಿದೆ. ಘಟನಾ ಸಂದರ್ಭದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.‘ಘಟನೆ ವೇಳೆ ಅವರು ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದರೆ ಎಂಬುದು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಆ ಬಗ್ಗೆ ಮಾಹಿತಿ ಸಿಗಲಿದೆ’ ಎಂದು ವೆಂಕಟೇಶ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)