ಗುರುವಾರ , ನವೆಂಬರ್ 21, 2019
21 °C
ಅಮೃತಹಳ್ಳಿ ಮುನೇಶ್ವರ ಬಡಾವಣೆಯಲ್ಲಿ ಅರೆಬರೆ ಕಾಮಗಾರಿ

ಒಳಚರಂಡಿ ಕಾಮಗಾರಿ ಪೂರ್ಣಕ್ಕೆ ಮುನ್ನವೇ ಡಾಂಬರು

Published:
Updated:

ಯಲಹಂಕ: ಬ್ಯಾಟರಾಯನಪುರ ಸಮೀಪದ ಅಮೃತಹಳ್ಳಿಯ ಮುನೇಶ್ವರ ಬಡಾವಣೆಯಲ್ಲಿ ಚರಂಡಿಯನ್ನು ದುರಸ್ತಿ ಮಾಡದೆ, ಮನೆಗಳಿಗೆ ಕಾವೇರಿ ನೀರಿನ ಸಂಪರ್ಕಕ್ಕೆ ಕೊಳವೆ ಮಾರ್ಗ ಅಳವಡಿಕೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಮೊದಲೇ ಬಿಬಿಎಂಪಿ ವತಿಯಿಂದ ರಸ್ತೆಗೆ ಡಾಂಬರು ಹಾಕಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ರಸ್ತೆಯ ಕೊನೆಯ ಭಾಗದ ಕೆಲವು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕಕ್ಕೆ ಕೊಳವೆ ಮಾರ್ಗ ಅಳವಡಿಸುವ ಕಾರ್ಯ ಹಾಗೂ ಒಳಚಂರಂಡಿ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಲವು ವರ್ಷಗಳಿಂದ ಕಟ್ಟಿಕೊಂಡಿರುವ ಚರಂಡಿಯನ್ನು ದುರಸ್ತಿಗೊಳಿಸುವ ಮೊದಲೇ ರಸ್ತೆಗೆ ಡಾಂಬರು ಹಾಕುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮನೆಗಳಿಗೆ ಕಾವೇರಿ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಕೊಳವೆಮಾರ್ಗ ಅಳವಡಿಸಲು ಮತ್ತೆ ರಸ್ತೆಯನ್ನು ಅಗೆಯಲು ಅನುಮತಿ ಪಡೆಯಲು ಕಷ್ಟವಾಗುತ್ತದೆ. ಈ ಎಲ್ಲ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಿ, ನಂತರ ರಸ್ತೆಗೆ ಡಾಂಬರು ಹಾಕಬೇಕು ಎಂದು ಬಡಾವಣೆಯ ನಾಗರಿಕರು ಒತ್ತಾಯಿಸಿದ್ದಾರೆ.`ಒಳಚರಂಡಿ ಕಾಮಗಾರಿ ಆರಂಭಿಸಿ 2 ವರ್ಷಗಳು ಕಳೆದಿವೆ. ಶೇ 30ರಷ್ಟು ಕಾಮಗಾರಿ ಮಾತ್ರ ಮುಗಿಸಿ, ನಂತರ ಸ್ಥಗಿತಗೊಳಿಸಲಾಗಿದೆ. ಚರಂಡಿ ಕಟ್ಟಿಕೊಂಡು ಸರಾಗವಾಗಿ ನೀರು ಹರಿಯಲು ಅವಕಾಶ ಇಲ್ಲ. ಇದರಿಂದಾಗಿ ಕೊಳಚೆನೀರು ಚರಂಡಿಯಲ್ಲಿ ಸಂಗ್ರಹವಾಗಿ ಒಂದೇಕಡೆ ನಿಲ್ಲುತ್ತಿರುವುದರಿಂದ ಬಡಾವಣೆಯಲ್ಲಿ ದುರ್ವಾಸನೆ ಹರಡಿದೆ' ಎಂದು ಸ್ಥಳೀಯ ನಿವಾಸಿ ರಮೇಶ್ ದೂರಿದರು.`ಕೊಳಚೆ ನೀರು ಮನೆಯ ನೀರಿನ ಸಂಪ್‌ಗೆ ಇಳಿದು ನೀರು ಕಲುಷಿತವಾಗಿದ್ದು, ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಸುಮಾರು 20 ವರ್ಷಗಳಿಂದ ಸುತ್ತಮುತ್ತಲಿನ ನಿವಾಸಿಗಳು ಇಲ್ಲಿಂದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ನೀರು ಕಲುಷಿತವಾಗಿರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು, ಸೂಕ್ತ ಸಮಯಕ್ಕೆ ಈ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ಈ ಪ್ರದೇಶದಲ್ಲಿ 4-5 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. 10 ದಿನಗಳಾದರೂ ನಲ್ಲಿಗಳಲ್ಲಿ ನೀರು ಬಾರದ ಕಾರಣ ರೂ 400 ಕೊಟ್ಟು ಟ್ಯಾಂಕರ್ ನೀರು ಖರೀದಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ' ಎಂದು ಸ್ಥಳೀಯ ನಿವಾಸಿ ರತ್ನ ದೂರಿದರು.`ಶೀಘ್ರದಲ್ಲಿ ಚರಂಡಿ ದುರಸ್ತಿ'

ಬಡಾವಣೆಯ ಮುಖ್ಯರಸ್ತೆಗೆ ರೂ 22 ಲಕ್ಷ ವೆಚ್ಚದಲ್ಲಿ ಡಾಂಬರು ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಗರಿಕರು ಕಾವೇರಿ ನೀರಿನ ಸಂಪರ್ಕಕ್ಕೆ ಕೂಡಲೇ ಕೊಳವೆಮಾರ್ಗ ಅಳವಡಿಸಿಕೊಳ್ಳಲು ಮುಂದಾಗಬೇಕು. ಒಳಚರಂಡಿ ಕಾಮಗಾರಿ ಪೂರ್ಣಗೊಂಡ ನಂತರ ಮನೆಗಳಿಂದ ಮುಖ್ಯ ಕೊಳವೆಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಕಟ್ಟಿಕೊಂಡಿರುವ ಚರಂಡಿಯನ್ನು ಶೀಘ್ರದಲ್ಲೇ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗುವುದು. 5-6 ತಿಂಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು.

-ಎನ್.ಇಂದಿರಾ, ಬಿಬಿಎಂಪಿ ಸದಸ್ಯೆನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣ

ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಾಮಗಾರಿ ಆರಂಭಿಸಿದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಬಂಡೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ  ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸುಮಾರು 2.5 ಮೀಟರ್ ಆಳಕ್ಕೆ ರಸ್ತೆಯನ್ನು ಕೊರೆಯಬೇಕಾಗಿದೆ. ಪ್ರಸ್ತುತ ಪಕ್ಕದ ತಲಕಾವೇರಿ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಯೂ ಬಂಡೆ ಸಿಕ್ಕಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. 20 ದಿನಗಳಲ್ಲಿ ಈ ಬಡಾವಣೆಯಲ್ಲಿ ಕಾಮಗಾರಿ ಆರಂಭಿಸಿ, 4-5 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.

-ಗಂಗಾಧರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಜಲಮಂಡಳಿ

ಪ್ರತಿಕ್ರಿಯಿಸಿ (+)