ಒಳಚರಂಡಿ ಕಾಮಗಾರಿ ಪೂರ್ಣ ಎಂದು?

7

ಒಳಚರಂಡಿ ಕಾಮಗಾರಿ ಪೂರ್ಣ ಎಂದು?

Published:
Updated:

ಬೀದರ್: ಮಳೆ ಬಂದಾಗ ಎದುರಾ ಗುವ ಅವ್ಯವಸ್ಥೆ ಬಗೆಹರಿಸುವ ಜೊತೆಗೆ ಒಳಚರಂಡಿ, ಬಾಕ್ಸ್ ಚರಂಡಿ ವ್ಯವಸ್ಥೆ ರೂಪಿಸುವ ಮೂಲಕ ನಾಗರಿಕ ಸೌಲಭ್ಯ ಒದಗಿಸುವ, ಈಗ ಪ್ರಗತಿಯಲ್ಲಿರುವ ಕಾಮಗಾರಿ 2013ರ ಅಂತ್ಯಕ್ಕಾದರೂ ಮುಗಿದೀತೆ ಎಂಬ ಪ್ರಶ್ನೆ ಎದುರಾಗಿದೆ.ಸುಮಾರು 39 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯು ಈಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವೇಗ ಪಡೆದುಕೊಂಡಿರುವ ಕಾರಣ, ನಗರಸಭೆ ವ್ಯಾಪಿಯ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು 2014ರ ಜನವರಿ ವೇಳೆಗೆ ಮುಗಿಯುವ ನಿರೀಕ್ಷೆಯಿದೆ ಎಂಬ ವಿಶ್ವಾಸ ಅಧಿಕಾರಿಗಳದು.ನಗರದಲ್ಲಿ ಈ ಕಾಮಗಾರಿ ಜಾರಿಗೊಳಿಸುವ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಮೆಗಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್  ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದ್ದು ಗುತ್ತಿಗೆ ಒಪ್ಪಂದದ ಪ್ರಕಾರ, ಇದೇ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿತ್ತು. ವಿಳಂಬ ಕಾಮಗಾರಿಯಿಂದಾಗಿ ಆ ಸಾಧ್ಯತೆ ಕಡಿಮೆ.ಆದರೂ, ಪ್ರಸ್ತುತ ನಗರದಲ್ಲಿ ಕಾಮಗಾರಿಗೆ ವೇಗ ಬಂದಿರುವ ಕಾರಣ, ಇಷ್ಟು ವರ್ಷಗಳ ನಂತರವಾದರೂ, ಬರುವ ವರ್ಷಗಳಲ್ಲಿ ನಗರದ ಜನತೆಗೆ ಒಳಚರಂಡಿ ವ್ಯವಸ್ಥೆ ದೊರೆಯುವ ಲಕ್ಷಣಗಳಂತೂ ಗೋಚರಿಸಿದೆ.ಯೋಜನೆ ಅನುಷ್ಠಾನ ಕುರಿತಂತೆ ಸಂಪರ್ಕಿಸಿದಾಗ, ಎಇಇ ಶಶಿಕಾಂತ್ ಮಳ್ಳಿ ಅವರು, `ಜಿಲ್ಲಾಧಿಕಾರಿಗಳ ಆಸಕ್ತಿ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಒಳಚರಂಡಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹರ್ಷಗುಪ್ತಾ ಈಚೆಗೆ ಪರಿಶೀಲಿಸಿದ ಬಳಿಕ ಕಾಮಗಾರಿಗೆ ವೇಗ ಬಂದಿದೆ. ಬಹುಶಃ ಕೆಲ ಷರತ್ತುಗಳೊಂದಿಗೆ ಒಪ್ಪಂದದ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಬಹುದು. ಕಾಮಗಾರಿಗಳು ಈಗ ವೇಗವಾಗಿ ನಡೆಯುತ್ತಿರುವ ಕಾರಣ 2014 ಜನವರಿ ವೇಳಗೆ ಮುಗಿಯುವ ನಿರೀಕ್ಷೆ ಇದೆ~ ಎನ್ನುತ್ತಾರೆ.ಒಳಚರಂಡಿ ವ್ಯವಸ್ಥೆ, ಮನೆಗಳಿಂದ ಸಂಪರ್ಕ ಕೊಡುವುದು, ಮ್ಯಾನ್‌ಹೋಲ್‌ಗಳ ನಿರ್ಮಾಣ ಕಾರ್ಯವನ್ನು ಇಲ್ಲಿ  ತೆಗೆದುಕೊಂಡಿದ್ದರೆ, ಇನ್ನೊಂದು ಕಡೆ ನಗರಸಭೆಯು   ಬಾಕ್ಸ್ ಚರಂಡಿ ಗಳ ನಿರ್ಮಾಣಕ್ಕೆ ಒತ್ತು ನೀಡಿದ್ದು, ಮಳೆ ನೀರು ಸೇರಿದಂತೆ ತ್ಯಾಜ್ಯ ಸರಾಗವಾಗಿ ಹರಿದು ಹೋಗುವ ಕಾಮಗಾರಿಗಳನ್ನು ಕೈಗೊಂಡಿದೆ.ಅಧಿಕಾರಿಗಳ ಪ್ರಕಾರ, ಒಳಚರಂಡಿ ಕಾಮಗಾರಿಯು ವಿವಿಧ ವಾರ್ಡ್‌ಗಳಲ್ಲಿ ಪ್ರಗತಿಯಲ್ಲಿದ್ದು, ಒಟ್ಟಾರೆ 56 ಕಿ.ಮೀ. ಅಂತರದ ಒಳಚರಂಡಿ ನಿರ್ಮಿಸುವ ಗುರಿ ಇದೆ. ಇದರಲ್ಲಿ  ಸುಮಾರು 10 ಕಿ.ಮೀ. ಅಂತರದ್ದು ಮುಖ್ಯ ಸಂಪರ್ಕ ಚರಂಡಿಯಾಗಿದೆ. ವಾರ್ಡ್ ಸಂಖ್ಯೆ 1, 2 ಬಹುತೇಕ ಮುಗಿದಿದ್ದು, ಉಳಿದ ಕಡೆಯು ತ್ವರಿತಗತಿಯಲ್ಲಿ ನಡೆದಿದೆ.

ಮುಖ್ಯವಾದ ಸಂಪರ್ಕ ಚರಂಡಿ (ಮೇನ್ ಟ್ರಂಕ್) ನಗರದ ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಂತೆ ಇರಲಿದೆ. ಇಲ್ಲಿ ಹಳೆಯ ವ್ಯವಸ್ಥೆಯ ನೀರು ಪೂರೈಕೆ ಪೈಪು, ದೂರಸಂಪರ್ಕ ಕೇಬಲ್, ಜತೆಗೆ ಕೆಲ ಖಾಸಗಿ ಕಂಪನಿಗಳ ಒಎಫ್‌ಸಿ ಲೈನ್‌ಗಳು ಹೋಗಿವೆ.ಈ ಮಾರ್ಗಗಳಲ್ಲಿ ಯಾವ ಕಡೆ ಒಳಚರಂಡಿ ಸಂಪರ್ಕ ತೆಗೆದುಕೊಂಡು ಹೋಗಬೇಕು, ರಸ್ತೆಯ ಮಧ್ಯೆ ತೆಗೆದುಕೊಂಡು ಹೋದರೆ ಆಗುವ ಪರಿಣಾಮ ಕುರಿತಂತೆ ಚರ್ಚೆ ನಡೆದಿತ್ತು. ಈಗ  ತೀರ್ಮಾನವಾಗಿದ್ದು, ರಸ್ತೆ ಬದಿಯಲ್ಲಿಯೇ ಹಾಲಿ ಇರುವ ಕೇಬಲ್‌ಗಳನ್ನು ಗಮನಕ್ಕೆ ತೆಗೆದುಕೊಂಡು ಅಳವಡಿಸಬೇಕು ಎಂದು ತೀರ್ಮಾನ ವಾಗಿದೆ ಎಂದು ಹೇಳುತ್ತಾರೆ.ಕಾಮಗಾರಿಯಲ್ಲಿ ಗುಣಮಟ್ಟಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೊತೆಗೆ, ತ್ಯಾಜ್ಯ ಸಂಸ್ಕರಣೆ ಘಟಕ ಕುರಿತಂತೆ ಜನರಲ್ಲಿ ಇರುವ ತಪ್ಪು ಅಭಿಪ್ರಾಯ ನಿವಾರಿಸಲು ಒತ್ತು ನೀಡಲಾಗುತ್ತಿದೆ.ಸಾರ್ವಜನಿಕರಿಗೆ ಅನಾನುಕೂಲ ಆಗದ ರೀತಿಯಲ್ಲಿಯೇ ಜಾರಿಗೊಳಿಸಲು ಒತ್ತುನೀಡಲಾಗುತ್ತಿದೆ ಎಂಬುದು ಶಶಿಕಾಂತ್ ಅವರ ವಿವರಣೆ. ಆದರೂ, ಜನ ಸಮುದಾಯ ಕೂಡಾ ಈ ಕಾಮಗಾರಿಗಳ ಗುಣಮಟ್ಟ ವನ್ನು ಗಮನಿಸಿ, ಲೋಪ ಕಂಡುಬಂದಲ್ಲಿ ಧ್ವನಿ ಎತ್ತುವುದು ಅಗತ್ಯ. ಇದು, ಸುದೀರ್ಘ ಕಾಲ ಉಳಿಯಬೇಕು, ಗುಣಮಟ್ಟವೂ ಉತ್ತಮವಾಗಿ ಉಳಿಯಬೇಕು ಎಂದಾದಲ್ಲಿ ಇಂಥ ಜಾಗೃತಿ ಅಗತ್ಯವು ಹೌದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry