ಒಳಚರಂಡಿ: ತೊಂದರೆಯಲ್ಲಿ ಸಾರ್ವಜನಿಕರು

7

ಒಳಚರಂಡಿ: ತೊಂದರೆಯಲ್ಲಿ ಸಾರ್ವಜನಿಕರು

Published:
Updated:

ಯಲಹಂಕ: ವಾರ್ಡ್ ಸಂಖ್ಯೆ-4ರ ವ್ಯಾಪ್ತಿಯ ಅಳ್ಳಾಳಸಂದ್ರ ಗ್ರಾಮದ ಜನಪ್ರಿಯ ಹೆವೆನ್ಸ್ ಅಪಾರ್ಟ್‌ಮೆಂಟಿನಿಂದ ಶನಿ ಮಹಾತ್ಮ ದೇವಸ್ಥಾನದ ಕಡೆಗೆ ತೆರಳುವ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಒಳಚರಂಡಿ ಚೇಂಬರ್ ರಸ್ತೆಯಿಂದ ಮೇಲೆ ಬಂದಿರುವ ಪರಿಣಾಮ ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.ಬೆಂಗಳೂರು ಜಲಮಂಡಳಿ ವತಿಯಿಂದ ಒಳಚರಂಡಿ ವ್ಯವಸ್ಥೆಗೆ ಕೊಳವೆ ಮಾರ್ಗ ಅಳವಡಿಸಿದ ನಂತರ ಚೇಂಬರ್ ನಿರ್ಮಿಸಿ ಹಳ್ಳವನ್ನು ಮಣ್ಣಿನಿಂದ ಮುಚ್ಚಿ ಡಾಂಬರು ಹಾಕಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಮಣ್ಣು ಕುಸಿದು ಚೇಂಬರ್ ರಸ್ತೆಯ ಮೇಲೆ ಬಂದು ನಿಂತಿರುವುದರಿಂದ ನಿತ್ಯವೂ ಈ ಭಾಗದಲ್ಲಿ ತೆರಳುವ ವಾಹನ ಸವಾರರು ಪ್ರಯಾಸದಿಂದ ಸಂಚರಿಸಬೇಕಾಗಿದೆ.`ಒಳಚರಂಡಿ ಚೇಂಬರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ರಾತ್ರಿಯ ವೇಳೆಯ್ಲ್ಲಲಿ ಹಾಗೂ ಮಳೆ ಬಂದ ಸಂದರ್ಭದಲ್ಲಿ ಹಲವಾರು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಸ್ಥಳೀಯ ನಿವಾಸಿ ಎನ್.ತಿಮ್ಮರಾಜು ದೂರಿದರು.ಸ್ಥಳೀಯ ಪಾಲಿಕೆ ಸದಸ್ಯ ಎಂ.ಮುನಿರಾಜು ಪ್ರತಿಕ್ರಿಯಿಸಿ, `ಒಳಚರಂಡಿ ವ್ಯವಸ್ಥೆಗೆ ಕೊಳವೆ ಮಾರ್ಗ ಅಳವಡಿಸಿ ಚೇಂಬರ್ ನಿರ್ಮಿಸಿದ ನಂತರ ವೈಜ್ಞಾನಿಕ ರೀತಿಯಲ್ಲಿ ಅದನ್ನು ಮುಚ್ಚದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣ ಸದ್ಯಕ್ಕೆ ರಸ್ತೆಗೆ ವೆಟ್‌ಮಿಕ್ಸ್ ಸುರಿದು ಜಲ್ಲಿ ಹಾಕಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರಸ್ತೆ ಕಾಮಗಾರಿಯನ್ನು ಸೇರಿಸಲಾಗಿದ್ದು, ಹಣ ಮಂಜೂರಾದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.ಬೆಂಗಳೂರು ಜಲಮಂಡಳಿಯ ಯಲಹಂಕ ಉಪವಿಭಾಗದ ಸಹಾಯಕ ಎಂಜಿನಿಯರ್ ದೀಪಕ್, `ಒಳಚರಂಡಿ ವ್ಯವಸ್ಥೆಗೆ ಕೊಳವೆಮಾರ್ಗ ಅಳವಡಿಸಿ,  ಚೇಂಬರ್ ನಿರ್ಮಿಸಿದ ನಂತರ ಜನರು ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಬೇಂದು ಒತ್ತಡ ಹೇರಿದರು. ಸಮಯಾವಕಾಶದ ಕೊರತೆಯಿಂದ ಚೇಂಬರ್ ಅನ್ನು ರಸ್ತೆಯ ಮಟ್ಟಕ್ಕೆ ಮುಚ್ಚಿ ಡಾಂಬರು ಹಾಕಲಾಗಿತ್ತು. ಆದರೆ, ಈಚೆಗೆ ಸುರಿದ ಮಳೆಯಿಂದ ಮಣ್ಣು ಕುಸಿದ ಪರಿಣಾಮ ಈ ಸಮಸ್ಯೆ ಉಂಟಾಗಿದ್ದು, ವಾರದೊಳಗಾಗಿ ರಸ್ತೆಯನ್ನು ಸರಿಪಡಿಸಲಾಗುವುದು' ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry