ಗುರುವಾರ , ನವೆಂಬರ್ 14, 2019
19 °C

ಒಳನೋಟದ ಕೊರತೆ ಇದ್ದರೂ ಉದಾರತೆ ತೋರೋಣ

Published:
Updated:

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸಿದ ಮೊದಲ ಆಯವ್ಯಯದ ಗಾತ್ರ ಮತ್ತು ವಿವರಗಳನ್ನು ನೋಡಿದರೆ ಇದು ಐದು ತಿಂಗಳ ಹಿಂದೆ ಬಿಜೆಪಿಯ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಡಿಸಿದ ಬಜೆಟ್‌ನ ಪ್ರತಿರೂಪದಂತೆಯೇ ಇದೆ.ಮುಂದಿನ ಐದು ವರ್ಷಗಳ ಕಾಲದ ತಮ್ಮ ಆಡಳಿತ ಕಾರ್ಯಸೂಚಿಯನ್ನು ಸಿದ್ದರಾಮಯ್ಯ ಬಜೆಟ್ ಮೂಲಕ ಹೇಳಿದ್ದಾರೆ. ಇದು ಬಿಜೆಪಿ ತನ್ನ ಐದು ವರ್ಷಗಳ ಆಡಳಿತದ ಸಾಧನೆಯನ್ನು ಆಡಳಿತಾವಧಿಯ ಕಡೆಯ ಬಜೆಟ್‌ನಲ್ಲಿ ಪಟ್ಟಿ ಮಾಡಿದಂತೆಯೇ ಇದೆ. ಈ ಎರಡೂ ಬಜೆಟ್‌ಗಳನ್ನು ವಿಶ್ಲೇಷಿಸಿದರೆ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗದ ಮತ್ತು ಪ್ರಯಾಸಕರ ಕಸರತ್ತು ನಡೆಸಿದಂತೆ ಕಾಣುತ್ತದೆ.ಶುಕ್ರವಾರ ಸಿದ್ದಾರಾಮಯ್ಯ ಅವರು ಮಂಡಿಸಿದ ಆಯವ್ಯಯವನ್ನು ಸ್ಥೂಲವಾಗಿ ಎರಡು ಭಾಗದಲ್ಲಿ ವಿಶ್ಲೇಷಿಸಬಹುದು. ಮೊದಲ ಭಾಗವು ಬಜೆಟ್ ಕಸರತ್ತಿನ ಹಿಂದಿರುವ ಸಿದ್ದರಾಮಯ್ಯನವರ ದೃಷ್ಟಿಕೋನ  ವಿವರಿಸಿದರೆ, ಎರಡನೇ ಭಾಗವು ವಿವಿಧ ಅನುದಾನಗಳು ಮತ್ತು ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತದೆ.ಬಜೆಟ್‌ನ ಆರಂಭದ ಸಾಲುಗಳು ಗಮನಾರ್ಹವಾಗಿಯೂ ಮತ್ತು ಅಧಿಕಾರಯುತವಾಗಿಯೂ ಇದೆ. ಶ್ರೀಸಾಮಾನ್ಯನನ್ನು ಕೇಂದ್ರವಾಗಿಟ್ಟುಕೊಂಡೇ ಈ ಬಜೆಟ್ ಮಂಡಿಸಲಾಗಿದೆ ಎಂದು ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಅವರು ಪದೇ ಪದೇ ಹೇಳಿದ್ದಾರೆ. ಬಜೆಟ್ ಮೂಲಕ ಅನುಷ್ಠಾನ ಮಾಡುವ ಸರ್ಕಾರದ ಎಲ್ಲಾ ಯೋಜನೆಗಳು ಶ್ರೀಸಾಮಾನ್ಯನ ಕಲ್ಯಾಣದ ಗುರಿಯನ್ನೆ ಹೊಂದಿದೆ ಎಂದು ಸಾರಿದ್ದಾರೆ.ಯೋಜನೆಗಳ ಶೀಘ್ರ ಅನುಷ್ಠಾನ, ಅಭಿವೃದ್ಧಿ ಮತ್ತು ಆಡಳಿತದಲ್ಲಿ ದಕ್ಷತೆ ಇವು ತಮ್ಮ ಆದ್ಯತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ.ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ತಾವು ಘೋಷಿಸಿದ ಪಡಿತರ ವ್ಯವಸ್ಥೆ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಣೆ, ಸಾಲ ಮನ್ನಾ ಇತ್ಯಾದಿ ಯೋಜನೆಗಳನ್ನು ಮುಂದುವರಿಸಲು ಸಿದ್ದರಾಮಯ್ಯ ಉತ್ಸಾಹ ತೋರಿದ್ದಾರೆ. ಈ ಬಗ್ಗೆ ಎರಡನೇ ಭಾಗದಲ್ಲಿ ಹೆಚ್ಚು ವಿವರ ನೀಡಿರುವ ಅವರು, ರೈತರ ಆದಾಯ ಹೆಚ್ಚಳಕ್ಕೆ ಅನೇಕ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದ್ದಾರೆ. ಈ ಅಂಶಗಳು `ಹೊಸ ಬಾಟಲಿಯಲ್ಲಿ ಹಳೆಯ ಮದ್ಯ' ಎನ್ನುವಂತೆಯೇ ಇದೆ.ಯುವ ಜನಾಂಗವನ್ನು ಗುರಿಯಾಗಿಟ್ಟುಕೊಂಡು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಇದು ಎಲ್ಲಾ ರೀತಿಯ ಉದ್ದಿಮೆಗಳು ಮತ್ತು ಸೇವಾ ಕಂಪೆನಿಗಳಿಗೆ ಭರವಸೆಯ ಕಿರಣವಾಗಿದೆ.ಬೆಂಗಳೂರಿನ ಹಿರಿಮೆ: ಬೆಂಗಳೂರಿನ ಹಿರಿಮೆಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ  ರಾಜಧಾನಿಯ ಮೂಲಸೌಕರ‌್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ದೊರಕಿದೆ. ಆದರೆ, ಇದರಲ್ಲಿನ ಕೆಲವು ಅಂಶಗಳು ಈ ಹಿಂದಿನ ಘೋಷಣೆಗಳೇ ಆಗಿವೆ. ಬೆಂಗಳೂರಿಗೆ ಅಗತ್ಯವಿರುವಂತಹ ದೊಡ್ಡ ಮಟ್ಟದ ಮೂಲಸೌಕರ‌್ಯಗಳನ್ನು ಆದ್ಯತೆ ಮೇಲೆ ಪರಿಗಣಿಸಲು ಮತ್ತಷ್ಟು ಚಿಂತನೆ ಮತ್ತು ಸಮಯಾವಕಾಶ ಅಗತ್ಯ ಎನ್ನುವುದು ಸುಸ್ಪಷ್ಟ.ಬಜೆಟ್ ಮೂಲಕ ತಮ್ಮ  ಸರ್ಕಾರ `ಉದ್ಯಮಿ ಸ್ನೇಹಿ' ಎಂದು ಭರವಸೆ ನೀಡುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜಧಾನಿಯು ಪ್ರಶಸ್ತವಾದ ಸ್ಥಳ ಎಂಬ ಸತ್ಯವೂ ಮೂಲತಃ ರೈತಪರರಾಗಿರುವ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ.್ಙ 1.20 ಲಕ್ಷ ಕೋಟಿಗಳ 2013-14ನೇ ಸಾಲಿನ ಈ ಬಜೆಟ್ ಹಾಗೂಹೀಗೂ ಜಗದೀಶ ಶೆಟ್ಟರ್ ಅವರು ಮಂಡಿಸಿದ ಆಯವ್ಯಯವನ್ನೇ ಹೋಲುತ್ತದೆ. ಬಿಜೆಪಿ ಬಜೆಟ್‌ನಲ್ಲಿದ್ದ ಅಂಕಿಅಂಶಗಳೇ ಇಲ್ಲೂ ಇವೆ. ವೈಯಕ್ತಿಕ ವಲಯಕ್ಕೆ ಘೋಷಿಸಿರುವ ಅನುದಾನಗಳೂ 2012-13 ಮತ್ತು ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಮೂರು ತಿಂಗಳಿಗೆ ಅಂಗೀಕಾರಗೊಂಡ ಲೇಖಾನುದಾನದ ಅಂಶಗಳನ್ನು ಸಮೀಕರಿಸುತ್ತವೆ.ಮಹಿಳಾ ಶಿಕ್ಷಣ: ಮಹಿಳಾ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಬಡವರಿಗಾಗಿ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಪ್ರಕಟಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸುಸಜ್ಜಿತ ಶೌಚಾಲಯಗಳ ನಿರ್ಮಾಣದ ಪ್ರಸ್ತಾವದಿಂದ ಗ್ರಾಮೀಣ ಭಾಗಕ್ಕೆ ಅನುಕೂಲವಾಗಲಿದೆ. ಅದರಲ್ಲೂ ವಿಶೇಷವಾಗಿ ಹಳ್ಳಿ ಹೆಣ್ಣುಮಕ್ಕಳ ಮೊಗದಲ್ಲಿ ನಿರಾಳದ ನಗು ತರಲಿದೆ.ಶೀಘ್ರ ನ್ಯಾಯದಾನಕ್ಕಾಗಿ ಹತ್ತು ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪಿಸುವ ಪ್ರಸ್ತಾವ ಇದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಬೇಗನೆ ವಿಲೇವಾರಿಯಾಗುವ ಆಶಯ ಇದೆ.ಹಾಲು ಉತ್ಪಾದಕರಿಗೆ ಸಬ್ಸಡಿ ನೀಡಿರುವುದರಿಂದ ಹೈನೋದ್ಯಮಕ್ಕೆ ಮತ್ತು ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಕಲ್ಪಿಸಲು ಸಾಂಸ್ಥಿಕ ಚೌಕಟ್ಟು ಹಾಕಿಕೊಂಡಿರುವುದು ಸ್ವಾಗತಾರ್ಹ. ಕೃಷಿಗಾಗಿ ಸಹಕಾರ ಸಂಘಗಳಲ್ಲಿ ಮಾಡುವ ್ಙ 2,00,000  ವರೆಗಿನ ಸಾಲವನ್ನು ಬಡ್ಡಿ ಮುಕ್ತ ಮಾಡಿರುವುದರಿಂದ ರೈತರಿಗೆ ಉತ್ತೇಜನ ನೀಡಿದಂತಾಗಿದೆ.ಆದರೆ, ಇದರ ಅನುಷ್ಠಾನ ಸಮರ್ಪಕವಾಗಿ ಆಗದಿದ್ದರೆ ಸರ್ಕಾರ ಮಹಾಲೇಖಪಾಲರ ಕೆಂಗಣ್ಣಿಗೆ ಗುರಿಯಾಗುವ ಆತಂಕವೂ ಇದೆ. ಕೇಂದ್ರದ ಇಂತಹದ್ದೇ ಯೋಜನೆಯೊಂದರ ಲೆಕ್ಕಪತ್ರದ ಪರಿಶೀಲನಾ ವರದಿಯಲ್ಲಿ ಮಹಾಲೇಖಪಾಲರು ಅನುಷ್ಠಾನದಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಿ ತೀವ್ರ ಆಕ್ಷೇಪ ದಾಖಲಿಸಿದ್ದಾರೆ.ಪ್ರವಾಸೋದ್ಯಮ ವಲಯವು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶ ನೀಡಿದೆ. ಕರ್ನಾಟಕದಲ್ಲೂ ಪ್ರವಾಸೋದ್ಯಮ ಕ್ಷೇತ್ರವು ವಿಸ್ತಾರವಾಗಿಯೇ ಇರುವುದರಿಂದ ಈ ವಲಯಕ್ಕೆ ಇನ್ನಷ್ಟು ಒತ್ತು ನೀಡುವ ಅಗತ್ಯ ಇತ್ತು.ಸುಸ್ಥಿರವಲ್ಲದ ತೆರಿಗೆ ವ್ಯವಸ್ಥೆಯನ್ನು ಸಮಸ್ಥಿತಿಗೆ ತರಲು ಮುಖ್ಯಮಂತ್ರಿ ಅವರು ಹೆಚ್ಚಿನ ಕರಭಾರ ಹೇರುವ ಸ್ಥಿತಿಯಲ್ಲಿ ಇಲ್ಲ. ಆದ ಕಾರಣ ತೆರಿಗೆಯಲ್ಲಿ ಸುಧಾರಣೆ ತಂದು ವಸೂಲಾತಿಯನ್ನು ಮತ್ತಷ್ಟು ಚುರುಕುಗೊಳಿಸುವ ನಿಲುವಿಗೆ ಸಿದ್ದರಾಮಯ್ಯ ಬದ್ಧವಾಗಿರುವಂತೆ ಕಾಣುತ್ತದೆ.ಈ ನಿಟ್ಟಿನಲ್ಲಿ ಡೀಸೆಲ್ ಮೇಲಿನ ಸುಂಕ ತಗ್ಗಿಸಿರುವುದು ಸ್ವಾಗತಾರ್ಹ ಕ್ರಮ. ಇದರಿಂದ ಆಗುವ ವಿತ್ತೀಯ ಕೊರತೆಯನ್ನು ಅಬಕಾರಿ ಮೂಲಕ ಸಂಗ್ರಹಿಸಲು ಶೇ 25ರಷ್ಟು ಸುಂಕ ಹೆಚ್ಚಳ ಮತ್ತು   ಸೆಕೆಂಡ್ಸ್ ಮದ್ಯ ಮಾರಾಟಕ್ಕೆ ನಿಷೇಧ ಹೇರುವ ಉಪಾಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಆದರೆ, ರಾಜ್ಯದ ಗಡಿಯಲ್ಲಿ ಕಳ್ಳಮಾರ್ಗದ ಮೂಲಕ ಬರುವ ಮದ್ಯವನ್ನು ತಡೆಗಟ್ಟುವ ದಕ್ಷತೆಯನ್ನು ಅಧಿಕಾರಿಗಳು ತೋರಬೇಕಿದೆ.ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯ ಸದಾ ಮುಂಚೂಣಿಯಲ್ಲಿದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಪ್ರಸ್ತಾವವು ಬಜೆಟ್‌ನಲ್ಲಿದೆ. ಇದರಿಂದ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಸಂಗ್ರಹವು ಮತ್ತಷ್ಟು ಬಲಗೊಳ್ಳಲಿದೆ.ಕಂದಾಯದ ಖರ್ಚುವೆಚ್ಚಕ್ಕಾಗಿ ಸಾಲ ಮಾಡುವುದಕ್ಕಿಂತ ಜನೋಪಯೋಗಿ ಕಾರ್ಯದ ಅನುಷ್ಠಾನಕ್ಕೆ ಸಾಲ ಮಾಡುವುದು ಸೂಕ್ತ ಎಂಬ ಸಿದ್ದರಾಮಯ್ಯ ಅವರ ನಿಲುವು ಸೂಕ್ತವಾಗಿದೆ.ಇಷ್ಟಾದರೂ ಈ ಬಜೆಟ್‌ನಲ್ಲಿ ಹೆಚ್ಚಿನ ಒಳನೋಟವಿಲ್ಲ. ಆದರೂ ಕೆಲವು ದೂರದೃಷ್ಟಿಗಳಿವೆ. ಸಿದ್ದರಾಮಯ್ಯ ಅವರಿಗೆ ಇನ್ನೂ ಸಾಕಷ್ಟು ಸಮಯ ನೀಡಿ, ನಂತರವಷ್ಟೆ ಅವರ ಆಡಳಿತವನ್ನು ವಿಮರ್ಶಿಸುವುದು ಹೆಚ್ಚು ಯುಕ್ತ. ಇಂತಹ ಸಮಯಾವಕಾಶದಲ್ಲಿ ಈ ಬಜೆಟ್ ಕೂಡ ಸೇರಿದೆ. ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಕೊಂಚ ಉದಾರತೆ ತೋರೋಣವೇ?

ಪ್ರತಿಕ್ರಿಯಿಸಿ (+)