ಗುರುವಾರ , ಅಕ್ಟೋಬರ್ 17, 2019
27 °C

ಒಳಮೀಸಲಾತಿ: ಖುರ್ಷಿದ್ ಹೇಳಿಕೆ ತಂದ ವಿವಾದ

Published:
Updated:

ನವದೆಹಲಿ (ಪಿಟಿಐ):  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ಮುಸ್ಲಿಮರಿಗೆ ಶೇಕಡಾ 9ರಷ್ಟು ಒಳ ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಫಾರೂಕಾಬಾದ್ ಕ್ಷೇತ್ರದಲ್ಲಿ ಭರವಸೆ ನೀಡಿರುವುದು ಈಗ ವಿವಾದಕ್ಕೆ ಸಿಲುಕಿದೆ.

ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಲೂಯಿ ಖುರ್ಷಿದ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಪತ್ನಿಯ ಪರ ಪ್ರಚಾರ ಮಾಡುವಾಗ ಕಾನೂನು ಸಚಿವ ಖುರ್ಷಿದ್ ಅವರು ಮುಸ್ಲಿಮರಿಗೆ ಹೆಚ್ಚುವರಿ ಮೀಸಲಾತಿ ನೀಡುವ ಭರವಸೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ನಿಯೋಗವು ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಅವರನ್ನು ಭೇಟಿ ಮಾಡಿ ಸಲ್ಮಾನ್ ಖುರ್ಷಿದ್ ಅವರು ನೀಡಿರುವ ಈ ಭರವಸೆ ಸ್ಪಷ್ಟವಾಗಿ ಚುನಾವಣಾ ನೀತಿ- ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿತು.

Post Comments (+)