ಒಳಮೀಸಲಾತಿ: ಡಿ.11ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

7

ಒಳಮೀಸಲಾತಿ: ಡಿ.11ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

Published:
Updated:

ವಿಜಾಪುರ: ಒಳಮೀಸಲಾತಿ ಕುರಿತು ನ್ಯಾ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಬೆಳಗಾವಿಯ ಅಧಿವೇಶನದಲ್ಲಿಯೇ ಚರ್ಚಿಸಿ, ಜಾರಿಗೆ ತರಬೇಕು. ಇಲ್ಲದಿದ್ದರೆ ಇದೇ 11ರಂದು ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ `ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಸಮನ್ವಯ ಸಮಿತಿ'ಯ ಅಧ್ಯಕ್ಷ ಎ. ಮುನಿಯಪ್ಪ ಎಚ್ಚರಿಸಿದರು.ಅಂದು ಬೆಳಗಾವಿಯ ಕಿತ್ತೂರ ರಾಣಿ ಚನ್ನಮ್ಮ ಚೌಕ್‌ನಿಂದ ಮೆರವಣಿಗೆ ಆರಂಭಿಸಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯಂತೆ ನಡೆದುಕೊಳ್ಳುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಾದಿಗ ಸಮಾಜ ಹಿಂದೆ ಬಿದ್ದಿದೆ. ಇಂತಹ ಈ ಸಮಾಜದ ಅಭಿವೃದ್ಧಿಗಾಗಿ ಜಾರಿಯಾಗುತ್ತಿರುವ ಸದಾಶಿವ ಆಯೋಗದ ವರದಿಗೆ ಕೆಲವು ಸ್ಪೃಶ್ಯ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಬಿಜೆಪಿ ಸರ್ಕಾರ ಈ ವರದಿಯನ್ನು ಜಾರಿ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದರು.ಮುಖಂಡ ಎಚ್. ಹನುಮಂತಪ್ಪ ಮಾತನಾಡಿ, ಜನಸಂಖ್ಯಾವಾರು ಮೀಸಲಾತಿಯನ್ನು ಹಂಚಿಕೆ ಮಾಡಬೇಕು. ಹಳೆಯ ಮೈಸೂರು ಕಡೆ ಲಂಬಾಣಿ ಜನಾಂಗ ಬಲು ಕಡಿಮೆ, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಅಲ್ಲಲ್ಲಿ ಕಾಣುತ್ತಾರೆ. ಆದರೆ, ಆ ಪ್ರದೇಶದಲ್ಲಿ ದಲಿತ ಸಮುದಾಯದವರು ಹೆಚ್ಚಾಗಿದ್ದಾರೆ. ಅಲ್ಪ ಸಮುದಾಯದ  ಜನರು ಸದಾಶಿವ ವರದಿಯನ್ನು ವಿರೋಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮಲ್ಲಪ್ಪ ಮೂಗನೂರ, ಕರಿಯಪ್ಪ ಗುಡಿಮನಿ, ತಿಪ್ಪಣ್ಣ ಮಾದರ, ಪ್ರಹ್ಲಾದ ಕರಿಯಣ್ಣವರ, ಸಿಂಧೂರ ಭೈರವಾಡಗಿ, ಹರೀಶ ಮ್ಯಾಗೇರಿ, ರಮೇಶ ಆಲಮಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry