ಒಳರೋಗಿಗಳಿಗೆ ಉಚಿತ ವಿತರಣೆ ಸ್ಥಗಿತ

7

ಒಳರೋಗಿಗಳಿಗೆ ಉಚಿತ ವಿತರಣೆ ಸ್ಥಗಿತ

Published:
Updated:

ಮೊಳಕಾಲ್ಮುರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳು ಹಾಲು, ಬ್ರೆಡ್ ನಂತಹ ಆಹಾರ ಪದಾರ್ಥ ಗಳಿಂದಲೂ  ವಂಚಿತರಾಗಿದ್ದು, ನಿತ್ಯ ನರಳುವಂತಾಗಿದೆ.ಆಸ್ಪತ್ರೆಗೆ ಸಿಬ್ಬಂದಿ ನೇಮಕ ಮಾಡಿದರೂ ಬರುವುದಿಲ್ಲ. ಕೆಲವರು ಬಂದು ಸಹಿ ಹಾಕಿ ಹೋಗುತ್ತಾರೆ. ಮತ್ತೆ ಕೆಲವರು ಆದೇಶ ಇದ್ದರೂ, ಕೇಂದ್ರ ಸ್ಥಳದಲ್ಲಿ ವಾಸ ಮಾಡುತ್ತಿಲ್ಲ. ವೈದ್ಯರು ನಿರ್ಲಕ್ಷ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಬಗೆಯ ಚಿಕಿತ್ಸೆಗಳಿಗೆ ಬಳ್ಳಾರಿ ಹೋಗಬೇಕಾದುದು ಅನಿವಾರ್ಯ ಎಂಬ ಸ್ಥಿತಿಯಲ್ಲಿ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಉಚಿತವಾಗಿ ನೀಡುತ್ತಿದ್ದ ಹಾಲು, ಬ್ರೆಡ್ ಯೋಜನೆ ಸ್ಥಗಿತಗೊಳಿಸುವ ಮೂಲಕ ನಾಗರಿಕರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.100 ಹಾಸಿಗೆಗಳ ಸೌಲಭ್ಯ ಹೊಂದಿರುವ ಇಲ್ಲಿ ಈವರೆಗೂ ಒಳ ರೋಗಿಗಳಿಗೆ ಬೇರೆ ಆಸ್ಪತ್ರೆಗಳಲ್ಲಿ ಇರುವಂತೆ ಊಟ, ತಿಂಡಿ ನೀಡುವ ವ್ಯವಸ್ಥೆ ಇಲ್ಲ. ಈಗ ಆರಂಭ ಮಾಡುತ್ತೇವೆ; ಆಗ ಆರಂಭ ಮಾಡುತ್ತೇವೆ ಎಂದು ಪ್ರತಿ ಸಭೆಗಳಲ್ಲಿ ಅಧಿಕಾರಿಗಳು ಹೇಳಿದರೇ ವಿನಃ ಯಾವುದೇ ಕ್ರಮ ಜರುಗಿಸಿಲ್ಲ. ಇದುವರೆಗೆ ಜಾರಿಯಲ್ಲಿದ್ದ ಹಾಲು, ಬ್ರೆಡ್ ನೀಡುವುದನ್ನೂ ಸಹ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಕೇಳಿದರೆ ಯಾರೂ ಸಹ ಸೂಕ್ತ ಉತ್ತರ ನೀಡುತ್ತಿಲ್ಲ. ಮತ್ತೆ ಕೆಲವರು ‘ಮೊಳಕಾಲ್ಮುರಿನಲ್ಲಿ ಎಲ್ಲೂ ಹಾಲು, ಬ್ರೆಡ್ ಸರಿಯಾಗಿ ಸಿಗುವುದಿಲ್ಲ..! ಅದಕ್ಕಾಗಿ ಯೋಜನೆ ಸ್ಥಗಿತಗೊಳಿಸಲಾಗಿದೆ’ ಎಂದು ಹೇಳುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.ಆರ್ಥಿಕ ಅಶಕ್ತರು ಹೆಚ್ಚಿನ ಪ್ರಮಾಣದಲ್ಲಿರುವ ಜತೆಗೆ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿದ್ದಾರೆ. ತಾಲ್ಲೂಕು ಗಡಿಭಾಗದಲ್ಲಿದ್ದು ಇಲಾಖೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬದಲು ಇರುವ ಸೌಲಭ್ಯಗಳಿಗೆ ಕತ್ತರಿ ಹಾಕುವುದು ಸರಿಯಲ್ಲ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry