ಗುರುವಾರ , ನವೆಂಬರ್ 14, 2019
19 °C

ಒಳಿತು ಕೆಡಕು

Published:
Updated:

ಒಳಿತು-ಕೆಡುಕು ಪರಸ್ಪರ ವಿರೋಧಿ ಗುಣಗಳು ಎಂದಷ್ಟೆ ತಿಳಿದು ಸುಮ್ಮನಾಗಿಬಿಡುತ್ತೇವೆ. ಆದರೆ ಒಳಿತು ಕೆಡುಕಿನ ನಡುವಣ ಸಂಬಂಧವು ಅಷ್ಟೊಂದು ಸರಳವಾದದ್ದಲ್ಲ.ಒಳಿತೆಂಬುದು ಒಂದು ಆದರ್ಶವಾಗಿದೆ, ಪ್ರಯತ್ನಿಸಿ ಸಾಧಿಸಬೇಕಾದ ಗುರಿಯಾಗಿದೆ. ಕೆಡುಕೆಂಬುದು ಆದರ್ಶವಲ್ಲ. ಹಾಗಾಗಿ ಅದೊಂದು ಸ್ವತಂತ್ರ ಮೌಲ್ಯವಲ್ಲ. ಅದೊಂದು ಅಪಮೌಲ್ಯ, ದೌರ್ಬಲ್ಯ; ಮನುಷ್ಯರ ಅಪೂರ್ಣತೆಯಿಂದಾಗಿ ಅವರಲ್ಲಿ ನುಸುಳಿಕೊಳ್ಳುವ ದೌರ್ಬಲ್ಯ.ನಮ್ಮ ಜನಪ್ರಿಯ ನಂಬಿಕೆಗಳು ಸರಳೀಕರಣಕ್ಕೆ ಒಗ್ಗಿಹೋಗಿವೆ. ಉದಾಹರಣೆಗೆ ನಾವು ಓದುವ ಹೆಚ್ಚಿನ ಕಾದಂಬರಿಗಳಲ್ಲಿ, ನೋಡುವ ಹೆಚ್ಚಿನ ಸಿನಿಮಾಗಳಲ್ಲಿ, ಸೀರಿಯಲ್ಲುಗಳಲ್ಲಿ ಒಳಿತು ಕೆಡುಕು ಎರಡೂ ಸ್ವತಂತ್ರವಾದ ಮೌಲ್ಯಗಳು ಎಂದೇ ಬಿಂಬಿತವಾಗುತ್ತದೆ. ಅಲ್ಲಿ ಒಳಿತನ್ನು ಪ್ರತಿನಿಧಿಸುವ ಪಾತ್ರವೊಂದಿರುತ್ತದೆ. ಕೆಡುಕನ್ನು ಪ್ರತಿನಿಧಿಸುವ ಮತ್ತೊಂದು ಪಾತ್ರವಿರುತ್ತದೆ.ಇವೆರಡು ಪಾತ್ರಗಳನ್ನು ಮುಖಾಮುಖಿಯಾಗಿಸುವ ಮೂಲಕವಾಗಿ ಕತೆಯನ್ನು ಬೆಳೆಸಲಾಗುತ್ತದೆ.ಈ ಮಾದರಿಯನ್ನು ಬದುಕಿಗೆ ಅನ್ವಯಿಸಬಹುದೇ? ಮನುಷ್ಯರಲ್ಲಿ ಕೆಲವರು ಕಾಯಂ ಒಳ್ಳೆಯವರಿರುತ್ತಾರೆ ಕೆಲವರು ಕಾಯಂ ಕೆಟ್ಟವರಿರುತ್ತಾರೆ ಎಂದು ನಿರ್ಧರಿಸಬಹುದೆ? ನಮ್ಮದೇ ಅನುಭವವು ಈ ರೀತಿಯ ಸರಳ ವರ್ಗೀಕರಣವನ್ನು ಬೆಂಬಲಿಸುವುದಿಲ್ಲ.ನಮಗೆ ತಿಳಿದಂತೆ ಎಲ್ಲ ಮನುಷ್ಯರೂ ಕೆಲವು ಸಂದರ್ಭಗಳಲ್ಲಿ ಒಳ್ಳೆಯವರಾಗಿರುತ್ತಾರೆ ಹಾಗೂ ಕೆಲವು ಸಂದರ್ಭಗಳಲ್ಲಿ ಕೆಟ್ಟವರಾಗಿರುತ್ತಾರೆ. ಮನುಷ್ಯರು ಮೂಲತಃ ಅಪೂರ್ಣರಾಗಿರುತ್ತಾರೆ.ಪೂರ್ತಿ ಒಳ್ಳೆಯತನವೆಂಬುದು ಆದರ್ಶ ಮಾತ್ರ. ಹಾಗೆಂದೇ, ಕತೆ ಕಾದಂಬರಿ ಹಾಗೂ ಪುರಾಣಗಳಲ್ಲಿ ಪೂರ್ತಿ ಒಳ್ಳೆಯದಾದ ಪಾತ್ರಗಳನ್ನು ನಾವು ದೇವರೆಂದೇ ಪರಿಗಣಿಸುತ್ತೇವೆ. ಪೂರ್ತಿ ಒಳ್ಳೆಯತನ ಎನ್ನುವುದು ಪರಿಪೂರ್ಣತೆಯ ಲಕ್ಷಣ, ಹಾಗಾಗಿ ದೈವತ್ವ.ಶ್ರೀರಾಮಚಂದ್ರ, ಸೀತಾದೇವಿ, ಭಕ್ತಪ್ರಹ್ಲಾದ, ಏಸುಕ್ರಿಸ್ತ ಇತ್ಯಾದಿಗಳು ಪೂರ್ತಿ ಒಳ್ಳೆಯದಾದ ಪಾತ್ರಗಳು ಹಾಗೂ ಆ ಕಾರಣಕ್ಕಾಗಿ ದೈವಾಂಶ ಸಂಭೂತರಾದ ಪಾತ್ರಗಳು.ಕೆಡಕು ಒಂದು ಮೌಲ್ಯವಲ್ಲ ಎಂದೆ. ನನ್ನ ಮಾತಿನ ಅರ್ಥವೇನೆಂದರೆ ಕೆಡುಕೆಂಬುದು ಒಂದು ನಿರ್ದಿಷ್ಟ ಗುರಿಯಲ್ಲ ಎಂದು. ಮನುಷ್ಯರು ಬೇಕೆಂದೇ ಕೆಡುಕರಾಗುತ್ತಾರೆಯೇ? ಅಥವಾ ಕೆಡುಕು ಮಾಡುವುದನ್ನೇ ತಮ್ಮ ಜೀವನದ ಆದರ್ಶವಾಗಿಸಿಕೊಂಡ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆಯೆ? ಹಾಗೇನಿಲ್ಲ.ತೀರ ಕೆಟ್ಟ ಮನುಷ್ಯರೂ ಸಹ ತಮ್ಮ ಕೆಟ್ಟ ನಡತೆಗೆ ಸಮಜಾಯಿಷಿ ಕೊಟ್ಟುಕೊಳ್ಳುತ್ತಿರುತ್ತಾರೆ, ತಾವು ಕೆಟ್ಟವರಲ್ಲ ಎಂದು ಸಾಧಿಸಿತೋರಿಸಲು ಹೆಣಗುತ್ತಿರುತ್ತಾರೆ.ಭಾರತೀಯ ಪರಂಪರೆಯು ಒಳಿತು ಕೆಡುಕುಗಳನ್ನು ಅರ್ಥಮಾಡಿಕೊಂಡಿರುವ ರೀತಿ ವಿಶಿಷ್ಟವಾದದ್ದು. ಅದು ಪಾಶ್ಚಾತ್ಯ ವಿಧಾನಕ್ಕಿಂತ ಭಿನ್ನವಾದದ್ದು, ಹಾಗೂ ನನ್ನ ಅಭಿಪ್ರಾಯದಲ್ಲಿ ಪಾಶ್ಚಾತ್ಯ ವಿಧಾನಕ್ಕಿಂತ ಶ್ರೇಷ್ಠವಾದದ್ದು.ಪಾಶ್ಚಾತ್ಯ ಪರಿಕಲ್ಪನೆಯಲ್ಲಿ ಸೈತಾನನಿದ್ದಾನೆ. ಸೈತಾನ ಅಥವಾ ಡೆವಿಲ್ ಶುದ್ಧ ಕೆಡುಕಿಗೆ ಸಂಕೇತ. ಸೈತಾನ ಇರುವುದೇ ದೇವರಿಗೆ ಪ್ರತಿಯಾಗಿ, ಅರ್ಥಾತ್ ಒಳಿತಿಗೆ ಪ್ರತಿಯಾಗಿ. ದೇವಲೋಕಕ್ಕೆ ಪ್ರತಿಯಾದ ಕೆಡುಕಿನ ಲೋಕವೊಂದನ್ನು ಸೃಷ್ಟಿಸುವುದೇ ಸೈತಾನನ ಉದ್ದೇಶ. ಭಾರತೀಯ ಪರಂಪರೆಯಲ್ಲಿ ಸೈತಾನನಿಲ್ಲ.ನಮ್ಮ ಪುರಾಣಗಳಲ್ಲಿ ದೇವತೆಗಳು ಮನುಷ್ಯರು ಕಿನ್ನರರು ಕಿಂಪುರುಷರು ರಾಕ್ಷಸರು ಗಣಗಳು... ಎಲ್ಲವೂ ಇದೆ. ಆದರೆ ಕೆಡುಕನ್ನು ಇಡಿಯಾಗಿ ಸಂಕೇತಿಸುವ ಸೈತಾನನಿಲ್ಲ. ಹಾಗೆಂದು ಕೆಡುಕಿಲ್ಲ ಎಂದೇನಲ್ಲ.ನಮ್ಮ ಮಹಾಕಾವ್ಯಗಳಲ್ಲಿ ಅಥವಾ ಪುರಾಣಗಳಲ್ಲಿ ಕೆಡುಕಿಗೆ ಕಾರಣವಾಗುವ ಹಲವು ಪಾತ್ರಗಳು ಬರುತ್ತವೆ. ಆದರೆ ಅವರೆಲ್ಲರ ನಡತೆಗೆ ಅವರ ವ್ಯಕ್ತಿತ್ವದಲ್ಲಿರುವ ಊನವೊಂದು ಕಾರಣವಾಗಿರುತ್ತದೆ. ಭಾರತೀಯ ಪರಂಪರೆಯಲ್ಲಿ ಬರುವ ಖಳನಾಯಕರು ಒಳಿತಿನ ಅರಿವಿಲ್ಲದವರೂ ಅಲ್ಲ, ಅರಿವಿದ್ದೂ ಒಳಿತನ್ನು ಸಾಧಿಸಲಾರದವರು ಅವರು.ದುರ್ಯೋಧನ ಒಬ್ಬ ಖಳನಾಯಕ, ದುರ್ಯೋಧನನಿಗೆ ಒಳಿತೆಂದರೇನು ಎಂದು ತಿಳಿದಿದೆ. ಹಲವು ಒಳ್ಳೆಯ ಗುಣಗಳು ಹಾಗೂ ಅಷ್ಟೇ ಪ್ರಬಲವಾದ ದೌರ್ಬಲ್ಯಗಳನ್ನು ಉಳ್ಳವನು ದುರ್ಯೋಧನ.ದುರ್ಯೋಧನನ ಬಹುಮುಖ್ಯ ದೌರ್ಬಲ್ಯವೆಂದರೆ ಆತನ ಛಲ. ತನ್ನ ದಾಯಾದಿಗಳಿಗಿಂತಲೂ ತಾನು ಹಾಗೂ ತನ್ನ ಕುಟುಂಬ ಉತ್ತಮವಾದದ್ದು ಎಂದು ಸಾಧಿಸುವ ಛಲ ಅವನದ್ದು, ದುರ್ಯೋಧನನ ಛಲವೇ ಅವನನ್ನು ಹಾಳುಗೆಡವುತ್ತದೆ.ಇದೇ ರೀತಿ ರಾಮಾಯಣದ ರಾವಣ, ಮಂಥರೆ, ಮಹಾಭಾರತದ ಶಕುನಿ... ಇತ್ಯಾದಿ ಎಲ್ಲರೂ ತಮ್ಮ ದೌರ್ಬಲ್ಯಗಳ ಕಾರಣದಿಂದಾಗಿ ಕೇಡಿಗರಾಗುತ್ತಾರೆ. ರಾವಣನ ಸ್ತ್ರೀಮೋಹ ಶಕುನಿಯ ಅತಿಜಾಣತನ ಮಂಥರೆಯ ಸಣ್ಣತನಗಳು ಅವರನ್ನು ಒಳತಿನ ಹಾದಿಯಲ್ಲಿ ತಡೆಯುತ್ತವೆ.ಭಾರತೀಯ ಪರಂಪರೆಯಲ್ಲಿ ಒಳಿತಿಗೆ ಪ್ರತಿರೋಧ ಒಡ್ಡುವುದು ಮಾಯೆ ಅಥವಾ ಮಾರ. ಉದಾಹರಣೆಗೆ, ಜ್ಞಾನೋದಯವನ್ನು ಬಯಸಿ ತಪಸ್ಸಿಗೆ ಕುಳಿತ ಬುದ್ಧನನ್ನು ವಿಚಲಿತನನ್ನಾಗಿ ಮಾಡಲು ಯತ್ನಿಸಿದ್ದು ಮಾಯೆ, ಅಲ್ಲಮನ ಆಧ್ಯಾತ್ಮಿಕ ಹಾದಿಯಲ್ಲಿ ಮತ್ತೆ ಮತ್ತೆ ಅಡ್ಡಹಾಯ್ದು ಏಕಾಗ್ರತೆ ಕೆಡಿಸಲು ಯತ್ನಿಸಿದ್ದು ಸಹ ಮಾಯೆಯೇ ಸರಿ. ಇತ್ತ ಶಿವನ ತಪಸ್ಸಿಗೆ ಭಂಗತಂದವನು ಮಾರ. ಮಾರನ ಈ ಕೃತ್ಯಕ್ಕೆ ಲೋಕಕಲ್ಯಾಣದ ಗುರಿಬೇರೆ!ಮಾಯೆ ಅಥವಾ ಮಾರ ಒಂದು ಸಂಕೇತ; ಮನುಷ್ಯನ ವಿಚಲತೆಗೆ, ದಾರಿ ತಪ್ಪುವ ಪ್ರವೃತ್ತಿಗೆ, ಮನಸ್ಸಿನ ತುಯ್ದೊಟಕ್ಕೆ, ನಿರ್ಧಾರಗಳ ಸಡಿಲಿಕೆಗೆ ಇವು ಸಂಕೇತಗಳು. ತೊಗಲಿನಾಸೆ, ಆಧಿಕಾರದ ಆಸೆ, ಕೀರ್ತಿಯ ಆಸೆ... ಇತ್ಯಾದಿಗಳು ಮಾಯೆ ಬಳಸುವ ಅಸ್ತ್ರಗಳು. ಹಾಗೆಂದು, ತೊಗಲು ಅಧಿಕಾರ ಕೀರ್ತಿ ಇತ್ಯಾದಿಗಳು ತನ್ನಿಂತಾನೆ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ. ಆಸೆ ಮಾತ್ರ ಕೆಟ್ಟದ್ದು ಎನ್ನುತ್ತದೆ ಭಾರತೀಯ ಪರಂಪರೆ.ರಾಮಾಯಣದ ಸೀತೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ರಾಮನ ಕಡೆಯಿಂದ ನೋಡಿದಾಗ ಸೀತೆ ಪಾತಿವ್ರತ್ಯಕ್ಕೆ ಸಂಕೇತವಾಗುತ್ತಾಳೆ. ಅತ್ತ ರಾವಣನ ಕಡೆಯಿಂದ ನೋಡಿದಾಗ ತೊಗಲಿಗೆ ಸಂಕೇತವಾಗುತ್ತಾಳೆ. ಹಾಗೆಂದು ರಾವಣನ ಆಸೆಗೆ ಸೀತೆ ಖಂಡಿತಾ ಕಾರಣಳಲ್ಲ. ರಾವಣನ ದುರಂತಕ್ಕೆ ರಾವಣನೇ ಕಾರಣ. ಹಾಗೆಂದೇ ನಾನಂದದ್ದು, ಮೌಲ್ಯವಿರುವುದೇ ಒಂದೇ, ಅದು ಒಳಿತಿನ ಮೌಲ್ಯ.ಒಳಿತೆಂಬ ಮೌಲ್ಯವು ಯಾವತ್ತೂ ತ್ಯಾಗದ ಜೊತೆ ಗಂಟು ಹಾಕಿಕೊಂಡಿರುತ್ತದೆ. ತ್ಯಾಗ ಮಾಡದೆ ಒಳಿತಿನ ಸಾಧನೆ ಸಾಧ್ಯವಿಲ್ಲ. ಮತ್ತೊಂದು ರೀತಿಯಿಂದ ಹೇಳುವುದಾದರೆ, ಇದ್ದುದ್ದೆಲ್ಲವನೂ ಭೋಗಿಸುತ್ತೇನೆ ಎಂದು ಹೊರಡುವವರು ಒಳ್ಳೆಯವರಾಗಲಿಕ್ಕೆ ಸಾಧ್ಯವಿಲ್ಲ.ಕೆಡುಕು ಒಂದು ದೌರ್ಬಲ್ಯವಾದ್ದರಿಂದ ಕೆಡುಕಿನ ನಿವಾರಣೆಯ ಪ್ರಯತ್ನವು ತನ್ನಲ್ಲಿಯೇ ಆರಂಭವಾಗಬೇಕಾಗುತ್ತದೆ. ಗಾಂಧೀಜಿಯವರು ಕುರುಕ್ಷೇತ್ರ ಯುದ್ಧವನ್ನು ತನ್ನೊಳಗಿನ ನೈತಿಕ ಹೋರಾಟದ ಸಂಕೇತವೆಂದು ಕರೆದದ್ದು ಇದೇ ಅರ್ಥದಲ್ಲಿ.

ಲೇಖಕರು ರಂಗಕರ್ಮಿ, ಸಾಂಸ್ಕೃತಿಕ ಚಿಂತಕರು ಹಾಗೂ ದೇಸಿ ಸಂಸ್ಕೃತಿಯ ಪ್ರತಿಪಾದಕರು

ಪ್ರತಿಕ್ರಿಯಿಸಿ (+)