ಶುಕ್ರವಾರ, ಆಗಸ್ಟ್ 7, 2020
23 °C

ಒಳ್ಳೆಯ ಕಾಲಕ್ಕಾಗಿ ಕಾಯುತ್ತೇನೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳ್ಳೆಯ ಕಾಲಕ್ಕಾಗಿ ಕಾಯುತ್ತೇನೆ...

ನನ್ನ ಇಂದಿನ ಸ್ಥಿತಿಗೂ ಮುನ್ನ ನಡೆದು ಬಂದ ಹಾದಿಯನ್ನು ನಿಮ್ಮಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಇಟ್ಟ ಹೆಜ್ಜೆ ಗುರುತುಗಳ ಪರಿಚಯ ಮಾಡಿಕೊಡುತ್ತೇನೆ. ಏಕೆಂದರೆ `ಅಶ್ವಿನಿ ಅಕ್ಕುಂಜೆ~ ಎಂದು ಯಾರಾದರೂ ನನ್ನನ್ನು ಕರೆದರೆ ಅದಕ್ಕೆ ಅಂದಿನ ಆ ಹೆಜ್ಜೆ ಗುರುತುಗಳೇ ಕಾರಣ.ನನ್ನ ಮನೆ ಇರುವ ಕುಂದಾಪುರ ತಾಲೂಕಿನ ಅಕ್ಕುಂಜೆಗೆ ಹೋಗಲು ಸರಿಯಾದ ದಾರಿ ಇಲ್ಲ. ಸಣ್ಣ ಹಳ್ಳ ಇರುವ ಕಾರಣ ವಾಹನ ಹೋಗಲಂತೂ ಸಾಧ್ಯವೇ ಇಲ್ಲ. ಏಕೆಂದರೆ ಅದಕ್ಕೆ ಅಡ್ಡಲಾಗಿ ಪುಟ್ಟ ಸೇತುವೆಯೂ ಇಲ್ಲ. ಶಾಲೆಗೆ ತೆರಳಲು ನಾನು ಗದ್ದೆ ಬಯಲಲ್ಲಿಯೇ ನಡೆದು ಹೋಗಬೇಕಿತ್ತು. ಈಗಲೂ ಅದೇ ಪರಿಸ್ಥಿತಿ ಇದೆ.

 

ಆರಂಭದ ದಿನಗಳಲ್ಲಿ ಪೋಷಕರಿಗೆ ಹೊರ ಜಗತ್ತು ಹೇಗಿದೆ ಎಂಬುದು ತಿಳಿದಿರಲಿಲ್ಲ. ಮೂರು ಕೊಠಡಿಗಳ ಪುಟ್ಟ ಮನೆಯಲ್ಲಿ ಸಂಸಾರ. ರೈತ ಕುಟುಂಬ ನಮ್ಮದು. ಇಂತಹ ಪರಿಸ್ಥಿತಿಯಲ್ಲಿದ್ದಾಗಲೇ ನನಗೆ ಓಟದ ಬಗ್ಗೆ ಒಲವು ಮೂಡಿತು.ಚಿಕ್ಕವಳಿದ್ದಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ಜಾನುವಾರುಗಳನ್ನು ಮೇಯಿಸುತ್ತಿದ್ದೆ. ಅವುಗಳು ಓಡುವಾಗ ನಾನೂ ಓಡುತ್ತಿದ್ದೆ. ಗದ್ದೆ ಬದಿಯಲ್ಲಿ ಓರಗೆಯ ಮಕ್ಕಳೊಂದಿಗೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲುತ್ತಿದ್ದೆ. ಹುಡುಗರನ್ನೂ ಹಿಂದಿಕ್ಕುತ್ತಿದ್ದೆ. ಹಾಗಾಗಿ ಓಟದ ಮೇಲೆ ತುಂಬಾ ಆಸಕ್ತಿ ಬೆಳೆಯುತ್ತಾ ಹೋಯಿತು. ಆಗ ನನಗೆ ಗೊತ್ತಿದ್ದು ಪಿ.ಟಿ.ಉಷಾ ಎಂಬ ಹೆಸರು ಮಾತ್ರ.ಆರಂಭದ ದಿನಗಳಲ್ಲಿ ನನಗೆ ಕೋಚ್ ಯಾರೂ ಇರಲಿಲ್ಲ. ವಾರಕೊಮ್ಮೆ ನಡೆಯುತ್ತಿದ್ದ ಪಿ.ಟಿ. ಕ್ಲಾಸ್ ನನಗೆ ಕೋಚಿಂಗ್ ಕ್ಲಾಸ್. ನಗರದ ಕ್ರೀಡಾಪಟುಗಳು ಬಳಸುತ್ತಿದ್ದ ರಿಬಾಕ್, ನೈಕಿ ಶೂ ಕನಸಿನ ಮಾತಾಗಿತ್ತು. ಶಾಲಾ ಕ್ರೀಡಾಕೂಟಗಳಲ್ಲಿ ಬರಿಗಾಲಲ್ಲಿ ಓಡಿ ಗೆಲ್ಲುತ್ತಿದ್ದೆ.ಹೊಸಂಗಡಿಯಲ್ಲಿ ಐದನೇ ತರಗತಿಯಲ್ಲಿ ಓದುವಾಗಲೇ ಶಾಲಾ ಮಟ್ಟದ ಚಾಂಪಿಯನ್ ಆಗಿದ್ದೆ. ಜಿಮ್ ಎನ್ನುವುದು ನಮ್ಮಂತಹ ಹುಡುಗಿಯರಿಗೆ ಸಾಧ್ಯವೇ ಇಲ್ಲದ ದಿನಗಳು ಅವು. ಅವೆಲ್ಲಾ ಸಿಕ್ಕಿದ್ದರೆ ನಾನು ಇಷ್ಟು ಎತ್ತರಕ್ಕೆ ಏರುತ್ತಿರಲ್ಲಿಲ್ಲವೇನೋ? ಆ ನಂತರ ಮಂಜುನಾಥ್ ಎಂಬುವವರು ನನಗೆ ಕೋಚ್ ಆಗಿ ಸಿಕ್ಕರು. 12ನೇ ವಯಸ್ಸಿನಲ್ಲಿ ಬೆಂಗಳೂರಿನ ಬಸ್ಸು ಹತ್ತಿದೆ.

 

ವಿದ್ಯಾನಗರದಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯಲು ಮೊದಲ ಬಾರಿಗೆ ನನಗೆ ಅವಕಾಶ ಸಿಕ್ಕಿತು.ನಾನು 12 ವರ್ಷದವಳಿದ್ದಾಗಿನಿಂದ ಮನೆಯಲ್ಲಿದ್ದ್ದ್ದದು ಕಡಿಮೆ. ವರ್ಷಕ್ಕೊಮ್ಮೆ ಮಾತ್ರ ಊರಿಗೆ ಹೋಗುತ್ತೇನೆ. ಕುಟುಂಬದವರೊಂದಿಗೆ ಹಬ್ಬ ಆಚರಿಸಿ ಅದೆಷ್ಟೋ ವರ್ಷಗಳಾಗಿವೆ.ಗಂಜಿ ಊಟ, ಮಾವಿನ ಉಪ್ಪಿನ ಕಾಯಿ, ಮೀನಿನ ಸಾರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಸಿನಿಮಾ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮ ನನ್ನ ಪಾಲಿಗೆ ದೂರ. ಏಕೆಂದರೆ ನಾನು ತರಬೇತಿಗೆ ಒಂದು ದಿನವೂ ಚಕ್ಕರ್ ಹಾಕಿದವಳಲ್ಲ. ನನಗೆ `ಗಾಡ್ ಫಾದರ್~ ಎಂದು ಹೇಳಿಕೊಳ್ಳಲು ಯಾರೂ ಇಲ್ಲ.

 

ಆದರೆ ಅಪ್ಪ ಚಿದಾನಂದ ಶೆಟ್ಟಿ, ಅಮ್ಮ ಯಶೋದಾ ಅವರ ಶ್ರಮದ ಜೀವನ ರೀತಿಯೇ ನನಗೆ ಶಕ್ತಿ ಹಾಗೂ ಪ್ರೇರಣೆ. ಅವರು ಎಷ್ಟೊಂದು ಕಷ್ಟಪಟ್ಟು ನನ್ನನ್ನು ಬೆಳೆಸಿದರು ಎಂಬುದು ಗೊತ್ತಿದೆ. ಅವರಿಂದ ಈಗ ದೂರ ಇದ್ದೇನೆ. ಆದರೆ ಪ್ರತಿದಿನ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಿರುತ್ತೇನೆ.ಆರಂಭದ ದಿನಗಳಲ್ಲಿ ಕ್ರೀಡಾಕೂಟಗಳಿಗೆ ತೆರಳುವಾಗ ಆರ್ಥಿಕ ಮುಗ್ಗಟ್ಟು ಕಾಡುತ್ತಿತ್ತು. ನನಗೆ ಹಣ ಹೊಂದಿಸಿಕೊಡಲು ಪೋಷಕರು ತುಂಬಾ ಕಷ್ಟಪಟ್ಟಿದ್ದ ನೆನಪು ಕಣ್ಣಮುಂದೆಯೇ ಇದೆ.16ನೇ ವಯಸ್ಸಿನಲ್ಲಿ ಒಬ್ಬಳೇ ರೈಲಿನಲ್ಲಿ ತೆರಳಿ ಪಟಿಯಾಲದಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ತುಂಬಾ ಭಯವಾಗುತಿತ್ತು. ಆದರೆ ದೊಡ್ಡ ಅಥ್ಲೀಟ್ ಆಗಬೇಕೆಂಬ ನನ್ನ ಕನಸು ಸಾಕಾರಗೊಳ್ಳಲು ಮುಂದಿನ ಹೆಜ್ಜೆ ಇಡಬೇಕಾಗಿದ್ದು ಅನಿವಾರ್ಯವಾಗಿತ್ತು. ಆರಂಭದಲ್ಲಿನ ಆ ಕಷ್ಟದ ಬದುಕು ನನ್ನಲ್ಲಿ ಹೋರಾಟದ ಶಕ್ತಿ ಮೂಡಿಸಿತು. ಪಿ.ಟಿ.ಉಷಾ ಅವರ ಬದುಕು ನನಗೆ ಸ್ಫೂರ್ತಿ ನೀಡಿತು. ಅವರಂತೆ ನಾನೂ ದೊಡ್ಡ ಸಾಧನೆ ಮಾಡಬೇಕು ಎನಿಸಿತು.ವಿದ್ಯಾನಗರ ಕ್ರೀಡಾ ಹಾಸ್ಟೆಲ್ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿದೆ. ನನ್ನ ನೆಚ್ಚಿನ ಸ್ಪರ್ಧೆ 400 ಮೀ. ಹರ್ಡಲ್ಸ್ ಹಾಗೂ 4್ಡ400 ರಿಲೇ. ಒಂಬತ್ತನೇ ತರಗತಿಯಲ್ಲಿ ಓದುವಾಗ ಮೊದಲ ಬಾರಿ ರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದೆ. ಭುವನೇಶ್ವರದಲ್ಲಿ ನಡೆದ ಆ ಕೂಟದಲ್ಲಿ ಮೊದಲ ಬಾರಿ ಶೂ ಧರಿಸಿ ಓಡಿದ್ದೆ.

 

2004ರಲ್ಲಿ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್‌ನ ರಿಲೇಯಲ್ಲಿ ಸ್ಪರ್ಧಿಸ್ದ್ದಿದೆ. ಅದು ನನ್ನ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆ. ಹಾಗಾಗಿ ನನಗೆ ಜೆಮ್‌ಷೆಡ್‌ಪುರದಲ್ಲಿರುವ ಟಾಟಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅವಕಾಶ ಸಿಕ್ಕಿತು.

 

ಅಲ್ಲಿ ನಾಲ್ಕೂವರೆ ವರ್ಷ ಇದ್ದೆ. ಇದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ನಂತರ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಸೇರಿಕೊಂಡೆ. ಆದರೆ ಅಲ್ಲಿ ಒಂದು ವರ್ಷ ಕೋಚ್ ಇಲ್ಲದೆ ಪರದಾಡಿದೆ.2009ರಲ್ಲಿ ಪಟಿಯಾಲದಲ್ಲಿ ನಡೆದ ಸೀನಿಯರ್ ಕೋಚಿಂಗ್ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು. ಅಲ್ಲಿ ವಿದೇಶಿ ಕೋಚ್‌ಗಳಿಂದ ತರಬೇತಿ ಲಭಿಸಿತು. ಆದರೆ 2010 ನನ್ನ ಜೀವನವನ್ನೇ ಬದಲಾಯಿಸಿತು. ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾನು ಒಂದು ಸ್ವರ್ಣ ಪದಕ ಜಯಿಸಿದೆ.ಎಲ್ಲಕ್ಕಿಂತ ಮುಖ್ಯವಾಗಿ ಚೀನಾದ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕೂಟದಲ್ಲಿ ಎರಡು ಚಿನ್ನದ ಪದಕ ಗೆದ್ದೆ. ಆ ವರ್ಷವನ್ನು ನಾನು ಯಾವತ್ತೂ ಮರೆಯಲಾರೆ.ಆದರೆ ಕೆಲವೇ ದಿನಗಳಲ್ಲಿ ನನ್ನನ್ನು `ದುರಂತದ ನಾಯಕಿಯನ್ನಾಗಿ~ ಮಾಡಿದರು. ನನ್ನ ಬೆಳವಣಿಗೆ ಸಹಿಸಲಾಗದ ಕೆಲವರು ಆಹಾರದಲ್ಲಿ ಕಲಬೆರಕೆ ಮಾಡಿ `ಉದ್ದೀಪನ ಮದ್ದು ಸೇವಿಸಿದ್ದಾಳೆ~ ಎಂಬ ಆರೋಪ ಬರುವಂತೆ ಮಾಡಿದರು.ಯಾರ್ದ್ದದೋ ತಪ್ಪಿಗೆ ನನಗೆ ಶಿಕ್ಷೆಯಾಯಿತು. `ಅರಿವಿಲ್ಲದೇ ಆದ ಪ್ರಮಾದವಿದು. ಆಹಾರದಲ್ಲಿ ಕಲಬೆರಕೆ ಆಗಿದೆ~ ಎಂದು ವಿಚಾರಣಾ ಸಮಿತಿ ವರದಿ ನೀಡಿದರೂ ಶಿಕ್ಷೆ ಹಿಂತೆಗೆದುಕೊಳ್ಳಲಿಲ್ಲ. ಈ ರೀತಿ ಆಗಬಹುದೆಂದು ಕನಸಿನಲ್ಲೂ ನಾನು ಯೋಚಿಸಿರಲಿಲ್ಲ.

 

ಇರಲಿ ಬಿಡಿ, ನಡೆದು ಹೋದ ಘಟನೆ ಬಗ್ಗೆ ಮತ್ತೆ ಮತ್ತೆ ಯೋಚಿಸಿ ಮನಸ್ಸು ನೋವು ಮಾಡಿಕೊಳ್ಳುವುದೇಕೆ? ಮತ್ತೆ ಒಳ್ಳೆಯ ಸಮಯ ಬರಲಿದೆ ಎಂಬ ಭರವಸೆ ನನಗಿದೆ. ಅದಕ್ಕಾಗಿ ಎಷ್ಟೇ ದಿನ, ತಿಂಗಳು, ವರ್ಷವಾದರೂ ಕಾಯಲು ಸಿದ್ಧ.ಆದರೆ ನನ್ನ ಪ್ರದರ್ಶನ ಮಟ್ಟವನ್ನು ಹೆಚ್ಚಿಸಿಕೊಂಡು ಟೀಕಾಕಾರರಿಗೆ ಉತ್ತರ ನೀಡಬೇಕು. ನನ್ನ ಸ್ವಂತ ಖರ್ಚಿನಲ್ಲಿ ಪಟಿಯಾಲದ ಕ್ರೀಡಾ ಹಾಸ್ಟೆಲ್‌ನಲ್ಲಿ ಈಗ ವಾಸ್ತವ್ಯ ಹೂಡಿದ್ದು, ದಿನನಿತ್ಯ ಅಭ್ಯಾಸ ನಡೆಸುತ್ತಿದ್ದೇನೆ. ಆ ಘಟನೆಯಿಂದ ನಾನು ಎಚ್ಚೆತ್ತುಕೊಂಡಿದ್ದೇನೆ. ಬೇಕಾಬಿಟ್ಟಿ ಆಹಾರ ಸೇವಿಸುವುದಿಲ್ಲ.ಆಕಸ್ಮಾತ್ ಪೌಷ್ಟಿಕಾಂಶ ಆಹಾರ ತೆಗೆದುಕೊಳ್ಳಬೇಕೆಂದಾಗ ಪರಿಣತ ವೈದ್ಯರ ಸಲಹೆ ಪಡೆಯುತ್ತೇನೆ.ಮುಂದಿನ ತಿಂಗಳು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ತುಂಬಾ ನಿರಾಸೆಯಾಗಿದೆ. ಆಗ ಹೇಗ್ದ್ದಿದೆ, ಈಗ ಈ ರೀತಿ ಆಯಿತಲ್ಲ ಅನಿಸುತ್ತದೆ. ಆದರೆ ನನಗಿನ್ನೂ 25 ವರ್ಷ. ನನ್ನ ಕನಸು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನನ್ನ ಗುರಿ 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು.

 

ಅಲ್ಲಿವರೆಗೆ ಬೇರೆ ಯಾವುದೇ ವಿಷಯದ ಬಗ್ಗೆ ಯೋಚಿಸುವುದಿಲ್ಲ. ಮದುವೆ ಆಗುವ ಬಗ್ಗೆ ಕೂಡ. ಈಗ ನಾನು ಊರಿನ ಮನೆ ನವೀಕರಣ ಮಾಡಿಸುತ್ತಿದ್ದೇನೆ. ಒಂದು ಕಾರು ಖರೀದಿಸಿದ್ದೇನೆ. ಹಿಂದಿನ ಸಾಲ ತೀರಿಸಿದ್ದೇನೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದು ನನ್ನ ಕರ್ತವ್ಯ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.