ಒಳ್ಳೆಯ ಗೆಳತಿ ಶಾಮಂತಿ

7

ಒಳ್ಳೆಯ ಗೆಳತಿ ಶಾಮಂತಿ

Published:
Updated:
ಒಳ್ಳೆಯ ಗೆಳತಿ ಶಾಮಂತಿ

ಹೊಸ ಓದು:

ಶಾಮಂತಿ 3

ಸಂ: ಎಸ್. ಕಲಾಧರ

ಪು: 96; ಬೆ: ರೂ. 100

ಪ್ರ: ಸ್ನೇಹ ಪ್ರಕಾಶನ, ಕನ್ನಮಂಗಲ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ

ಪುಟ್ಟ ಮಕ್ಕಳೇ, ಪುಟಾಣಿ ಮಕ್ಕಳೇ,

ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಯಾರು ಗೊತ್ತಾ? ನಿಮ್ಮಂಥ ಚಿನ್ನಾರಿಗಳು. ಅವರು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.ಅಂದಹಾಗೆ ಆ ಶಾಲೆಯಿಂದ ಹೊರಬರುತ್ತಿರುವ ಮೂರನೇ ಪುಸ್ತಕ ಇದು. ಹೆಸರು `ಶಾಮಂತಿ- 3'. ಇದರಲ್ಲಿ ಆ ಮಕ್ಕಳು ಬರೆದಿರೋ 78 ಬರಹಗಳಿವೆ. ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಸೇರಿಸಿ ಜ್ಞಾಪಕ ಶಾಲೆ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಪುಸ್ತಕದ ಕುರಿತು ಮಕ್ಕಳ ಅಪ್ಪ ಅಮ್ಮಂದಿರು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಮುಖಪುಟ, ಒಳಪುಟಗಳ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಕನ್ನಮಂಗಲದ ಸ್ನೇಹ ಕಲಾಸಂಘ.ದೊಡ್ಡವರು ಬರೆವ ಮಕ್ಕಳ ಪುಸ್ತಕಕ್ಕಿಂತ ಇದು ಬೇರೆ ತರ. ಈ ಎಳೆಯರ ಜಗತ್ತು ಅದಕ್ಕಿಂತ ತಾಜಾ ತಾಜಾ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ. ರಾಗಿಯಿಂದ ಹಿಡಿದು ಸಿನಿಮಾವರೆಗೆ ಏನೆಲ್ಲಾ ಉಂಟು ಗೊತ್ತಾ ಈ ಪ್ರಪಂಚದಲ್ಲಿ! ಎಂಟನೇ ತರಗತಿಯಲ್ಲಿ ಓದುತ್ತಿರುವ ಕೆ.ವಿ. ಶ್ರೀಧರ್ ಪದ್ಯ ಎಷ್ಟು ಚೆನ್ನಾಗಿದೆ ನೋಡಿ.

ಟಿಲ್ಲರ್ ಶಬ್ದ ಟಕಟಕ

ತುಂಬಾ ಭಾರ ಇರುತ್ತೆ ಅದು

ಅದರ ಊಟ ಪೆಟ್ರೋಲ್

ನೀರು ಸೀಮೆಎಣ್ಣೆ

ತುಂಬಾ ವಾಸನೆ ಅದರ ಹೊಗೆ

ಹುಚ್ಚನ ತರ ಆಡುತ್ತೆ ಅದು...

ಡಿ.ಕೆ. ವಾಣಿಶ್ರೀ ಏಳನೇ ತರಗತಿ ಓದುತ್ತಿರುವ ಮಗು. ಕುಂಟಿ ಕಾಗೆ ಬಗ್ಗೆ ಬರೆಯುತ್ತಾ ಆಕೆ ಹೀಗೆ ಹೇಳುತ್ತಾಳೆ: ಪಾಪ ಅದಕ್ಕೆ ಕಾಲು ಕುಂಟಿ. ಅದನ್ನು ನಮ್ಮ ನಾಯಿ ಓಡಿಸಿಕೊಂಡು ಹೋಗುತ್ತಿತ್ತು. ನಾನು ಶಾಲೆಯಿಂದ ಮನೆಗೆ ಹೋಗಿ ಬ್ಯಾಗನ್ನು ಬಿಸಾಕಿ ಆ ಕಾಗೆಯನ್ನು ಕಾಪಾಡಿದೆ. ಆರನೇ ತರಗತಿ ವಿದ್ಯಾರ್ಥಿ ಕೆ.ಎಸ್. ಧನುಷ್ ತಾನು ಕಂಡ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ವಿವರಿಸುವ ಪರಿ ಇದು: ಅಲ್ಲಿ ನೋಡಿದರೆ ಎಲ್ಲಾ ಸೈಲೆಂಟಾಗಿ ಇರುತ್ತಾರೆ. ಆ ಶಾಲೆಯಲ್ಲಿ ಚಿಕ್ಕವಯಸ್ಸಿಗೇ ಲ್ಯಾಪ್‌ಟಾಪ್ ಕೊಡುತ್ತಾರೆ ಗೊತ್ತೇ? ಅಲ್ಲಿ ಎಲ್ಲಾ ಇಂಗ್ಲಿಷ್‌ನಲ್ಲೇ ಮಾತಾಡೋದು. ಹಾಗೇ ಅಲ್ಲಿ ಎಲ್ಲಾ ಜಾಸ್ತಿ ರೇಟು.ಅಂದಹಾಗೆ, ಇದಕ್ಕೆ ಮುನ್ನುಡಿ ಬರೆದಿರೋದು ಕೋಟಗಾನಹಳ್ಳಿ ರಾಮಯ್ಯ ಅಂಕಲ್ಲು. ಅವರು ಮಕ್ಕಳಿಗೋಸ್ಕರ ಸಾಕಷ್ಟು ಕೆಲಸ ಮಾಡಿದೋರು. ಬಹಳ ತಿಳಿದುಕೊಂಡೋರು. ಅವರು ಪುಸ್ತಕದ ಬಗ್ಗೆ ಬರೀತಾ, ಬರೀತಾ `ಇಲ್ಲೆಲ್ಲಾ ಬುದ್ಧ ಕಾರುಣ್ಯದ ಜಿನುಗು ಕಾಣಬಹುದು. ಈ ನೆಲದ ಅಂತಃಕರಣವನ್ನು ಯಾವ ಕೊಳೆಯಿಂದಲೂ ಹಿಂಗಿಸುವುದಕ್ಕೆ ಸಾಧ್ಯವಿಲ್ಲವೆಂಬ ನಂಬಿಕೆಗೆ ಇದೇ ಸಾಕ್ಷಿ. ಕೈವಾರ ತಾತಯ್ಯ ಹೇಳುವ ಕೆಂಡದೊಳಗೂ ಸಸಿ ಬೇರಿಳಿಸಿ ಬೆಳೆಯಬೇಕಣ್ಣ ಎನ್ನುವ ಸಸಿಯ ಬೇರುಗಳು ಇವು' ಅಂದಿದ್ದಾರೆ.ಮಕ್ಕಳಿಗೆ ಕತೆ ಹೇಳುವ ಈ ಪುಸ್ತಕ ಮಕ್ಕಳನ್ನು ಕಡೆಗಣಿಸುವ ದೊಡ್ಡವರಿಗೆ ಒಳ್ಳೆಯ ಪಠ್ಯಪುಸ್ತಕ. `ನಾವು ಹೇಳಿದ್ದನ್ನೇ ಕೇಳಿಕೊಂಡು ಬಿದ್ದಿರಬೇಕೆಂಬ ಹುಂಬ ಹಟಗಳನ್ನು ಪಕ್ಕಕ್ಕಿಟ್ಟು ಕೇಳೋಣ. ಅವರ ಎದೆಯ ಕ್ಷೀಣ ಸ್ವರಗಳಿಗೆ ಅಭಯ ನೀಡೋಣ. ನಾನು ನಿನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಎನ್ನೋಣ. ಹಾಗೆನ್ನುವುದು ಮಕ್ಕಳಲ್ಲಿ ಅಶಿಸ್ತು ಮೂಡಿಸುತ್ತದೆ ಎಂದು ನಿಮಗನ್ನಿಸಿದರೆ ಅದು ನಿಮ್ಮ ಅಜ್ಞಾನವೆನ್ನದೆ ಗತ್ಯಂತರವಿಲ್ಲ' ಎಂದು ಮೈ ಮೆರೆತ ದೊಡ್ಡವರಿಗೆ ಸವಾಲೆಸೆಯುತ್ತದೆ ಪುಸ್ತಕ.ಇದೇ ಶಾಲೆಯಿಂದ ಮುಂದೊಂದು ದಿನ ಕಲಾವಿದೆಯರು, ಕತೆಗಾರರು, ಕವಿಗಳು, ನಟರು, ನಾಟಕಕಾರರು ಹುಟ್ಟಿದರೆ ಅವರೆಲ್ಲಾ ಖಂಡಿತಾ `ಶಾಮಂತಿ'ಯನ್ನೂ, ಅಲ್ಲಿನ ಮೇಷ್ಟ್ರುಗಳನ್ನೂ ನೆನೆಯದೇ ಇರುವುದಿಲ್ಲ.ಮಕ್ಕಳೇ ಇಂಥದ್ದೊಂದು ಪುಸ್ತಕ ನಿಮ್ಮ ಮನೆಯಲ್ಲೂ ಇರಲಿ. ಅದು ನಿಮಗೆ ಒಳ್ಳೆಯ ಫ್ರೆಂಡ್ ಆಗುತ್ತೆ. ನೀವೂ ಓದಿ, ನಿಮ್ಮ ಅಪ್ಪ ಅಮ್ಮಂದಿರಿಗೂ ಓದಿಸಿ. ಪುಸ್ತಕಕ್ಕಾಗಿ ಈ ನಂಬರ್‌ಗೆ ಫೋನ್ ಮಾಡಬಹುದು: 9900695142 ಅಥವಾ kaladhars152@gmail.com ಗೆ ಮೇಲ್ ಮಾಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry