ಶುಕ್ರವಾರ, ಮೇ 7, 2021
20 °C

ಒಳ್ಳೆಯ ಸಮಯ ನೋಡಿ ಪ್ರಮಾಣ: ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಚಿವ ಸ್ಥಾನ ಸಿಗದೆ ಇರುವುದಕ್ಕೂ, ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸದೇ ಇರುವುದಕ್ಕೂ ಯಾವುದೇ ಸಂಬಂಧ ಇಲ್ಲ. ಒಳ್ಳೆಯ ಸಮಯ ನೋಡಿ ಪ್ರಮಾಣವಚನ ಸ್ವೀಕರಿಸುತ್ತೇನೆ' ಎಂದು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು.ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, `ಪಕ್ಷದ ಹೈಕಮಾಂಡ್ ನನಗೆ ದೇವಾಲಯ ಇದ್ದಂತೆ. ಈಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಿರಿಯ ನಾಯಕರೊಂದಿಗೂ ಚರ್ಚಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಮತ್ತು ಪಕ್ಷದ ಸಿದ್ದಾಂತಕ್ಕೆ ಬದ್ಧನಾಗಿರುತ್ತೇನೆ' ಎಂದರು.`ನಾನು ಕುಂಬಾರ ಮಾಡಿದ ಮಡಿಕೆ ಅಲ್ಲ. ಕಂಚಿನ ಕೊಡದಂತೆ. ಉಪ್ಪು ಹಾಕಿ ಉಜ್ಜಿದಷ್ಟು ಹೊಳಪಾಗುತ್ತೇನೆ. ಕ್ಷೇತ್ರದ ಜನರ ಹರಕೆಯಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ' ಎಂದು ತಿಳಿಸಿದರು.`ಸಚಿವ ಸ್ಥಾನ ನೀಡಲಿಲ್ಲ ಎಂದು ಶಿವಕುಮಾರ್ ಎಲ್ಲಿಯೂ ಹೇಳಿಲ್ಲ. ಖಾಸಗಿ ಕಾರ್ಯಕ್ರಮದ ನಿಮಿತ್ತ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಿಲ್ಲ. ಆದಷ್ಟು ಬೇಗ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ' ಎಂದು ಜಿ.ಪರಮೇಶ್ವರ್ ತಿಳಿಸಿದರು.`ಪ್ರಮಾಣ ವಚನ ಸ್ವೀಕರಿಸದೆ ಇರುವುದನ್ನೇ ಪ್ರತಿ ಪಕ್ಷಗಳು ದೊಡ್ಡದು ಮಾಡುವುದು ಸರಿಯಲ್ಲ. ಶಿವಕುಮಾರ್ ಸಚಿವರಾಗಬೇಕು ಎಂಬುದು ಬಹಳಷ್ಟು ಜನರ ಆಶಯ. ಈ ವಿಚಾರ ಹೈಕಮಾಂಡ್ ಗಮನದಲ್ಲಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.