ಒಳ ಮೀಸಲಾತಿಗೆ ಆಗ್ರಹ

7

ಒಳ ಮೀಸಲಾತಿಗೆ ಆಗ್ರಹ

Published:
Updated:

ತುಮಕೂರು: ಒಳ ಮೀಸಲಾತಿಗಾಗಿ ಆಗ್ರಹಿಸಿ ಮಾದಿಗ- ಛಲವಾದಿ ರಾಜ್ಯ ಮಟ್ಟದ ಸಮಾವೇಶ ಭಾನುವಾರ ನಗರದಲ್ಲಿ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಸಾಹಿತಿಗಳು, ಸ್ವಾಮೀಜಿಗಳು ಒಳ ಮೀಸಲಾತಿಗಾಗಿ ಒಕ್ಕೊರಲಿನಿಂದ ಒತ್ತಾಯಿಸಿದರು.ಮಾದಿಗ ಒಳ ಮೀಸಲಾತಿ ಹೋರಾಟಕ್ಕಾಗಿ ಸಂಘಟನೆಗೆ ನೂತನವಾಗಿ ಸಿದ್ಧಪಡಿಸಿರುವ ಲಾಂಛನವನ್ನು ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು. ಎಲ್ಲ ಹೋರಾಟಗಳಿಗೂ ಇದೇ ಲಾಂಛನ ಬಳಸಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು.`ಶಿಕ್ಷಣ- ಸಂಘಟನೆ- ಹೋರಾಟ' ಘೋಷಣೆಯನ್ನು ಲಾಂಛನದಲ್ಲಿ ಬಳಕೆ ಮಾಡಲಾಗಿದ್ದು,`ಸ್ವಾಭಿಮಾನ- ಸಮಾನತೆ- ಅಧಿಕಾರ' ಘೋಷಣೆ ಸೇರಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.ಹೊಲೆಮಾದಿಗರನ್ನು ವಿಘಟಿಸುವ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳನ್ನು ದೂರವಿಡಿ. ಒಳ ಮೀಸಲಾತಿ ಜಾರಿಯಿಂದ ಪರಿಶಿಷ್ಟರ ಒಗ್ಗಟ್ಟು ಮುರಿಯುವುದಿಲ್ಲ, ಗಟ್ಟಿಯಾಗುತ್ತದೆ. ಜಾತಿ ಸಂಘಟನೆಗಳು ಜಾತಿ ಪದ್ಧತಿ ಮುಂದುವರಿಸಲು ಕಾರಣವಾಗಬಾರದು ಎಂದು ಕವಿ ಕೆ.ಬಿ. ಸಿದ್ದಯ್ಯ ಹೇಳಿದರು.ಸುವರ್ಣ ವಿಧಾನಸೌಧ ಮುತ್ತಿಗೆ ವೇಳೆ ಲಾಠಿ ಪ್ರಹಾರ ಮಾಡಿದರೂ ಅದನ್ನು ಖಂಡಿಸದ ರಾಜ್ಯದ ಮೀಸಲು ಕ್ಷೇತ್ರಗಳ 36 ಶಾಸಕರಿಗೆ ಪಾಠ ಕಲಿಸುವಂತೆ ಅವರು ಕರೆ ನೀಡಿದರು.ಸಾಹಿತಿ ಶ್ರೀಧರ ಕಲಿವೀರ, ಚಿಂತಕ ದೊರೈರಾಜ್, ಪ್ರೊ.ಕೆ.ಸದಾಶಿವ, ಕಲಾವಿದ ಕೆ.ಟಿ.ಶಿವಪ್ರಸಾದ್ ಮಾತನಾಡಿ, ಒಳ ಮೀಸಲಾತಿ ಸಂವಿಧಾನ ವಿರೋಧಿ ಅಲ್ಲ. ಒಳ ಮೀಸಲಾತಿ ಪಡೆಯುವುದು ತಪ್ಪಲ್ಲ ಎಂದರು.ಚಿತ್ರದುರ್ಗ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮತ್ತು ಬಸವನಾಗಿದೇವ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು.ಕೋಡಿಹಳ್ಳಿ ಮಾರ್ಕಂಡಮುನಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವರಜ್ಯೋತಿ ಭಂತೇಜಿ, ಷಡಕ್ಷರಿ ಮುನಿ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಸಾಹಿತಿ ಡಾ.ಎಲ್. ಹನುಮಂತಯ್ಯ, ಮುಖಂಡರಾದ ಚೇಳೂರು ವೆಂಕಟೇಶ್ ಮತ್ತಿತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry