ಶುಕ್ರವಾರ, ಮೇ 7, 2021
19 °C

ಒಸಾಮಾ ಬಿನ್ ಲಾಡೆನ್ ಕೊಂದಂತೆ ಕೊಲ್ಲಿ:ಅಮೆರಿಕಕ್ಕೆ ಹಫೀಜ್ ಸಯೀದ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ):  ಸೇನಾ ದಾಳಿ ನಡೆಸಿ ಒಸಾಮಾ ಬಿನ್ ಲಾಡೆನ್ ಕೊಂದಂತೆ ತನ್ನ ಮೇಲೆಯೂ ದಾಳಿ ನಡೆಸುವಂತೆ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಅಮೆರಿಕಕ್ಕೆ ಸವಾಲು ಎಸೆದಿದ್ದಾನೆ.ಆದರೆ, ನಾನು ಅಡಗಿಕೊಂಡಿಲ್ಲ. ಎಲ್ಲಿದ್ದೇನೆ ಎಂಬುದನ್ನು ನಾನೇ ಸ್ವತಃ ಅಮೆರಿಕಕ್ಕೆ ತಿಳಿಸುತ್ತೇನೆ ಎಂದು ರಾವಲ್ಪಿಂಡಿಯಲ್ಲಿ ಬುಧವಾರ `ದೆಫಾ-ಎ-ಪಾಕಿಸ್ತಾನ್ ಕೌನ್ಸಿಲ್~ನ ಇತರ ನಾಯಕರ ಜತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಫೀಜ್ ತಿಳಿಸಿದ್ದಾನೆ.ಪಾಕಿಸ್ತಾನ ಸೇನೆಯ ಕೇಂದ್ರ ಕಚೇರಿಯಿಂದ ಕೂಗಳತೆಯ ದೂರದಲ್ಲಿದ್ದ ಹೋಟೆಲ್‌ವೊಂದರಲ್ಲಿ ಈ ಪತ್ರಿಕಾಗೋಷ್ಠಿ ನಡೆಯಿತು. ಹಫೀಜ್ ತಲೆಯ ಮೇಲೆ ಅಮೆರಿಕ ಒಂದು ಕೋಟಿ ಡಾಲರ್ ಬಹುಮಾನ ಘೋಷಿಸಿದ ಮೇಲೆ ಇದು ಆತ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಾಗಿದೆ.ಅಮೆರಿಕ ಸರ್ಕಾರವನ್ನು ವ್ಯಂಗ್ಯೋಕ್ತಿಗಳಿಂದ ಟೀಕಿಸಿದ ಹಫೀಜ್, `ನ್ಯಾಯಕ್ಕಾಗಿ ಬಹುಮಾನ~ ಯೋಜನೆಯಡಿ ಆ ಹಣವನ್ನು ತನಗೇ ನೀಡಬೇಕು. ಏಕೆಂದರೆ ನನ್ನ ಬಗ್ಗೆ ನಾನೇ ಮಾಹಿತಿ ನೀಡುತ್ತೇನೆ. ನಾನು ಬೆಟ್ಟ, ಗುಡ್ಡ, ಗುಹೆಗಳಲ್ಲಿ ಅಡಗಿಕೊಂಡಿಲ್ಲ. ಇಲ್ಲೇ ರಾವಲ್ಪಿಂಡಿಯಲ್ಲಿ ಇದ್ದೇನೆ ಎಂದು ಹೇಳಿದ.ಮುಂದಿನ ಕೆಲ ದಿನಗಳ ಕಾಲ ತನ್ನ ಪ್ರಯಾಣದ ವೇಳಾಪಟ್ಟಿ ಬಹಿರಂಗಗೊಳಿಸುವುದಾಗಿ ಹೇಳಿದ ಹಫೀಜ್, ಬುಧವಾರ ಸಂಜೆ ಪಂಜಾಬ್‌ನ ನರೊವಲ್‌ಗೆ, ಗುರುವಾರ ಲಾಹೋರ್‌ಗೆ ಹೋಗುತ್ತಿರುವುದಾಗಿ ತಿಳಿಸಿದ.

ಅಮೆರಿಕ ತನಗೆ ಬಹುಮಾನ ನೀಡಿದಲ್ಲಿ ಆ ಹಣವನ್ನು ಬಡ ಬಲೂಚಿಸ್ತಾನದ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಹಾಗೂ ಅದರ ವೆಚ್ಚದ ವಿವರ ನೀಡುವುದಾಗಿ ಆತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ.ಮುಂಬೈ ದಾಳಿಗೂ ಜೆಯುಡಿಗೂ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ ಹಫೀಜ್, ಭಯೋತ್ಪಾದನೆಯ ಸಂಚು ರೂಪಿಸಿದ್ದಕ್ಕಾಗಿ ತನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು ಹೇಳಿದ್ದಾನೆ.ಭಾರತದ ವಿನಾಶದ ಕನಸು (ವಾಷಿಂಗ್ಟನ್ ವರದಿ): ಭಾರತವನ್ನು ನಾಶಗೊಳಿಸುವುದು ಹಫೀಜ್ ಸಯೀದ್ ಯೋಜನೆಯಾಗಿದೆ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ತಜ್ಞ ಬ್ರೂಸ್ ರೀಡೆಲ್ ಹೇಳಿದ್ದಾರೆ.ಲಷ್ಕರ್-ಎ-ತೊಯ್ಬಾ ಸಂಸ್ಥಾಪಕನಾದ ಹಫೀಜ್ ಅಲ್-ಖೈದಾ ಸ್ನೇಹಿತ. ಒಸಾಮಾ ಸಾಯುವವರೆಗೂ ಆತನ ಜತೆ ಸಂಪರ್ಕದಲ್ಲಿದ್ದ.ಪಾಕಿಸ್ತಾನದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿರುವ ಸಯೀದ್‌ನನ್ನು ಅಲ್ಲಿನ ಸೇನೆ ಸಹ ಇಷ್ಟಪಡುತ್ತದೆ.ಭಾರತವನ್ನು ನಾಶಗೊಳಿಸಿ ಮೊಗಲ್ ಸಾಮ್ರಾಜ್ಯ ಪುನರ್‌ಸ್ಥಾಪಿಸುವ ಕನಸು ಆತ ಕಾಣುತ್ತಿದ್ದಾನೆ ಎಂದು `ಸಿಐಎ~ಯ ನಿವೃತ್ತ ಅಧಿಕಾರಿಯೂ ಆಗಿರುವ ರೀಡೆಲ್ ತಿಳಿಸಿದ್ದಾರೆ.ಬಹುಮಾನ ಘೋಷಣೆ: ಸ್ಪಷ್ಟನೆವಾಷಿಂಗ್ಟನ್ (ಪಿಟಿಐ): ಮುಂಬೈ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಹಫೀಜ್ ಸಯೀದ್ ತಲೆಗೆ ಬಹುಮಾನ ಘೋಷಿಸಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಓಡಾಡುತ್ತಿರುವ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕನ ಮೇಲೆ ಕಾನೂನು ಕ್ರಮ ಜರುಗಿಸುವುದು ತನ್ನ ಗುರಿಯಾಗಿದೆ ಎಂದು ಅದು ಹೇಳಿದೆ.ಆಫ್ಘಾನಿಸ್ತಾನದ ನ್ಯಾಟೊ ಪಡೆಗಳಿಗೆ ಪಾಕ್ ಮಾರ್ಗವಾಗಿ ಶಸ್ತ್ರಾಸ್ತ್ರ, ಸಾಧನ, ಸಲಕರಣೆ ಪೂರೈಸುತ್ತಿದ್ದ ಪ್ರಮುಖ ಮಾರ್ಗವನ್ನು ಮತ್ತೆ ತೆರೆಯದಂತೆ ತಾನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಮೇಲೆ ಬಹುಮಾನ ಘೋಷಿಸಲಾಗಿದೆ ಎಂದು ಹಫೀಜ್ ಸಯೀದ್ ಪ್ರತಿಕ್ರಿಯಿಸಿದ್ದ.ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ಟೋರಿಯಾ ನಲಂಡ್, ಮುಂಬೈ ದಾಳಿಯ ಕಾರಣಕ್ಕಾಗಿಯೇ ಬಹುಮಾನ ಘೋಷಿಸಲಾಗಿದೆ ಎಂದಿದ್ದಾರೆ. ಹಫೀಜ್ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ವಿಚಾರವನ್ನು ಅಮೆರಿಕ ಪಾಕಿಸ್ತಾನಕ್ಕೇ ತಿಳಿಸಿಲ್ಲ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಆರೋಪವನ್ನೂ ಅವರು ತಳ್ಳಿಹಾಕಿದ್ದಾರೆ.ಈ ವಿಚಾರದಲ್ಲಿ ನಾವು ಪಾಕಿಸ್ತಾನದ ಜತೆ ಸತತ ಸಂಪರ್ಕದಲ್ಲಿ ಇದ್ದೇವೆ. ಹಫೀಜ್ ತಲೆಗೆ ಬಹುಮಾನ ಘೋಷಿಸುವ ಪ್ರಸ್ತಾಪಕ್ಕೆ ಸ್ವತಃ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅನುಮತಿ ನೀಡಿದ್ದರು ಎಂದು ವಿಕ್ಟೋರಿಯಾ ನಲಂಡ್ ಮಂಗಳವಾರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.