ಮಂಗಳವಾರ, ಜುಲೈ 27, 2021
27 °C

ಒಸಾಮ ಕಥೆ ಮುಗಿಯಿತು,ದಾವೂದ್ ಬೇಟೆ ಬೇಕು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನ್ಯೂಯಾರ್ಕಿನ ಅವಳಿ ಗೋಪುರಗಳ ಕರಾಳ ಧ್ವಂಸದ ಸಂಚುಕೋರ ಒಸಾಮ ಲಾಡೆನ್‌ನ ಹತ್ಯೆಗೆ ಅಂತರ್ಜಾಲದಲ್ಲಿ ಸಂಭ್ರಮದ ಮಹಾಪೂರವೇ ಹರಿದಿದ್ದು,  ಇದೇ ವೇಳೆ ಪಾಕ್‌ನಲ್ಲೇ ಇದ್ದಾನೆ ಎನ್ನಲಾಗಿರುವ ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂನನ್ನೂ ಹತ್ಯೆ ಮಾಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

ಮುಂಚೂಣಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಈ ಕುರಿತು ಪುಟಗಟ್ಟಲೆ  ಸಂದೇಶಗಳು ವಿನಿಮಯವಾಗುತ್ತಿದ್ದು, ಲಾಡೆನ್‌ನನ್ನು ಬೇಟೆಯಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಶ್ಲಾಘನೆಯ ಹೊಳೆ ಹರಿದಿದೆ.

ಅಂತರ್ಜಾಲದಲ್ಲಿ ತಡಮಾಡದೆ ತಮ್ಮ ಅಭಿಪ್ರಾಯ ದಾಖಲಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಉಗ್ರರ ನೆಲೆಯಾಗಿರುವ ಪಾಕಿಸ್ತಾನದ ವಿರುದ್ಧ ಮಾನವೀಯತೆಯ ಪರ ಇರುವವರನ್ನೆಲ್ಲಾ ಭಾರತ ಸರ್ಕಾರ ಒಗ್ಗೂಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಒಸಾಮ, ನಿನಗೆ ಶುಭವಾಗಲಿ...!!! ದಾವೂದ್‌ನನ್ನು ನಿನ್ನೊಟ್ಟಿಗೆ ಕರೆದುಕೊಂಡು ಹೋಗಲಿಲ್ಲ?’ ಎಂಬ ವಾಕ್ಯ ಫೇಸ್‌ಬುಕ್‌ನಲ್ಲಿ ಗಮನ ಸೆಳೆದಿದೆ.

‘ಇದು ನನ್ನ ಜೀವಿತದ ಅತ್ಯಂತ ಸಿಹಿ ಸುದ್ದಿ. ಕಡೆಗೂ ಈತ ಸತ್ತಿದ್ದರಿಂದ ತುಂಬಾ ಸಂಸತವಾಗಿದೆ. ತಾನು ಎಸಗಿದ ಪಾತಕಕ್ಕೆ ತಕ್ಕುದಾದದ್ದೇ ಆತನಿಗೆ ಸಿಕ್ಕಿದೆ. ಆತನನ್ನು ಕಾರ್ಯಾಚರಣೆಯಲ್ಲಿ ಬಲಿ ಹಾಕಿದ ಸೈನಿಕರಿಗೆ ಜೈಕಾರಗಳು. ಜಗತ್ತಿನ ಅಗ್ರಗಣ್ಯ ರಾಷ್ಟ್ರವಾದ ಅಮೆರಿಕ ಇನ್ನು ಮುಂದೆಯೇ ರಾರಾಜಿಸಲಿದೆ’ ಎಂದಿದ್ದಾರೆ ಫೇಸ್‌ಬುಕ್ಕಿಗ ಶೇನ್ ಮೆರಿಟ್.

ಒಸಾಮನ ಅಸಂಖ್ಯಾತ ಚಿತ್ರಗಳನ್ನು ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಿರುವ ಅಂತರ್ಜಾಲಿಗರು, ಅಮೆರಿಕದ ಪಡೆಗಳ ವಿಜಯೋತ್ಸವ ಆಚರಿಸುವ ಸಲುವಾಗಿ ಈ ದಿನವನ್ನು ಜಾಗತಿಕ ರಜಾ ದಿನವನ್ನಾಗಿ ಘೋಷಿಸಬೇಕಿತ್ತು ಎಂದೂ ಸಲಹೆ ನೀಡಿದ್ದಾರೆ.

‘ನನ್ನ ಕುಟುಂಬದ ಯಾರನ್ನೂ ಆತ ಕೊಂದಿಲ್ಲ. ಆದರೂ ಲಾಡೆನ್ ಮಹಾ ಪಾತಕಿ. ಆತ ಸತ್ತಿದ್ದಾನೆ!’ ಎಂದು ನಿಟ್ಟುಸಿರುಬಿಟ್ಟಿದ್ದಾರೆ ಮತ್ತೊಬ್ಬರು.

‘ಒಸಾಮನನ್ನು ಜೀವಂತ ಸೆರೆ ಹಿಡಿಯಬೇಕೆಂಬುದೇ ಅಮೆರಿಕದ ಗುರಿಯಾಗಿತ್ತು. ದಾವೂದ್‌ನನ್ನು ನಮ್ಮ ಸರ್ಕಾರ ಜೀವಂತವಾಗಿಯೇ ವಶಕ್ಕೆ ಪಡೆಯುತ್ತದೆಂಬುದು ನನ್ನ ನಿರೀಕ್ಷೆ’ ಎಂದು ಹೆಸರಾಂತ ಚಿತ್ರ ನಿರ್ದೇಶಕ ಶೇಖರ್ ಕಪೂರ್ ಟ್ವಿಟರ್‌ನಲ್ಲಿ ದಾಖಲಿಸಿದ್ದಾರೆ.

‘ಲಾಡೆನ್ ಕಥೆ ಮುಗಿಯಿತು. ಈಗ ಉಳಿದಿರುವ ಪಾತಕಿಗಳ ಬೆನ್ನು ಹತ್ತೋಣ’ ಎಂದಿದ್ದಾರೆ ಮನೀಶಾ ವರ್ಮ ಎಂಬುವವರು.

ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್, ನಟ ರಣವೀರ್ ಶೋರಿ, ಚಿಂತಕ ಪ್ರಿತೀಶ್ ನಂದಿ  ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಮುಖರಾಗಿದ್ದಾರೆ. ‘ಒಸಾಮ ಹತ್ಯೆ ಭಯೋತ್ಪಾದನೆಯ ಕೊನೆಯಲ್ಲ; ಉಗ್ರರ ವಿರುದ್ಧದ ಹೋರಾಟ ಮುಂದುವರಿಯಬೇಕು’ ಎಂದು ತಸ್ಲೀಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.