ಭಾನುವಾರ, ಏಪ್ರಿಲ್ 18, 2021
31 °C

ಓಂಕಿಯೋ ಟಿಎಕ್ಸ್-ಎಸ್‌ಆರ್309 ಹೈಫೈ ಆಡಿಯೋಕ್ಕೆ ಸುಲಭ ಪ್ರವೇಶ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಅತ್ಯುತ್ತಮ ಗುಣಮಟ್ಟದ ಧ್ವನಿಯನ್ನು ಪುನರುತ್ಪತ್ತಿ ಮಾಡಬಲ್ಲ ಆಡಿಯೋ ಸಿಸ್ಟಮ್‌ಗಳಿಗೆ ಹೈಫೈ (HiFi - High Fidelity) ಸಿಸ್ಟಮ್ ಎನ್ನುತ್ತಾರೆ. ಇವುಗಳು ಸಾಮಾನ್ಯವಾಗಿ ಕಾಂಪೊನೆಂಟ್ ಸಿಸ್ಟಮ್‌ಗಳಾಗಿರುತ್ತವೆ. ಎಂದರೆ ಇವುಗಳಲ್ಲಿ ಸಿ.ಡಿ./ಡಿ.ವಿ.ಡಿ./ಬ್ಲೂರೇ ಪ್ಲೇಯರ್, ಆಂಪ್ಲಿಫೈಯರ್, ಸ್ಪೀಕರ್ ಎಲ್ಲ ಬೇರೆ ಬೇರೆ ಇರುತ್ತವೆ.ಇವುಗಳಲ್ಲಿ ಪ್ರವೇಶಮಟ್ಟದ ಸಿಸ್ಟಮ್‌ಗಳಲ್ಲಿ ಆಂಪ್ಲಿಫೈಯರ್ ಜೊತೆ ರೇಡಿಯೋ ಕೂಡ ಇರುತ್ತವೆ. ಅಂತೆಯೇ ಇವುಗಳಿಗೆ ಆಡಿಯೋ ವೀಡಿಯೋ ರಿಸೀವರ್ (AV Receiver) ಎಂಬ ಹೆಸರಿದೆ. ಇವುಗಳು ಹೋಮ್ ಥಿಯೇಟರ್ ಸಿಸ್ಟಮ್‌ನ ಕೇಂದ್ರ ಅಂಗವಾಗಿರುತ್ತವೆ. ಡಿ.ವಿ.ಡಿ. ಅಥವಾ ಬ್ಲೂರೇ ಡಿಸ್ಕ್ ಪ್ಲೇಯರ್‌ನ್ನು ಇದಕ್ಕೆ ಜೋಡಿಸಿ ಇದರಿಂದ ಸ್ಪೀಕರ್‌ಗಳಿಗೆ ಮತ್ತು ಟಿ.ವಿ.ಗೆ ಜೋಡಿಸಲಾಗುತ್ತದೆ.

 

5.1 ಸ್ಪೀಕರ್ ಇದ್ದಲ್ಲಿ ಅವುಗಳಿಗೆ ಸೂಕ್ತ ಜೋಡಣೆ ಈ ಎವಿ ರಿಸೀವರ್ ಆಂಪ್ಲಿಫೈಯರ್‌ನಿಂದ ಆಗುತ್ತದೆ. ಅಂತಹ ಒಂದು ಪ್ರವೇಶಮಟ್ಟದ ಹೈಫೈ ಆಡಿಯೋ ಆಂಪ್ಲಿಫೈಯರ್-ರಿಸೀವರ್ ಓಂಕಿಯೋ ಟಿಎಕ್ಸ್-ಎಸ್‌ಆರ್309 (ONKYO TX-SR309 AV Receiver). ಇದು ಈ ವಾರದ ಗ್ಯಾಜೆಟ್.ಮೊದಲನೆಯದಾಗಿ ಇದರ ಗುಣವೈಶಿಷ್ಟ್ಯಗಳ ಕಡೆಗೆ ಗಮನ ಹರಿಸೋಣ. 5.1 ಚಾನೆಲ್ ಹೋಮ್ ಥಿಯೇಟರ್ ಎವಿ ರಿಸೀವರ್ ಆಂಪ್ಲಿಫೈಯರ್. ಪ್ರತಿ ಚಾನೆಲ್‌ಗೂ 8 ಓಂ ಸ್ಪೀಕರ್‌ಗೆ 65 ವ್ಯಾಟ್ (ಅರ್‌ಎಂಎಸ್) ಶಕ್ತಿ. 0.7% ಟಿಎಚ್‌ಡಿ (Total Harmonic Distortion).ಮೂರು ಆಯಾಮ ಎಚ್‌ಡಿಎಂಐ ಬೆಂಬಲ. ಡೋಲ್ಬಿ ಹೈಡೆಫಿನಿಶನ್ ಮತ್ತು ಡಿಜಿಟಲ್ ಥಿಯೇಟರ್ ಸೌಂಡ್ ಸಿಸ್ಟಮ್. 32 ಬಿಟ್ ಡಿಜಿಟಲ್ ಸಿಗ್ನಲ್ ಪ್ರೋಸೆಸಿಂಗ್ ಚಿಪ್. ಇದು ಆಟ ಆಡುವಾಗ 4 ವಿಧದ ಆಯ್ಕೆಗಳನ್ನು ಧ್ವನಿಗೆ ನೀಡುತ್ತದೆ. ಆಟಗಳಲ್ಲಿ ಹಲವು ನಮೂನೆಗಳಿವೆ. ಯಾವ ನಮೂನೆಯ ಆಟವನ್ನು ಆಡುತ್ತಿದ್ದೀರೋ ಅದಕ್ಕೆ ಸರಿಯಾದ ಧ್ವನಿವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು.ಅಂದರೆ ಗೇಮ್ ಕನ್ಸೋಲ್ ಅನ್ನು ಇದಕ್ಕೆ ಜೋಡಿಸಿ ಇದರ ಔಟ್‌ಪುಟ್ ಅನ್ನು ಟಿ.ವಿ.ಗೆ ಜೋಡಿಸಿ ಆಡುವಾಗ ಅತ್ಯುತ್ತಮ ಅನುಭವ ನೀಡುತ್ತದೆ. ಹಲವು ನಮೂನೆಯೆ ಇನ್‌ಪುಟ್ ಮತ್ತು ಔಟ್‌ಪುಟ್ ಸೌಲಭ್ಯಗಳು ಇವೆ. ಇದರಲ್ಲಿ ಮಾಮೂಲಿ ಆರ್‌ಸಿಎ ಮತ್ತು ಎಚ್‌ಡಿಎಂಐ ಒಳಗೊಂಡಿದೆ. ಎಎಂ ಮತ್ತು ಎಫ್‌ಎಂ ರೇಡಿಯೋಗಳಿವೆ. ಯುಎಸ್‌ಬಿ ಜೋಡಣೆ ಕೂಡ ಇದೆ. ಮೇಲ್ನೋಟಕ್ಕೆ ಅನ್ನಿಸುವುದೇನೆಂದರೆ ಒಂದು ಹೈಫೈ ಆಡಿಯೋ ಸಿಸ್ಟಮ್‌ನಲ್ಲಿ ಇರಬೇಕಾದ ಹೆಚ್ಚಿನ ಗುಣವೈಶಿಷ್ಟ್ಯಗಳು ಇದರಲ್ಲಿವೆ.  ಇದು ಪ್ರವೇಶ ಮಟ್ಟದ ಹೈಫೈ ಸಿಸ್ಟಮ್ ಎಂದು ಹೇಳಲಾಗಿದೆ ತಾನೆ? ಹಾಗೆಂದು ಹೇಳಿ ಇದರ ಗುಣಮಟ್ಟ ಏನು ಕಳಪೆಯಾಗಿಲ್ಲ. ಉತ್ತಮ ಡಿಸ್‌ಪ್ಲೇ ಇದೆ. ದೂರನಿಯಂತ್ರಕ ಇದೆ. ಹೆಚ್ಚಿನ ಆಯ್ಕೆಗಳನ್ನು ಬಳಸಲು ಅದು ಅಗತ್ಯ. ಆದರೆ ಅದು ಇಲ್ಲದೆಯೂ ದಿನನಿತ್ಯದ ಬಳಕೆಗೆ ಅಡ್ಡಿ ಇಲ್ಲ. ಇದನ್ನು ಪ್ರಥಮ ಬಳಕೆಗೆ ಏರ್ಪಾಡು ಮಾಡುವುದು ಅಂದರೆ ಎಲ್ಲ ಜೋಡಣೆಗಳನ್ನು ಮಾಡುವುದು ಬಹಳ ಸರಳ.ಸಿ.ಡಿ., ಡಿ.ವಿ.ಡಿ. ಅಥವಾ ಬ್ಲೂರೇ ಪ್ಲೇಯರ್ ಜೋಡಿಸಿ ಸಂಗೀತ ಆಲಿಸಬಹುದು. ಡಿ.ವಿ.ಡಿ. ಅಥವಾ ಬ್ಲೂರೇ ಪ್ಲೇಯರ್‌ನಲ್ಲಿ ಹೈಡೆಫಿನಿಶನ್ ಸಿನಿಮಾದ ಡಿಸ್ಕ್ ಹಾಕಿ ಅದರ ವೀಡಿಯೋ ಔಟ್‌ಪುಟ್ ಅನ್ನು ಉತ್ತಮ ಟಿ.ವಿ.ಗೆ ಜೋಡಿಸಿದರೆ ಹೋಮ್ ಥಿಯೇಟರ್ ಆಗುತ್ತದೆ. ಕೇಬಲ್ ಚಾನೆಲ್‌ಗೆ ಕೂಡ ಇನ್‌ಪುಟ್ ಇದೆ. ಮುಂದುಗಡೆಯೇ ಆಕ್ಸಿಲರಿ ಇನ್‌ಪುಟ್ ಮತ್ತು ಯುಎಸ್‌ಬಿ ಜೋಡಣೆಗಳಿವೆ.

 

ಇದು ನಿಜಕ್ಕೂ ಉತ್ತಮ ಸೌಲಭ್ಯ. ಸಾಮಾನ್ಯವಾಗಿ ಹಿಂದುಗಡೆ ಜೋಡಣೆ ಇದ್ದರೆ ಪ್ರತಿ ಸಲ ಆಂಪ್ಲಿಫೈಯರ್ ಅನ್ನು ಮುಂದಕ್ಕೆ ಶೆಲ್ಪ್‌ನಿಂದ ಎಳೆದು ಜೋಡಿಸಬೇಕಾಗುತ್ತದೆ.

ನಿಮ್ಮಲ್ಲಿ ಐಫೋನ್ ಅಥವಾ ಐಪಾಡ್ ಇದ್ದರೆ ಅದನ್ನು ನೇರವಾಗಿ ಯುಎಸ್‌ಬಿ ಕಿಂಡಿಗೆ ಜೋಡಿಸಬಹುದು.ಔಟ್‌ಪುಟ್ ಅನ್ನು ಟಿ.ವಿ.ಗೆ ಜೋಡಿಸಿದ್ದಲ್ಲಿ ಐಫೋನ್/ಐಪಾಡ್‌ನಲ್ಲಿರುವ ಹಾಡುಗಳ ಆಯ್ಕೆಯನ್ನು ಟಿ.ವಿ ನೋಡಿ ಮಾಡಬಹುದು. ಯುಎಸ್‌ಬಿ ಡ್ರೈವ್‌ನಲ್ಲಿ ಸಂಗೀತದ ಫೈಲುಗಳಿದ್ದಲ್ಲಿ ಅದನ್ನು ಯುಎಸ್‌ಬಿ ಕಿಂಡಿಗೆ ಜೋಡಿಸಿ ಆಲಿಸಬಹುದು. ಆಂಪ್ಲಿಫೈಯರ್‌ನ ಡಿಸ್‌ಪ್ಲೇನಲ್ಲಿ ಪ್ಲೇ ಆಗುತ್ತಿರುವ ಹಾಡಿನ ಹೆಸರು ಮೂಡಿ ಬರುತ್ತದೆ.ಸಾಮಾನ್ಯವಾಗಿ ಯುಎಸ್‌ಬಿ ಡ್ರೈವ್‌ನಲ್ಲಿ ಹಾಡುಗಳು ಎಂಪಿ3 ವಿಧಾನದಲ್ಲಿರುತ್ತವೆ. ಈ ಎಂಪಿ3 ಎಂಬುದು ಹಾಡಿನ ಫೈಲನ್ನು ಗಾತ್ರದಲ್ಲಿ ತುಂಬ ಕುಗ್ಗಿಸಿಕೊಡುತ್ತದೆ. ಹಾಗೆ ಮಾಡುವಾಗ ಅದರ ಗುಣಮಟ್ಟದಲ್ಲಿ ಸ್ವಲ್ಪ ರಾಜಿ ಮಾಡಲಾಗುತ್ತದೆ. ನಿಮ್ಮ ಕಿವಿಯ ಗ್ರಹಣ ಸಾಮರ್ಥ್ಯ ಹೆಚ್ಚಿದ್ದರೆ ಮತ್ತು ಹೈಫೈ ಆಡಿಯೋ ಸಿಸ್ಟಮ್ ಇದ್ದರೆ ಆಡಿಯೋ ಸಿ.ಡಿ.ಯಿಂದ ಸಂಗೀತ ಆಲಿಸಿ ನೋಡಿ.ನಂತರ ಅದೇ ಸಂಗೀತವನ್ನು ಎಂಪಿ3 ಫೈಲ್ ಆಗಿ ಪರಿವರ್ತಿಸಿ ಅದನ್ನು ಆಲಿಸಿ ನೋಡಿ. ಗುಣಮಟ್ಟದಲ್ಲಿ ಸ್ವಲ್ಪ ಕಡಿಮೆ ಆಗಿರುವುದನ್ನು ಗಮನಿಸಬಹುದು. ಈ ಓಂಕಿಯೋ ಆಂಪ್ಲಿಫೈಯರ್‌ನಲ್ಲಿ music optimizer ಎಂಬ ಆಯ್ಕೆ ಇದೆ. ಇದನ್ನು ಬಳಸಿದಾಗ ಎಂಪಿ3 ಫೈಲ್‌ಗಳಿಂದ ಪ್ಲೇ ಮಾಡುವ ಸಂಗೀತವನ್ನು ಅದು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಮಾಡುತ್ತದೆ. ಇದು ನಿಜಕ್ಕೂ ಒಂದು ಉತ್ತಮ ಸೌಲಭ್ಯ.ಲ್ಯಾಪ್‌ಟಾಪ್ ಅಥವಾ ಗಣಕದಿಂದ ಈ ಆಂಪ್ಲಿಫೈಯರ್‌ಗೆ ಜೋಡಿಸಿ ಸಂಗೀತ ಆಲಿಸುವುದಿದ್ದಲ್ಲಿ ಎರಡು ವಿಧದಲ್ಲಿ ಇದನ್ನು ಮಾಡಬಹುದು. ಮೊದಲನೆಯದು ಸರಳವಾದ ವಿಧಾನ. ಲ್ಯಾಪ್‌ಟಾಪ್ ಅಥವಾ ಗಣಕದ ಹೆಡ್‌ಫೋನ್ ಔಟ್‌ಪುಟ್ ಅನ್ನು ಆಂಪ್ಲಿಫೈಯರ್‌ನ ಆಕ್ಸಿಲರಿ ಇನ್‌ಪುಟ್‌ಗೆ ಜೋಡಿಸುವುದು.

 

ಇದಕ್ಕಿಂತ ಉತ್ತಮ ವಿಧಾನವೆಂದರೆ ಲ್ಯಾಪ್‌ಟಾಪ್‌ನ ಎಚ್‌ಡಿಎಂಐ ಕಿಂಡಿಯಿಂದ ಸೂಕ್ತ ಕೇಬಲ್ ಮೂಲಕ ಜೋಡಿಸುವುದು. ಈ ವಿಧಾನದಲ್ಲಿ ಲ್ಯಾಪ್‌ಟಾಪ್‌ನಲ್ಲಿ ಹೈಡೆಫಿನಿಶನ್ ಸಿನಿಮಾ ನೋಡುವಾಗ ಉತ್ತಮ ಧ್ವನಿಯನ್ನು ಅನುಭವಿಸಬಹುದು.ಓಂಕಿಯೋ ಟಿಎಕ್ಸ್-ಎಸ್‌ಆರ್309ನ ಮುಖ ಬೆಲೆ ಭಾರತದಲ್ಲಿ 32 ಸಾವಿರ ರೂ. ಇದೆ. ಅಂಗಡಿಗಳಲ್ಲಿ ಸುಮಾರು 25 ಸಾವಿರ ರೂ.ಗಳಿಗೆ ದೊರೆಯುತ್ತದೆ. ಅಮೆರಿಕದ ಅಮೆಝಾನ್ ಜಾಲತಾಣದಲ್ಲಿ ಕೇವಲ 200 ಡಾಲರ್‌ಗೆ (ಸುಮಾರು 11 ಸಾವಿರ ರೂ.) ದೊರೆಯುತ್ತದೆ.ಒಟ್ಟಿನಲ್ಲಿ ಇದು ಹೈಫೈ ಆಡಿಯೋ ಕ್ಷೇತ್ರಕ್ಕೆ ಪ್ರವೇಶಮಟ್ಟದ ಆಂಪ್ಲಿಫೈಯರ್ ಆಗಿದ್ದರೂ ಉತ್ತಮ ಅನುಭವ ನೀಡುತ್ತದೆ. ನಮ್ಮ ದೇಶದ ಮಟ್ಟಿಗೆ ಸ್ವಲ್ಪ ದುಬಾರಿಯೇ.ಗ್ಯಾಜೆಟ್ ಸಲಹೆ

ಕಲ್ಲಯ್ಯ ಶಿವಾನಂದಯ್ಯ ಅವರ ಪ್ರಶ್ನೆ: ನನ್ನ ಬಜೆಟ್ 20000 ರೂ. ನನಗೆ 5.1 ಸ್ಪೀಕರ್ ಸಿಸ್ಟಮ್ ಕೊಳ್ಳಬೇಕು. ಯಾವುದು ಉತ್ತಮ?

ನಿಮ್ಮ ಆಂಪ್ಲಿಫೈಯರ್ ಯಾವುದು ಎಂದು ನೀವು ತಿಳಿಸಿಲ್ಲ. ಅಂಫ್ಲಿಫೈಯರ್‌ನ ಔಟ್‌ಪುಟ್‌ಗೆ (ಶಕ್ತಿ/ವ್ಯಾಟ್ ಮತ್ತು ಇಂಪೆಡೆನ್ಸ್/ಓಂ) ಸರಿಹೊಂದುವ ಸ್ಪೀಕರ್ ಕೊಳ್ಳಬೇಕು. ಅಂಗಡಿಯಲ್ಲಿ ನೀವೇ ಆಲಿಸಿ ನಿರ್ಧರಿಸಬೇಕು. ಉತ್ತಮ ಸಂಗೀತದ ಮತ್ತು ಮಾನವ ಧ್ವನಿಯ (ಗಾಯನದ) ಆಡಿಯೋ ಸಿ.ಡಿ.ಯನ್ನು (ಎಂಪಿ3 ಅಲ್ಲ) ಪ್ಲೇ ಮಾಡಿ ಆಲಿಸಿ ನಿರ್ಧರಿಸಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.