ಓಂ ಚಂದಪ್ಪ ಕಥಾ...

7

ಓಂ ಚಂದಪ್ಪ ಕಥಾ...

Published:
Updated:
ಓಂ ಚಂದಪ್ಪ ಕಥಾ...

ಬೆರಕೆ ಸೊಪ್ಪಿನ ಖ್ಯಾತಿಯ ನಿರ್ದೇಶಕ ಓಂಪ್ರಕಾಶ್‌ರಾವ್ ಮತ್ತೆ ನಾಟಿ ಸೊಪ್ಪಿನತ್ತ, ಅರ್ಥಾತ್ ಸ್ವಮೇಕ್ ಚಿತ್ರದತ್ತ ವಾಲಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಅವರಿಗಿರುವ ಪ್ರೇಮ ಯಾರಿಗೆ ಗೊತ್ತಿಲ್ಲ? ಹೌದು, ಈ ಸಲವೂ ಅವರು ಆರಿಸಿಕೊಂಡಿರುವ ಕಥೆ ಉತ್ತರ ಕರ್ನಾಟಕ ಪರಿಸರದ್ದೇ. ಚಿತ್ರದ ಹೆಸರು- ‘ಭೀಮಾ ತೀರದಲ್ಲಿ’. ಅಣಜಿ ನಾಗರಾಜ್ ಚಿತ್ರದ ನಿರ್ಮಾಪಕ.ಭೀಮಾ ನದಿಯ ತೀರದ ಜನರಿಗೆ ಸಿಂಹಸ್ವಪ್ನವಾಗಿದ್ದ ಕುಖ್ಯಾತ ಡಕಾಯಿತ ಚಂದಪ್ಪನ ಕಥೆಯನ್ನೇ ಓಂಪ್ರಕಾಶ್ ಸಿನಿಮಾ ಮಾಡುತ್ತಿದ್ದಾರೆ. ಕಥೆ - ಚಿತ್ರಕಥೆ ಕೂಡ ಅವರದ್ದೇ. ಶೋಷಣೆ, ಪ್ರತಿಭಟನೆ, ಸೇಡು, ನೆತ್ತರುಗಳ ನಡುವೆ ಮನುಷ್ಯ ಸಂಬಂಧಗಳ ತಾಕಲಾಟದ ಕಥೆ ಚಂದಪ್ಪನದು. ನೆತ್ತರ ಓಕಳಿಯಾಡುವ ಚಂದಪ್ಪನ ಪಾತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಪಾತ್ರಕ್ಕೆ ವಿಜಯ್ ಕಟ್ಟುಮಸ್ತು ಮೈಕಟ್ಟು ಹೇಳಿಮಾಡಿಸಿದಂತಿದೆ.ಪ್ರಣೀತಾ ಹಾಗೂ ಪ್ರಜ್ವಲ್ ಪೂವಯ್ಯ ವಿಜಯ್‌ಗೆ ನಾಯಕಿಯರಾಗಿ ಅಭಿನಯಿಸಲಿದ್ದಾರೆ. ಸಚಿವ ರೇಣುಕಾಚಾರ್ಯ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. 1985ರಿಂದ 2004ರ ಮಾರ್ಚ್‌ವರೆಗೆ ಚಂದಪ್ಪ ನಡೆಸಿದ ಅಟ್ಟಹಾಸ, ದೌರ್ಜನ್ಯಗಳ ಜೊತೆಗೆ ಜನಪ್ರಿಯ ಅಪೇಕ್ಷಿಸುವ ಎಲ್ಲ ಮಸಾಲೆಯೂ ಚಿತ್ರದಲ್ಲಿ ಇರಲಿದೆಯಂತೆ.ಈ ಸಿನಿಮಾಕ್ಕಾಗಿ ಓಂಪ್ರಕಾಶ್ ಕಳೆದ ಐದು ವರ್ಷಗಳಿಂದ ಸಿದ್ಧತೆ ನಡೆಸಿದ್ದಾರಂತೆ. ಭೀಮಾ ತೀರದ ಜನರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರಂತೆ. ‘ಚಿತ್ರದ ಕಥೆಯಲ್ಲಿ ಶೇ.40ರಷ್ಟು ನೈಜ, ಉಳಿದುದು ಕಾಲ್ಪನಿಕ. ತೆಲುಗು ನಟ ಡಾ. ರಾಜಶೇಖರ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ.  ಚಿತ್ರದ ಮೂರು ಹಾಡುಗಳಿಗೆ ಅಭಿಮನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ’ ಎಂದು ಓಂಪ್ರಕಾಶ್ ಚಿತ್ರದ ಮಾಹಿತಿ ನೀಡಿದರು.ವಿಜಯ್‌ಗೆ ‘ಭೀಮಾ ತೀರದಲ್ಲಿ’ ಚಿತ್ರದ ಕಥೆ ಇಷ್ಟವಾಗಿದೆ. ನಿರ್ಮಾಪಕರ ಬಗ್ಗೆಯೂ ಖುಷಿಯಿದೆ. ‘ಅಣಜಿ ನಾಗರಾಜ್ ಚಿತ್ರರಂಗದ ಬಗ್ಗೆ ತುಂಬಾ ತಿಳಿದುಕೊಂಡವರು. ಇಂಥವರ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಖುಷಿಯಾಗುತ್ತದೆ’ ಎಂದರು.‘ಚಂದಪ್ಪ ಒಳ್ಳೆಯವನು ಅಥವಾ ಕೆಟ್ಟವನು ಎನ್ನುವ ಕಪ್ಪುಬಿಳುಪು ಚಿತ್ರಣಕ್ಕೆ ಬದಲಾಗಿ, ಆತನ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ತೆರೆದಿಡುವ ರೀತಿಯಲ್ಲಿ ಚಿತ್ರಕಥೆ ಸಿದ್ಧಪಡಿಸಲಾಗಿದೆ’ ಎನ್ನುವ ವಿಜಯ್ ಮಾತುಗಳಲ್ಲಿ ಹೊಸತೊಂದು ಸಾಹಸಕ್ಕೆ ಮುಂದಾಗಿರುವ ಹುಮ್ಮಸ್ಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry