ಮಂಗಳವಾರ, ನವೆಂಬರ್ 12, 2019
27 °C

`ಓಟನ್ನು ಹಣ-ಹೆಂಡಕ್ಕೆ ಮಾರುವುದಿಲ್ಲ'

Published:
Updated:

ಮೈಸೂರು: ಕ್ಯಾನ್‌ವಾಸ್ ಮೇಲೆ ನೂರಾರು ಮಂದಿ ಸಹಿ ಹಾಕುವ ಮೂಲಕ `ಓಟನ್ನು ಹಣ-ಹೆಂಡಕ್ಕೆ ಮಾರುವುದಿಲ್ಲ' ಎಂದು ಹೇಳುತ್ತಾ ಪ್ರಜ್ಞಾವಂತಿಕೆ ಮೆರೆದರು.ಇಂಥದ್ದೊಂದು ವೇದಿಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ನಗರದ ಅರಮನೆ ಮುಂಭಾಗ ಸೋಮವಾರ ನಿರ್ಮಾಣ ಮಾಡಿತ್ತು.ಸಹಿ ಸಂಗ್ರಹ ಜನ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸಿ.ಎಚ್.ವಸುಂಧರಾದೇವಿ, `ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಾಜಕಾರಣಿಗಳು ಮತದಾರರಿಗೆ ಅನೇಕ ರೀತಿಯ ಆಮಿಷ ಒಡ್ಡುತ್ತಾರೆ.ಈ ಹಿನ್ನೆಲೆಯಲ್ಲಿ ಮತದಾನ ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ಅದನ್ನು ಮಾರಿಕೊಳ್ಳುವುದಿಲ್ಲ ಎಂಬ ಜಾಗೃತಿಯನ್ನು ವಿವಿಧ ಸಂಘಟನೆಗಳೊಂದಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಮತದಾರರಲ್ಲಿ ಮೂಡಿಸಲಾಗುತ್ತಿದೆ. ಮೈರಾಡ, ಸ್ತ್ರೀಶಕ್ತಿ ಸಂಘಗಳಿಗೂ ಮತದಾನದ ಬಗ್ಗೆ ಅರಿವು ನೀಡಿದ್ದೇವೆ. ಬಹುಜನ ವಿದ್ಯಾರ್ಥಿ ಸಂಘ ಸಹಿ ಚಳವಳಿ ಕೈಗೊಂಡಿರುವುದು ಶ್ಲಾಘನೀಯ' ಎಂದರು.`ನಮ್ಮ ಮತ ನಮ್ಮ ಬದುಕನ್ನೇ ಬದಲಿಸಬಲ್ಲ ಅಕ್ಷಯಪಾತ್ರೆ ಇದ್ದಂತೆ. ಅಂತಹ ಪವಿತ್ರವಾದ ಓಟನ್ನು ಮಾರಾಟ ಮಾಡಿಕೊಂಡರೆ ನಮ್ಮಿಂದ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡಂತಾಗುತ್ತದೆ' ಎಂಬ ಸಂದೇಶವನ್ನು ಬಹುಜನ ವಿದ್ಯಾರ್ಥಿ ಸಂಘದವರು ಸಾರ್ವಜನಿಕರಿಗೆ ತಿಳಿಸಿದರು.ಈ ಆಂದೋಲನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಮತದಾರರು ಎಚ್ಚೆತ್ತುಕೊಂಡು ದೇಶದ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಸಂಘದ ಜಿಲ್ಲಾ ಸಂಯೋಜಕ ಸೋಸಲೆ ಸಿದ್ದರಾಜು ತಿಳಿಸಿದರು.ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್.ಪ್ರಕಾಶ್, ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್, ಕರುನಾಡು ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜು, ಡಾ.ಪ್ರೇಮ್‌ಕುಮಾರ್, ಸಂಘದ ನಗರ ಸಂಯೋಜಕ ಗಣೇಶ್‌ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ನಂದೀಶ್, ಮುಖಂಡರಾದ ರಘು ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)