ಓಟೂರು ಶಾಲೆಗೆ ಸುವರ್ಣ ಸಂಭ್ರಮ

7

ಓಟೂರು ಶಾಲೆಗೆ ಸುವರ್ಣ ಸಂಭ್ರಮ

Published:
Updated:
ಓಟೂರು ಶಾಲೆಗೆ ಸುವರ್ಣ ಸಂಭ್ರಮ

ಗ್ರಾಮಸ್ಥರೆಲ್ಲಾ ಸೇರಿ ಗುರುಗಳಿಗೆ ಭತ್ತ ನೀಡಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದ ಸೊರಬ ತಾಲ್ಲೂಕಿನ ಓಟೂರು ಗ್ರಾಮದಲ್ಲಿ 1959ರಲ್ಲಿ ಆರಂಭಗೊಂಡ ಸರ್ಕಾರಿ ಪ್ರಾಥಮಿಕ ಶಾಲೆ ಇದೇ ತಿಂಗಳ 18ರಂದು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.ತಮ್ಮ ದಿನನಿತ್ಯದ ಕೃಷಿಕ ಚಟುವಟಿಕೆ ಪೂರೈಸಿ, ಅಂದಿನ ಬಿರು ಬಿಸಿಲು, ಮಳೆ, ಗಾಳಿಯನ್ನು ಮೀರಿ 3 ಕಿ.ಮೀ. ದೂರದ ಪಟ್ಟಣದ ಶಾಲೆಗೆ ತಾವು ತೆರಳುತ್ತಿದ್ದ ಸಂಕಷ್ಟವನ್ನು ನೆನೆದು, ತಮ್ಮ ಮಕ್ಕಳ ಪರಿಸ್ಥಿತಿ ಹೀಗಾಗಬಾರದು ಎಂಬ ಉದ್ದೇಶದಿಂದ ಗ್ರಾಮದ ಶಿಕ್ಷಣಾಭಿಮಾನಿಗಳು, 1953ರಲ್ಲಿಯೇ ಗುರುಕುಲದ ಮಾದರಿಯಲ್ಲಿ ಶಾಲೆ ಆರಂಭಿಸಿದ್ದರು.ಅಂದು ಗ್ರಾಮದ ರಾಮೇಶ್ವರ ದೇಗುಲದ ಆವರಣದಲ್ಲಿ ಅಪ್ಪಾಜಪ್ಪ ಹಾಗೂ ಅಬ್ದುಲ್ ರೆಹಮಾನ್ ಎಂಬಿಬ್ಬರು ಶಿಕ್ಷಕರಿಗೆ ಗ್ರಾಮಸ್ಥರಿಂದ ಭತ್ತ ಸಂಗ್ರಹಿಸಿ, ಗುರು ಕಾಣಿಕೆಯಾಗಿ ನೀಡಿ ಆರಂಭಿಸಿದ ಶಾಲೆ ಇಂದು 120 ವಿದ್ಯಾರ್ಥಿಗಳು ಕಲಿಯುತ್ತಿರುವ ಬಹು ಕೊಠಡಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದರ್ಜೆಗೆ ಏರಿದೆ.ಅಂದಿನ ವಿಪಿ ಛೇರ್ಮನ್, ಟಿಡಿಪಿ ಸದಸ್ಯ ಮೂಡುಗೋಡು ಹುಚ್ಚಪ್ಪ, ಪಟೇಲ್ ಹುಚ್ಚರಾಯಪ್ಪ ಶ್ರಮವೇ ಶಾಲೆಯ ಆರಂಭಕ್ಕೆ ಮುನ್ನುಡಿಯಾಗಿದ್ದು, ನಂತರದ ಶಾಲಾ ಸಮಿತಿಯ ಅಧ್ಯಕ್ಷರಾದ ಕೆ. ಏಕಾಂತಪ್ಪ, ಇಂದಿನ ಡಿ. ಹೊನ್ನಪ್ಪ, ಕೆ.ಬಿ. ಗುರುಮೂರ್ತಿ ಮೊದಲಾದವರ ಶ್ರಮದ ಫಲವಾಗಿ ಶಾಲೆ ಇಂದು ಒಂದು ಉತ್ತಮ ವಿದ್ಯಾಕೇಂದ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಚಿತ್ರಟ್ಟೆಹಳ್ಳಿಯ ದ್ಯಾವಪ್ಪ, ಕುಪ್ಪಗಡ್ಡೆಯ ಹುಚ್ಚಪ್ಪ ಮಾಸ್ತರ್, ನಿಂಗಪ್ಪ ಮಾಸ್ತರ್ ಮೊದಲಾದ ಶಿಕ್ಷಕರಿಗೆ ತಲಾ 5 ಗಿದ್ದನ ಭತ್ತ ನೀಡಲಾಗುತ್ತಿತ್ತು ಎಂದು 1950-60ರ ಸಾಲಿನಲ್ಲಿ ಓದಿದ ಎಚ್. ಹನುಮಂತಪ್ಪ (75), ಕೆ. ಬಸವಣ್ಯಪ್ಪ (65), ಎಚ್. ಭೈರಪ್ಪ (75), ಕೆ. ಕೆರಿಯಪ್ಪ (80), ಎನ್. ಕೆರಿಯಪ್ಪ (77), ಎಚ್. ದಾನಪ್ಪ (61) ಇನ್ನೂ ಮೊದಲಾದವರು ತಮ್ಮ ನೆನಪಿನ ಬುತ್ತಿ ಬಿಚ್ಚುತ್ತಾರೆ.ಏಕಾಂತಪ್ಪ ಅವರ ಕಾಲದಲ್ಲಿ ಶಾಲೆ ಸುಂದರ ಅಡಿಕೆ, ಬಾಳೆಯ ತೋಟ ಕಂಡಿದೆ. ಮಂಜಪ್ಪ ಮಾಸ್ತರ್, ಮಲ್ಲಪ್ಪ, ಮುದ್ದಪ್ಪ, ವೀರಭದ್ರಪ್ಪ ಮೊದಲಾದವರು ಉಚಿತವಾಗಿ ಸಸಿಗಳನ್ನು ಪೂರೈಸಿದ್ದು, ಇಂದು ಫಲ ಕೊಡುತ್ತಿವೆ. ಸರ್ವ ಶಿಕ್ಷಾ ಅಭಿಯಾನ ಜಾರಿಗೆ ಬರುವ ಮುನ್ನ ಶಾಲೆಯ ಸುಧಾರಣೆಗೆಂದು ಗ್ರಾಮಸ್ಥರೇ ದವಸ-ಧಾನ್ಯಗಳ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕೊಠಡಿ, ಇತರ ಸಲಕರಣೆಗಳನ್ನು ಪೂರೈಸಿದ್ದಾರೆ. ಶಾಲೆಯ ಸುತ್ತ ಬೇಲಿ ನಿರ್ಮಿಸಿದ್ದಾರೆ. ಗ್ರಾಮದ ಪ್ರತಿ ವ್ಯಕ್ತಿಯ ಸಹಕಾರ ಶಾಲೆಯ ಸಂಭ್ರಮದ ಹಿಂದಿದೆ.ಎದುರಿಗೆ ರಾಮೇಶ್ವರನ ಸನ್ನಿಧಿ ಹೊಂದಿರುವ ಶಾಲೆ ತನ್ನ ವಿಶಾಲ ಮೈದಾನದಿಂದಾಗಿ ನೋಡುಗರ ಕಣ್ಮನ ಸೆಳೆಯುತ್ತದೆ. ರಾಜಕಾರಣಿಗಳು, ರೈತಪರ ಹೋರಾಟಗಾರರು, ಎಂಜಿನಿಯರ್, ಶಿಕ್ಷಕರು ಇನ್ನೂ ಹತ್ತು ಹಲವಾರು ಗಣ್ಯರನ್ನು ಸಮಾಜಕ್ಕೆ ಕೊಡುಗೆ ನೀಡಿರುವ ಶಾಲೆಯ ಶಿಕ್ಷಕರ ಪಟ್ಟಿ, ಮಾನವಾಚಾರ್ಯ, ರಾಮಪ್ಪ ಮಾಸ್ತರ್, ದೇವಪ್ಪ, ಹುಚ್ಚಪ್ಪ ಮಾಸ್ತರ್, ಈರಯ್ಯ, ಹರಳಯ್ಯ, ರಾಮಚಂದ್ರಪ್ಪ, ಶಿವಾನಂದ, ಮಲ್ಲಪ್ಪ, ವೀರಭದ್ರಪ್ಪ, ಸೀನಪ್ಪ ಕೊಠಾರಿ, ಕೆ. ಬಸಪ್ಪ, ಸುಮಾ, ಕೆರೆಸ್ವಾಮಿ, ಎಸ್. ಮುದಿಗೌಡರ್ - ಹೀಗೇ ಮುಂದುವರಿಯತ್ತದೆ.ಸುವರ್ಣ ಮಹೋತ್ಸವ ಸಮಾರಂಭವನ್ನು ಏ. 18ರಂದು ಬೆಳಿಗ್ಗೆ 10ಕ್ಕೆ ಶಾಸಕ ಎಚ್. ಹಾಲಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry