ಓಡಿದ ರೈಲು; ಹಾರದ ವಿಮಾನ–371(ಜೆ) ಸಂಭ್ರಮ

7

ಓಡಿದ ರೈಲು; ಹಾರದ ವಿಮಾನ–371(ಜೆ) ಸಂಭ್ರಮ

Published:
Updated:

ಗುಲ್ಬರ್ಗ:  ಸಂವಿಧಾನದ 371 (ಜೆ) ಕಲಂ ತಿದ್ದುಪಡಿಗೆ ರಾಷ್ಟ್ರಪತಿ ಅಂಕಿತ. ಮೂರೂವರೆ ದಶಕಗಳ ಕನಸು ನನಸಾದ ಸಂಭ್ರಮ. ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠ ಕಾಯಂ ಆಗಿ ಪರಿವರ್ತನೆ. ಹೊಸ ರೈಲುಗಳ ಸೇವೆಗೆ ಚಾಲನೆ. ಕೇಂದ್ರೀಯ ವಿ.ವಿ ನೂತನ ಕ್ಯಾಂಪಸ್ ಲೋಕಾರ್ಪಣೆ. ವರ್ಷವಿಡೀ ಅಪಘಾತ, ಅಪರಾಧ, ಪ್ರತಿಭಟನೆ. ಅತಂತ್ರವಾದ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ. ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಭಾಗ್ಯ..–ಇವು 2013ರ ಹೈಲೈಟ್ಸ್. ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತರಬೇಕು. ಶಿಕ್ಷಣ, ಉದ್ಯೋಗಾವಕಾಶದಲ್ಲಿ ಶೇ 80ರಷ್ಟು ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದರಿಂದ ಈ ಭಾಗದ ಜನತೆ ಸಂಭ್ರಮ ಇಮ್ಮಡಿಯಾಯಿತು.ಹೈಕೋರ್ಟ್ ಸಂಚಾರಿ ಪೀಠವನ್ನು ಕಾಯಂ ಆಗಿ ಘೋಷಣೆ ಮಾಡುವ ಮೂಲಕ ಹೈ.ಕ ಭಾಗಕ್ಕೆ ಮತ್ತೊಂದು ಸಿಹಿ ಈ ವರ್ಷ ದೊರಕಿತು. ರಾಜ್ಯದ ಏಕೈಕ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಕುಸನೂರ ಕೈಗಾರಿಕಾ ಪ್ರದೇಶದಲ್ಲಿ ‘ಜವಳಿ ಪಾರ್ಕ್’ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ, ಎಚ್‌ಕೆಇ  ಸಂಸ್ಥೆಯ ಹೋಮಿಯೋಪಥಿ ಕಾಲೇಜಿಗೆ ಡಾ.ಮಾಲಕರಡ್ಡಿ ಹೋಮಿಯೋಪಥಿ ಕಾಲೇಜು ಮತ್ತು ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು. ಇವಿಷ್ಟು ಈ ವರ್ಷದ ಪ್ರಮುಖ ಸಂಗತಿಗಳು.ಇನ್ನುಳಿದಂತೆ ಕಡಗಂಚಿಯಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ಯತ್ನ, ಮುತ್ತೂಟ್ ಫಿನ್ ಕಾರ್ಪ್‌ನಲ್ಲಿ ದರೋಡೆ, ಮಾಜಿ ಶಾಸಕ ವಿಠಲ ಹೇರೂರ ನಿಧನ, ರೈಲು ದುರಂತದಲ್ಲಿ ಸೇಡಂ ತಾಲ್ಲೂಕು ಕುರಕುಂಟಾ ಗ್ರಾಮದ ನಿವಾಸಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮಯ್ಯ ಶಹಾಬಾದಕರ್ ನಿಧನ, ಜೇವರ್ಗಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಗೊಂದಲದೊಂದಿಗೆ 2013ರ ಮುಕ್ತಾಯವಾಯಿತು.ಇಬ್ಬರಿಗೆ ಅಧಿಕಾರ: ಶಾಸಕರಾದ ಖಮರುಲ್ ಇಸ್ಲಾಂ ಹಾಗೂ ಶರಣಪ್ರಕಾಶ ಪಾಟೀಲ ಅವರು ಕ್ರಮವಾಗಿ ಪೌರಾಡಳಿತ, ವಕ್ಫ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಅಸ್ಥಿರತೆ ಈ ವರ್ಷವೂ ಮುಂದುವರಿಯಿತು. ಪಾಲಿಕೆಗೆ ಚುನಾವಣೆ ನಡೆದು 10 ತಿಂಗಳಾದರೂ ಮೀಸಲಾತಿ ಗೊಂದಲದಿಂದ ಮೇಯರ್, ಉಪ ಮೇಯರ್ ಆಯ್ಕೆ ಆಗಲಿಲ್ಲ. ವಿಮಾನ ಹಾರಾಟ ನಿರೀಕ್ಷೆ ಈ ಬಾರಿಯೂ ಈಡೇರಲಿಲ್ಲ.ರೈಲು ಸಂಚಾರಕ್ಕೆ ಚಾಲನೆ: ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜೂ. 17 ರಂದು ರೈಲ್ವೆ ಸಚಿವರಾಗಿ ನೇಮಕಗೊಂಡರು. ಈ ಭಾಗದ ಬಹು ದಿನಗಳ ಬೇಡಿಕೆಯಾದ ಗುಲ್ಬರ್ಗ–ಬೆಂಗಳೂರು, ಸೊಲ್ಲಾಪುರ–ಗುಲ್ಬರ್ಗ–ಬೆಂಗಳೂರು, ಹುಬ್ಬಳ್ಳಿ–ಗುಲ್ಬರ್ಗ, ರಾಯಚೂರು–ಗದ್ವಾಲ್ ಹಾಗೂ ಬೀದರ್–ಬೆಂಗಳೂರು ರೈಲು ಸೇವೆಗಳಿಗೆ ಚಾಲನೆ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದರು.ಲೈಂಗಿಕ ಕಿರುಕುಳ: ಗುಲ್ಬರ್ಗ ವಿ.ವಿ ಅರ್ಥಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಸಹ ಪ್ರಾಧ್ಯಾಪಕ, ಮಾರ್ಗದರ್ಶಕ ಪ್ರೊ.ದಶರಥ ನಾಯಕ ಲೈಂಗಿಕ ಕಿರುಕುಳ ನೀಡಿದ ಸುದ್ದಿ ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿತು. ತಲೆಮರೆಸಿಕೊಂಡಿದ್ದ ದಶರಥ ನಾಯಕ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ ಜಾಮೀನಿನ ಮೇಲೆ ದಶರಥ ಬಿಡುಗಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry