ಬುಧವಾರ, ಮೇ 25, 2022
30 °C
ಇಥಿಯೋಪಿಯಾದ ಅಲೆಮು ಬೆಕೆಲೆ ಅಂತರಂಗದ ಮಾತುಗಳು

ಓಡುವುದೇ ಬದುಕು, ವೃತ್ತಿ ಎಲ್ಲವೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಅಲೆಮು ಬೆಕೆಲೆ ಗೆಬ್ರೆ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಅಂತಿಮ ದಿನವಾದ ಭಾನುವಾರ ರಾತ್ರಿ ಐದು ಸಾವಿರ ಮೀಟರ್ಸ್ ದೂರದ ಓಟದ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಪಾಡಿಕೊಂಡಿದ್ದು, ಅಂತಿಮದಲ್ಲಿ ರಜತ ಪದಕ ಪಡೆದು ಕೊಂಡರು. ಇದು ಇವರಿಗೆ ಈ ಕೂಟದ ಎರಡನೇ ಪದಕ.

ಇಲ್ಲಿ ಎರಡನೇ ದಿನ ಹತ್ತು ಸಾವಿರ ಮೀಟರ್ಸ್ ದೂರವನ್ನು 28ನಿಮಿಷ 47.26ಸೆಕೆಂಡುಗಳಲ್ಲಿ ಕ್ರಮಿಸಿ ಬಂಗಾರ ಪಡೆದಿದ್ದರು. ಇಥಿಯೋಪಿಯಾದ ಹೊಸ ಪೀಳಿಗೆಯ ಅಪ್ರತಿಮ ಓಟಗಾರರಲ್ಲಿ ಅಲೆಮು ಒಬ್ಬರು.ಇಥಿಯೋಪಿಯಾದ ಪ್ರಾಂತೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಅಲೆಮು ಪ್ರತಿಭೆಯನ್ನು ಗುರುತಿಸಿದ ಬಹರೇನ್ ಕ್ರೀಡಾ ಯೋಜನೆಯ ಅಧಿಕಾರಿಗಳು ಅಲೆಮು ಅವರನ್ನು ತಮ್ಮ ಕ್ರೀಡಾ ಅಕಾಡೆಮಿಗೆ ಸೇರಿಸಿಕೊಂಡರು. ಅವರಿಗೆ 18ವರ್ಷ ಆಗಿದ್ದಾಗ ಹತ್ತನೇ ಏಷ್ಯಾ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಕಳೆದ ವರ್ಷ ಇವರು ಹಾಲೆಂಡ್‌ನ ಹ್ಯಾಂಗೆಲೊದಲ್ಲಿ 10ಸಾವಿರ ಮೀಟರ್ಸ್ ದೂರವನ್ನು 27ನಿಮಿಷ 56.20ಸೆಕೆಂಡುಗಳಲ್ಲಿ ಕ್ರಮಿಸಿದರೆ, ಚೀನಾದ ಹ್ಯಾಂಗ್‌ಜೌನಲ್ಲಿ 3ಸಾವಿರ ಮೀಟರ್ಸ್ ದೂರವನ್ನು 7ನಿಮಿಷ 48.04ಸೆಕೆಂಡುಗಳಲ್ಲಿ ಓಡಿದರು. ವಿಯಟ್ನಾಮ್‌ನ ಹನಾಯ್‌ನಲ್ಲಿ 1500ಮೀಟರ್ಸ್ ದೂರವನ್ನು 3ನಿಮಿಷ 43.66ಸೆಕೆಂಡುಗಳಲ್ಲಿ ಕ್ರಮಿಸಿದರು.  ಹೀಗೆ ಇಸ್ತಾಂಬುಲ್, ಅಮಾನ್ ಸೇರಿದಂತೆ ಜಗತ್ತಿನ ಪ್ರಮುಖ 40ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಅಂತರರಾಷ್ಟ್ರೀಯ ಕೂಟಗಳಲ್ಲಿ ಓಡಿರುವ ಅಲೆಮು ದಟ್ಟ ಅನುಭವ ಗಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜಪಾನಿನ ಕೋಬೆಯಲ್ಲಿ ನಡೆದಿದ್ದ 19ನೇ ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಇವರು ಕಂಚಿನ ಪದಕ ಗೆದ್ದಿದ್ದರು.ಇಥಿಯೋಪಿಯಾದ ಹೆಸರುವಾಸಿ ಓಟಗಾರ ಕೆನೆನಿಸಾ ಬೆಕೆಲೆ ಅವರ ಹಾದಿಯಲ್ಲಿಯೇ ಓಡುತ್ತಿರುವ ಅಲೆಮು ಮುಂದೊಂದು ದಿನ ಕೆನೆನಿಸಾ ದಾಖಲೆಗಳನ್ನು ಅಳಿಸುವ ಮಹದಾಸೆ ಇರಿಸಿಕೊಂಡಿದ್ದಾರೆ. ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿರುವ ಕೆನೆನಿಸಾ, ಮೂರು ವಿಶ್ವ ಅಥ್ಲೆಟಿಕ್ಸ್‌ಗಳಲ್ಲಿಯೂ ಪ್ರಶಸ್ತಿ ಗೆದ್ದವರು. ಕೆನೆನಿಸಾ 8 ವರ್ಷಗಳ ಹಿಂದೆ ಬೆಲ್ಜಿಯಮ್‌ನಲ್ಲಿ 10ಸಾವಿರ ಮೀಟರ್ಸ್ ದೂರವನ್ನು 26ನಿಮಿಷ 17.53ಸೆಕೆಂಡುಗಳಲ್ಲಿ ಕ್ರಮಿಸಿದ್ದು ಇವತ್ತಿಗೂ ವಿಶ್ವದಾಖಲೆಯೇ ಹೌದು. ಅಲೆಮು ಇದೀಗ ಆ ದಾಖಲೆಯ ಮೇಲೆ ಗುರಿ ಇಟ್ಟು ಓಡುತ್ತಿದ್ದಾರೆ.ಬಹರೇನ್‌ನ ರಾಷ್ಟ್ರೀಯ ಕೋಚ್ ತೊಲೊ ಸಾ ಕೊಟು ಅವರಿಗೆ ಅಲೆಮು ಬಗ್ಗೆ ಬಲು ಅಭಿಮಾನ. ಮುಂದೊಂದು ದಿನ ಈತ ಹ್ಯಾಲೆ ಗೆಬ್ರೆಸೆಲೆಸಿ, ಕೆನೆನಿಸಾ ಬೆಕೆಲೆ ಅಂತಹ ಘಟಾನುಘಟಿಗಳ ಸಾಧನೆಗಳನ್ನೂ ಮೀರಿ ಬೆಳೆಯುವ ಸಾಧ್ಯತೆ ಇದೆ ಎಂದು ಹಿಂದೊಮ್ಮೆ ಮಾಧ್ಯಮಗಳ ಮುಂದೆ ಹೇಳಿದ್ದರು. ತೊಲೊ ಸಾ ಕೊಟು ಅವರು ದೂರ ಓಟದ ದಂತಕಥೆ ಹ್ಯಾಲೆ ಗೆಬ್ರೆಸೆಲೆಸಿ ಅವರಿಗೂ ಕೋಚ್ ಆಗಿದ್ದವರು.ಮುಂದಿನ ತಿಂಗಳು ನಡೆಯಲಿರುವ ಮಾಸ್ಕೊ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿರುವ 23ರ ಹರೆಯದ ಅಲೆಮು ಬೆಕೆಲೆ ಗೆಬ್ರೆ ಅವರ ಜತೆ `ಪ್ರಜಾವಾಣಿ' ನಡೆಸಿದ ಸಂದರ್ಶನ ಇಲ್ಲಿದೆ.*ನೀವು ಓಡಲು ಆರಂಭಿಸಿದ್ದು ಯಾವಾಗ ಮತ್ತು ಅದಕ್ಕೆ ಪ್ರೇರಣೆ ಯಾರು ?

ನನ್ನ ಓಟಕ್ಕೆ ಆರಂಭ ಎನ್ನುವುದೇ ಇಲ್ಲ. ನಾನು ಬದುಕುತ್ತಿರುವ ಪರಿಸರವೇ ಪ್ರೇರಣೆ. ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲೇ ಎದ್ದು ಗದ್ದೆಯಲ್ಲಿ ಒಂದಷ್ಟು ಕೆಲಸವಿರುತ್ತೆ ನೋಡಿ ಅದೆಲ್ಲಾ ಮಾಡಿ ಮುಗಿಸಿ, ತಿಂಡಿ ತಿಂದು ಪುಸ್ತಕದ ಚೀಲ ಹಿಡಿದು ಬೊಕುಜಿಯಲ್ಲಿರುವ ಶಾಲೆಯತ್ತ ಓಡುತ್ತಿದ್ದೆ. ನನ್ನೂರಿನಿಂದ ಬೊಕುಜಿಗೆ 20ಕಿ.ಮೀ. ದೂರ. ಮತ್ತೆ ಸಂಜೆ ತರಗತಿಗಳು ಮುಗಿದ ಮೇಲೆ ಮನೆಯತ್ತ ಓಟ. ಅಂದರೆ ದಿನಕ್ಕೆ 40 ಕಿ.ಮೀ. ಓಡುವುದು ಅಲ್ಲಿ ನನ್ನಂತವರಿಗೆ ಸಾಮಾನ್ಯ.*ಅಂದರೆ ದಿನಕ್ಕೆ ಎಷ್ಟು ಗಂಟೆ ಓಡುತ್ತಿದ್ದಿರಿ ?

ಆಗ ಈಗಿನಂತೆ ಕೈಗಡಿಯಾರ ನೋಡುತ್ತಾ ಓಡುತ್ತಿರಲಿಲ್ಲ. ಏಕೆಂದರೆ ಅಂದು ನಮ್ಮ ಮನೆ, ಶಾಲೆಗಳಲ್ಲಿ ಗಡಿಯಾರವೇ ಇರಲಿಲ್ಲ. ನನಗೆ ಕೈಗಡಿಯಾರ ಎಲ್ಲಿಂದ ಬರಬೇಕು ಹೇಳಿ.*ಇವತ್ತಿಗೂ ನಿಮ್ಮೂರಲ್ಲಿ ಅಂತಹದೇ ಪರಿಸ್ಥಿತಿ ಇದೆಯಾ ?

ಹೌದು. ಗುಡ್ಡಗಾಡು ಪ್ರದೇಶಗಳಲ್ಲಿ ಕಾಡು ಕಡಿದು, ನೆಲ ಸಮತಟ್ಟು ಮಾಡಿ, ನದಿಗಳಿಗ ಸೇತುವೆ ನಿರ್ಮಿಸಿ ರಸ್ತೆಗಳನ್ನು ಮಾಡಲು ಸರ್ಕಾರದ ಬಳಿ ಹಣ ಇರಬೇಕಲ್ಲ.*ನಾವಿಲ್ಲಿ ಅನ್ನ, ಚಪಾತಿ, ಅಕ್ಕಿರೊಟ್ಟಿ ಹೆಚ್ಚಾಗಿ ಬಳಸುತ್ತೇವೆ. ಕೆನ್ಯಾದಲ್ಲಿ ಹುಗಾಲಿ ಎಂಬ ದ್ವಿದಳ ಧಾನ್ಯವೇ ಮುಖ್ಯ ಆಹಾರ ಎಂದು ಅಲ್ಲಿನ ಅಥ್ಲೀಟ್‌ಗಳು ಹೇಳುತ್ತಾರೆ. ಅದು ಅವರಿಗೆ ಹೆಚ್ಚು ಪೋಷಕಾಂಶ ನೀಡುತ್ತದಂತಲ್ಲ. ಆ ರೀತಿ ನಿಮ್ಮಲ್ಲಿ ಹೆಚ್ಚಾಗಿ ಬಳಸುವ ತಿನಿಸು ?

ನಮ್ಮ ಗದ್ದೆಗಳಲ್ಲಿ ಇಂಜೆರಾ ಎಂಬ ಒಂದು ತೆರನಾದ ಕಾಳನ್ನು ಬೆಳೆಸುತ್ತೇವೆ. ಅದನ್ನೇ ಪುಡಿ ಮಾಡಿ ನಿಮ್ಮ ಚಪಾತಿಯ ರೀತಿ ತಯಾರಿಸಿ ತಿನ್ನುತ್ತೇವೆ. ಆದರೆ ನಿಮ್ಮಂತೆ ಮಸಾಲೆ ಪದಾರ್ಥ ಬಳಸುವುದೇ ಇಲ್ಲ. ಇಂಜೆರಾ ತಿನ್ನುವ ನಾವು ಹುಗಾಲಿ ತಿಂದವರಿಗಿಂತ ಹೆಚ್ಚು ಚಿನ್ನ ಗೆದ್ದಿದ್ದೇವೆ ಬಿಡಿ.*ನಿಮ್ಮ ಮನೆಯಲ್ಲಿ ಓಡುವ ಸಂಸ್ಕೃತಿ ಇದೆಯಾ ?

ನಮ್ಮ ದೇಶದ ಎಲ್ಲಾ ಹಳ್ಳಿಗಳಲ್ಲಿಯೂ ಓಡುವುದು ಜೀವನದ ಅವಿಭಾಜ್ಯ ಅಂಗ. ನನ್ನ ತಂದೆಗೆ ನಾವು 9ಮಕ್ಕಳು. ನನ್ನ ಅಣ್ಣ ಗಿರ್ಮಾ ಬೆಕೆಲೆ ಈಚೆಗೆ 1500 ಮೀಟರ್ಸ್‌ನಲ್ಲಿ ಯೂರೊಪ್‌ನಲ್ಲಿ ಓಡಿದ್ದಾನೆ. ನಮ್ಮೂರಿನ ತಿರುನೇಶ್ ದಿಬಾಬ ಒಲಿಂಪಿಕ್ಸ್ ಪದಕ, ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾಳೆ.*ಇಥಿಯೋಪಿಯ ಮತ್ತು ಕೆನ್ಯಾ ನಡುವೆ ಸಾಂಪ್ರದಾಯಿಕ ವೈರತ್ವ ಇದೆಯಲ್ಲ. ಅದು ಅಂತರರಾಷ್ಟ್ರೀಯ ಮಟ್ಟದ ಓಟದಲ್ಲಿಯೂ ಮುಂದುವರಿದಿದೆ ತಾನೆ. ಆದರೆ ಈಗ ಬಹರೇನ್‌ನಲ್ಲಿ ನೀವಿಬ್ಬರೂ ಒಂದೇ ತಂಡದ ಪರ ಓಡುತ್ತಿದ್ದೀರಲ್ಲಾ, ಹೇಗೆನಿಸುತ್ತೆ ?

ಅನ್ನಿಸುವುದೇನು ಬಂತು. ಅಂತಿಮದಲ್ಲಿ ಬದುಕು ಮುಖ್ಯವೆನಿಸುತ್ತದೆ. ಹೊಂದಿಕೊಂಡು ಹೋಗುತ್ತೇವೆ. ಬಹರೇನ್ ತಂಡದಲ್ಲಿ ನಾವೆಲ್ಲಾ ಸ್ನೇಹಿತರಾಗಿದ್ದೇವೆ.*ನೀವು ಇಥಿಯೋಪಿಯ ಪರ ಓಡಿಲ್ಲವೆ ?

ಇಲ್ಲ*ಮಾತೃಭೂಮಿ ಬಿಟ್ಟು ಯಾವುದೋ ದೇಶಕ್ಕಾಗಿ ಓಡುವುದರ ಬಗ್ಗೆ ಏನನ್ನಿಸುತ್ತದೆ ?

ನಮ್ಮ ದೇಶವನ್ನು ಮೂರು ಜನ ಮಾತ್ರ ಪ್ರತಿನಿಧಿಸಲು ಸಾಧ್ಯ. ಇತರ ಮುನ್ನೂರು ಪ್ರತಿಭಾವಂತರು ಸ್ಪರ್ಧಿಸುವುದಾದರೂ ಎಲ್ಲಿ. ನಾವು ಮಾಡುತ್ತಿರುವುದೇ ಸರಿ.*ಬಹರೇನ್‌ನಲ್ಲಿ ನಿಮ್ಮನ್ನು ಹೇಗೆ ನೋಡಿಕೊಳ್ಳಲಾಗುತ್ತೆ ?

ಆ ದೇಶದ ಪೌರತ್ವ ನೀಡಿದ್ದಾರೆ. ಅಲ್ಲಿನ ಮಿಲಿಟೆರಿಯಲ್ಲಿ ನನಗೆ ಸಾರ್ಜೆಂಟ್ ಹುದ್ದೆ ಕೊಟ್ಟಿದ್ದಾರೆ. ಕೈತುಂಬಾ ಸಂಬಳ ಕೊಡುತ್ತಾರೆ. ವರ್ಷದಲ್ಲಿ ಹೆಚ್ಚು ಕಾಲ ಇಥಿಯೋಪಿಯಾದಲ್ಲಿರುವ ಬಹರೇನ್‌ನವರ ಅಕಾಡೆಮಿಯಲ್ಲಿಯೇ ನಮಗೆ ತರಬೇತಿ ನೀಡುತ್ತಾರೆ. ಇನ್ನು ಅಂತರರಾಷ್ಟ್ರೀಯ ಕೂಟಗಳಲ್ಲಿ ಗೆದ್ದಾಗ ಸಿಗುವ ಬಹುಮಾನದ ಹಣವೆಲ್ಲಾ ನಮ್ಮದು ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.