ಮಂಗಳವಾರ, ಮೇ 11, 2021
19 °C

ಓಡ್ ಹತ್ಯಾಕಾಂಡ: 18 ಮಂದಿಗೆ ಜೀವಾವಧಿ, ಐವರಿಗೆ 7 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನಂದ್, ಗುಜರಾತ್ (ಪಿಟಿಐ): ಗೋಧ್ರಾ ನರಮೇಧಕ್ಕೆ ಪ್ರತೀಕಾರವಾಗಿ ನಡೆದಿದ್ದ ಓಡ್ ಹತ್ಯಾಕಾಂಡದ 23 ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, 18 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಉಳಿದ ಐವರಿಗೆ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಗೆ ಒಳಗಾದವರಿಗೆ 5,800 ರೂಪಾಯಿ ಹಾಗೂ ಇತರ ಐದು ಮಂದಿಗೆ 3,800 ರೂಪಾಯಿ ದಂಡವನ್ನೂ ಸಹ ವಿಧಿಸಲಾಗಿದೆ.ಈ  23 ಮಂದಿಯೂ ತಪ್ಪಿತಸ್ಥರೆಂದು ಸೋಮವಾರ ತೀರ್ಪು ನೀಡಿದ್ದ ಆನಂದ್ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಪೂನಂ ಸಿಂಗ್ ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಆನಂದ್ ಜಿಲ್ಲೆಯ ಓಡ್ ಗ್ರಾಮದಲ್ಲಿ 2002ರ ಮಾರ್ಚ್ 1ರಂದು ನಡೆದಿದ್ದ ಈ ಹತ್ಯಾಕಾಂಡದಲ್ಲಿ 9 ಮಹಿಳೆಯರು, ಮಕ್ಕಳು ಸೇರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 23 ಜನರನ್ನು ಜೀವಂತ ದಹಿಸಲಾಗಿತ್ತು.ಜೀವಾವಧಿ ಶಿಕ್ಷೆಗೆ ಒಳಗಾದ 18 ಜನರು ಕೊಲೆ ಹಾಗೂ ಕ್ರಿಮಿನಲ್ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾದ 5 ಜನರು ಕೊಲೆ ಯತ್ನ ನಡೆಸಿದ್ದರು ಹಾಗೂ ಹತ್ಯಾಕಾಂಡ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಅಭಿಪ್ರಾಯಪಟ್ಟಿದೆ.ಈ ಪ್ರಕರಣದಲ್ಲಿ ನ್ಯಾಯಾಲಯ, 150 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಿತ್ತು ಹಾಗೂ 170 ದಾಖಲೆಗಳನ್ನು ಪರಿಶೀಲಿಸಿತ್ತು. 47  ಆರೋಪಿಗಳಲ್ಲಿ 23 ಜನರನ್ನು ಖುಲಾಸೆಗೊಳಿಸಿತ್ತು. ಆರೋಪಿಯೊಬ್ಬ ವಿಚಾರಣೆಯ ಸಮಯದಲ್ಲೇ ಮೃತಪಟ್ಟಿದ್ದ. ಸುಪ್ರೀಂಕೋರ್ಟ್ ಸೂಚನೆ ಅನ್ವಯ, ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿದ್ದ ಒಂಬತ್ತು ಪ್ರಕರಣಗಳ ಪೈಕಿ ಓಡ್ ಹತ್ಯಾಕಾಂಡ ಪ್ರಕರಣವೂ ಒಂದಾಗಿದೆ.ಗೋಧ್ರಾ ನರಮೇಧಕ್ಕೆ ಪ್ರತೀಕಾರವಾಗಿ ನಡೆದ ಹಿಂಸಾಚಾರದ ಪ್ರಕರಣಗಳ ಪೈಕಿ ಶಿಕ್ಷೆ ಪ್ರಕಟಿಸಲಾದ ಎರಡನೇ ಪ್ರಮುಖ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಮೆಹ್ಸಾನಾ ಜಿಲ್ಲೆಯ ಸರ್ದಾರಪುರ ಕೋಮುಗಲಭೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ 31 ಜನರಿಗೆ ಜೀವಾವಧಿ ವಿಧಿಸಿ ತೀರ್ಪು ಪ್ರಕಟಿಸಿತ್ತು.ಕೋಲಾಹಲ: ನ್ಯಾಯಾಲಯ ಶಿಕ್ಷೆ ಪ್ರಕಟಿಸಿದಾಗ ಶಿಕ್ಷೆಗೊಳಗಾದವರ ಸಂಬಂಧಿಗಳಲ್ಲಿ ಹತಾಶೆ ಕಂಡುಬಂತು. `ತಪ್ಪಿತಸ್ಥರ ವಿರುದ್ಧ ಸಾಕ್ಷ್ಯ ಇರಲಿಲ್ಲ. ಇದು ನ್ಯಾಯ ದೇಗುಲವಲ್ಲ, ಅನ್ಯಾಯದ ದೇಗುಲ~ ಎಂದು ಹೇಳಿದರು."ಪ್ರತಿವಾದಿ ವಕೀಲ ಅಶ್ವಿನ್ ಧಗಡ್ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಎಂ.ಪರ್ಮಾರ್ ಕೊಲೆ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.