ಓಣಂ ಸಂಭ್ರಮ: ಕಣ್ಮನ ಸೆಳೆದ ಪೂಕ್ಕಳಂ

7

ಓಣಂ ಸಂಭ್ರಮ: ಕಣ್ಮನ ಸೆಳೆದ ಪೂಕ್ಕಳಂ

Published:
Updated:

ಗೋಣಿಕೊಪ್ಪಲು: ಬಣ್ಣ ಬಣ್ಣದ ಹೂಗಳಿಂದ ಬಿಡಿಸಿದ್ದ ಓಣಂ ಪೂಕ್ಕಳಂ (ಹೂವಿನ) ರಂಗೋಲಿ ಕಣ್ಮನ ಸೆಳೆಯಿತು.  ವಿವಿಧ ಬಗೆಯ ರಂಗೋಲಿಗಳು ನೋಡುಗರ ಮನಸೂರೆಗೊಂಡವು.ಇಲ್ಲಿನ ಆರ್‌ಎಂಸಿ ಸಭಾಂಗಣದಲ್ಲಿ ಎಚ್‌ಟಿಎಲ್‌ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಪೂಕ್ಕಳಂ ಸ್ಪರ್ಧೆಯಲ್ಲಿ ಬಿಡಿಸಿದ್ದ ಹೂವಿನ ರಂಗೋಲಿಗಳು ಎಲ್ಲರ ಗಮನ ಸೆಳೆದವು. ಆರು ಬಗೆಯ ಹೂಗಳ ಎಸಳುಗಳನ್ನು ಬಳಸಿ ಬಿಡಿಸಿದ್ದ ರಂಗೋಲಿ ಚಿತ್ತಾಕರ್ಷಕವಾಗಿತ್ತು.ಬಣ್ಣ, ವಿನ್ಯಾಸ, ಕುಂಚ  ಇವುಗಳಲ್ಲೆಲ್ಲ ಅಚ್ಚುಕಟ್ಟುತನ ಮೆರೆದವು. ಗೋಣಿಕೊಪ್ಪಲಿನ ರಾಘವ ಮತ್ತು ತಂಡದವರು ರಚಿಸಿದ ರಂಗೋಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಮಿತಿಯಾದ ಬಣ್ಣ, ಸುಂದರವಾಗಿ   ಬಿಡಿಸಿದ್ದ ಅತ್ತೂರಿನ ಪ್ರಕಾಶ್‌ ತಂಡ ದ್ವಿತೀಯ  ಸ್ಥಾನ ಹಾಗೂ ಸೋಮವಾರಪೇಟೆ ತಾಲ್ಲೂಕು ಮಾದಾಪುರದ ಪೂರ್ಣಿಮಾ ಶಶಿಕುಮಾರ್‌ ತಂಡ ತೃತೀಯ ಸ್ಥಾನ ಪಡೆದರು. ಒಟ್ಟು 21 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಶೈಲೇಂದ್ರ ಮಾತನಾಡಿ, ದೇಶಿ ಸಂಸ್ಕೃತಿ ಪಾಶ್ಚಾತ್ತೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ತಮ್ಮ ಸಂಸ್ಕೃತಿಯ ಉಳಿವಿಗೆ ಸಾರ್ವಜನಿಕವಾಗಿ ಹಬ್ಬ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.ನಾಯರ್‌ ಸೊಸೈಟಿ ಅಧ್ಯಕ್ಷ ಹಾಗೂ ವಕೀಲ ಸಂಜೀವ್‌ ನಾಯರ್‌ ಮಾತನಾಡಿ, ಸಾಂಸ್ಕೃತಿಕ ಹಬ್ಬಗಳು ಸಮಾಜದಲ್ಲಿ ಸಾಮಾರಸ್ಯ ಮೂಡಿಸುತ್ತವೆ. ಒಗ್ಗಟ್ಟಾಗಿ ಜೀವನ ನಡೆಸಲು ದಾರಿಯಾಗುತ್ತದೆ ಎಂದು ನುಡಿದರು.  ಸ್ಥಳೀಯ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ  ಪೊನ್ನಿಮಾಡ ಸುರೇಶ್‌,  ಎಸ್‌ಎನ್‌ಡಿಪಿ ಮುಖಂಡ ವೇಣುಗೋಪಾಲ್‌, ಗ್ರಾಮ ಪಂಚಾಯಿತಿ ಸದಸ್ಯೆ ರಮಾವತಿ ಹಾಜರಿದ್ದರು. ಪುತ್ತಂ ಪ್ರದೀಪ್‌ ಅಧ್ಯಕ್ಷತೆ ವಹಿಸಿದ್ದರು.  ಶೀಲಾ ಬೋಪಣ್ಣ  ಸ್ವಾಗತಿಸಿದರು. ಕೋಳೆರ ಸನ್ನು ಕಾವೇರಪ್ಪ ನಿರೂಪಿಸಿದರು.‘ಜಾತ್ಯತೀತತೆ ಕೈರಳಿ ಸಮಾಜದ ಮೂಲ ಮಂತ್ರ’

ಕುಶಾಲನಗರ:
ಕೇರಳ ಸಮಾಜಂ ಕಳೆದ ಹದಿನೇಳು ವರ್ಷಗಳಿಂದ ಜಾತ್ಯತೀತ ಅಂಶಗಳ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಆದ್ದರಿಂದಲೇ ಅದು ವಿವಾದಗಳ ಸುಳಿಗಾಳಿ ಇಲ್ಲದೆ ಬೆಳೆಯಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕುಬ್ ಹೇಳಿದರು.ಪಟ್ಟಣದಲ್ಲಿ ಕೇರಳ ಸಮಾಜಂ ವತಿಯಿಂದ ಭಾನುವಾರ ರೈತಸ ಹಕಾರ ಭವನದಲ್ಲಿ ನಡೆದ 13ನೇ ವರ್ಷದ ಓಣಂ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದು ದೇಶದಾದ್ಯಂತ ವಿವಿಧ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ವಿಭಾಗ ಮಾಡಲಾಗುತ್ತಿದೆ. ಅದರ ನಡುವೆ ಕೇರಳ ಸಮಾಜಂ ವಿವಿಧ ಜಾತಿ ಧರ್ಮಗಳ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್, ಇಂದು ಜನರು ತಮ್ಮ ವೈಯಕ್ತಿಕ ಬದುಕ್ಕನ್ನಷ್ಟೇ ಮುಖ್ಯವಾಗಿರಿಸಿಕೊಂಡಿದ್ದು, ಸಮಾಜದ ಹಿತವನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೂ ಮುನ್ನಾ ಸಮಾಜದ ಮಹಿಳೆಯರಿಗೆ ಪೂಕಳಂ ಸ್ಪರ್ಧೆ ಏರ್ಪಡಿಸಲಾಗಿತ್ತು. ಹತ್ತಾರು ಮಹಿಳೆಯರು ಹಾಗೂ ಬಾಲಕಿಯರು ವಿವಿಧ ಹೂವುಗಳಿಂದ ಹೂವಿನ ರಂಗೋಲಿಗಳನ್ನು ಹಾಕಿ ಜನರ ಕಣ್ಮನ ಸೆಳೆದರು. ಬಾಲಕನೊಬ್ಬ ಮಹಾಬಲಿಯ ವೇಷಧರಿಸಿ ವೇದಿಕೆ ಅಲಂಕರಿಸಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.ಸಮಾಜಂ ಅಧ್ಯಕ್ಷ ಐ.ಡಿ. ರಾಯ್ ಅಧ್ಯಕ್ಷತೆ ವಹಿಸಿದ್ದರು. ಕೇರಳಂ ಸಮಾಜಂ ಖಜಾಂಚಿ ಕೆ. ರಾಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಮನ್ ಕ್ಯಾಥೋಲಿಕ್ ಸೇವಾ ಸಂಘದ ಜಿಲ್ಲಾಧ್ಯಕ್ಷ ಕ್ರಿಜ್ವಲ್ ಕೋಟ್ಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry