ಓಣಂ ‘ಸಧ್ಯ’ದ ರುಚಿ

7
ರಸಾಸ್ವಾದ

ಓಣಂ ‘ಸಧ್ಯ’ದ ರುಚಿ

Published:
Updated:

ಓಣಂ ಅಂದಾಕ್ಷಣ ಕೇರಳದ ಕೊಬ್ಬರಿ ಎಣ್ಣೆ ಬಳಸಿ ತಯಾರಿಸಿದ ರುಚಿಕಟ್ಟಾದ ಅಡುಗೆ ಬಾಯಲ್ಲಿ ನೀರೂರಿಸುತ್ತದೆ. ಇಂಥ ರುಚಿಯಾದ ಆಹಾರವನ್ನು ಈ ಬಾರಿಯ ಓಣಂ ಹಬ್ಬದ ಸಂದರ್ಭದಲ್ಲಿ ಉಣಬಡಿಸಲು ಕೋರಮಂಗಲದಲ್ಲಿರುವ ‘ಗ್ರ್ಯಾಂಡ್‌ ಮರ್ಕ್ಯುರಿ’ ಹೋಟೆಲ್‌ ಸಕಲ ಸಿದ್ಧತೆ ಮಾಡಿಕೊಂಡಿದೆ.ಈ ಖಾದ್ಯಗಳ ರುಚಿ ನೋಡಲು ಹೋದಾಗ ಹೊಟೇಲ್‌ನಲ್ಲಿ ಜನ ಸೇರಿದ್ದರು. ಬಾಣಸಿಗ ವಿಜಯ್ ಡೇವಿಡ್‌ ಬಂದವರಿಗೆ ತಂಪಾದ ಪಾನೀಯ ನೀಡಿ  ಹಿತವಾಗಿ ಮಾತನಾಡುತ್ತಿದ್ದರು.ಹಸಿದ ಹೊಟ್ಟೆಯನ್ನು ಕಾಯಿಸುವುದು ಸರಿಯಲ್ಲ. ಮೊದಲು ಊಟ ಮಾಡಿ ನಂತರ ಓಣಂ ಬಗ್ಗೆ, ಹಬ್ಬದ ಅಡುಗೆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ತಟ್ಟೆ ತಂದಿಟ್ಟರು. ಒಂದು ಬೌಲ್‌ನಲ್ಲಿ ಹಪ್ಪಳ ತಂದಿಡುತ್ತಲೇ ಕೈ ತಡಮಾಡದೇ ತನ್ನ ಕೆಲಸ ಶುರುವಿಟ್ಟುಕೊಂಡಿತ್ತು. ಹಪ್ಪಳ ಖಾಲಿಯಾಗುತ್ತಲೇ ಒಂದು ಪ್ಲೇಟ್‌ನಲ್ಲಿ ಒಂದು ಬೌಲ್‌ ಕೆಂಪಕ್ಕಿ ಅನ್ನ, ಮತ್ತೊಂದರಲ್ಲಿ ಬೆಂಡೆಕಾಯಿ ಪಲ್ಯ ತಂದಿಟ್ಟು ರುಚಿ ನೋಡಿ ಎಂದರು.ಬೆಂಡೆಕಾಯಿ ಪಲ್ಯ ನೋಡಿ ಮುಖ ಸಣ್ಣಗಾದರೂ ರುಚಿ ನೋಡಲೇಬೇಕಾದ್ದರಿಂದ ಒಂದು ಚಮಚ ಅನ್ನಕ್ಕೆ ಪಲ್ಯವನ್ನು ಮಿಶ್ರ ಮಾಡಿಕೊಂಡು ತಿಂದಾಗ ಬೆಂಡೆಕಾಯಿ ಪಲ್ಯ ಇಷ್ಟು ರುಚಿಯಾಗಿರುತ್ತಾ ಅಂತ ಅರೆಕ್ಷಣ ಅನಿಸಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ಶೆಫ್‌ ನಗುತ್ತಾ ‘ಬೆಂಡೆಕಾಯಿ ಪಲ್ಯ ನೋಡಿದಾಗ ನಿಮ್ಮ ಮುಖ ಹುಳ್ಳಗಾಗಿದ್ದನ್ನು ನೋಡಿದೆ. ಆದರೆ, ರುಚಿ ನೋಡಲಿ ಎಂದು ಸುಮ್ಮನಿದ್ದೆ’ ಎನ್ನುತ್ತಾ ಪಲ್ಯದ ವಿವರಣೆ ನೀಡಲು ಆರಂಭಿಸಿದರು. ಸಾಮಾನ್ಯವಾಗಿ ಬೆಂಡೆಕಾಯಿ ಪಲ್ಯ ಮಾಡುವಾಗ ಎಣ್ಣೆ ಈರುಳ್ಳಿ ಟೊಮೆಟೊ ಉಪಯೋಗಿಸುತ್ತೇವೆ. ಈ ರೀತಿ ತಯಾರಿಸಿದ ಪಲ್ಯ ಎಲ್ಲರಿಗೂ ಇಷ್ಟವಾಗಲ್ಲ. ಆದರೆ ಮಾಡುವಾಗಲೇ ಸ್ವಲ್ಪ ಕಾಳಜಿ ವಹಿಸಿದರೆ ಎಲ್ಲರೂ ಇದನ್ನು ತಿನ್ನಬಹುದು ಎಂದರು. ಇತ್ತೀಚೆಗೆ ಜನರು ರುಚಿಯ ಜತೆಗೆ ಆರೋಗ್ಯ ಕಾಳಜಿಯತ್ತಲೂ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಮಕ್ಕಳು ರುಚಿಯ ಬಗ್ಗೆ ಒಲವು ತೋರಿಸುತ್ತಾರೆ. ಕೊಬ್ಬರಿ ಎಣ್ಣೆಯಲ್ಲಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು, ಬಾಯಿಗೂ ರುಚಿ ಎಂಬ ಟಿಪ್ಸ್‌ ಕೂಡ ತಮ್ಮ ಮಾತಿನ ಜತೆ ಸೇರಿಸಿದರು.ತರಕಾರಿ ಖಾದ್ಯಗಳ ನಂತರ ಚಿಕನ್‌ ಸುಕ್ಕಾ, ಕೇರಳದ ಪರೋಟವನ್ನು ತಂದಿಟ್ಟರು. ಕೇರಳದ ರುಚಿಯಾದ ಚಿಕನ್‌ ಸುಕ್ಕಾವಿದು ಎಂದಾಗ ರುಚಿ ನೋಡಲು ಸಿದ್ಧವಾದೆವು. ಚಿಕನ್‌ ಸ್ವಲ್ಪ ಖಾರವಿದ್ದರೂ ಪರೋಟದ ಜತೆ ಸೂಪರ್‌ ಆಗಿತ್ತು.ತೆಂಗಿನೆಣ್ಣೆ ಬಿಟ್ಟು ಬೇರೆ ಯಾವುದು ಎಣ್ಣೆ ಬಳಸಿಲ್ಲ. ರುಚಿ ಹೇಗಿದೆ ಎಂದಾಗ ? ಹೊಗಳದೇ ಬೇರೆ ಮಾತಿರಲಿಲ್ಲ. ಇದು ನನ್ನ ಅತ್ತೆ ಹೇಳಿಕೊಟ್ಟಿದ್ದು ಎಂದಾಗ, ‘ನೀವು ಕೇರಳದವರು ಅಲ್ವಾ’ ಎಂಬ ಪ್ರಶ್ನೆಯನ್ನು ಕುತೂಹಲಕ್ಕೆ ಕೇಳಿದೆವು. ‘ಅಲ್ಲ ನಾನು ತಮಿಳು ಮೂಲದವನು. ನನ್ನ ಹೆಂಡತಿ ಕೇರಳದವಳು. ಕೇರಳಕ್ಕೆ ಹೋದಾಗ  ಓಣಂ ಹಬ್ಬದ ಸಡಗರ ನೋಡಿದೆ. ಎಲ್ಲಕ್ಕಿಂತ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಕೇರಳದ ಖಾದ್ಯ. ಆರೋಗ್ಯದ ಜತೆಗೆ ಬಾಯಿರುಚಿಯನ್ನು ತಣಿಸುವ ಆ ಅಡುಗೆಗಳನ್ನು ಕಲಿಯಬೇಕು ಎಂಬ ಆಸೆ ಆಗಿತ್ತು. ಅತ್ತೆ (ಹೆಂಡತಿಯ ತಾಯಿ) ಬಳಿ ಅಡುಗೆ ಕಲಿತುಕೊಂಡೆ’ ಎಂದು ತನ್ನ ಅಡುಗೆ ಪ್ರೀತಿ ಬಗ್ಗೆ ಹೇಳಿದರು.‘ಓಣಂಗೆ ಓಣಸಧ್ಯ ಎಂದು ಹೇಳಿ 22 ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ತರಕಾರಿಯ ಜತೆಗೆ ಮಾಂಸಹಾರವು ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಫಿಶ್‌ ಕರ್ರಿಗಳು, ಸಿಹಿ ತಿನಿಸುಗಳು ಹಬ್ಬದ ಸಂಭ್ರವನ್ನು ಮತ್ತಷ್ಟೂ ಹೆಚ್ಚು ಮಾಡುತ್ತದೆ’ ಎನ್ನುತ್ತಾರೆ ಶೆಫ್‌.ಮಾತೆಲ್ಲಾ ಮುಗಿದ ಮೇಲೆ ಎಳನೀರು ಪಾಯಸ ತಂದಿಟ್ಟರು. ಇಷ್ಟೊತ್ತು ಖಾರ ಉಂಡ ಬಾಯಿಗೆ ಸಿಹಿ ನೀಡಿದರು. ಚಿಕ್ಕ ಬೌಲ್‌ನಲ್ಲಿ ಬಿಳಿ ಬಣ್ಣದ ಎಳೆನೀರು ಪಾಯಸದ ರುಚಿ ಖಾರವನ್ನು ಮರೆಮಾಚಿತು.ಇಂದು ಓಣಂ ಹಬ್ಬ. ಹಬ್ಬದ ಅಂಗವಾಗಿ ಕೋರಮಂಗಲದಲ್ಲಿರುವ ಗ್ರ್ಯಾಂಡ್‌ ಮರ್ಕ್ಯುರಿ ಹೊಟೇಲ್‌ನಲ್ಲಿ  ವಿವಿಧ ಬಗೆಯ ಅಡುಗೆಯನ್ನು ಸಿದ್ಧಮಾಡಿದ್ದಾರೆ. ಇದರ ಬೆಲೆ ಒಬ್ಬರಿಗೆ ₨ 549 ಹಾಗೂ ತೆರಿಗೆ ಪ್ರತ್ಯೇಕ. ವಿಶೇಷ ಲಂಚ್‌ ಬಫೆ– ಮಧ್ಯಾಹ್ನ 12ರಿಂದ 3ರವರೆಗೆ.  ನಿಮ್ಮ ಸೀಟು ಕಾಯ್ದಿರಿಸಿಕೊಳ್ಳಲು: 080 4512 1212 ನಂಬರ್‌ಗೆ ಕರೆ ಮಾಡಿ.ಬೆಂಡೆ ಪಲ್ಯ ತಯಾರಿಸುವ ವಿಧಾನ

ಎಳೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ನೀರಿನ ಪಸೆ ಇಲ್ಲದಂತೆ ಒರೆಸಬೇಕು. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಬಾಣಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಈರುಳ್ಳಿ, ಟೊಮೊಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಅದಕ್ಕೆ ಕತ್ತರಿಸಿದ ಬೆಂಡೆಕಾಯಿ ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಹಾಕಿ ಬೆಂಡೆಕಾಯಿ ಹದವಾಗಿ ಬೆಂದಾಗ ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಕುದಿಸಬೇಕು. ಆಗ ಘಂ ಎನ್ನುವ ಬೆಂಡೆಕಾಯಿ ಪಲ್ಯ ಸಿದ್ಧ.ರುಚಿಯಾದ ಎಳನೀರು ಪಾಯಸವನ್ನು ಮಾಡುವುದು ಕೂಡ ಅಷ್ಟೇ ಸರಳ. ಎಳನೀರು ಮತ್ತು ಅದರ ಒಳಗಿರುವ ತಿರುಳು, ಸ್ವಲ್ಪ ತೆಂಗಿನ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ ಇದರ ತಯಾರಿಕೆಗೆ ಬೇಕಿರುವ ಪದಾರ್ಥಗಳು. ಎಳನೀರು, ಅದರ ತಿರುಳು, ತೆಂಗಿನಹಾಲು ಮೂರನ್ನು ಮಿಶ್ರಮಾಡಿಕೊಂಡು ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಸಕ್ಕರೆ ಮಿಶ್ರಮಾಡಿದರೆ ರುಚಿಯಾದ ಎಳನೀರು ಪಾಯಸ ರೆಡಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry