ಗುರುವಾರ , ಜೂನ್ 24, 2021
25 °C

ಓದುಗರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಣ್ಣಿನಲ್ಲಿ ಚಿನ್ನ! ದೊರಕೀತೆ ಅನ್ನ?~ (ಮಾರ್ಚ್ 4, ಕೆ.ನರಸಿಂಹಮೂರ್ತಿ) ಬರಹದಲ್ಲಿನ ಸಾಮಾಜಿಕ ಕಾಳಜಿ ಎದ್ದುಕಾಣುವಂತಿದೆ. ಮಣ್ಣಿನಲ್ಲಿ ತುತ್ತು ಅನ್ನಕ್ಕಾಗಿ ಚಿನ್ನ ಹುಡುಕುವ ಮಹಿಳೆಯರ ವೈರುಧ್ಯಗಳ ಬದುಕು ಅರ್ಥಪೂರ್ಣವಾಗಿ ಮೂಡಿಬಂದಿದೆ. ಸಂಸಾರ ಸಾಗಿಸಲು ಈ ಮಣ್ಣೇ ಆ ಮಹಿಳೆಯರಿಗೆ ದಾರಿದೀಪ ಆಗಿರುವ ವಿಪರ್ಯಾಸ ಮನಮುಟ್ಟುವಂತೆ ಚಿತ್ರಿತವಾಗಿದೆ.

-ರುದ್ರೇಶ್ ಬಿ. ಅದರಂಗಿ, ಬೆಂಗಳೂರು ಸುರೇಶ ಅಂಗಡಿ, ಹೂವಿನ ಹಡಗಲಿ

ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದದ `ಚಿತ್ರರೂಪಕ~ ಮಾಲಿಕೆ ಸೊಗಸಾಗಿ, ಮೌಲಿಕವಾಗಿ ಪ್ರಕಟವಾಗುತ್ತಿದೆ. ಇದು ಸಂಗ್ರಹಯೋಗ್ಯವಾಗಿದೆ. ಡಾ. ಶಿವಾನಂದ ಬಂಟನೂರ ಮತ್ತು ಡಾ. ಬಿ.ಕೆ. ಹಿರೇಮಠ ಅವರ ವಿಮರ್ಶಾ ಟಿಪ್ಪಣಿಗಳು ಕಲಾಕೃತಿಗಳನ್ನು ನೋಡುವ ರೀತಿಗೆ ಮಾರ್ಗಸೂಚಿಯಂತಿದ್ದವು.

-ಡಾ. ಲಕ್ಷ್ಮೀದೇವಿ ಗವಾಯಿ, ಗದಗ

`ಚಿತ್ರರೂಪಕ~ ಅಂಕಣ ಶ್ಲಾಘನೀಯವಾದ ಅದ್ಭುತ ಕಲ್ಪನೆ ಮತ್ತು ಉಪಯುಕ್ತ ಹಾಗೂ ತಿಳಿವಳಿಕೆಯನ್ನು ನೀಡುವ ಪ್ರಯತ್ನ. ಕಲಾವಿದ ಗುಸ್ತಾವ್ ಕ್ಲಿಮ್ಟ ಅವರ `ದ ಕಿಸ್~ ಕೃತಿಯ ಬಗ್ಗೆ ವಿವರಣೆ ಮತ್ತು ವಿಶ್ಲೇಷಣೆ ತುಂಬಾ ಚೆನ್ನಾಗಿ ಬಂದಿದೆ. ಅಷ್ಟೇ ಸುಂದರವಾಗಿ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರು `ಪ್ರೀತಿಯಿಲ್ಲದ ಮೇಲೆ~ ಕವಿತೆಯ ಮೂಲಕ ಕಲಾಕೃತಿಗೆ ಪ್ರತಿಕ್ರಿಯಿಸಿದ್ದಾರೆ.

-ಡಾ. ಕೆ.ಬಿ. ಪವಾರ, ಸಿರ್ಸಿ

`ಪ್ರೀತಿಯಿಲ್ಲದ ಮೇಲೆ~ (ಲಲಿತಾ ಸಿದ್ಧಬಸವಯ್ಯ) ಕವಿತೆ ಓದಿದೆ. ಹಸಿರುಟ್ಟ, ಹೂವ ತೊಟ್ಟ ಬಳ್ಳಿ ತಾ ಹಬ್ಬಿದ ಮರಕ್ಕೆ ಅಪ್ಪುವ ಪರಿಯೇ ಒಂದು ಪ್ರೇಮಬಂಧ! ಮುತ್ತು! ಆಗಬಹುದು. `ಮುತ್ತು~ ಭಾಷೆಯಿಲ್ಲದ ಮೌನ ಬಂಗಾರ. ಈ ಆಶಯ, ಬೇಡಿಕೆ ಕವಯತ್ರಿಯದಷ್ಟೇ ಅಲ್ಲ; ಎಲ್ಲರದೂ ಆಗಬೇಕಿದೆ. ಕವಿತೆಯೊಂದಿಗೆ ಪ್ರಕಟವಾದ ಚಿ.ಸು. ಕೃಷ್ಣ ಸೆಟ್ಟಿ ಅವರ ವಿಮರ್ಶೆ ಅರ್ಥಪೂರ್ಣವಾಗಿದೆ.

-ಕೊಹಿಮ, ಬಸರಕೋಡು

`ವೀರಗಲ್ಲುಗಳ ಸರದಾರ ಶೇಷಶಾಸ್ತ್ರಿ~ (ಡಾ.ಎಚ್.ಎಸ್.ಗೋಪಾಲರಾವ್) ಲೇಖನ ಖುಷಿ ಕೊಟ್ಟಿತು. ಶೇಷಶಾಸ್ತ್ರಿಗಳ ಹೆಸರನ್ನು ಓದಿದ್ದೆ. ಈಗ ಈ ಲೇಖನದ ಮುಖಾಂತರ ಅವರ ಇಡೀ ವ್ಯಕ್ತಿತ್ವ ಮತ್ತು ಅವರ ಇತರೆ ಸಾಧನೆಗಳ ಬಗ್ಗೆ ತಿಳಿಯಿತು. ಅವರ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಉಂಟಾಯಿತು.

-ಲಕ್ಷ್ಮಿಕಾಂತ ನೇ ಮಿರಜಕರ, ಶಿಗ್ಗಾಂವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.