ಓದುಗರ ಪತ್ರ
`ಹೆಣಗಳ ಭಾಷೆ~ (ಲೇ: ಬಿ.ಎಂ. ಚಂದ್ರಶೇಖರಯ್ಯ, ಜು.15) ಕಥೆ ಮನೋಜ್ಞ ಮತ್ತು ವೈಚಾರಿಕವಾಗಿದೆ. ಮೂಢನಂಬಿಕೆ, ವಾಸ್ತವ ಬದುಕು, ಹೊಟ್ಟೆಪಾಡಿಗಾಗಿ ನಡೆಯುವ ದೊಂಬರಾಟ, ಗೊಂದಲ ಇತ್ಯಾದಿಗಳ ಅನಾವರಣವಾಗಿ ಬದುಕಿನ ಅಂತಃಸತ್ವ ಮನಗಾಣುತ್ತದೆ.
ಓ.ಎಲ್. ನಾಗಭೂಷಣಸ್ವಾಮಿ ಅವರ `ನುಡಿಯೊಳಗಾಗಿ~ ಅಂಕಣ ಬರಹಗಳು, ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಭಾಷೆಯ ಪಲ್ಲಟಗಳನ್ನು ಜಾಗತಿಕ ನೆಲೆಯಲ್ಲಿ ವಿಶ್ಲೇಷಿಸುತ್ತಿರುವುದು ತುಂಬಾ ಉಪಯುಕ್ತವಾಗಿದೆ.
-ಪಿ.ಅಂಜನಪ್ಪ ಗುಂಡಗತ್ತಿ, ದಾವಣಗೆರೆ
`ಬಾವಿಯಲ್ಲಿ ನೀರು! ಬದುಕು ಕಣ್ಣೀರು~ (ಲೇ: ವೀರಣ್ಣ ಮಡಿವಾಳರ) ಲೇಖನದ ಮೂಲಕ ಬಾವಿ ತೋಡುವ ಜನರ ಬದುಕಿನ ಬವಣೆಗಳನ್ನು ತಿಳಿದು ದುಃಖವಾಯಿತು. ಕಲ್ಲು ಕಡೆದು ಮಣ್ಣು ಕೊರೆದು ಇತರರ ಬದುಕಿಗೆ ನೀರುಣಿಸಿದವರು ಹಾಲಾಹಲವನ್ನೇ ಉಣ್ಣುವಂತಹ ಸಂದರ್ಭ ವಿಷಾದನೀಯ.
-ಮೆ.ಗೋ. ಸುಬ್ಬಣ್ಣ, ಮೇಗರವಳ್ಳಿ; ಜೆ. ಮಂಜುಶ್ರೀ, ಬೆಂಗಳೂರು
ಎಲೆಮರೆ ಬದುಕು ಸಾಗಿಸುವ ಬಾವಿ ತೋಡುವ ಸಮುದಾಯದ ನಿತ್ಯ ಬವಣೆಯನ್ನು ಮಡಿವಾಳರ ಬರಹ ಅನಾವರಣಗೊಳಿಸಿದೆ. ಆ ಸಮುದಾಯದ ಅನೇಕ ಯಕ್ಷಪ್ರಶ್ನೆಗಳಿಗೆ ಉತ್ತರರೂಪದ ಪರಿಹಾರ ಕೊಡುವರು ಯಾರು? ಎಲ್ಲ ಸಮುದಾಯದ ಮೇಲೆ ಮಾನವೀಯ ಬೆಳಕನ್ನು ಚೆಲ್ಲುವ ಸಾಪ್ತಾಹಿಕ ಪುರವಣಿಯ ಪ್ರಯತ್ನಕ್ಕೆ ಧನ್ಯವಾದಗಳು.
-ಕುಬೇರಪ್ಪ ಎಂ. ವಿಭೂತಿ, ಹರಿಹರ
`ಮೈಸೂರು ಹಿರಿಮೆಗೊಂದು ಹೊಸ ಕಣ್ಣು~ (ಲೇ: ದೇವು ಪತ್ತಾರ) ಸೊಗಸಾದ ಬರಹ. ಸ್ವಾರಸ್ಯ, ಕುತೂಹಲ, ಮಹತ್ವಪೂರ್ಣ ಚಿತ್ರಗಳಿಂದ ಲೇಖನ ಖುಷಿಕೊಟ್ಟಿತು. ನಮ್ಮ ಮೈಸೂರಿನ ಬಗ್ಗೆ ಏನೇ ಬಂದಿದ್ದರೂ ಓದಿ ಸಂತೋಷ ಪಡುವವ ನಾನು.
-ಎ.ಕೆ.ಅನಂತಮೂರ್ತಿ, ಬೆಂಗಳೂರು
ಕಲೆಯ ಹೆಸರಲ್ಲಿ ಬೆತ್ತಲಾಗುವ ನಟಿ ಪವೋಲಿಯ ಬೆಚ್ಚದ ಮಾತುಗಳನ್ನು ಕೇಳುತ್ತಿದ್ದರೆ ಬೇಂದ್ರೆ ಅವರು ಬರೆದ `ಪಾತರಗಿತ್ತಿ~ ಕವನ ನೆನಪಾಯಿತು. ಆ ಕವನದ ಪಂಚರಂಗಿ ಪಾತರಗಿತ್ತಿ ಕೊನೆಯ ಕ್ಷಣದಲ್ಲಿ ದೀಪಕ್ಕೆ ತಾಗಿ ಸುಟ್ಟುಕೊಳ್ಳುವ ಮಾತಿನ ಸತ್ಯವನ್ನು ಪವೋಲಿಯಂಥ ಬಿಚ್ಚಮ್ಮಗಳು ಅರಿಯುವರೆ? ರಸಿಕ ಚಿತ್ರ ಪ್ರೇಮಿಗಳ ಮನ ತಣಿಸಿದ ಲೇಖನವಿದು.
-ಶಿವರಾಜ್ ಕೆ ವಿಭೂತಿ, ಹರಿಹರ
`ಉಲ್ಲಾಸ ಉತ್ಸಾಹ ಉತ್ತುಂಗ~ (ಗೋಪಾಲ ಕೃಷ್ಣ ಹೆಗಡೆ; ಜು.22) ಲೇಖನ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ, ಮೈಗೆ ರೋಮಾಂಚನ ತಂದಿತು. ವಿಶ್ವದ ಮಹಾನ್ ಕಾವ್ಯಗಳ ಸಾಲಿನಲ್ಲಿ ಈ ಮಹಾನ್ ಕ್ರೀಡಾ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ ಎಂಬ ಗೋಪಾಲಕೃಷ್ಣ ಹೆಗಡೆಯವರ ಮಾತು ಮೆಲುಕು ಹಾಕುವಂತಿದ್ದು, ಅವರ ಲೇಖನವೂ ಕಾವ್ಯಮಯವಾಗಿಯೇ ಇದೆ.
ಒಲಿಂಪಿಕ್ಸ್ ಕುರಿತಾದ ವಿಶೇಷ ಮಾಹಿತಿ, ಅಪರೂಪದ ಚಿತ್ರಗಳು- ಇವೆಲ್ಲವು ಸೇರಿ ಒಲಿಂಪಿಕ್ಸ್ ವಿಶೇಷ ಪುರವಣಿಯ ಮೌಲ್ಯವನ್ನು ಹೆಚ್ಚಿಸಿವೆ.
-ಪ್ರೊ. ಆರ್.ವಿ. ಹೊರಡಿ, ಧಾರವಾಡ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.