ಓದುವ ಮಕ್ಕಳಿಗೆ ರೋಬೊ ಮಾಡುವ ಭಾಗ್ಯ

7

ಓದುವ ಮಕ್ಕಳಿಗೆ ರೋಬೊ ಮಾಡುವ ಭಾಗ್ಯ

Published:
Updated:

ಬಾಲಕನ ಹೆಸರು ದೇವೊನ್. ಇನ್ನೂ ಏಳರ ಹರೆಯ. ಒಂದು ಮುಂಜಾನೆ ತಲೆನೋವು- ಜ್ವರ ಬಂದು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ತನ್ನ ಬದಲು ಆತ ನೆಚ್ಚಿನ ರೋಬೊವನ್ನೇ ಕಳುಹಿಸಿದ. ಅದು ಗಾಲಿಗಳ ಮುಖಾಂತರ ಶಾಲೆಗೆ ಹೋಗಿ, ಶಿಕ್ಷಕರ ಪ್ರಶ್ನೆಗೆ ಉತ್ತರಿಸಿ, ಸಹಪಾಠಿಗಳೊಂದಿಗೆ ಸಂಭಾಷಣೆ ನಡೆಸಿ, ಆಟವನ್ನೂ ಆಡಿ ಮರಳಿತು.ಅದರಲ್ಲಿದ್ದ ವೆಬ್ ಕ್ಯಾಮೆರಾ ಮೂಲಕ ಆತನ ಮುಖ ಗೆಳೆಯರಿಗೆ-ಶಿಕ್ಷಕರಿಗೆ ಕಾಣಿಸಿತು. ಬಾಲಕ ಮನೆಯಲ್ಲಿ ಕುಳಿತೇ ಕಂಪ್ಯೂಟರ್ ಮುಖಾಂತರ ರೋಬೊ ನಿಯಂತ್ರಿಸಿದ. `ವಿದ್ಯಾರ್ಥಿಗಳಂತೆ ಅದು ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತದೆ, ಅವನು ತರಗತಿಯಲ್ಲಿ ಇರುವುದಿಲ್ಲ ಎಂಬುದು ಅರಿವಿಗೂ ಬರುವುದಿಲ್ಲ~ ಎಂದು ಮಗನ ಘನಕಾರ್ಯವನ್ನು ಆತನ ತಾಯಿ ಕೊಂಡಾಡಿದರು. ಮೂರು ದಿನಗಳ ಹಿಂದೆ ಈ ಘಟನೆ ವರದಿಯಾಗಿದ್ದು ಅಮೆರಿಕದಲ್ಲಿ. ಈ ಸುದ್ದಿ ಓದಿದ ಬಳಿಕ ನಗರದಲ್ಲೂ ಇಂತಹುದೇ ಘಟನೆ ಮುಂದೊಂದು ದಿನ ನಡೆದೀತೆ ಎಂಬ ಪ್ರಶ್ನೆಯೂ ಮೂಡಿತು. ಅದಕ್ಕೆ ಪುಷ್ಟಿ ಸಿಕ್ಕಿದ್ದು ವೈಟ್‌ಫೀಲ್ಡ್ ಬಳಿಯ ಕ್ಯಾಂಡರ್  ಶಾಲೆ ಮಕ್ಕಳನ್ನು ರೋಬೊ ತಯಾರಿಕೆಗೆ ಸಜ್ಜುಗೊಳಿಸುತ್ತಿದೆ ಎಂಬ ಮಾಹಿತಿ ಸಿಕ್ಕಾಗ. ಕುತೂಹಲ ತಣಿಯಲಾರದೆ ಶಾಲೆಗೆ ಭೇಟಿ ಕೊಟ್ಟಾಗ ತಿಳಿದದ್ದಿಷ್ಟು...ವಾಹನಗಳ ಗೇರ್ ಬದಲಾಯಿಸುವ ತಂತ್ರಜ್ಞಾನದ ಬಗ್ಗೆ ತರಗತಿಯಲ್ಲಿ ಎಷ್ಟು ವಿವರಿಸಿದರೂ ಮಕ್ಕಳಿಗೆ ಅರ್ಥವಾಗುವುದು ಅಷ್ಟಕಷ್ಟೆ. ಬದಲಿಗೆ, ಅದನ್ನೇ    ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಟ್ಟರೆ ಮಕ್ಕಳು ಇಷ್ಟಪಟ್ಟು ಕಲಿಯುತ್ತಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತರಬೇತುದಾರರ ಸಹಾಯದಿಂದ ಮಕ್ಕಳೇ ಅದನ್ನು ಕೈಯಲ್ಲಿ ಮಾಡುವಂತಾದರೆ? ಆಗ ಕಲಿಕೆ ಇನ್ನೂ ಅರ್ಥಪೂರ್ಣವಾದೀತು. ಈ ಯೋಜನೆ ಹೊಳೆದಿದ್ದೇ ತಡ ಕ್ಯಾಂಡರ್ ಇಂಟರ್‌ನ್ಯಾಶನಲ್ ಸ್ಕೂಲ್ ಜಪಾನಿನ ಲರ್ನಿಂಗ್ ಸಿಸ್ಟಂ ಜತೆ ಸೇರಿ ರೋಬೊಟಿಕ್     ಟೆಕ್ನಾಲಜಿಯನ್ನು ಶಾಲೆಗೆ ತಂದಿದೆ.ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳೆಲ್ಲಾ ವಿಜ್ಞಾನದ ಪರಿಕರಗಳನ್ನು ತಾವೇ ತಯಾರಿಸುತ್ತಾ ಕಲಿಕೆಯ ಹೊಸ ಸಂಭ್ರಮ ಅನುಭವಿಸುತ್ತಿದ್ದಾರೆ. ಇದರಿಂದ ಏಳನೇ ತರಗತಿ ಮುಗಿಸುವ ಹೊತ್ತಿಗೆ ವಿದ್ಯಾರ್ಥಿಯೊಬ್ಬ ಪುಟಾಣಿ ಕಾರೊಂದನ್ನು ಯಾರ ಸಹಾಯವೂ ಇಲ್ಲದೆ ತಯಾರಿಸಲು ಸಮರ್ಥನಾಗುತ್ತಾನೆ ಎಂಬುದು ಶಾಲೆ ನೀಡುವ ಭರವಸೆ!ಏನಿದು ರೋಬೊಟಿಕ್?ಪಠ್ಯದಲ್ಲಿ ಅರ್ಥವಾಗದ ತಾಂತ್ರಿಕ ಅಂಶಗಳನ್ನು ತರಗತಿಯಲ್ಲಿ ತಾವೇ ತಯಾರಿಸಿ ಪ್ರಾಯೋಗಿಕವಾಗಿ ಅದನ್ನು ಅರ್ಥೈಸಿಕೊಳ್ಳುವುದು ಇಲ್ಲಿನ ತಂತ್ರಜ್ಞಾನ. ಜಪಾನ್ ಲರ್ನಿಂಗ್ ಸಂಸ್ಥೆಯ ಇಬ್ಬರು ಸಹಾಯಕರು ವಿದ್ಯಾರ್ಥಿಗಳೊಂದಿಗಿದ್ದು, ಅವರಿಗೆ ಬೇಕಾದ ಸಲಕರಣೆ ಹಾಗೂ ಮಾಹಿತಿಗಳನ್ನು ಒದಗಿಸುತ್ತಾರೆ.

ವಿದ್ಯಾರ್ಥಿಗಳು ವಿನ್ಯಾಸ ನೀಡಿ, ನಿರ್ದಿಷ್ಟ ರೂಪ ಕೊಟ್ಟು ಮಾದರಿಯನ್ನು ನಿರ್ಮಿಸುತ್ತಾರೆ. ಅಲ್ಲದೇ ಅದಕ್ಕೆ ಅನ್ವಯವಾಗುವ ಹಾಗೂ ಅದನ್ನು ನಿಯಂತ್ರಿಸುವ ಸಂಕೇತಗಳನ್ನೂ (ಪ್ರೋಗ್ರಾಮಿಂಗ್) ಬರೆಯುತ್ತಾರೆ.ಅಂತರಶಾಲಾ ಸ್ಪರ್ಧೆಗಳಿಗೆ ಮಕ್ಕಳನ್ನು ಅಣಿಮಾಡುವ ಉದ್ದೇಶದಿಂದ ಮಾದರಿ ತಯಾರಿಸುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಡುತ್ತಿಲ್ಲ. ಪಠ್ಯದಲ್ಲಿ ಬೋಧಿಸುವ ಸಂಗತಿಗಳು ಕೇವಲ ಕಂಠಪಾಠಕ್ಕಷ್ಟೇ ಸೀಮಿತವಾಗದೆ, ಪ್ರಯೋಗದ ಮೂಲಕ ಮಕ್ಕಳಿಗೆ ಇಷ್ಟವಾಗಬೇಕು.

ಅದು ಅವರ ಮನಸ್ಸಲ್ಲಿ ಅಚ್ಚೊತ್ತಬೇಕು. ಅದಕ್ಕಾಗಿ ಪ್ರತ್ಯೇಕ ಪ್ರಯೋಗ ಶಾಲೆಯನ್ನೂ ತೆರೆಯಲಾಗಿದೆ. ಒಂದನೇ ತರಗತಿಯ ಮಕ್ಕಳು ತೂಕದ ತಕ್ಕಡಿ ತಯಾರಿಸಿದರೆ ಹತ್ತನೇ ತರಗತಿಯ ಮಕ್ಕಳು ಭೌತಶಾಸ್ತ್ರದ ಮಾದರಿ, ಸಣ್ಣ ವಾಹನಗಳನ್ನು ತಯಾರಿಸುತ್ತಾರೆ.`ಭಾರತದ ಶಿಕ್ಷಣ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಇದೇ ಮೊದಲು. ಯುವ ಮನಸ್ಸುಗಳನ್ನು 21ನೇ ಶತಮಾನದ ಸ್ಪರ್ಧೆಗಳಿಗೆ ಅಣಿಗೊಳಿಸುವುದು ನಮ್ಮ ಉದ್ದೇಶ. ರೋಬೊಟಿಕ್ ತಂತ್ರಜ್ಞಾನವನ್ನು ಪ್ರಾಥಮಿಕ ಹಂತದಲ್ಲೇ ಪರಿಚಯಿಸುವುದರಿಂದ ಜ್ಞಾನದ ಪರಿಧಿ ಹಿರಿದಾಗುತ್ತದೆ.

ಗಣಿತ ಹಾಗೂ ವಿಜ್ಞಾನದ ವಿಷಯಗಳಲ್ಲಿ ಪರಿಣತಿ ಹೊಂದಲೂ ಇದು ನೆರವಾಗುತ್ತದೆ. ಇದರಿಂದ ಶಿಕ್ಷಕರ ಅರಿವಿನ ಮಟ್ಟವೂ ಹೆಚ್ಚುತ್ತದೆ~ ಎನ್ನುತ್ತಾರೆ ಜಪಾನ್ ಮೂಲದ ತರಬೇತುದಾರರು.ಇದು ನಮಗಿಷ್ಟ:
`ಪಾಠದಲ್ಲೇ ರೋಬೊಟಿಕ್ ವಿಷಯವನ್ನೂ ಸೇರಿಸಿರುವುದು ನಮಗೆ ಖುಷಿ ನೀಡಿದೆ. ಪ್ರಸ್ತುತ ಲೇಡಿ ಬಗ್ ಮಾದರಿಯ ಸಣ್ಣ ವಾಹನವನ್ನು ತಯಾರಿಸುತ್ತಿದ್ದೇವೆ. ನಾವೆಲ್ಲಾ ತಂಡವಾಗಿ ಕಲಿಯುತ್ತಿರುವುದರಿಂದ ಹೊಸ ವಿನ್ಯಾಸ ನೀಡುವ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳೂ ಬರುತ್ತಿರುತ್ತವೆ.

ಅದನ್ನೆಲ್ಲಾ ಶಿಕ್ಷಕಿಯೊಡನೆ ಚರ್ಚಿಸಿ ಹೊಸ ರೂಪ ನೀಡುತ್ತೇವೆ. ವಾರಕ್ಕೆ ಎರಡೂವರೆ ಗಂಟೆಯ ಕ್ಲಾಸ್ ಇದು. ವರ್ಕ್‌ಶೀಟ್‌ನಲ್ಲಿ ಬರೆದಂತೆ ಸ್ಕ್ರೂ ಟೈಟ್ ಮಾಡುವುದು, ಮತ್ತೊಂದು ಭಾಗವನ್ನು ಸೇರಿಸುವುದು, ವಿದ್ಯುತ್ ಹರಿಯುವ ತಂತು ಯಾವುದೆಂದು ಪರೀಕ್ಷಿಸುವುದು ಮೊದಲಾದ ಸಣ್ಣ ಪ್ರಯೋಗಗಳನ್ನಷ್ಟೇ ನಡೆಸುತ್ತಿದ್ದೇವೆ.

ನಾನೇ ಒಂದು ಸ್ವಯಂಚಾಲಿತ ಕಾರು ತಯಾರಿಸಬೇಕು ಎಂಬುದು ನನ್ನಾಸೆ~ ಎಂದು ಬಟ್ಟಲು ಕಣ್ಣುಗಳನ್ನು ಅರಳಿಸಿದಳು ಎಂಟನೇ ತರಗತಿಯ ಹಿಮಾನಿ. ಒಂದನೇ ತರಗತಿಯಿಂದಲೇ ಮಕ್ಕಳಿಗೆ ಟ್ಯಾಬ್ಲೆಟ್ ಕಲಿಸುವ ಪ್ರಯತ್ನ ಮಾಡಿರುವ ಕ್ಯಾಂಡರ್ ಶಾಲೆ ರೋಬೊಟಿಕ್ ತಂತ್ರಜ್ಞಾನವನ್ನೂ ಪರಿಚಯಿಸಿದೆ.

ಮುಂದೊಂದು ದಿನ ನಮ್ಮ ಮನೆ ಮಕ್ಕಳು ತಾವು ಶಾಲೆಗೆ ಹೋಗುವ ಬದಲು ತದ್ರೂಪಿ ರೋಬೊಟ್ ಒಂದನ್ನು ಶಾಲೆಗೆ ಕಳುಹಿಸಿದರೂ ಅಚ್ಚರಿಪಡಬೇಕಾಗಿಲ್ಲ.

ಅಂಕದತ್ತ ಚಿತ್ತಗಣಿತ, ವಿಜ್ಞಾನದ ಪಾಠಗಳಿಗೆ ಇದನ್ನು ಬಳಸಿಕೊಳ್ಳಲಾಗುತ್ತಿದ್ದು, ಮಕ್ಕಳು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ.ತಂತ್ರಜ್ಞಾನ ಸಂಬಂಧಿ ಆವಿಷ್ಕಾರಗಳು ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಬೇಕು. ಕೇವಲ ಪಠ್ಯ ಓದಿ ಅತ್ಯುತ್ತಮ ಅಂಕ ಗಳಿಸುವತ್ತ ನೀಡುವ ಗಮನ ಕಡಿಮೆ ಆಗಬೇಕು ಎಂಬುದು ನಮ್ಮ ಉದ್ದೇಶ.

ಹಾಗೆಂದು ರೋಬೊಟಿಕ್ಸ್ ಟೆಕ್ನಾಲಜಿ ಹೇಳಿಕೊಡುವ ಮೂಲಕ ವಿಭಿನ್ನ ರೀತಿಯಲ್ಲಿ ಪಾಠ ಹೇಳುತ್ತೇವೆ, ಶಿಕ್ಷಣ ಪದ್ಧತಿಯನ್ನೇ  ಬದಲಾಯಿಸುತ್ತೇವೆ ಎಂದೇನೂ ಹೇಳಲಾಗದು. ಇದು ಪ್ರಾಯೋಗಿಕ ಪ್ರಯತ್ನವಷ್ಟೇ. ಈ ಮೂಲಕ ಮಕ್ಕಳನ್ನು ತಾಂತ್ರಿಕ ಲೋಕಕ್ಕೆ  ಪರಿಚಯಿಸುವ ಯತ್ನ ನಮ್ಮದು.

ಸತತ ಎಂಟು ಗಂಟೆಗಳ ತರಗತಿಗಳು ಬೋರು ಹೊಡೆಸುವುದನ್ನು ತಪ್ಪಿಸಲು ಈ ತಂತ್ರಜ್ಞಾನವನ್ನು  ಪಠ್ಯದಲ್ಲೇ ಸೇರಿಸಲಾಗಿದೆ. ಒತ್ತಡ ರಹಿತ ಕಲಿಕೆ ಇದರಿಂದ ಸಾಧ್ಯ. ಸಾಮಾನ್ಯವಾಗಿ ವಿಜ್ಞಾನ ಇಲ್ಲವೇ ಗಣಿತವನ್ನು ದ್ವೇಷಿಸುವ ವಿದ್ಯಾರ್ಥಿ ಎಲೆಕ್ಟ್ರಾನಿಕ್ಸ್ ಮೂಲಕ ತಯಾರಿಸುವ ರೋಬೊಟಿಕ್ ಮಾದರಿಗಳನ್ನು ಇಷ್ಟಪಡುತ್ತಾನೆ.- ಶ್ರೀಧರ್, ಕ್ಯಾಂಡರ್ ಶಾಲೆಯ ಡೀನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry