ಶುಕ್ರವಾರ, ನವೆಂಬರ್ 22, 2019
19 °C

`ಓದುವ ಹವ್ಯಾಸ ಭವಿಷ್ಯ ನಿರ್ಮಾಣಕ್ಕೆ ದಾರಿ ದೀಪ'

Published:
Updated:

ಮುಡಿಪು: ಓದುವ ಹವ್ಯಾಸವು ನಮ್ಮಲ್ಲಿ ಜ್ಞಾನ ಹಾಗೂ ಕೌಶಲವನ್ನು ಹೆಚ್ಚಿಸುವುದರೊಂದಿಗೆ ನಮ್ಮ ಭವಿಷ್ಯ ನಿರ್ಮಾಣಕ್ಕೂ ದಾರಿ ದೀಪವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ  ಸಿಕ್ಕಿದ ಅವಕಾಶಗಳನ್ನು ಪರಿಣಾಮಕಾರಿ ಬಳಸಿಕೊಂಡರೆ ಉಜ್ವಲ ಭವಿಷ್ಯ  ನಮ್ಮದಾಗುತ್ತದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಜಯಶ್ರೀ ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ 2012-13ನೇ ಸಾಲಿನ ಸಮಾಜಶಾಸ್ತ್ರ ಸಂಘದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜಶಾಸ್ತ್ರದ ಅಧ್ಯಯನವು ಸಾಮಾಜಿಕ ಚಿಂತನೆಯೊಂದಿಗೆ ನಮ್ಮಲ್ಲಿ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಸುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಇದರ ಪಾತ್ರ ಮಹೋನ್ನತವಾದುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜಶಾಸ್ತ್ರದ ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜೋಗನ್ ಶಂಕರ್, `ಇಂದಿನ ಸಮಾಜದಲ್ಲಿ ನಮ್ಮ ಭವಿಷ್ಯ ನಿರ್ಮಾಣಕ್ಕೆ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳ ಸದ್ಬಳಕೆಯೊಂದಿಗೆ ಮುನ್ನಡೆದರೆ ಯಶಸ್ಸು ಖಂಡಿತಾ ಸಿಗುತ್ತದೆ. ಐಎಎಸ್, ಐಪಿಎಸ್‌ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ನಮ್ಮಲ್ಲಿ ಜ್ಞಾನಶಕ್ತಿಯು ವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ' ಎಂದರು.ಮುಖ್ಯ ಅತಿಥಿಯಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ದೊಡ್ಡಸಿದ್ದಯ್ಯ, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಗೋವಿಂದರಾಜ್, ಡಾ.ಗಾಯತ್ರಿ, ಡಾ.ಕಿರಣ್ ಪ್ರಸಾದ್ ಇತರರು ಇದ್ದರು.ಇದೇ ಸಂದರ್ಭದಲ್ಲಿ ಸಮಾಜಶಾಸ್ತ್ರ ಸಂಘದ ವತಿಯಿಂದ ವಿಭಾಗದ ಹಳೆವಿದ್ಯಾರ್ಥಿನಿಯೂ ಆಗಿರುವ   ಪ್ರೊ.ಜಯಶ್ರೀ  ಅವರನ್ನು ಸನ್ಮಾನಿಸಲಾಯಿತು.

ಬಳಿಕ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಬುಡಕಟ್ಟು ಜನರ ಅಧ್ಯಯನದ ಸಂಶೋಧನಾ ವರದಿ ಮಂಡಿಸಿದರು.

ಪ್ರತಿಕ್ರಿಯಿಸಿ (+)