ಶುಕ್ರವಾರ, ಡಿಸೆಂಬರ್ 6, 2019
19 °C
ಸಾಹಿತ್ಯ ಸಾಂಗತ್ಯ

ಓದು ಎಂದೆಂದಿಗೂ ಮುಗಿಯದ ಪಯಣ

Published:
Updated:

ಕನ್ನಡ ಸಾಹಿತ್ಯದ ನವ್ಯದ ಸಂದರ್ಭದಲ್ಲಿ ಬರೆಯಲು ಆರಂಭಿಸಿದ ಕೆ.ವಿ. ತಿರುಮಲೇಶ್ ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನು ಬರೆದ ಕೆಲವೇ ಲೇಖಕರಲ್ಲಿ ತಿರುಮಲೇಶ್ ಒಬ್ಬರು. ಪ್ರಮುಖವಾಗಿ ಕವಿ, ಕತೆಗಾರರಾಗಿರುವ ತಿರುಮಲೇಶ್‌ರ ಮೊದಲ ಕವಿತೆಯ ಸಂಕಲನ `ಮುಖಾಮುಖಿ'.

`ಅನೇಕ', `ಅವಧ', `ಪಾಪಿಯೂ' ಅವರ ಪ್ರಮುಖ ಕವನ ಸಂಗ್ರಹಗಳು. `ಅಕ್ಷಯ ಕಾವ'್ಯ ಎಂಬ ಮಹಾಕಾವ್ಯವೂ ಸೇರಿದಂತೆ ಅವರು 10 ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. `ನಾಯಕ ಮತ್ತು ಇತರರು', `ಜಾಗುವಾ ಮತ್ತು ಇತರರು', `ಕಳ್ಳಿಗಿಡದ ಹೂ', `ಕೆಲವು ಕಥಾನಕಗಳು' ಅವರ ಕಥಾಸಂಗ್ರಹಗಳಾಗಿವೆ. ಇಂಗ್ಲಿಷ್ ಅಧ್ಯಾಪಕರಾಗಿ, ಭಾಷಾವಿಜ್ಞಾನಿಯಾಗಿ ಕೆಲಸ ಮಾಡಿರುವ ತಿರುಮಲೇಶ್, ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲ್ಯಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕರಾಗಿ ಬಹುಕಾಲ ಕೆಲಸ ಮಾಡಿದ್ದಾರೆ.ಅಮೆರಿಕ, ಯಮನ್‌ನಲ್ಲೂ ಅವರು ಅಧ್ಯಾಪಕರಾಗಿದ್ದರು. ಬಹುಕಾಲ ಕನ್ನಡನಾಡಿನ ಹೊರಗಿದ್ದುಕೊಂಡು ಬರೆದ ಅವರು ಪ್ರಸ್ತುತ ಹೈದರಾಬಾದಿನಲ್ಲಿ ನೆಲೆನಿಂತಿದ್ದಾರೆ. ಕಾಸರಗೋಡಿನ ಕಾರಡ್ಕದವರಾದ ತಿರುಮಲೇಶ್‌ರ ಅನೇಕ ಕವಿತೆಗಳು ಇನ್ನಷ್ಟೇ ಸಂಕಲನ ರೂಪದಲ್ಲಿ ಬರಬೇಕಿದೆ.

ಜಾಗತಿಕ ಸಾಹಿತ್ಯದ ಅಪಾರ ಓದು, ವಿಸ್ತೃತ ಅನುಭವ ಇರುವ ಅವರಿಗೆ ಸಾಹಿತ್ಯ ಎಂಬುದು ಮೈಗಂಟಿಕೊಂಡ ಚರ್ಮದ ಹಾಗೆ. ಆ ಕುರಿತಾದ ಮೋಹ ವ್ಯಾಮೋಹ ಈ ಸಂದರ್ಶನದಲ್ಲೂ ವ್ಯಕ್ತಗೊಂಡಿದೆ. ಅವರ ಅನುವಾದಿತ ಪುಸ್ತಕ ರಾಬರ್ಟ್ ಹೆನ್ರಿಯ `ಕಲಾಚೇತನ' ಇತ್ತೀಚೆಗಷ್ಟೆ ಪ್ರಕಟವಾಗಿದೆ.

ಭಾರತೀಯ ಸಾಹಿತ್ಯದೊಂದಿಗೆ ಜಗತ್ತಿನ ಸಾಹಿತ್ಯವನ್ನೂ ನೀವು ಓದಿಕೊಂಡಿದ್ದೀರಿ. ಇದರೊಂದಿಗೆ ಅನೇಕ ಕಥೆ, ಕವಿತೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದೀರಿ. ಓದನ್ನು ತೀರಾ ಹಚ್ಚಿಕೊಂಡದ್ದು ಯಾವಾಗ? ಹೇಗೆ ಈ ಓದಿನ ಪ್ರಯಾಣ ಆರಂಭವಾಯಿತು?

ಓದಿನ ಪ್ರಯಾಣ! ಅದೊಂದು ಚೆನ್ನಾದ ರೂಪಕ. ಅದು ಎಂದೆಂದೂ ಮುಗಿಯದ ಪ್ರಯಾಣ, ಹಾಗೂ ಎಂದು ಆರಂಭವಾಯಿತು ಎನ್ನುವುದು ಕಷ್ಟ; ಅದಕ್ಕೊಂದು ಆರಂಭ ಬಿಂದು ಇರುವುದಿಲ್ಲ. ಅದೇ ರೀತಿ ಒಂದು ನಿರ್ದಿಷ್ಟ ಗುರಿಯೂ ಇದೆಯೆಂದು ನನಗೆ ಅನಿಸುವುದಿಲ್ಲ. ಪ್ರಯಾಣದ ಅನುಭವ ಇರುವುದು ಅದರ ಸಾಗುವಿಕೆಯಲ್ಲಿ. ಗುರಿ ತಲಪುವುದರಲ್ಲಿ ಅಲ್ಲ ಎನ್ನುತ್ತಾರೆ. ಓದು ಕೂಡ ಹಾಗೇನೇ.

ನನ್ನ ಶಿಕ್ಷಣಕ್ಕೆ ಮನೆಯಿಂದ ವಿರೋಧವಿತ್ತು. ನಾನು ಹೈಸ್ಕೂಲು ಮುಗಿಸುವುದೇ ಅವರಿಗೆ ಇಷ್ಟವಿರಲಿಲ್ಲ.  ಶಾಲೆಗೆ ವಿದಾಯ ಹೇಳಿ ಕುಲಕಸುಬಾದ ಕೃಷಿಯಲ್ಲಿ ತೊಡಗಬೇಕು ಎನ್ನುವುದು ಅವರ ಒತ್ತಾಯವಾಗಿತ್ತು. ಈಗಾಗಲೇ ನನ್ನ ಮನಸ್ಸು ಸಾಹಿತ್ಯಕ್ಕೆ ಮಾರುಹೋಗಿತ್ತು. ಕತೆ ಕಾದಂಬರಿಗಳನ್ನು ಓದುತ್ತಿದ್ದೆ.ಅದು ನನ್ನ ಮುಂದೆ ಹೊಸತೊಂದು ಜಗತ್ತಿನ ಬಾಗಿಲು ತೆರೆಯಿತು. ಹೊರ ಜಗತ್ತನ್ನು ತಿಳಿಯಬೇಕು, ನಾನೂ ಒಬ್ಬ ಬರಹಗಾರ ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಇದಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಅಗತ್ಯವಾಗಿತ್ತು. ನಾನು ಮನೆ ತೊರೆದು ವಿದ್ಯಾಭ್ಯಾಸದ ಹಿಂದೆ ಬಿದ್ದೆ. ಆದರೆ ಇದುವೇ ನನ್ನ ಓದಿನ ಗೀಳಿಗೆ ಕಾರಣ ಎನ್ನುವಂತೆ ಇಲ್ಲ. ಅದೇಕೋ ಓದಿದಷ್ಟೂ ಇನ್ನಷ್ಟು ಓದಬೇಕು ಎನ್ನುವ ಆಂತರಿಕ ಒತ್ತಡವೊಂದು ನನ್ನನ್ನು ಪ್ರೇರೇಪಿಸತೊಡಗಿತು.

ಮುಂದೆ ನಾನೇ ಒಬ್ಬ ಇಂಗ್ಲಿಷ್ ಲೆಕ್ಚರರ್ ಆದೆ. ಕೆಲಸವೂ ಸಿಕ್ಕಿತು. ಆಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಕತೆ ಅಲ್ಲಿಗೆ ಮುಗಿದಂತೆ. ಅದರೆ ನನಗೆ ಅದರಲ್ಲೂ ತೃಪ್ತಿ ಸಿಗಲಿಲ್ಲ. ಮುಂದೆ ಊರು ಬಿಟ್ಟು ಉನ್ನತ ವಿದ್ಯಾಭ್ಯಾಸಕ್ಕೆಂದು ಹೈದರಾಬಾದಿಗೆ ಬಂದೆ. ಅದು ತನಕ ಇಂಗ್ಲಿಷ್ ನನ್ನ ಅಕಡೆಮಿಕ್ ಶಿಸ್ತು ಆಗಿದ್ದರೆ ಈಗ ಭಾಷಾವಿಜ್ಞಾನದತ್ತ ಹೊರಳಿದೆ- ಆದರೆ ಇಂಗ್ಲಿಷ್‌ನ್ನು ಬಿಡಲಿಲ್ಲ. ಎಂದರೆ ನನ್ನ ಆಸಕ್ತಿ ವಿಸ್ತರಿಸತೊಡಗಿತು.ಈ ಹಿಂದೆಯೇ ನಾನು ಇತರ ಕ್ಷೇತ್ರಗಳಲ್ಲಿ ಏನು ನಡೆದಿದೆ, ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಶ್ರಮಿಸಿದವ. ಉದಾಹರಣೆಗೆ, ಚಿತ್ರಕಲೆ ಬಗ್ಗೆ ಓದಿಕೊಳ್ಳುವುದು ನನ್ನ ಒಂದು ಹವ್ಯಾಸವಾಗಿತ್ತು. ಪಿಕಾಸೋ ಕಲೆ ಬಗ್ಗೆ ಓದಿಕೊಂಡಿದ್ದೆ. ಇದು ಮುಂದೆ ಆಧುನಿಕ ಇಂಗ್ಲಿಷ್ ಸಾಹಿತ್ಯವನ್ನು ಓದುತ್ತಿದ್ದಾಗ ನನಗೊಂದು ಕನೆಕ್ಟಿವಿಟಿಯನ್ನು ನೀಡಿತು.

ಉದಾಹರಣೆಗೆ, ಪಿಕಾಸೋನ `ಗೆರ್ನಿಕಾ' (1937) ಎಂಬ ಪೇಂಟಿಂಗಿಗೂ ಎಲಿಯಟ್‌ನ `ವೇಸ್ಟ್ ಲೇಂಡ್'ಗೂ (1922) ಇರುವ ಸಾದೃಶ್ಯ. ಯಾಕೆಂದರೆ ಎರಡೂ ಭಗ್ನಚಿತ್ರಗಳೇ.

ನಾನು ಉನ್ನತ ವ್ಯಾಸಂಗ ಮಾಡುತ್ತಿದ್ದ ಸಂಸ್ಥೆಯಲ್ಲೇ ನನಗೆ ಕೆಲಸವೂ ಸಿಕ್ಕಿತು.

ಇದೊಂದು ನನ್ನ ಜೀವನದ ಬಹು ದೊಡ್ಡ ತಿರುವು. ಯಾಕೆಂದರೆ ಈ ಸಂಸ್ಥೆಗೆ ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಸಂಬಂಧಗಳಿದ್ದುವು. ದೇಶವಿದೇಶಗಳ ವಿದ್ವಾಂಸರು ಇಲ್ಲಿಗೆ ಬಂದು ಹೋಗುತ್ತಿದ್ದರು. ಒಮ್ಮೆ ನೋಮ್ ಚಾಮ್‌ಸ್ಕಿ ಕೂಡಾ ಬಂದಿದ್ದರು. ಎಲ್ಲಕ್ಕಿಂತ ಹೆಚ್ಚು, ಇಲ್ಲೊಂದು ಮುಕ್ತಚಿಂತನೆಯ ವಾತಾವರಣವಿತ್ತು, ಇದಕ್ಕೆ ಪೂರಕವಾಗಿ ಬೃಹತ್ತಾದ ಒಂದು ಗ್ರಂಥಾಲಯ.

ಈ ಗ್ರಂಥಾಲಯದಲ್ಲಿ ನನಗೊಂದು ಕ್ಯಾರಲ್ (ಮೇಜು ಕುರ್ಚಿ) ಇತ್ತು. ಪಾಠ ಮುಗಿಸಿ ಉಳಿದ ವೇಳೆಯನ್ನು ನಾನು ಇಲ್ಲೇ  ಕಳೆಯುತ್ತಿದ್ದುದು. ಹೈದರಾಬಾದಿಗೆ ಬಂದ ನಂತರ ನನ್ನ ಓದು ನಿಜಕ್ಕೂ ಬಹುಮುಖಿಯಾಯಿತು - ಎಂದರೆ ಇಲ್ಲಿ ಅಂತರ್‌ಶಿಸ್ತು ಒಂದು ಅಗತ್ಯವಾಗಿತ್ತು. ಸಾಹಿತ್ಯ, ವಿಮರ್ಶೆ, ಚರಿತ್ರೆ, ಫಿಲಾಸಫಿ, ಸಾಮಾನ್ಯ ವಿಜ್ಞಾನ, ಭಾಷಾವಿಜ್ಞಾನ ಹೀಗೆ ನನ್ನ ಓದು ವಿಸ್ತರಿಸುತ್ತ ಹೋಯಿತು. 

ವೃತ್ತಿಯಿಂದ ನಾನೊಬ್ಬ ಇಂಗ್ಲಿಷ್ ಪ್ರಾಧ್ಯಾಪಕ, ಕನ್ನಡದಲ್ಲಿ ಬರೆಯುತ್ತೇನೆ. ಇಡೀ ಜೀವನ ಕರ್ನಾಟಕದಿಂದ ಹೊರಗೆ, ಮತ್ತು ದಶಕದಷ್ಟು ಕಾಲ ವಿದೇಶದಲ್ಲೂ ಕಳೆದ ನನಗೆ ಕನ್ನಡ ಸಾಹಿತ್ಯದ ವಾರೆ ನೋಟವಷ್ಟೇ ಇರುವುದು. ಸಹಜವಾಗಿಯೂ ನನ್ನ ಹೆಚ್ಚಿನ ಓದು ಇಂಗ್ಲಿಷ್ ಭಾಷೆಯಲ್ಲೇ ನಡೆಯುವುದು. ಈ ಭಾಷೆಯ ಮೂಲಕವೇ ಸ್ಪ್ಯಾನಿಶ್, ಫ್ರೆಂಚ್, ಜರ್ಮನ್, ರಶ್ಯನ್ ಮುಂತಾದ ಸಾಹಿತ್ಯ ಕೃತಿಗಳ ಪರಿಚಯವಾದುದು. ನಾನು ಮಿಶ್ರಸಂಸ್ಕೃತಿಯ ಮನುಷ್ಯ. ವಾಸ್ತವವೆಂದರೆ ಎಲ್ಲರೂ ಹಾಗೆಯೇ, ಆದರೆ ಕೆಲವರು ತಾವು ಶುದ್ಧರೆಂದು ತಿಳಿಯುತ್ತಾರೆ, ಇಲ್ಲವೇ ನಟಿಸುತ್ತಾರೆ.

ಭಾಷಾವಿಜ್ಞಾನದ ಅಧ್ಯಾಪಕರಾಗಿ ಭಾರತ ಮಾತ್ರವಲ್ಲದೆ ವಿದೇಶದ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿಗಳಿಗೆ ದಶಕಗಳ ಕಾಲ ಕಲಿಸಿದ್ದೀರಿ. ಕಲಿಸುವುದಕ್ಕಾಗಿ ನಡೆಯುವ ಅಕಾಡೆಮಿಕ್ ಓದು ಹಾಗೂ ಸ್ವಂತ ಖುಷಿಗಾಗಿ ನಡೆಯುವ ಓದನ್ನು ನೀವು ಹೇಗೆ ನೋಡುತ್ತೀರಿ?

ಸಾಕಷ್ಟು ವ್ಯತ್ಯಾಸವಿದೆ ಅನಿಸುತ್ತದೆ. ಆದರೆ ಯಾವ ಓದಿಗೂ ಒಂದು ಆದರ್ಶ ವಿಧಾನ ಎಂಬುದಿಲ್ಲ. ಓದುಗನ ಅನುಕೂಲತೆ ಮತ್ತು ಕೃತಿಯ ಗುಣದ ಮೇಲಿಂದ ಓದಿನ ವಿಧಾನ ವ್ಯತ್ಯಾಸವಾಗಬಹುದು. ಈಗ ಕಲಿಸುವುದಕ್ಕಾಗಿ ನಡೆಯುವ ಅಕಡೆಮಿಕ್ ಓದು: ಭಾಷಾವಿಜ್ಞಾನದಂಥ ಜ್ಞಾನಶಾಖೆಯ ಅಧ್ಯಾಪನ ವಿಷಯಾಧಾರಿತ ಆಗಿರುತ್ತದೆ; ಇಲ್ಲಿ  ಪಠ್ಯ ಅನ್ನೋದು ಇರೋದಿಲ್ಲ. ಇದ್ದರೂ ಅದನ್ನೇ ತರಗತಿಯಲ್ಲಿ ಕಲಿಸೋದಿಲ್ಲ.

ವಿಷಯದ ಬಗ್ಗೆ ಅಧ್ಯಾಪಕನಿಗೆ ಆಳವಾದ ಅರಿವು ಬೇಕಾಗುತ್ತದೆ; ಅದಕ್ಕೋಸ್ಕರ ಅಧ್ಯಾಪಕ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ನೀವೀಗ ಉದ್ದೇಶಿಸಿರುವುದು ಪ್ರಾಯಶಃ ಸಾಹಿತ್ಯ ಕೃತಿಗಳ ಕುರಿತಾದುದು: ಕತೆ, ಕಾದಂಬರಿ, ಕವಿತೆ, ಪ್ರಬಂಧ ಇತ್ಯಾದಿ.

ಇವು ಪಠ್ಯಾಧಾರಿತ ಅಧ್ಯಾಪನಕ್ಕೆ ಸಂಬಂಧಿಸಿದಂಥವು. ಇವಕ್ಕೂ ಆಳವಾದ ಮತ್ತು ಹರವಾದ ಅಧ್ಯಯನ ಬೇಕಾಗುತ್ತದೆ. ಪಠ್ಯದ ಯಾವ ಭಾಗವನ್ನೂ ಕ್ಷುಲ್ಲಕವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಪ್ರತಿಪದಾರ್ಥ, ವ್ಯಾಖ್ಯಾನ, ವಿಶ್ಲೇಷಣೆ ಎಲ್ಲವೂ ಅಗತ್ಯವಾಗುತ್ತವೆ.

ಇವನ್ನೆಲ್ಲ ಅಧ್ಯಾಪಕ ವಿದ್ಯಾರ್ಥಿಗಳಿಗೆ ನೀಡುವುದಕ್ಕಿಂತಲೂ ಈ ದಿಕ್ಕಿನಲ್ಲಿ ಅವರು ತಾವೇ `ಓದಲು' ಅರ್ಥಾತ್ ಅಭ್ಯಾಸ ನಡೆಸಲು ಮಾರ್ಗದರ್ಶನ ಮಾಡುವುದು ಅಧ್ಯಾಪನವೆನಿಸುತ್ತದೆ; ಆದರೆ ಹೀಗೆ ಮಾಡಲು ಅಧ್ಯಾಪಕ ಸ್ವತಃ ಈ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇಲ್ಲೊಂದು ಸೂಚನೆ: ಮರಗಳ ಮೇಲೆ ಗಮನ ಕೇಂದ್ರೀಕರಿಸಿದಾಗ ಕಾಡು ಕಾಣಿಸುವುದಿಲ್ಲ; ಕಾಡಿನ ಮೇಲೆ ಗಮನ ಕೇಂದ್ರೀಕರಿಸಿದಾಗ ಮರಗಳು ಕಾಣಿಸಲಾರವು. ಒಂದು ಪುಸ್ತಕವನ್ನು ಕಲಿಸುವುದು ಅಥವಾ ಓದುವುದೆಂದರೆ ಮರಗಳನ್ನು ಮತ್ತು ಕಾಡನ್ನು ಏಕಕಾಲಕ್ಕೆ ನೋಡುವುದಾಗಿದೆ.

ಸ್ವಂತ ಖುಷಿಗಾಗಿ ಓದುವಾಗ ಇಷ್ಟೊಂದು ಆಳ ಮತ್ತು ಹರಹಿನ ಅಗತ್ಯವಿಲ್ಲ. ಉದಾಹರಣೆಗೆ, 19ನೇ ಶತಮಾನದ ಅಮೇರಿಕನ್ ಕಾದಂಬರಿಕಾರ ನಥನೇಲ್ ಹಾಥೋರ್ನ್‌ನ ಛಿ ಖ್ಚಚ್ಟ್ಝಛಿಠಿ ಔಛಿಠಿಠಿಛ್ಟಿ (1850)  ಎಂಬ ಕಾದಂಬರಿಯೊಂದಿದೆ. ಇದರಲ್ಲಿ  ಕಥಾನಾಯಕಿ ಇಂಗ್ಲಿಷ್‌ನ  ` ಎ' ಅಕ್ಷರವನ್ನು ತನ್ನ ಡ್ರೆಸ್ಸಿನ ಮೇಲೆ ಬರೆದುಕೊಳ್ಳುವ ಶಿಕ್ಷೆಗೆ ಗುರಿಯಾಗುತ್ತಾಳೆ.

ಯಾಕೆಂದರೆ ಅವಳ ಮೇಲೆ ಹಾದರದ ಆಪಾದನೆಯಿರುತ್ತದೆ. ಯಾಕೆ `ಎ' ? ಯಾಕೆಂದರೆ ಇದು ಅಛ್ಠ್ಝಠಿಛ್ಟಿಯ ಸಂಕೇತ! ಇಷ್ಟನ್ನು ಸಾಮಾನ್ಯ ಓದುಗನೂ ತಿಳಿದುಕೊಂಡಿರಬೇಕಾಗುತ್ತದೆ. ಅಧ್ಯಾಪಕನಾದ ನಾನು ಇದರ ಬಗ್ಗೆ ತರಗತಿಯಲ್ಲಿ, ಅಥವಾ ಲೇಖನ ಬರೆಯುವ ಸಂದರ್ಭದಲ್ಲಿ, ಇನ್ನಷ್ಟು ಹೇಳಬಲ್ಲೆ. ಆದರೆ ಸಾಮಾನ್ಯ ಓದುಗನಿಗೆ ಅದರ ಅಗತ್ಯವಿರಲಾರದು. ಇನ್ನು ಕಾದಂಬರಿಯ ಕೊನೆಯಲ್ಲಿ ನಾಯಕಿ ಮತ್ತು ನಾಯಕನ ಗೋರಿಯ ಮೇಲೆ ಬರೆದ ಅಕ್ಷರಗಳ ಉಲ್ಲೇಖವೊಂದಿದೆ: ಣ್ಞ  ಊಜಿಛ್ಝಿ, ಖಚ್ಝಿಛಿ, ಠಿಛಿ ಔಛಿಠಿಠಿಛ್ಟಿ ಅ, ಎ್ಠ್ಝಛಿ.  ಏನಿದರ ಅರ್ಥ? ಸಾಮಾನ್ಯ ಓದುಗನಿಗೆ ಗೊತ್ತಾಗುವಂತಿಲ್ಲ. `ಕಪ್ಪು ಹಿನ್ನೆಲೆಯಲ್ಲಿ ಕಡು ಕೆಂಪಿನ ಎ' ಎನ್ನುವುದು ಇದರ ಅರ್ಥ. ಆದರೆ ಭಾಷೆ ವಿಚಿತ್ರವಾಗಿ ಅನಿಸುತ್ತದೆ ಅಲ್ಲವೇ? ಯಾಕೆಂದರೆ ಇದು ಲಾಂಛನ ಭಾಷೆ.

ಕಾದಂಬರಿಕಾರ ಯಾಕೆ ಇದನ್ನಿಲ್ಲಿ ತಂದಿದ್ದಾನೆ? ಇಲ್ಲಿ ಇದರ ನಿಜವಾದ ತಾತ್ಪರ್ಯವೇನು? ಹೀಗೆ ಅಧ್ಯಾಪಕನಾದವನು ಪ್ರಶ್ನೆ ಕೇಳುತ್ತ ಹೋಗುತ್ತಾನೆ. ಸಾಮಾನ್ಯ ಓದುಗನಿಗೆ ಇದೆಲ್ಲದರ ಅಗತ್ಯವಿಲ್ಲ. ಈ ಮಾತಿನ ಅರ್ಥ ಅವನಿಗೆ ಸಿಗದೆ ಹೋದರೂ ಒಟ್ಟಾರೆ ಕಾದಂಬರಿಯ ಸ್ವಾರಸ್ಯಕ್ಕೆ ಅದರಿಂದ ತೊಂದರೆಯಾಗುವುದಿಲ್ಲ.

ಮಾತ್ರವಲ್ಲ, ಹೆಚ್ಚು ವಿವರಗಳು ಅವನ ರಸಭಂಗಕ್ಕೆ ಕಾರಣವಾಗಬಹುದು. ಸಾಮಾನ್ಯ ಓದುಗನಿಗೆ ಓದಿನಲ್ಲಿ ಸಿಗುವ ಅನುಭವ ಮುಖ್ಯ. ಅಧ್ಯಾಪಕನಿಗೆ ಕಾಡಿನಂತೆಯೇ ಮರಗಳೂ ಪ್ರಧಾನ. ಇಬ್ಬರಿಗೂ ಕೃತಿ ನೀಡುವ ದರ್ಶನ ಮುಖ್ಯವಾಗುತ್ತದೆ - ಆದರೆ ಅದು ಅವರವರ ಅಳವಿಗೆ ಅನುಗುಣವಾಗಿ ಸಿಗುವ ಸಂಗತಿ. ಮತ್ತು ಇವೆರಡು ಓದಿನ ನಡುವೆ ನಿರ್ದಿಷ್ಟವಾದ ಸೈಜುಗಲ್ಲೇನೂ ಇಲ್ಲ.

ಕೆಲವು ಸಲ, ಕೃತಿಯನ್ನು ಹೆಚ್ಚೆಚ್ಚು ಅಧ್ಯಯನ ಮಾಡುತ್ತ ಕೃತಿ ಕಳೆದುಹೋಗುತ್ತದೋ ಎಂಬ ಭಯವಾಗುತ್ತದೆ! 

ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ ಬದುಕು, ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆ ಎಂದು ಅನ್ನಿಸಿದೆಯೇ?

ಮೊದಲು ನನ್ನದೊಂದು ವೈಯಕ್ತಿಕ ಅನುಭವವನ್ನು ಹೇಳಬೇಕು. ಒಮ್ಮೆ ನಾನು ಕನ್ನಡದ ಜನಪದ ಹಾಡೊಂದನ್ನು ಇಂಗ್ಲಿಷ್‌ಗೆ ಅನುವಾದಿಸಲು ಯಾರಿಗೋಸ್ಕರವೋ ಒಪ್ಪಿಕೊಂಡಿದ್ದೆ. ಆದರೆ ಅದನ್ನು ಮುಂದೆ ಹಾಕುತ್ತಲೇ ಇದ್ದೆ.

ಆ ಹಾಡನ್ನು ನಾನು ಓದಿಯೂ ಇರಲಿಲ್ಲ. ಕೊನೆಗೆ ಗಡುವು ಮೀರಿದ್ದರಿಂದ ಒಂದು ದಿನ ಅದನ್ನು ಅನುವಾದಿಸಲು ನಿರ್ಧರಿಸಿದೆ. ಸಮಯ ಮಧ್ಯರಾತ್ರಿ. ನನ್ನ ಹೆಂಡತಿ ಮಕ್ಕಳು ನಿದ್ದೆಹೋಗಿದ್ದರು. ನಾನು ಈ ಪದ್ಯವನ್ನು ಕೈಗೆತ್ತಿಕೊಂಡೆ. ಅದರ ಅಕ್ಷರಗಳೀಗ ನನಗೆ ನೆನಪಿಲ್ಲ; ಆದರೆ ಆಶಯ ನೆನಪಿದೆ. ಒಬ್ಬಾಕೆ ಹೆಣ್ಣು ಮಗಳು ತನ್ನನ್ನು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದ ಅತ್ತಿಗೆಯ ಬಳಿ ಹೇಳುವ ಮಾತುಗಳು ಅವು. ಇಷ್ಟೆ: `ಅತ್ತಿಗೆ, ಹಿಟ್ಟು ಬೀಸುತ್ತಿದ್ದೆೀನೆ, ಬೇಗನೆ ಮುಗಿಸುವೆ, ನನ್ನ ಮಡಿಲಲ್ಲಿ ಅಳುವ ಮಗು ಇದೆ'- ಎಂದು. ಆ ಕ್ಷಣದಲ್ಲಿ ಅದು ನನ್ನನ್ನು ಎಷ್ಟು ಕಲಕಿಬಿಟ್ಟಿತೆಂದರೆ ನನ್ನ ಕಣ್ಣುಗಳಲ್ಲಿ ಕಂಬನಿ ಮೂಡಿದುವು, ಅತ್ತೇಬಿಟ್ಟೆ. ಇದೊಂದು ಹಳೆಕಾಲದ ಹಾಡು ನಿಜ; ಈಗ ಯಾರೂ ಹಿಟ್ಟು ಬೀಸುವುದಿಲ್ಲ.

ಆದರೆ ನಮ್ಮ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಿದೆಯೇ? ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಸಾಹಿತ್ಯದ ತುಣುಕು ಇದು. ಸ್ತ್ರೀಯರನ್ನು ನೋಡುವ ನನ್ನ ದೃಷ್ಟಿಕೋನವನ್ನು ಬದಲಾಯಿಸಿದೆ ಎನ್ನಲೇ? ಅಂಥ ಮಾತುಗಳು ಅತಿಬಳಕೆಯಿಂದ ಸೊರಗಿವೆ. ಮುಖ್ಯ ವಿಷಯವೆಂದರೆ ಈ ಪದ್ಯ ಓದಿದ ಅನುಭವ ನನ್ನ ಮನಸ್ಸಿನಲ್ಲಿ ನೆಲೆನಿಂತಿದೆ- ಸ್ತ್ರೀಯರ ಕುರಿತು ಕಠಿಣವಾಗದ ಹಾಗೆ ನನ್ನನ್ನು ಸದಾ ಕಾಪಾಡಿಕೊಂಡು.

ಇನ್ನು ಆಧುನಿಕ ಸಾಹಿತ್ಯಕ್ಕೆ ಬಂದರೆ ದೇಶಭಾಷೆಗಳ ಗಡಿಗಳನ್ನು ಮೀರಿ ನನ್ನೊಳಗೆ ಇಳಿದ ಹಲವಾರು ಕೃತಿಗಳಿವೆ, ಬೇರೆ ಬೇರೆ ಕಾರಣಗಳಿಗಾಗಿ: ರಿಲ್ಕೆ, ಎಮಿಲಿ ಡಿಕಿನ್ಸನ್‌ಳ ಕವಿತೆಗಳು, ಕಾಫ್ಕಾನ ಕಾದಂಬರಿಗಳು, ಬೆಕೆಟ್‌ನ `ವೈಟಿಂಗ್ ಫಾರ್ ಗೊದೋ' ನಾಟಕ, ಹರ್ಮನ್ ಬ್ರಾಖ್‌ನ `ಡೆತ್ ಆಫ್ ವರ್ಜಿಲ್', ಟಾಲ್‌ಸ್ಟಾಯ್‌ನ  `ರಿಸರೆಕ್ಷನ್', `ವಾರ್ ಅಂಡ್ ಪೀಸ್', ದೋಸ್ತೋವ್‌ಸ್ಕಿಯ `ಬ್ರದರ್ಸ್‌ ಕರಮಝೋವ್', ಟರ್ಗಿನೇವ್‌ನ `ಸನ್ಸ್ ಏಂಡ್ ಫಾದರ್ಸ್‌', ಪಾಸ್ಟರ್‌ನಾಕ್‌ನ `ಡಾಕ್ಟರ್ ಝಿವಾಗೋ' ಕಾದಂಬರಿಗಳು, ಇನ್ನು ಡಿಕೆನ್ಸ್ ಮತ್ತು ಹಾರ್ಡಿಯ ಹಲವಾರು ಕಾದಂಬರಿಗಳು ನನ್ನನ್ನು ಕಾಡಿವೆ. ಕನ್ನಡದಲ್ಲಿ ಕಾರಂತ, ಅನಕೃ, ತರಾಸು ಕಾದಂಬರಿಗಳನ್ನು ಬಹುಕಾಲದ ಹಿಂದೆ ಓದಿ ಮೆಚ್ಚಿಕೊಂಡಿದ್ದೇನೆ. ಅನಂತಮೂರ್ತಿಯವರ `ಸಂಸ್ಕಾರ' ನನಗೆ ಆಧುನಿಕತೆಯನ್ನು ತೆರೆದಿಟ್ಟ ಕೃತಿ. ಅಂತೆಯೇ ಅಡಿಗರ ಕವಿತೆಗಳು. ಕುವೆಂಪು ಮತ್ತು ಬೇಂದ್ರೆಯವರ ಕವಿತೆಗಳನ್ನು ಯಾರಾದರೂ ಸುಶ್ರಾವ್ಯವಾಗಿ ಹಾಡಿದಾಗ ನಾನು ಕೇಳಿ ಖುಷಿ ಪಡುತ್ತೇನೆ. ಜನ್ನನ `ಯಶೋಧರ ಚರಿತೆ' ನನಗೆ ಹತ್ತಿರವೆನಿಸುವ ಹಳಗನ್ನಡ ಕಾವ್ಯಗಳಲ್ಲಿ ಒಂದು. ಇನ್ನು ಶಿವಶರಣರ ವಚನಗಳು ನನಗೆ ಬಹಳ ಇಷ್ಟವಾದಂಥವು.

ಅಂತೆಯೇ ದಾಸರ ಹಾಡುಗಳಲ್ಲಿ ಹಲವಾರು. ಶರೀಫರ ಪದ್ಯಗಳು ಕೂಡ. ಹೀಗೆ ಈ ಪಟ್ಟಿಗೆ ಕೊನೆಯಿಲ್ಲ. ಇವಕ್ಕೆಲ್ಲ ನಾನು ಬೇರೆ ಬೇರೆ ಕಾಲಘಟ್ಟದಲ್ಲಿ ಸ್ಪಂದಿಸಿದ್ದೇನೆ. ಇಲ್ಲಿ ಹೆಸರಿಸಬೇಕಾದ ಇನ್ನೊಂದು ಕೃತಿ ಮಹಾತ್ಮ ಗಾಂಧಿಯವರ `ಮೈ ಎಕ್ಸ್‌ಪೆರಿಮೆಂಟ್ಸ್ ವಿದ್ ಟ್ರುತ್'. ಇದೊಂದು ಸಾಹಿತ್ಯ ಕೃತಿಯಲ್ಲದೆ ಇದ್ದರೂ ಇದನ್ನು ಓದಿ ನಾನು ತಲ್ಲಣಗೊಂಡ ನೆನಪಿದೆ. ಮಹಾತ್ಮ ಗಾಂಧಿಯ ವಿಚಾರಗಳಿಂದ ಸ್ಫೂರ್ತಿಗೊಂಡು ಅಮೆರಿಕನ್ ಲೇಖಕ ಥಾರ್ನ್‌ಟನ್ ವೈಲ್ಡರ್ ಬರೆದ ಕಾದಂಬರಿಯೊಂದಿದೆ, ಏಛಿಛ್ಞಿ'  ಈಛಿಠಿಜ್ಞಿಠಿಜಿಟ್ಞ  ಎಂದು ಇದರ ಹೆಸರು. ಹೌದು, `ಸ್ವರ್ಗ ನನ್ನ ಗುರಿ'. ಇದು ಗಾಂಧಿಯವರ ಆದರ್ಶದಲ್ಲಿ ಬದುಕಬೇಕೆಂದು ಕನ್ಸರ್ವೇಟಿವ್ ಅಮೆರಿಕದಲ್ಲಿ ಒಬ್ಬ ಯುವಕ ನಡೆಸುವ ಸಾಹಸದ ಕತೆ. ಮನಸ್ಸಿಗೆ ನಾಟುವಂಥದು. 

ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು? ವಿಸ್ತಾರವಾದ ನಿಮ್ಮ ಓದಿನ ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೆ?

ಮೇಲೆ ನಾನೊಂದು ಪದ ಉಪಯೋಗಿಸಿದ್ದೆೀನೆ-`ದರ್ಶನ' ಎಂಬದು. ಇದು ಕುವೆಂಪು ಅವರ `ದಾರ್ಶನಿಕ ಕಾವ್ಯಮೀಮಾಂಸೆ'ಯಲ್ಲಿ ಬರುವ ಪದ. ಸಾಹಿತ್ಯ ವಿಮರ್ಶೆಯ ಮೂರು ಘಟ್ಟಗಳಲ್ಲಿ ದರ್ಶನವೇ ಶಿಖರಪ್ರಾಯದ್ದು ಎನ್ನುತ್ತಾರೆ ಕುವೆಂಪು. ಅತ್ಯುತ್ತಮ ಸಾಹಿತ್ಯ ಕೃತಿ ನಮಗೆ ದರ್ಶನವೊಂದನ್ನು ನೀಡುವಂತಿರಬೇಕು; `ದರ್ಶನ'ವೆಂದರೆ ಒಂದು ಮೆಟಫಿಸಿಕಲ್ ಕಲ್ಪನೆಯಲ್ಲ - ದರ್ಶನವೆಂದರೆ ಜೀವನ ದರ್ಶನ; ಮೇಲೆ ಉದಾಹರಿಸಿದ ಜನಪದ ಹಾಡಿನಲ್ಲಿ ಇರುವಂಥದು. ಹರ್ಮನ್ ಹೆಸ್‌ನ `ಸಿದ್ಧಾರ್ಥ' ಎಂಬ ಕಾದಂಬರಿ ಹೀಗಿದೆ ಎಂದು ಅನಿಸುತ್ತದೆ. ಹೆಸ್‌ನ `ಸಿದ್ಧಾರ್ಥ',  ಗೌತಮ ಬುದ್ಧನ ಮೇಲೆ ಆಧರಿಸಿದರೂ ಆತ ನಮ್ಮ ಪರಿಕಲ್ಪನೆಯ ಬುದ್ಧನಂತೆ ಅಲ್ಲ. ಇದು ನಮಗೆ ಬೇರೊಂದು ಜೀವನ ದರ್ಶನ ನೀಡುತ್ತದೆ.ಜೀವನ ವಿಮುಖತೆ ಬಿಟ್ಟು ಜೀವನ ಸ್ವೀಕಾರವನ್ನು ಕಲಿಸುತ್ತದೆ. ದೋಸ್ತೋವ್‌ಸ್ಕಿಯ ಮಹಾ ಕಾದಂಬರಿ `ಬ್ರದರ್ಸ್‌ ಕರಮಝೋವ್'ನಲ್ಲಿ ಡಿಮಿಟ್ರಿ, ಐವಾನ್, ಮತ್ತು ಅಲ್ಯೋಶಾ ಎಂಬ ಮೂವರು ಸೋದರರು ಬರುತ್ತಾರೆ. ಡಿಮಿಟ್ರಿ ಭೌತಿಕ, ಐವಾನ್ ತಾರ್ಕಿಕ, ಅಲ್ಯೋಶಾ ದೈವಿಕ ಪ್ರವೃತ್ತಿಯುಳ್ಳವರು. ಕಾದಂಬರಿಯುದ್ದಕ್ಕೂ ಈ ವಿಭಿನ್ನ ವಿಚಾರಗಳ ತಾಕಲಾಟವಿದೆ. ದೋಸ್ತೊವ್‌ಸ್ಕಿ ನಮ್ಮ ಮೇಲೆ ಯಾವ ಆಯ್ಕೆಯನ್ನೂ ಹೇರುವುದಿಲ್ಲ. ಆದರೆ ನಮ್ಮನ್ನು ಸದಾ ಕಾಲ ಕಾಡುವಂಥ ಪಾತ್ರಗಳನ್ನು ಸೃಷ್ಟಿಸಿದ್ದಾನೆ.

ಅತ್ಯುತ್ತಮ ಸಾಹಿತ್ಯ ಕೃತಿ ಹೇಗಿರುತ್ತದೆ ಎನ್ನುವುದಕ್ಕೆ ಒಂದು ರೆಸಿಪಿ ಅಂತೇನೂ ಇಲ್ಲ. ಆದ್ದರಿಂದಲೇ ಅದು ನಮ್ಮನ್ನು ನಾವು ನಿರೀಕ್ಷಿಸದ ರೀತಿಯಲ್ಲಿ ಬೆರಗುಗೊಳಿಸುವುದು. ಬೆಕೆಟ್ `ವೈಟಿಂಗ್ ಫಾರ್ ಗೊದೋ' ಬರೆಯುವ ಮೊದಲು ಯಾರಿಗೆ ಗೊತ್ತಿತ್ತು ನಾಟಕವೊಂದು ಹಾಗಿರುವುದು ಸಾಧ್ಯ ಎಂದು?

ನಿಮಗೆ ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ.

ಕಾರಂತರ `ಕುಡಿಯರ ಕೂಸು', `ಮರಳಿ ಮಣ್ಣಿಗೆ', ಅನಕೃ ಅವರ `ನಟಸಾರ್ವಭೌಮ' ಮತ್ತಿತರ ಕಾದಂಬರಿಗಳು, ತರಾಸು ಅವರ `ನಾಗರ ಹಾವು', `ಕಂಬನಿಯ ಕುಯಿಲು', `ರಕ್ತರಾತ್ರಿ', ಎಂ. ರಾಮಮೂರ್ತಿಯವರ ಪತ್ತೇದಾರಿ ಕಾದಂಬರಿಗಳು.

ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಕನ್ನಡದ ಪ್ರಮುಖ ಲೇಖಕರಾಗಿ, ಬಹುಕಾಲ ಕನ್ನಡನಾಡಿನ ಹೊರಗೆ ಇದ್ದ ನಿಮಗೆ ಕನ್ನಡದ ಸಂದರ್ಭದಲ್ಲಿ ಈ ಕುರಿತು ಏನೆನ್ನಿಸುತ್ತದೆ? ಮತ್ತು ಇದು ಜಾಗತಿಕವಾಗಿ ಹೇಳುವ ರೂಢಿಯ ಮಾತೆ?

ಈಗ ಪುಸ್ತಕಗಳು ಸಾಕಷ್ಟು ಪ್ರಕಟವಾಗುತ್ತಿವೆ, ಆದರೆ ಓದು ಕಡಿಮೆಯಾಗುತ್ತಿದೆ ಎನ್ನುವುದು ನಿಜ. ಎಂದರೆ ಅಕ್ಷರವಿದ್ಯೆ ಹೆಚ್ಚೆಚ್ಚು ಸಾರ್ವತ್ರಿಕವಾಗುತ್ತ ಬರುತ್ತಿರುವ ಪ್ರಮಾಣದಲ್ಲಿ  ಪುಸ್ತಕಗಳ ಪ್ರಚಾರ ಆಗುತ್ತಿಲ್ಲ. ಈ ಮೊದಲು ಓದುತ್ತಿದ್ದವರೂ ಈಗ ಓದು ಕಡಿಮೆ ಮಾಡಿದ್ದಾರೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯೂ ಹೀಗೆಯೇ.

ಯಾಕೆಂದರೆ, ಪತ್ರಿಕೆ, ಟೀವಿ, ಇಂಟರ್‌ನೆಟ್, ಸೆಲ್‌ಫೋನ್ ಇತ್ಯಾದಿ ಇತರ ಮಾಧ್ಯಮಗಳು ಓದುಗನ ಸಮಯವನ್ನು ಕಿತ್ತುಕೊಳ್ಳುತ್ತಿವೆ. ಇಂಟರ್‌ನೆಟ್‌ನಿಂದಾಗಿ ಕೆಲವು ಪತ್ರಿಕೆಗಳು ಮುಚ್ಚಿವೆ. ಆದರೆ ಇಂಟರ್‌ನೆಟ್‌ನ ಓದು ಕೂಡ ಓದೇ ಅಲ್ಲವೇ ಎಂದು ಕೇಳಬೇಕಾಗುತ್ತದೆ.ಆದರೆ `ಮರಳಿ ಮಣ್ಣಿಗೆ' ಅಥವಾ `ವಾರ್ ಅಂಡ್ ಪೀಸ್'ನಂಥ ಬೃಹತ್ತಾದ ಕೃತಿಗಳನ್ನು ಇಂಟರ್‌ನೆಟ್‌ನಲ್ಲಿ ಓದುವ ಪರಿಶ್ರಮ ತೆಗೆದುಕೊಳ್ಳುವ ಓದುಗರು ಬೇಕಷ್ಟೆ? ಇಂಥ ಕೃತಿಗಳನ್ನು ಮುದ್ರಿತ ರೂಪದಲ್ಲಿ ಓದುವುದೇ ಸೂಕ್ತ. ಆದರೆ ಇಂದು ಪುಸ್ತಕ ಕೈಯಲ್ಲಿ ಹಿಡಿಯುವ ಅಭ್ಯಾಸ ಕಡಿಮೆಯಾಗುತ್ತಿದೆ; ಕಂಪ್ಯೂಟರ್ ಮುಂದೆ ಕೂರುವ ಅಭ್ಯಾಸವೇ ಹೆಚ್ಚು. ಕನೆಕ್ಟಿವಿಟಿ ಹೆಚ್ಚಾದಂತೆ ಯಾವುದೇ ಒಂದು ಸಂಗತಿಯ ಮೇಲೆ ಹೆಚ್ಚು ಏಕಾಗ್ರತೆ ಸಾಧ್ಯವಾಗುವುದಿಲ್ಲ ಅನಿಸುತ್ತದೆ.

ಅಧ್ಯಾಪನದಲ್ಲಿ ಸತತವಾಗಿ ತೊಡಗಿಸಿಕೊಂಡ ನೀವು ಓದು, ಬರಹಗಳಿಗೆ ಸಮಯ ಹೊಂದಿಸಿಕೊಂಡ ಬಗೆ ಹೇಗೆ?

ಹೇಗೆಂದೇ ಗೊತ್ತಾಗುತ್ತಿಲ್ಲ. ಓದುವ ಮತ್ತು ಬರೆಯುವ ವಿಷಯದಲ್ಲಿ ನಾನೇನೂ ವೇಳಾಪಟ್ಟಿ ಹಾಕಿಕೊಂಡವನಲ್ಲ.  ಪಾಠ ಮಾಡುವ ಒಂದು ಸಂಗತಿಯ ಹೊರತಾಗಿ ಇನ್ನು ಯಾತರಲ್ಲೂ ನಾನೊಬ್ಬ ಶಿಸ್ತುಬದ್ಧ ವ್ಯಕ್ತಿಯೂ ಅಲ್ಲ. ಪಾಠವಿಲ್ಲದಿರುವಾಗ ಓದು ಅಥವಾ ಬರಹ. ಮನಸ್ಸಿನಲ್ಲಿದ್ದದ್ದು  ಮನಸ್ಸು ಬಂದಾಗ. ಹೆಚ್ಚು ತಿದ್ದಿ ತೀಡುವುದು ನನ್ನಿಂದ ಸಾಧ್ಯವಾಗದು. ಅಪೂರ್ಣತೆ, ಅಪರಿಪಕ್ವತೆ ಇತ್ಯಾದಿಗಳಲ್ಲೇ ಏನಿದ್ದರೂ ಆಗಬೇಕು. ಬಹಳ ಕೆಲಸಗಳ ಒತ್ತಡದಲ್ಲೇ ನಾನು ಬರೆದುದು.   

ಈಗ ಏನನ್ನು ಓದುತ್ತಿದ್ದೀರಿ, ಬರೆಯುತ್ತಿದ್ದೀರಿ?

ಈಗಷ್ಟೆ ವಿಲಿಯಂ ಡಾರ್ಲಿಂಪ್ಲ್ ಅವರ `ದ ಲಾಸ್ಟ್ ಮೊಘಲ್' ಮತ್ತು ಜಾರೆಡ್ ಡೈಮಂಡ್ ಅವರ `ಗನ್ಸ್, ಜರ್ಮ್ಸ, ಏಂಡ್ ಸ್ಟೀಲ್' ಓದಿ ಮುಗಿಸಿದೆ; ಮೊದಲನೇದು ಮೊಘಲ್ ಮನೆತನದ ಕೊನೆಯ ರಾಜನಾಗಿದ್ದ ಬಹಾದೂರ್ ಶಾನಿಗೆ ಸಂಬಂಧಿಸಿದ್ದು, ಎರಡನೇದು ಮಾನವ ಸಮಾಜಗಳು ವಿಭಿನ್ನವಾಗಿ ಬೆಳೆದು ಬಂದ ಚರಿತ್ರೆಗೆ. ಈ ಕೃತಿಗಳ ಕುರಿತು ಒಂದು ಪರಿಚಯಾತ್ಮಕ ಲೇಖನ ಬರೆದಿದ್ದೇನೆ. ಒಳ್ಳೆಯ ಕೃತಿಗಳನ್ನು ಓದಿದಾಗ ಆ ಬಗ್ಗೆ ಇತರರಿಗೆ ಹೇಳಬೇಕೆನಿಸುತ್ತದೆ.

ಮುಂದೆ ಓದುವುದಕ್ಕೆ ನನ್ನ ಶೆಲ್ಫಿನಲ್ಲಿ ಹಲವಾರು ಪುಸ್ತಕಗಳಿವೆ: ಮಾರ್ಸೆಲ್ ಪ್ರೂಸ್ಟನ ಮಹಾಕಾದಂಬರಿಯಿದೆ, ಅದೇ ರೀತಿ ರಾಬರ್ಟ್ ಮ್ಯುಸಿಲ್‌ನದು, ಆಮೇಲೆ ಫ್ರೆಂಚ್ ಮಹಾಕ್ರಾಂತಿಯ ಕುರಿತಾದ ಒಂದು ಬೃಹದ್ ಗ್ರಂಥ, ಈ ರೀತಿ ಹಲವಾರು. ಅವುಗಳಲ್ಲಿ ಯಾವುದಾದರೂ ಒಂದನ್ನು ಎತ್ತಿಕೊಳ್ಳಬೇಕು. ಯಾರ ಒತ್ತಾಯವೂ ಇಲ್ಲ- ನನ್ನ ಆಂತರಿಕ ಒತ್ತಾಸೆ ಮಾತ್ರವೇ.

ಜನ ಅಂದುಕೊಳ್ಳಬಹುದು, ನಾನೀಗ ಕೆಲಸದಿಂದ ನಿವೃತ್ತನಾಗಿರುವ ಕಾರಣ ಓದಲು ಬರೆಯಲು ನನಗೆ ತುಂಬಾ ಸಮಯವಿದೆ ಎಂದು. ಇದು ಕೇವಲ ಸಮಯದ ಪ್ರಶ್ನೆಯಲ್ಲ. ನನ್ನ ಜೀವನದ ಬಹು ಮುಖ್ಯ ಭಾಗವಾಗಿದ್ದ ಶೈಕ್ಷಣಿಕ ವಾತಾವರಣ ಒಮ್ಮೆಲೇ ಇಲ್ಲವಾಗಿದೆ. ಒಬ್ಬಂಟಿಯಾಗಿದ್ದೇನೆ. ಏನೋ ಕಳಕೊಂಡಂತೆ ಅನಿಸುತ್ತಿದೆ. ಓದಲು ಬರೆಯಲು ನನಗಿದೊಂದು ಡಿಮೋಟಿವೇಶನ್. ಆದರೂ ಈಗಾಗಲೇ ಎತ್ತಿಕೊಂಡ ಕೆಲವು ಕೆಲಸಗಳಿವೆ. ಉದಾಹರಣೆಗೆ, ಕೆಲವು ಅನುವಾದಗಳು. ಒಂದು ಕವನ ಸಂಕಲನ ಕಲೆಹಾಕುವ ವಿಚಾರವಿದೆ. ಈ ಮಧ್ಯೆ ಕೆಲವೊಮ್ಮೆ ಲೇಖನಗಳನ್ನು ಕೂಡ ಬರೆಯುತ್ತೇನೆ. ವಿಚಾರಗಳ ಬೆನ್ನು ಹತ್ತಿ.

ನೀವು ಬರೆಯಲು ಆರಂಭಿಸಿದ ದಿನಮಾನಗಳಿಗೆ ಹೋಲಿಸಿದರೆ ಈಗಿನ ಓದುಗರ ಪ್ರತಿಕ್ರಿಯೆ ಹೇಗಿದೆ ?

ಆಗ ಓದುಗರ ಪ್ರತಿಕ್ರಿಯೆ ಉತ್ಸಾಹದಾಯಕವಾಗಿತ್ತು. ಈಗಿನ ಓದುಗರ ಪ್ರತಿಕ್ರಿಯೆ ಏನೆಂದು ನನಗೆ ತಿಳಿಯದು. ಎಪ್ಪತ್ತನೇ ದಶಕದ ಮಧ್ಯಭಾಗದಲ್ಲಿ ನಾನು ಹೈದರಾಬಾದಿಗೆ ಬಂದೆ. ಕೆಲವು ಕಾಲ ವಿದೇಶಗಳಲ್ಲೂ ಇದ್ದೆ. ಕರ್ನಾಟಕದೊಳಗೆ ಕಾಲಿಟ್ಟುದೇ ಅಪರೂಪ. ಈಗ ನಾನು ಬರೆದುದನ್ನು ಯಾರು ಓದುತ್ತಾರೆ, ಅವರಿಗೆ ಏನನಿಸುತ್ತದೆ ಎನ್ನುವುದು ನನಗೆ ಗೊತ್ತಾಗುವುದಿಲ್ಲ.

ಈಗಿನ ಓದುಗರೇ ಹೀಗೆಯೇ ಅಥವಾ ನನ್ನ ಮಟ್ಟಿಗೆ ಹೀಗೆಯೇ ಗೊತ್ತಿಲ್ಲ. ಅಥವಾ ಓದುಗರು ಲೇಖಕರಿಗೆ ತಿಳಿಸಬೇಕು ಎಂದು ಬಯುಸುವುದಾದರೂ ಯಾಕೆ? ನಾನು ಬೇರೊಂದು ಗ್ರಹದಲ್ಲಿ ಕುಳಿತುಕೊಂಡು ಬರೆದು ಕೆಳಗೆ ಹಾಕುವಂತೆ ಅನಿಸುತ್ತದೆ! ಹಿಂದೆ ಪತ್ರಿಕೆಗಳಲ್ಲಿ ಪೂರ್ಣಪ್ರಮಾಣದ ಪುಸ್ತಕ ವಿಮರ್ಶೆ ಬರುತ್ತಿತ್ತು. ಈಗ ಅದು ಮೊಟಕುಗೊಂಡಿದೆ ಅನಿಸುತ್ತದೆ. ಎಲ್ಲವೂ ಚಿಕ್ಕ ಚಿಕ್ಕದಾಗುತ್ತಿವೆ!

ನಾನಾದರೆ ಸಂಕೋಚ ಪ್ರವೃತ್ತಿಯ ಮನುಷ್ಯ. `ನನ್ನ ಪುಸ್ತಕ ಬಂದಿದೆ, ಓದಿ' ಎಂದು ಯಾರನ್ನೂ ಕೇಳುವುದಿಲ್ಲ. ತಾವು ಬರೆದುದನ್ನು ಕೆಲವರು ನನಗೆ ಈಮೇಲ್ ಮೂಲಕ ಕಳಿಸುತ್ತಾರೆ; ನಾನು ಅದನ್ನೂ ಮಾಡಲಾರೆ. ಕರ್ನಾಟಕದಿಂದ ದೂರವಿರುವ ನನಗೆ ಪುಸ್ತಕ ಪ್ರಕಟಣೆಯೇ ದೊಡ್ಡ ಸಂಗತಿ. ಬರೆದು ಪ್ರಕಟಿಸಿದರೆ ಮುಗಿಯಿತು.

ಮಕ್ಕಳು ಓದುವಂತೆ ಮಾಡಲು ಯಾವ ಲೇಖಕ/ ಕೃತಿಯನ್ನು ನೀವು ಶಿಫಾರಸು ಮಾಡಲು ಬಯಸುತ್ತೀರಿ?

ಪಂಜೆ ಮಂಗೇಶರಾಯರ ಕತೆ, ಕವಿತೆಗಳನ್ನು. ಚಂದಮಾಮದ ಸಂಪುಟಗಳು ಸಿಗುವುದಾದರೆ ಅವುಗಳನ್ನು.

ಪ್ರತಿಕ್ರಿಯಿಸಿ (+)