ಓದು-ಬರಹ-ತಳಮಳ

7
ಆತ್ಮಕಥೆಯ ಪುಟಗಳು

ಓದು-ಬರಹ-ತಳಮಳ

Published:
Updated:

ನಾನು ಆನರ್ಸ್ ವಿದ್ಯಾರ್ಥಿಯಾಗಿದ್ದ ದಿನಗಳಿಂದ ನನ್ನ ಒಳಬಾಳನ್ನು ಬೆಳೆಸಿದ ಇಬ್ಬರು ಪ್ರತಿಭಾವಂತರು ಈ ರತ್ನ ಮತ್ತು ವಿಶ್ವನಾಥ ಮಿರ್ಲೆ. ನನ್ನಲ್ಲಿ ಕಾವ್ಯದ ಪ್ರೀತಿ ಬೆಳೆದದ್ದೇ ವಿಶ್ವನಾಥನ ಜೊತೆ ಹಗಲು ರಾತ್ರಿ ಎನ್ನದೆ, ಮೈಸೂರಿನ ಬೀದಿ ಬೀದಿಗಳಲ್ಲಿ ಅಲೆದಾಡುವ ನಮ್ಮ ಗಂಭೀರವಾದ ಚರ್ಚೆಗಳಲ್ಲಿ.ನಾವು ಈಗ ಈ ಬೀದಿ ಬದಿಯಲ್ಲಿ ನಿಂತು ಸಿಗರೇಟು ಸೇದುತ್ತ ಈ ಪದ್ಯದಿಂದ ಪಡೆಯುತ್ತಿದ್ದ ಅರ್ಥವೇ ಅದರ ನಿಜವಾದ ಅರ್ಥವಿರಬಹುದೆಂಬ ಆತ್ಮನಂಬಿಕೆ, ಎಳೆಯರಾಗಿದ್ದ ನಮಗೆ ಆ ದಿನಗಳಲ್ಲಿ. ಗೋಪಾಲಕೃಷ್ಣ ಅಡಿಗ, ರಾಮಚಂದ್ರಶರ್ಮ, ಎಲಿಯಟ್ - ಈ ಕವಿಗಳ ಮುಖ್ಯ ಕವನಗಳ ನನ್ನ ಗ್ರಹಣ ನಡೆದದ್ದು ವಿಶ್ವನಾಥನ ಜೊತೆ.

ನನ್ನ ಮೊದಲ ಕಥೆಗಳ ನಾಟಕೀಯ ಸ್ವಾರಸ್ಯ ಅರಿತದ್ದು ರತ್ನನ ಜೊತೆ. ರತ್ನ ಸುಮ್ಮನೇ ಹಾಗೆಲ್ಲ ನನ್ನನ್ನು ಒಪ್ಪಿಕೊಳ್ಳುವವನಲ್ಲ. ನನ್ನ ಕ್ಲಾಸ್‌ಮೇಟ್ ಆಗಿದ್ದ, ಈಚೆಗೆ ತೀರಿಕೊಂಡ ಮಿತಭಾಷಿ, ಭಾವಸಂಪನ್ನನಾಗಿದ್ದ ಸೀತಾರಾಮಶಾಸ್ತ್ರಿ ಏನಾದರೂ ಬರೆದರೆ, ನನಗಿಂತ ಭಿನ್ನವಾಗಿ ಇನ್ನೊಂದು ಆಳದಲ್ಲಿ ಬರೆಯಬಲ್ಲವನೊಬ್ಬನಿದ್ದಾನೆಂದು ರತ್ನ ತೋರಿಸಿಕೊಡುತ್ತಿದ್ದ. ನಾನು ಕೊಡುವುದಕ್ಕಿಂತ ಹೆಚ್ಚು ಮಹತ್ವವನ್ನು ಟಿ.ಜಿ. ರಾಘವನ ಬರವಣಿಗೆಗೆ ರತ್ನ ಕೊಡುತ್ತಿದ್ದ.

ಇಂಗ್ಲಿಷ್, ಕನ್ನಡ ಎರಡರಲ್ಲೂ ಚೆನ್ನಾಗಿ ಬರೆಯಬಲ್ಲ ರತ್ನ ಮತ್ತು ವಿಶ್ವನಾಥ - ಇಬ್ಬರೂ ವಿ.ಎಸ್. ರಾಘವನ್ ಜೊತೆ ಆಗ ಹೊರತರುತ್ತಿದ್ದ ಮಹಾರಾಜ ಕಾಲೇಜಿನ ಪತ್ರಿಕೆ ್ಖಚ್ಟಜಿಠಿ ಜಿಞಛಿ. ನಮ್ಮ ಹೆಚ್ಚಿನ ಕಾಲ ಕ್ಲಾಸ್ ರೂಮಿನ ಬದಲಾಗಿ ಈ ಪತ್ರಿಕೆಯ ಪ್ರಕಟಣೆಗೆ ಸಹಕರಿಸುವುದರಲ್ಲೂ, ರತ್ನ ಸಂಪೂರ್ಣ ತನ್ನನ್ನು ತೊಡಗಿಸಿಕೊಂಡಿದ್ದ `ಮಿತ್ರಮೇಳ'ದ ನಾಟಕಗಳ ತಯಾರಿಯಲ್ಲೂ ಕಳೆಯುತ್ತಿತ್ತು.

ನಾವು ಮನುಷ್ಯ ಸಂಬಂಧದ ಎಲ್ಲ ರುಚಿಗಳನ್ನೂ ಕಂಡುಕೊಂಡದ್ದು ಹೀಗೆ ಕಾಲಕಳೆಯುವುದರಲ್ಲಿ.

ವಿಶ್ವನಾಥನಿಗೆ ಇದ್ದ ಒಂದು ಹವ್ಯಾಸವನ್ನೋ ಅಥವಾ ಒಂದು ಚಟವನ್ನೋ ಇಲ್ಲಿಯೇ ಬರೆದು ಮುಂದುವರೆಯಬೇಕು. ರತ್ನನಲ್ಲಿ ಹುಡುಗಾಟಿಕೆ ಇದ್ದಂತೆಯೇ ವಿಶ್ವನಾಥನೂ ಇನ್ನೂ ಚೇಷ್ಟೆ ಮಾಡುವುದನ್ನು ಬಿಟ್ಟುಕೊಡದ ಬಾಲಕನಾಗಿಯೇ ಬಹಳ ಕಾಲ ಉಳಿದಿದ್ದ.

ಮಹಾರಾಜ ಕಾಲೇಜಿನಿಂದ ಅವನ ಕಣ್ಣಿಗೆ ಬಿದ್ದ ನಾಯಿಯೊಂದನ್ನು ಆರಿಸಿಕೊಂಡು ಅದರ ಮೇಲೊಂದು ಪುಟ್ಟ ಕಲ್ಲನ್ನು ಗುರಿತಪ್ಪದಂತೆ ಎಸೆಯುವುದರಿಂದ ಈ ಚೇಷ್ಟೆ ಶುರುವಾಗುತ್ತಿತ್ತು. ಅದು ಬಾಲ ಮುದುರಿಸಿ ಓಡಲು ತೊಡಗಿದಂತೆ ಅದು ಹೋಗುವ ದಿಕ್ಕಿನಲ್ಲೇ ಅವನೂ ನಡೆಯುತ್ತಿದ್ದುದು. ನಡೆಯುವಾಗ ಯಾವುದಾದರೂ ಪದ್ಯವನ್ನು ನೆನಸಿಕೊಂಡು ನಾನು ಬೋರ್ ಹೊಡೆಯಲು ತೊಡಗಿದ್ದೇ ವಿಶ್ವನಾಥ ಏಕಕಾಲದಲ್ಲಿ ನನ್ನ ಕಾವ್ಯವ್ಯಸನದಲ್ಲೂ, ಅವನ ಶ್ವಾನವ್ಯಸನದಲ್ಲೂ ಏಕಾಗ್ರನಾಗಿ ಒಳಗೊಂಡವನಂತೆ ನಾಯಿ ಹೋಗುವ ದಿಕ್ಕಿನಲ್ಲೇ ನಡೆಯುತ್ತಿದ್ದ.

ನಾನು ಕವಿತೆಯಲ್ಲಿ ಮೈ ಮರೆತರೆ ವಿಶ್ವನಾಥನ ಒಂದು ಕಣ್ಣು ಮಾತ್ರ ನಾಯಿ ಓಡಿದ ದಿಕ್ಕಿನ ಮೇಲೇ ಇರುತ್ತಿತ್ತು. ಅದು ಅಡಗಿರುವ ಬೀದಿ ತುದಿಯನ್ನು ನಾವೂ ತಲುಪಿದ್ದೇ ವಿಶ್ವನಾಥ ಇನ್ನೊಂದು ಕಲ್ಲು ಎಸೆಯುತ್ತಿದ್ದ. ಹೀಗೆ ನಾಯಿ ನಿರ್ಧರಿಸಿದ ದಿಕ್ಕಿನಲ್ಲಿ ನಾವು ನಡೆದಾಡುತ್ತ, ಪದ್ಯಗಳನ್ನು ಚರ್ಚಿಸುತ್ತ, ಕೊನೆಗೆ ನಾವು ಹೊರಟಲ್ಲಿಗೇ ನಾಯಿಯು ಬರುವಂತೆ ನೋಡಿಕೊಂಡು ಅದಕ್ಕೆ ಎರಡು ಬಿಸ್ಕತ್ತು ಕೊಟ್ಟು ನಾನು, ರತ್ನ, ವಿಶ್ವ ಹಾಸ್ಟೆಲಿನಲ್ಲಿ ಒಟ್ಟಾಗಿ ಆ ದಿನದ ನಮ್ಮ ಸಾಹಸಗಳನ್ನು ಹಂಚಿಕೊಳ್ಳುತ್ತಿದ್ದೆವು.

ವಿಶ್ವನಾಥನಿಗೆ ಈ ಬಗೆಯ ಕಾವ್ಯಾವಧಾನದಲ್ಲಿ ಯಾವ ಸ್ವಾರ್ಥವೂ ಇರುತ್ತಿರಲಿಲ್ಲ. ಅವನಿಗೆ ಬರೆಯುವುದರಲ್ಲಿ ಮೋಹವಿರಲಿಲ್ಲ; ತನ್ನ ಮಾತನ್ನು ಕೇಳಿದವರು ತನ್ನನ್ನು ಹೊಗಳಬೇಕೆಂಬ ಆಸೆಯಿರಲಿಲ್ಲ; ಪರೀಕ್ಷೆಯಲ್ಲಿ ಚೆನ್ನಾಗಿ ಪಾಸಾಗಬೇಕೆಂಬ ಆಸೆಯೂ ಇರಲಿಲ್ಲ. ನಾನೇ ಬಲವಂತಮಾಡಿ ಅವನನ್ನು ಚಾಮುಂಡಿಪುರದ ಸಾರ್ವಜನಿಕ ಹಾಸ್ಟೆಲಿನ ರೂಮೊಂದರಲ್ಲಿ ಹಗಲು ರಾತ್ರೆ ಕೂರಿಸಿಕೊಂಡು ಪಾಸಾಗುವುದಕ್ಕೆ ಬೇಕಾದಷ್ಟನ್ನು ಓದಿಸಿದೆ.

`21ನೆ ಸಂಜೆ ಸಹೃದಯೀ ಬಳಗದಲ್ಲಿ ವಿಶ್ವ ನನ್ನ ಮೇಲಿನ ಅಭಿಮಾನದಿಂದ ಕಥೆಗಳ ಬಗೆಗೆ ವಿಮರ್ಶೆ ಬರೆದು ಓದಿದ. ವಿಮರ್ಶೆ ನಮ್ಮಿಬ್ಬರಿಗೂ ತೃಪ್ತಿದಾಯಕವಲ್ಲದಿದ್ದರೂ ವಿಶ್ವನ ಬಗ್ಗೆ ನಾನು ತುಂಬ ಕೃತಜ್ಞನಾಗಿದ್ದೇನೆ. ನನ್ನ ಸಾಹಿತ್ಯಕ್ಕೆ ಅವನ ಸ್ನೇಹ ತುಂಬ ನೆರವಾಗಿ ಬಂದಿದೆ.' - ಎಂದು ದಿನಾಂಕ 21 ಸೆಪ್ಟೆಂಬರ್ 1954ರ ನನ್ನ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದೇನೆ.ವಿಶ್ವನಾಥನ ಶಕ್ತಿಯಿದ್ದದ್ದು ಕಾವ್ಯದ ಸ್ಪಂದನದಲ್ಲಿ ಎಂದೆ. ಇದು ಬರಿಯ ಮಾತಾಗಬಾರದೆಂಬುದಕ್ಕೆ ಹೇಳುತ್ತೇನೆ. ಸಂಗೀತಗಾರ ಅಪಸ್ವರವನ್ನು ಥಟ್ಟನೇ ಗುರುತಿಸುವಷ್ಟು ಸಹಜವಾಗಿ ವಿಶ್ವನಾಥನಿಗೆ ಒಂದು ಪದ್ಯ ಠೊಳ್ಳೊ ನಿಜವೋ ಗೊತ್ತಾಗುತ್ತಿತ್ತು. ಇಂಗ್ಲಿಷಿನಲ್ಲಿ ಒಂದು ಮಾತಿದೆ, `ಅಭಿಪ್ರಾಯಗಳಿಂದ ಕೆಡದ ಮನಸ್ಸು ತಾಜಾ ಆಗಿರುತ್ತದೆ' ಎಂದು, ವಿಶ್ವನಾಥ ಕಾವ್ಯಕ್ಕೂ ಸಂಗೀತಕ್ಕೂ ತಾಜಾ ಆಗಿ ಸ್ಪಂದಿಸುತ್ತ ಇದ್ದಂತೆ, ರತ್ನ ನಾಟಕದಲ್ಲಿ ಅನನ್ಯವಾದ್ದನ್ನು ಸಾಧಿಸಿದವನು; ಸ್ವತಃ ಕೃತಿಕಾರನಾಗಿ, ನಿರ್ದೇಶಕನಾಗಿ, ನಟನಾಗಿ.

ಬಿ.ವಿ. ಕಾರಂತರಿಗಿಂತ ಹೆಚ್ಚು ಆಳವಾಗಿ ರತ್ನ ಜಿ.ಬಿ. ಜೋಷಿಯವರ ನಾಟಕಗಳನ್ನು ಅರ್ಥಮಾಡಿಕೊಂಡಿದ್ದನೆಂದೇ ನನ್ನ ಭಾವನೆ. ಬಿ.ವಿ. ಕಾರಂತರು ರಂಗನಿಷ್ಠರು, ರತ್ನ ಮುಖ್ಯವಾಗಿ ಕೃತಿನಿಷ್ಠ. ರಂಗದ ಮೇಲೆ ನಾಟಕ ರಂಜಿಸುತ್ತಲೇ ಇರಬೇಕೆಂಬ ಹಟ ರತ್ನನಿಗೆ ಇರಲಿಲ್ಲ.

ಒಂದು ದಿನ ನಾನು ಮತ್ತು ವಿಶ್ವ ಎಲ್ಲಿಗೆ ಹೋಗುತ್ತಿದ್ದೇವೆ ಅನ್ನುವುದನ್ನು ಮೈಮರೆಯುವಷ್ಟು ಆಳವಾಗಿ ಯಾವುದರ ಬಗ್ಗೆಯೋ ಚರ್ಚೆಯಲ್ಲಿ ತೊಡಗಿದ್ದೆವು.

ಅವನು ನಿಂತು ನನ್ನ ಹೆಗಲ ಮೇಲೆ ಕೈ ಹಾಕಿ `ಅನಂತು ಒಂದು ವಿಷಯ ಹೇಳ್ತೀನಿ, ನಾನು ಯಾವತ್ತೂ ಒಬ್ಬ ದೊಡ್ಡ ಬರಹಗಾರ ಆಗಲ್ಲ, ಆದರೆ ನೀನು ಆಗ್ತೀಯ. ಒಂದು ಕ್ಷಣ ನೀನು ಬೇರೆ ಯೋಚನೆ ಮಾಡದೇ ಯಾವುದೋ ವಿಚಾರದಲ್ಲಿ ಸತತವಾಗಿ ಮಗ್ನನಾಗಿರುತ್ತೀಯ. ಅದು ನನಗೆ ಆಗಲ್ಲ' ಅಂದ. ಸೆಕೆಂಡ್ ಆನರ್ಸ್‌ನಲ್ಲಿದ್ದಾಗ ಅವನು ನನಗೆ ಹೇಳಿದ ಮಾತು ಇದು.

ಒಂದು ರೀತಿ ನನ್ನ ಒಳಗಿಂದ ಬೆನ್ನು ತಟ್ಟಿದ ಹಾಗೆ ಅನ್ನಿಸಿತು, ಯಾರೋ ಗುರುತಿಸಿದ್ದಾರೆ ಈ ಶಕ್ತಿಯನ್ನ ಅನ್ನುವ ಸಂತೋಷ ಆಗಿತ್ತು. ಮಿರ್ಲೆ ನನ್ನ ಜೊತೆಗೆ ಇಂಗ್ಲೆಂಡಿಗೆ ಓದಲು ಬಂದ. ಇಂಗ್ಲಿಷ್ ಫೋನೆಟಿಕ್ಸ್ ಕಲಿಯುವುದಕ್ಕೆ ಅವನಷ್ಟು ಜಾಣ ಯಾರೂ ಇರಲಿಲ್ಲ. ರೀಜನಲ್ ಕಾಲೇಜಿನಲ್ಲಿ ನನಗೊಬ್ಬ ಇಂಗ್ಲಿಷ್‌ಮನ್ ಜೊತೆಯಾಗಿದ್ದ. ಅವನು ಹೇಳುತ್ತಿದ್ದ `ವಿಶ್ವನಾಥ ಮಿರ್ಲೆ ಮಾತಾಡ್ತಾ ಇದ್ದರೆ, ಇಂಡಿಯನ್ನೊ, ಇಂಗ್ಲಿಷ್‌ಮನ್ನೊ ಗೊತ್ತಾಗಲ್ಲ' ಅಂತ. ಅಷ್ಟು ಪರ್ಫೆಕ್ಟ್ ಆಗಿತ್ತು ಅವನ ಇಂಗ್ಲಿಷ್. ಈ ಮಾತಿನಿಂದ ಮಿರ್ಲೆ ನಾಚಿಕೊಂಡಿದ್ದ.

ರತ್ನ ಮಾತ್ರ ಆನರ್ಸ್ ಪರೀಕ್ಷೆಗೆ ತಯಾರಾಗಲೇ ಇಲ್ಲ. ಪರೀಕ್ಷೆಗೆ ಅಗತ್ಯವಾದ್ದನ್ನು ಓದಲೆಂದು ಕುಳಿತ ರತ್ನ ಕೋಲ್‌ರಿಡ್ಜನ `Ancient Mariner’ ಓದಬೇಕಾಯಿತು, ಓದಿದ. ಓದಿ ಎಷ್ಟು ಖುಷಿಯಾಗಿಬಿಟ್ಟ ಎಂದರೆ ಬರೇ ಅದೊಂದೇ ಪದ್ಯವನ್ನು ಉರುಹಚ್ಚುವಂತೆ ಓದಿ ಓದಿ ಮರುಳಾದ. ಆ ದಿನಗಳಲ್ಲಿ ಬಹು ಬಿಗಿಯ ಪರೀಕ್ಷೆ ನಡೆಯುತ್ತಿತ್ತು. ನಮಗಿಂತ ಬುದ್ಧಿಶಕ್ತಿಯಲ್ಲಿ ಕಿಂಚಿತ್ತೂ ಕಮ್ಮಿಯಿಲ್ಲದ ರತ್ನನಿಗೆ ಆನರ್ಸ್ ಸಿಗಲಿಲ್ಲ, B.A. Consolation ಸಿಕ್ಕಿತು.

ನಾವೆಲ್ಲರೂ ಡಿಗ್ರಿ ಪಡೆಯಲು ಬಂದಾಗ ನಮಗೆಲ್ಲರಿಗೂ ತೋರುವಂತೆ ರತ್ನ ಒಂದು ಬಿಳಿಯ ಕರ್ಚೀಪನ್ನು ತಂದಿದ್ದ. ಇದು ಕಣ್ಣೀರು ಒರೆಸಿಕೊಳ್ಳಲಿಕ್ಕೆ ಅಂತ ನನಗೆ ಕೊಟ್ಟಿರುವ ಕಾನ್ಸೋಲೇಷನ್ ಎಂದು ನಮ್ಮೆಲ್ಲರನ್ನೂ ನಗಿಸಿದ್ದ. ಆನಂತರ ಅಮೆರಿಕಾದಲ್ಲಿ ಬಹು ದೊಡ್ಡ ಶ್ರವಣತಜ್ಞನಾಗಿ ಕಲಿತು ಮೈಸೂರಿನ ಪ್ರಸಿದ್ಧ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಇದೇ ರತ್ನ.ಬೇಸಿಗೆ ರಜಾ ಮುಗಿದಿದೆ. ನಾವೆಲ್ಲರೂ ನೂರಡಿ ರಸ್ತೆಯ ಮೊದಲಲ್ಲೇ ಇದ್ದ ಹೊಟೇಲಿನಲ್ಲಿ ಸೇರಿದ್ದೇವೆ. ಸದಾ ಹಸಿದಿರುತ್ತಿದ್ದ ನಮಗೆ ಈ ಹೊಟೇಲಲ್ಲಿ ಸಾಲದ ಲೆಕ್ಕ ಇತ್ತು. ಒಂದು ದಿನ ನಾನು ಹೊಟೇಲಿನ ಪುಸ್ತಕದಲ್ಲಿ ಎಷ್ಟು ಸಾಲವೆಂದು ಬರೆದರೆ, ಇನ್ನೊಂದು ದಿನ ರತ್ನ ಬರೆಯುವುದು - ಹೀಗೆ. ಯಾರಿಗೆ ಮೊದಲು ಮನಿಆರ್ಡರ್ ಬರುತ್ತದೋ ಅವರು ಎಲ್ಲ ಲೆಕ್ಕ ಚುಕ್ತ ಮಾಡುವುದು. ನಮ್ಮ ಜೊತೆ ಟಿ.ಜಿ.ರಾಘವನೂ ಸಾಮಾನ್ಯವಾಗಿ ಇರುತ್ತಿದ್ದ.

ಹಣಕಾಸಿನಲ್ಲಿ ಸ್ವಲ್ಪ ಬಲಿಷ್ಠನೆಂದರೆ ನನ್ನ ಹೆಸರಿನವನೇ ಆದ, ನನ್ನ ಮೊದಲ ಪುಸ್ತಕವನ್ನು ಪ್ರಕಟಿಸಿದಾತ, ಸಿಂಧುವಳ್ಳಿ ಅನಂತಮೂರ್ತಿ. ಅವನಿಗೆ ಹಣದ ಬಗ್ಗೆ ತನ್ನ ಜಾಗರೂಕತೆ ತಪ್ಪುವಷ್ಟು ಈ ವಿಶ್ವನಾಥ, ರತ್ನರೆಂದರೆ ಪ್ರೀತಿ.ಹೋಟೆಲ್‌ನಲ್ಲಿ ನಾವು ಕಾಫಿ ಕುಡಿಯುತ್ತ ಕೂತಿರುವಂತೆ ರತ್ನ ನಮ್ಮಲ್ಲಿ ಒಬ್ಬರನ್ನು ಅವತ್ತಿನ ತನ್ನ ಬಲಿಯಾಗಿ ಆಯ್ದುಕೊಳ್ಳುತ್ತಿದ್ದ. ಹತ್ತಿರ ಬಂದು ನಮ್ಮ ಕಿವಿಯ ಹತ್ತಿರ ಬಗ್ಗಿ ತನ್ನ ಎರಡು ಹಸ್ತಗಳನ್ನೂ ಒಂದು ಸ್ಪೀಕರ್‌ನಂತೆ ಅಂಜಲಿ ಮಾಡಿ ನಮ್ಮ ಕಿವಿಯ ಹತ್ತಿರ ತಂದು ಗಟ್ಟಿಯಾಗಿ ಕೂಗಿ `ಹೇಗಿದೀಯೊ?' ಎಂದು ಕೇಳುತ್ತಿದ್ದ. ಯಾಕೆ ಕೂಗುತ್ತ ಇದ್ದಾನೆಂದು ನಾವು ಅಚ್ಚರಿಪಟ್ಟಾಗ ಇನ್ನಷ್ಟು ಗಟ್ಟಿಯಾಗಿ ಕೇಳುವುದು `ಯಾಕೆ ಚೂರೂ ಕೇಳಿಸೋದೇ ಇಲ್ವ?'.

ಹೊಟೇಲಲ್ಲಿ ಕೂತವರೆಲ್ಲ ಈ ಬಲಿಪಶುವನ್ನು ಪಾಪ ಕಿವುಡ ಎಂದು ಕನಿಕರ ಪಡಬೇಕು - ಹಾಗೆ. ಈ ಜೋಕಿನ ವೇರಿಯೇಶನ್ ಇನ್ನೂ ಸೂಕ್ಷ್ಮ. ಕಿವಿಯ ಹತ್ತಿರ ಬಂದು ಯಾವ ಸದ್ದೂ ಮಾಡದೆ, ಆದರೆ ಮಾಡುತ್ತ ಇರುವಂತೆ ಬಾಯಿತೆರೆದು ಮುಚ್ಚುತ್ತ ಏನೋ ಹೇಳುತ್ತ ಇರುವವನ ಅಂಗಚೇಷ್ಟೆಗಳನ್ನೆಲ್ಲ ಮಾಡುವುದು. ಆಗ ನಾವೇ ನಮ್ಮನ್ನು ಕಿವುಡರೆಂದು ತಿಳಿದು ಕಂಗಾಲಾಗಬೇಕು. ಇದಕ್ಕೆ ಟಿ.ಜಿ. ರಾಘವ ಗುರಿಯಾದರೆ ರತ್ನ ಖಂಡಿತ ಗೆಲ್ಲುವುದೇ. ನಮ್ಮಲೆಲ್ಲ ಫಿಲಾಸಫಿಕಲ್ ಎಂದರೆ ರಾಘವನಾದ್ದರಿಂದ ಅವನನ್ನು ಹಿಂಸಿಸಿ ರೇಗಿಸುವುದರಲ್ಲಿ ನಮಗೆ ಖುಷಿ.ರತ್ನನ ಇನ್ನೊಂದು ಜೋಕು ಸಾರ್ವಜನಿಕ ಆಯಾಮ ಪಡೆದದ್ದು. ಇಡೀ ಮೈಸೂರಿಗೆ ಏಕಮಾತ್ರವೆಂದು ನಾವು ತಿಳಿದಿದ್ದ ಸಿಟಿ ಬಸ್ಸಿನ ಮೇಲೆ ಅವನದೇ ಒಂದು ಬಗೆಯ ದಾಳಿ ನಡೆಯುವುದು ಇತ್ತು. ಈ ಬಸ್ಸುಗಳಿಗೆ ಆ ಕಾಲದಲ್ಲಿ ಇಂಥ ಕಡೆ ನಿಲುಗಡೆಯೆಂಬುದಿರಲಿಲ್ಲ. ನಾವು ತಡೆದಲ್ಲಿ ನಿಂತು ಹತ್ತಿಸಿಕೊಂಡು ಹೋಗುವ ಬಸ್ಸು ಅದು. ಒಂದು ದಿನ ಹೀಗಾಯಿತು, ನೂರಡಿ ರಸ್ತೆಯಲ್ಲಿ ಯಾರಾದರೂ ಹತ್ತಿಯಾರು ಎಂಬ ಆಸೆಯಲ್ಲಿ ಬಸ್ಸು ಓಡುತ್ತಿತ್ತು.

ಬಸ್ಸು ಅಷ್ಟು ದೂರ ಓಡಿಯಾದ ಮೇಲೆ ಫುಟ್‌ಬೋರ್ಡಿನ ಮೇಲೆ ನಿಂತ ಕಂಡಕ್ಟರ್ ದೃಢಕಾಯನಾದ ನಮ್ಮ ರತ್ನ ಬಸ್ಸು ಹೋದ ದಿಕ್ಕಿನಲ್ಲಿ ಓಡಿ ಬರುತ್ತಿರುವುದನ್ನು ಗಮನಿಸಿ ಬಸ್ಸನ್ನ ನಿಲ್ಲಿಸಿ ಕಾಯತೊಡಗಿದ. ಓಡುತ್ತ ಇದ್ದ ರತ್ನ ಬಸ್ಸನ್ನು ಗಮನಿಸದೆ ಮುಂದಕ್ಕೆ ಓಡಿ ಹೋದ. ಬಸ್ಸಿನ ಕಂಡಕ್ಟರ್ ಮತ್ತು ಕಾದು ಕುಳಿತ ಪ್ರಯಾಣಿಕರು ಅವನಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದರೆ ರತ್ನ ಆರಾಮಾಗಿ ಹಿಂದೆ ಬರುತ್ತಿದ್ದ.ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರು ತೆಗೆದುಕೊಳ್ಳುತ್ತಿದ್ದ ನಮ್ಮ ಕ್ಲಾಸಿನಲ್ಲಿ ಇದ್ದವರು ಏಳೋ ಎಂಟೋ ವಿದ್ಯಾರ್ಥಿಗಳು ಮಾತ್ರ. ಬಿರುಸಿನ ಚರ್ಚೆಗಳ ಮೂಲಕವೇ ಬಹು ಆಕರ್ಷಕರಾಗಿದ್ದ ನಮ್ಮ ಯುವ ಗುರುಗಳು ಪಾಠಮಾಡುತ್ತಿದ್ದುದು. ಒಂದು ದಿನ ಅವರು ಹಾಪ್ಕಿನ್ಸ್ ಪಾಠಮಾಡುತ್ತ, ಅವನು ಹೇಳಿದ ಒಂದು ಮಾತನ್ನೇ ಬಲು ಗಂಭೀರವಾಗಿ ಹೇಳಿದರು, `ಈ ಕವಿ ಅರ್ಥವಾಗಲ್ಲ ಎನ್ನಬೇಡಿ. ಅವನೇ ಹೇಳುವುದನ್ನು ಕೇಳಿ,  `Read it with your ears’. ರತ್ನ ಅಕ್ಷರಶಃ ಗುರುವಾಕ್ಯ ಪರಿಪಾಲನೆ ಮಾಡಿ ಪುಸ್ತಕವನ್ನು ತನ್ನ ಕಿವಿಗೆ ಹಿಡಿದು ಗಂಭೀರವಾಗಿ ತಲೆಯಲ್ಲಾಡಿಸಿದ. ಪಾಠದ ನಡುವೆ ಎಂದೂ ನಗದ ಸಿ.ಡಿ.ಎನ್. ಅಂದು ನಕ್ಕಿದ್ದರು.ಆ ದಿನಗಳಲ್ಲಿ ಎಂಥೆಂಥಾ ಚೇಷ್ಟೆಗಳನ್ನು ಮಾಡುತ್ತಿದ್ದೆವು ಅನ್ನುವುದಕ್ಕೆ ಕೆಲವು ಘಟನೆಗಳನ್ನು ಹೇಳುತ್ತೇನೆ: ಒಂದು ದಿನ ವಿಶ್ವನಾಥ ಮಿರ್ಲೆ ಕಾಲೇಜಿನ ಕಟ್ಟೆ ಮೇಲೆ ಕೂತು ಗೆಳೆಯ ವಿ.ಎಸ್. ರಾಘವನ್ ಸೇರಿದಂತೆ ಸ್ವಲ್ಪ ಜನರಿಗೆ ಕೇಳುವ ಹಾಗೇ `ಅಲ್ಲ ಮಾರಾಯ ಅವನು ಏನಾದ್ರೂ ಹತ್ತಿರ ಬರದೇ ಇದ್ದಿದ್ದರೆ ಬಿದ್ದು ಸತ್ತೇ ಬಿಡ್ತಿದ್ದನಲ್ಲ' ಅಂದ. `ಯಾರು ಯಾರು' ಅಂದರು. `ಬೇಡ ಅದರ ವಿಷಯ' ಅಂದ. `ಒಬ್ಬ ಹುಡುಗ ಪ್ರಾಣ ಕಳಕೊಳ್ಳೋಕೆ ಹೋಗಿದ್ದನಂತೆ, ಮಹಾರಾಜ ಟವರ್‌ನಿಂದ.

ಆಗ ಯಾರೋ ಜವಾನ ಬಂದು ಬಿಡಿಸಿದನಂತೆ' ಅಂತ ಹೇಳಿ ಒಂದು ಪುಸ್ತಕ ಹಿಡಿದುಕೊಂಡು ಕ್ಲಾಸಿಗೆ ಹೋಗದೆ ಕುಳಿತ. ಇದೇ ಕತೆಯನ್ನು ನಮಗೇ ಬಂದು ಎಷ್ಟು ಜನ ಹೇಳುತ್ತಾರೆ, ಹೇಗ್ಹೇಗೆ ಹೇಳುತ್ತಾರೆ ಕೇಳಬೇಕು ಅನ್ನುವ ಕುತೂಹಲಕ್ಕೆ ಅವನು ಇದನ್ನು ಮಾಡಿದ್ದು. ಹೇಗೆ ಸುದ್ದಿ ಹರಡುತ್ತೆ ಅನ್ನುವ ಕುತೂಹಲ ನಮಗೂ ಜೋರಾಯಿತು. ಹಾಗೆ ನಮಗೇ ವಾಪಸ್ ಬಂದ ಕತೆಗಳನ್ನು ಒಂದು ಪುಸ್ತಕದಲ್ಲಿ ಮಿರ್ಲೆ ರಿಜಿಸ್ಟರ್ ಮಾಡುತ್ತ ಹೋದ.

ಅವನು ಸೃಷ್ಟಿಸಿದ ಕತೆಯ `ಆ ಹುಡುಗ, ಇಂಥ ಬಟ್ಟೆಯನ್ನೇ ಹಾಕಿದ್ದ ಎಂದು ಆಯಿತು, ಅವನು ಮುಸ್ಲಿಮ್ ಹುಡುಗ ಅಂತ ಆಯ್ತು, ಅವನು ಕ್ರಾಪು ಇಂಥ ಕಡೆ ತಿದ್ದಿದ್ದಾನೆ, ಯಾವ ಚಪ್ಪಲಿ ಹಾಕಿದ್ದಾನೆ ಇತ್ಯಾದಿ. ಸ್ವಲ್ಪ ಹೊತ್ತಿಗೆ ಅವನಿಗೆ ಬಟ್ಟೆ, ಬಣ್ಣ, ಕಣ್ಣು, ಕಿವಿ, ಮೂಗು ಎಲ್ಲ ಬಂತು. ಬಾಯಿಂದ ಬಾಯಿಗೆ ಹರಿದು ಇದು ದೊಡ್ಡ ಸುದ್ದಿಯೇ ಆಗಿಹೋಯಿತು. ಆಗ ಪುರುಷೋತ್ತಮ್ ಎನ್ನುವವರು ಪ್ರಾಂಶುಪಾಲರಾಗಿದ್ದರು. ಈ ಕತೆ ಅವರ ಕಿವಿಗೂ ಬಿತ್ತು.ಸಂಜೆ ಕಾಲೇಜಿನ ಯಾವುದೋ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತ ಅವರು `ಹುಡುಗರು ಪ್ರೇಮಕ್ಕೋಸ್ಕರವಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮಗೇನಾದರೂ ಸಮಸ್ಯೆ ಬಂದ್ರೆ ಪ್ರೀತಿ ಮಾಡುವಾಗ, ಬಂದು ನನಗೆ ಹೇಳಿ, ನಿಮಗೆ ಬೇಕಾದ ಸಹಾಯ ಮಾಡ್ತೀನಿ. ನಮ್ಮನ್ನ ಬಿಟ್ಟು ನೀವೇನು ಮಾಡೋಕೆ ಹೋಗಬೇಡಿ' ಅಂದರು. ಮಾರನೆ ದಿನ ಒಬ್ಬ ಮುಸ್ಲಿಮ್ ಹುಡುಗ ಅವರ ಆಫೀಸ್‌ಗೆ ಹೋಗಿ `ಸಾರ್, ನನ್ನದೊಂದು ಸಮಸ್ಯೆ ಇದೆ. ನಾನು ಸರಸ್ವತಿ ಅನ್ನೋ ಹುಡುಗಿಯನ್ನ ಪ್ರೀತಿ ಮಾಡ್ತಾ ಇದೀನಿ' ಅಂತ ಹೇಳಿಕೊಂಡ! ಮಿರ್ಲೆಯ ರಿಜಿಸ್ಟರ್‌ನಲ್ಲಿ ಕೊನೇ ಎಂಟ್ರಿ ಅದು!!ಗಂಗಾಧರನ ಚೇಷ್ಟೆ ಹೇಗಿರುತ್ತಿತ್ತು ಅನ್ನುವುದಕ್ಕೆ ಇದನ್ನು ಹೇಳುತ್ತೇನೆ. ಗಂಗಾಧರ ಕಡಿದಾಳ್ ಶಾಮಣ್ಣನ ತರದವನು. ಒಂದು ದಿನ `ಇವತ್ತು ಒಂದು ಗಂಟೆ ಒಳಗೆ ಮಹಾರಾಜ ಕಾಲೇಜಿನ ಆವರಣದಲ್ಲಿ ಓಡಾಡ್ತಾ 100 ಜನರ ಹತ್ತಿರ ಹಲೋ ಹೇಳಿಸಿಕೊಳ್ತೀನಿ, ನೀನು ಲೆಕ್ಕ ಇಡು' ಎಂದು ನಾನು ಹೇಳಿದೆ. ಸ್ವಲ್ಪ ಹೊತ್ತಿಗೆ 50 ಜನ ಹಲೋ ಅಂದದ್ದಾಯಿತು. ಅಷ್ಟೊತ್ತಿಗೆ ಸುಸ್ತಾಗಿತ್ತು, ಕಾಲೇಜು ಮುಗಿಯುವ ಸಮಯ ಕೂಡ ಆಗಿತ್ತು. ಅಷ್ಟರಲ್ಲಿ ಯಾವುದೋ ಕ್ಲಾಸಿನ ಒಂದು ಚೆಂದಹುಡುಗಿ ಹಲೊ ಅಂದಳು. ಆಗ ನಾನು `ಆಯ್ತು ಬಿಡು, ಆ ಒಂದು `ಹಲೋ' 50ಕ್ಕೆ ಸಮಾ' ಎಂದೆ. ಆಗ ಗಂಗಾಧರ `ನಿನ್ನನ್ನು ಮೊದಲು ನೋಡಿದಾಗ ನನಗೂ ನಗು ಬಂದಿತ್ತೊ ಅನಂತು. ನಿನ್ನ ಮೂತಿ ಹಾಗಿದೆ' ಎಂದ!ಗಂಗಾಧರ, ಸದಾಶಿವ, ನಾನು ತೀರ್ಥಹಳ್ಳಿಯ ಆನಂದಗಿರಿ ಬೆಟ್ಟದಲ್ಲಿ ಓಡಾಡುತ್ತ ಅಡಿಗರಿಂದ ಪರಿಚಯವಾಗಿದ್ದ ಇತಿಹಾಸಕಾರ ಟಾಯೆನ್ಬಿ, ಅದು ಇದು ಮಾತಾಡುತ್ತಿದ್ದೆವು. ಇವರಿಬ್ಬರೂ ನಾನು ಬರುವ ಮೊದಲೇ ಮಾತಾಡಿಕೊಂಡು `ಅನಂತು ಇವತ್ತು ಏನು ಹೇಳಿದರೂ ಅದಕ್ಕೆ ನಾವು ಬೇರೇನೂ ಹೇಳದೆ `ಹೌದೌದು' ಅನ್ನಬೇಕು' ಎಂದು ತೀರ್ಮಾನಿಸಿದ್ದರಂತೆ. ನಾನು ಗಂಭೀರವಾಗಿ ಏನೇ ಹೇಳಿದರೂ `ಹೌದೌದು', `ಹೌದು ಕಣೋ ಹೌದು' ಅನ್ನುತ್ತಿದ್ದರು, `ಏನಾಗಿದೆಯೊ ನಿಮಗೆ?' ಅಂತ ಕೇಳಿದರೆ, `ಏನಾಗಿಲ್ಲ, ಹೌದು' ಅನ್ನೋರು.

ಎಷ್ಟೋ ಹೊತ್ತಿನ ನಂತರ ನನಗೆ ರೋಸಿಹೋದಾಗ ಎಲ್ಲ ವಿಷಯ ಹೇಳಿದರು. ನನ್ನನ್ನು ಘನತೆಯಲ್ಲಿ ಬೀಗಲು ಈ ಸ್ನೇಹಿತರುಗಳು ಎಂದೂ ಬಿಡುತ್ತಿರಲಿಲ್ಲ, ಸಮಸ್ಥಿತಿಯಲ್ಲಿ ಇಟ್ಟರು. ಗಂಗಾಧರ ಒಮ್ಮೆ ಊರಿಗೆ ಹೋದಾಗ ನನಗೆ ಆದ ಸಂಕಟ ಅಷ್ಟಿಷ್ಟಲ್ಲ. `ಗಂಗಾಧರ ಹೊರಟು ಹೋದ. ಕಳುಹಿಸಿಕೊಡುವಾಗ್ಗೆ ಎದೆ ಭಣಗುಟ್ಟುತ್ತಿತ್ತು. ಅವನ ವ್ಯಕ್ತಿತ್ವದ ಸೌಹಾರ್ದ್ಯ ಅನ್ಯಾದೃಶ ಸೆಳೆತ ಉಳ್ಳದ್ದು. ಮೋಹಕವಾದ ನೀಳತೆಯಲ್ಲಿನ ಯೌವನ, ಅಲೌಕಿಕವಾದ ನೋಟದ ಗಾಂಭೀರ‌್ಯ ಎಂತಹವರನ್ನಾದರೂ (ಚಿರಪರಿಚಯದ-ವಾದರೆ ಮಾತ್ರ) ಬೆರಗು ಮಾಡಬಲ್ಲದು.

ಅವನು ಅತ್ಯುತ್ತಮ ಸ್ನೇಹಿತ. ಸ್ನೇಹಕ್ಕೆ ಅಡ್ಡಿಬರುವ ಅಹಂಮಗ್ನತೆಯಾಗಲೀ ವ್ಯಕ್ತಿವೈಶಿಷ್ಟ್ಯವಾಗಲೀ ಅವನಲ್ಲಿಲ್ಲ - ಅವನು ಬೇರೆಯವರ ಜೊತೆ ಬೆರೆಯುತ್ತಾನೆ ಎನ್ನುವುದಕ್ಕಿಂತ ಸ್ನೇಹ ಕಂಡಲ್ಲಿ ಕರಗುತ್ತಾನೆ ಎನ್ನಬಹುದು. ಕರಗಿ ಬೆರೆಯುವ ಜೀವ ಅದು - ಅಂತಹವರ ನೆನಪು ಎಂದೂ ಮಾಸದು' ಎಂದು ನಾನು ದಿನಚರಿಯಲ್ಲಿ ಬರೆದುಕೊಂಡಿರುವುದು ಗಂಗಾಧರನಂತೆ ನನ್ನ ಎಲ್ಲ ಸ್ನೇಹಿತರ ಪರವಾಗಿ ನನ್ನೊಳಗೆ ಆಗುತ್ತಿದ್ದ ಭಾವನೆಯೆ.ಈ ನಮ್ಮ ಲೋಕಕ್ಕೆ ಬಾಲಗೋಪಾಲ ವರ್ಮ ಮಧ್ಯದಲ್ಲಿ ಪ್ರವೇಶಮಾಡಿ, ನಾಟಕದ ಲಯಜ್ಞಾನವನ್ನು ಅವನ ಮಲೆಯಾಳಿ ಸಂವೇದನೆಯಿಂದ ಬಲಪಡಿಸಿ, ರಾಮೇಶ್ವರಿಯ ಬಹುಮುಖ ಕನ್ನಡ ಪ್ರತಿಭೆಯಿಂದ ತನ್ನನ್ನು ವಿಸ್ತರಿಸಿಕೊಂಡು ನಮ್ಮ ಒಳಗಿನವನಾದವನು. ಯಾರು ಬೇಕಾದರೂ ಯಾವ ಹೊತ್ತಿಗಾದರೂ ಬಂದು, ಕೂತು ಹರಟಿ, ಇದ್ದದ್ದನ್ನು ತಿಂದು ಹೋಗಬಲ್ಲ ವಾತಾವರಣ ರತ್ನನ ಮನೆಯಲ್ಲಿ ಇತ್ತು. ಇದಕ್ಕೆ ಕಾರಣ ರತ್ನನ ಹೆಂಡತಿ ಲತಾರ ಸೌಜನ್ಯ ಹಾಗೂ ಧಾರಾಳ. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುವ ಲತಾ ಬಡಿಸಿದ ಊಟ ಮಾಡದವರನ್ನೇ ನಾನು ಕಾಣೆ.ಇಷ್ಟು open ಎನ್ನಿಸಿದರೂ ರತ್ನನ ಸ್ನೇಹಕೂಟದಲ್ಲಿ ಒಂದು  inner circle ಕೂಡ ಇತ್ತು. ಇದರ ಸದಸ್ಯರಾಗಿದ್ದವರು ಕೆಲವೇ ಮಂದಿ. ನಾನೊಬ್ಬ ಇದರಲ್ಲಿ ಖಾಸಗಿ ಸದಸ್ಯನಲ್ಲ, ಆನರರಿ ಸದಸ್ಯನೆಂದೇ ನನ್ನ ಭಾವನೆ. ಆದರೆ ಬಿಡಿಬಿಡಿಯಾಗಿ ಇವರೆಲ್ಲರಿಗೂ ನಾನು ಗೆಳೆಯ. ಹಾಗೆಯೇ ಕೆ.ವಿ. ಸುಬ್ಬಣ್ಣನೂ ನನ್ನ ಇನ್ನೊಬ್ಬ ಗೆಳೆಯ.

ಸಾಹಿತ್ಯಲೋಕದ ಈ ಎರಡು ಸರ್ಕಲ್‌ಗಳಲ್ಲದೆ, ಅದರ ಅಂಚಿನಲ್ಲೇ ಇರುತ್ತಿದ್ದ ಶಾಂತವೇರಿ ಗೋಪಾಲಗೌಡ, ಶಂಕರನಾರಾಯಣ ಭಟ್ಟರಂಥ ಸೋಷಲಿಸ್ಟ್ ಗೆಳೆಯರ ಬಳಗ, ನನ್ನ ಎಲ್ಲ ಹಡೆತನಗಳಿಗೂ ಜಂಬಗಾರಿಕೆಗೂ ಹಾಸ್ಯದ ಚುರುಕು ಮುಟ್ಟಿಸುತ್ತಿದ್ದ ಗಂಗಾಧರ - ಇವು ನನ್ನ ಇತರೇ ಸರ್ಕಲ್‌ಗಳು. ಈ ಇನ್ನರ್ ಸರ್ಕಲ್ ಅಲ್ಲದೆ ರತ್ನನಿಗೊಂದು ಪಡೆಯೇ ಇತ್ತು. ಅದು ಯುವಜನರ ಪಡೆ. ರತ್ನನ ವಿಶಾಲ ಕುಟುಂಬ ಅದು. ಅವರೆಲ್ಲರೂ ಮಲಗುವುದು ಓದುವುದು ರತ್ನದಂಪತಿಗಳ ಧಾರಾಳದ ಮನೆಯಲ್ಲಿ.

ರತ್ನನಿಗೆ ತನ್ನದೇ ಲೋಕದಲ್ಲಿ ಶ್ರವಣ ವಿಜ್ಞಾನದ ತಜ್ಞನೆಂಬ ಗೌರವವಿತ್ತು. ರೋಗಿಯಾದವನು ಅವನನ್ನು ತಾಯಿಯಂತೆ ಕಾಣುವುದು ಸಾಧ್ಯವಿತ್ತು. ಗುಣಪಡಿಸುವುದೂ ಒಂದು ಕಲೆ, ಒಂದು ವರ. ಈ ಎರಡೂ ಸಿದ್ಧಿಸಿದ್ದ ರತ್ನನ ಬಗ್ಗೆ ನಾನು ಹೇಳಬಹುದಾದ್ದು ಏನೇನೂ ಸಾಲದು. ರತ್ನ ನನ್ನ ಕಾಲದ ಘನ ಪಂಡಿತ ವೈದ್ಯರಲ್ಲಿ ಒಬ್ಬ.(ಮುಂದುವರಿಯುವುದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry