ಓದು ಹತ್ತಿಸಿದ ಅವ್ವನ ನೆನೆದೇವು...

7

ಓದು ಹತ್ತಿಸಿದ ಅವ್ವನ ನೆನೆದೇವು...

Published:
Updated:
ಓದು ಹತ್ತಿಸಿದ ಅವ್ವನ ನೆನೆದೇವು...

ಓದಿಗೆ ಸಹಕಾರ ನೀಡುತ್ತಾ ಮಕ್ಕಳ ಏಳಿಗೆಯನ್ನೇ ಗುರಿಯಾಗಿಸಿಕೊಂಡು ಬದುಕುತ್ತಿರುವ ತಾಯಂದಿರು ಹಲವರು. ಬದುಕಿನಲ್ಲಿ ಉನ್ನತ ಹುದ್ದೆಗೇರಿ ಸಾಧನೆಗೈಯಬೇಕೆಂಬ ಕನಸು ತುಂಬಿ ಅದನ್ನು ನನಸಾಗಿಸುವಲ್ಲಿ ಶ್ರಮಿಸುವ ತಾಯಂದಿರು ಬೆಳಕಿಗೆ ಬರುವುದು ಕಡಿಮೆ. ಅಂಥ ಕೆಲ ಅಮ್ಮಂದಿರ ಕುರಿತು ಮಕ್ಕಳ ಮಾತು...

ಅಮ್ಮನ ಲಾಲನೆಯಲ್ಲೇ ಮಗು ಬೆಳೆದು ದೊಡ್ಡದಾಗುತ್ತದೆ. ಆಟ, ಪಾಠ, ನಿದ್ರೆ ಹೀಗೆ ಪ್ರತಿಯೊಂದಕ್ಕೂ ಅಮ್ಮನ ಸಾಂಗತ್ಯ ಬಯಸುವ ಮಗು ಬೆಳೆದು ದೊಡ್ಡದಾದ ಮೇಲೂ ತಾಯಿಯ ಹಂಗು ಬಯಸುತ್ತದೆ. ತಾಯಿ ತನ್ನ ಜೀವನವನ್ನೇ ಮಕ್ಕಳ ಏಳಿಗೆಗಾಗಿ ಮೀಸಲಿಡುತ್ತಾಳೆ.ಆದರೆ ಮಹಾನಗರಿಯಲ್ಲಿ ಎಲ್ಲರೂ ತಮ್ಮ ಕಾರ್ಯದಲ್ಲೇ ಕಳೆದುಹೋಗುತ್ತಾರೆ. ಮಕ್ಕಳ ಜವಾಬ್ದಾರಿ ಬೇರೆಯವರಿಗೆ ವಹಿಸುತ್ತಾರೆ ಎಂಬ ಟೀಕೆ ಆಗಾಗ ಕೇಳಿಬರುತ್ತದೆ. ಆ ಮಾತಿಗೆ ಅಪವಾದವೆಂಬಂತೆ ಈ ತಾಯಂದಿರು ತಮ್ಮ ಮಕ್ಕಳನ್ನು ಸಾಕಿದ್ದಾರೆ, ಬೆಳೆಸಿದ್ದಾರೆ. ಐಎಎಸ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ನಗರದ ಕೆಲವು ವಿದ್ಯಾರ್ಥಿಗಳು ತಮ್ಮ ತಾಯಿ ಕುರಿತು `ಮೆಟ್ರೊ~ದೊಂದಿಗೆ ಹಂಚಿಕೊಂಡ ಮಾತುಗಳು...

ಆತ್ಮಸ್ಥೈರ್ಯ ತುಂಬಿದ ಅಮ್ಮನಾನು ರ‌್ಯಾಂಕ್ ತಗೊಂಡಿದ್ರಲ್ಲಿ ಅಮ್ಮನದ್ದು ತುಂಬಾ ದೊಡ್ಡ ಪಾತ್ರ. ನನ್ನಮ್ಮ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಲ್ಲಿ ಉದ್ಯೋಗಿ. ನನ್ನ ಓದಿಗೋಸ್ಕರವೇ ಅಮ್ಮ ಕೆಲಸಕ್ಕೆ ಹೋಗುತ್ತಿದ್ದಾರೆ. ಅಷ್ಟೇನು ಸ್ಥಿತಿವಂತವಲ್ಲದ ನಮ್ಮ ಕುಟುಂಬದ ನೊಗ ಹೊರಲು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಬದಿಗೊತ್ತಿ ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿದೆ.ಆದರೆ ಅಮ್ಮ ನನ್ನ ಕೆಲಸವನ್ನು ಬಿಡಿಸಿ ನನಗೆ ಓದಲು ಆತ್ಮಸ್ಥೈರ್ಯ ತುಂಬಿದರು. ದುಡಿಲಿಕ್ಕೆ ನಾನಿದಿನಿ. ನೀನು ಚೆನ್ನಾಗಿ ಓದು ಎಂದು ಹರಸಿದರು. ಇದುವರೆಗೂ ನನ್ನ ಓದಿನ ಖರ್ಚನ್ನು ಅಮ್ಮನೇ ಬರಿಸಿದ್ದಾರೆ.ಮನೆಯಲ್ಲಿ ಎಷ್ಟೇ ಹಣದ ಸಮಸ್ಯೆ ಇದ್ದರೂ ನನ್ನ ಓದಿಗೆ ಅದು ಅಡ್ಡಿಬರಲಿಲ್ಲ. ಅಮ್ಮನ ಆಸೆ ಈಡೇರಿಸಿದ ಸಂತಸ ನನಗಿದೆ. ಅಧಿಕಾರಿಯಾದ ತಕ್ಷಣವೇ ಮೊದಲು ಅಮ್ಮನನ್ನು ಕೆಲಸದಿಂದ ಬಿಡಿಸಬೇಕು. ಅವರನ್ನು ಕೊನೆಯ ತನಕವೂ ಚೆನ್ನಾಗಿಡಿಕೊಳ್ಳಬೇಕೆಂಬುದು ನನ್ನ ಆಸೆ.

-ರಾಜೀವ್ (154ನೇ ರ‌್ಯಾಂಕ್)ಉತ್ತಮ ಸ್ನೇಹಿತೆನಾನು ಚಿಕ್ಕವನಿದ್ದಾಗಿನಿಂದಲೂ ಅಮ್ಮ ನನಗೆ ಉತ್ತಮ ಸಂಸ್ಕಾರದಿಂದ ಬೆಳೆಸಿದರು. ನನ್ನ ತಾಯಿ ಮೂಲತಃ ಶಿಕ್ಷಕರಾದ್ದರಿಂದ ಯಾವುದನ್ನೂ ಮಕ್ಕಿಗಾಮಕ್ಕಿ ಓದಲು ಬಿಡುತ್ತಿರಲಿಲ್ಲ. ಎಲ್ಲವನ್ನೂ ಅರ್ಥೈಸಿಕೊಂಡೇ ಓದಬೇಕಿತ್ತು. ಅವಾಗೆಲ್ಲಾ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಹೇಳುತ್ತಿದ್ದರು. ಸಮಾಜದಲ್ಲಿ ನಮ್ಮ ಪಾತ್ರ ಎಂಥದ್ದು, ಬಡವರ ಬಗ್ಗೆ ಕಾಳಜಿ ಬೆಳೆಸಿಕೊಳ್ಳುವ ಕುರಿತು ಹೇಳಿಕೊಡುತ್ತಿದ್ದರು.ನನ್ನ ತಂದೆಯೂ ಸರ್ಕಾರಿ ನೌಕರರಾಗಿದ್ದರಿಂದ ವರ್ಗಾವಣೆ ಸಾಮಾನ್ಯವಾಗಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆಂಬ ಕಾರಣದಿಂದ ಅಮ್ಮ ತಾನು ಬಹಳ ಇಷ್ಟ ಪಟ್ಟು ಪಡೆದುಕೊಂಡಿದ್ದ ಶಿಕ್ಷಕಿ ವೃತ್ತಿಯನ್ನು ಬಿಟ್ಟು ಬೆಂಗಳೂರಿಗೆ ಮಕ್ಕಳ ಓದಿಗೋಸ್ಕರವೇ ಬಂದರು. ನಾನು ಚಿಕ್ಕವನಿದ್ದಾಗಿಂದಲೇ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿದರು.ಪುಸ್ತಕದ ಕುಂಬಳಕಾಯಿಯಾಗಲು ಎಂದೂ ಬಿಡಲಿಲ್ಲ. ಅಮ್ಮನಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಮೌಲ್ಯಗಳ ಬಗ್ಗೆ ಅಪಾರವಾದ ಕಾಳಜಿ ಇದೆ. ಅವನ್ನು ತನ್ನ ಮಕ್ಕಳೂ ಉಳಿಸಿಕೊಂಡು ಹೋಗಬೇಕೆಂಬ ಬಯಕೆ ಅವರದ್ದು. ಹಾಗಾಗಿ ನಮ್ಮ ಸಂಸ್ಕೃತಿ ಕುರಿತು ಅಮ್ಮ ನಾನು ಆಗಾಗ ಚರ್ಚೆಗಳನ್ನೂ ಮಾಡ್ತಿವಿ.ನನ್ನ ತಾಯಿ ನನಗೆ ಒಳ್ಳೆ ಫ್ರೆಂಡ್ ಕೂಡ.ದುಡ್ಡು ಮಾಡೋದು ಮುಖ್ಯ ಅಲ್ಲ. ನೀನು ದುಡಿದಿದ್ದರಲ್ಲಿ ಅಲ್ಪವಾದರೂ ಬಡವರಿಗೆ ಮೀಸಲಿಡು. ನಿನಗೆ ಪ್ರತಿಭೆ ಇದೆ. ಆ ಪ್ರತಿಭೆಯನ್ನು ಸಮಾಜದ ಸೇವೆಗಾಗಿ ಮೀಸಲಿಡು ಎಂದು ಯಾವಾಗ್ಲೂ ನನ್ನ ತಾಯಿ ಹೇಳುತ್ತಿರುತ್ತಾಳೆ.ಹಾಗಾಗಿ ನಾನು ಅಧಿಕಾರಿಯಾಗಿ ಒಂದಷ್ಟು ಹಣ ಸಂಪಾದಿಸಿದ ಮೇಲೆ ಪುಟ್ಟ ಶಾಲೆಯೊಂದನ್ನು ತೆರೆದು, ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಆ ಶಾಲೆಗೆ ನನ್ನ ಅಮ್ಮನೇ ಮುಖ್ಯಸ್ಥೆಯಾಗಿ ನೇಮಿಸಬೇಕು ಎಂಬ ಕನಸನ್ನು ಹೊತ್ತಿದ್ದೇನೆ. ನನ್ನ ಅಮ್ಮನಿಗೋಸ್ಕರ ನಾನು ಕೊಡುವ ಉಡುಗೊರೆ ಅದು.

 -ವಿಶ್ವಾಸ್ ನಾಡಿಗ್ (378ನೇ ರ‌್ಯಾಂಕ್)

ಓದುವ ಹವ್ಯಾಸ ರೂಢಿಸಿದ್ದು ಅವಳೇ

ಓದಿಗೆ ನನ್ನ ತಾಯಿ ಯಾವತ್ತೂ ಸಹಕಾರ ನೀಡಿದರು. ಓದೋ ಸಮಯದಲ್ಲಿ ಯಾವುದೇ ರೀತಿ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಿದ್ದರು. ಓದುವಾಗ ನಿದ್ದೆ ಕಾಡದಿರಲಿ ಎಂದು ರಾತ್ರಿ 12- 1 ಗಂಟೆಗೆಲ್ಲಾ ಎದ್ದು ನನಗೆ ಟೀ- ಕಾಫಿ ಮಾಡಿಕೊಡುತ್ತಿದ್ದರು. ಅಮ್ಮನಿಗೆ ನನ್ನ ಮೇಲೆ ಅಪೂರ್ವ ನಂಬಿಕೆ. ನೀನು ಚೆನ್ನಾಗಿ ಓದುತ್ತೀಯ ಐಎಎಸ್ ಅಧಿಕಾರಿಯಾಗಬೇಕು ಎಂದು ಹುರಿದುಂಬಿಸಿದರು. ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.  ಚಿಕ್ಕಂದಿನಿಂದಲೂ ಓದುವ ಹವ್ಯಾಸ ಬೆಳೆಸಿದ್ದು ಅಮ್ಮನೇ. ಅಧಿಕಾರಕ್ಕೆ ಬಂದಮೇಲೆ ಮಹಿಳಾ ಸಶಕ್ತೀಕರಣದಂತಹ  ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆ. ಎಲ್ಲಾ ತಾಯಂದಿರಿಗೂ ಕೊನೆಗಾಲದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗಬಾರದೆನ್ನುವುದೇ ನನ್ನ ಉದ್ದೇಶ. ಎಲ್ಲಾ ಪಾಲಿಸಿಯಲ್ಲೂ ಜಂಡರ್ ಬಜೆಟಿಂಗ್ ಕಾನ್ಸೆಪ್ಟ್ ಜಾರಿಗೆ ತರೋಹಾಗೆ ಮಾಡ್ತೀನಿ.

-ನಿತೀಶ್ ಪಾಟೀಲ್ (154ನೇ ರ‌್ಯಾಂಕ್)

ಮರಳಿ ಚೇತನವ ತುಂಬಿದಳು

ನನ್ನ ಎರಡನೇ ಪ್ರಯತ್ನಕ್ಕೆ ನಾನು ರ‌್ಯಾಂಕ್ ಪಡೆದೆ. ಮೊದಲನೇ ಬಾರಿ ಸೋಲನ್ನು ಅನಿಭವಿಸಿದಾಗ `ನಿನ್ನಿಂದ ಇದು ಆಗೋಲ್ಲ~ ಎಂದು ಹಿಯಾಳಿಸಿದವರೇ ಹೆಚ್ಚು. ಆದರೆ ನನ್ನ ತಂದೆ ತಾಯಿ ಮಾತ್ರ ನನ್ನ ಬೆನ್ನ ಹಿಂದೆ ಸದಾ ಇದ್ದರು. ಮೊದಲ ಸೋಲು ಕಹಿಯೆಂದು ಅನಿಸಲೇ ಇಲ್ಲ.ಅದರಲ್ಲೂ ಅಮ್ಮ ನನಗೆ ತುಂಬಾನೇ ಪ್ರೋತ್ಸಾಹ ನೀಡಿದರು. 4ನೇ ತರಗತಿ ಓದಿರುವ ನನ್ನಮ್ಮ ತಾವು ಅಕ್ಷರ ಕಲಿಯಲು ಆಗದೇ ಇರುವುದನ್ನು ಮಗಳ ಮೂಲಕ ಸಾಕಾರ ಮಾಡಿಕೊಂಡಿದ್ದಾರೆ. ಉತ್ತಮ ಭವಿಷ್ಯ ರೂಪಿಸಿದ್ದು ಅಮ್ಮನೇ. ನಾನು ಕಡೆವರೆಗೂ ಅಮ್ಮನಿಗೆ ಯಾವುದೇ ಕಷ್ಟ ಬರದ ಹಾಗೆ ನೋಡಿಕೊಳ್ಳುತ್ತೇನೆ. ಅಮ್ಮ ನಮ್ಮಿಂದ ಏನನ್ನೂ ನಿರೀಕ್ಷೆ ಮಾಡೋದಿಲ್ಲ. ಅವರ ಆಸೆ ಕನಸುಗಳನ್ನ ಸಾಕಾರ ಮಾಡಬೇಕೆಂಬುದೇ ನನ್ನ ಆಸೆ.

-ದೀಪಾ ಗಾಣಿಗೇರ್ (482ನೇ ರ‌್ಯಾಂಕ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry