ಬುಧವಾರ, ನವೆಂಬರ್ 20, 2019
25 °C

ಔರಾದಕರ್ ಅಧಿಕಾರ ಸ್ವೀಕಾರ

Published:
Updated:
ಔರಾದಕರ್ ಅಧಿಕಾರ ಸ್ವೀಕಾರ

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದಕರ್ ಅವರು ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಔರಾದಕರ್ ಅವರು, `ವಿಧಾನಸಭೆ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ರೀತಿಯಲ್ಲಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸಾಂಘಿಕ ಕಾರ್ಯ ನಿರ್ವಹಣೆಗೆ ಒತ್ತು ನೀಡಲಾಗುವುದು' ಎಂದು ಹೇಳಿದರು.ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು. ಜತೆಗೆ ಅಪರಾಧ ಚಟುವಟಿಕೆಗಳ ನಿಯಂತ್ರಣ, ಅಪರಾಧ ಪ್ರಕರಣಗಳ ಪತ್ತೆ, ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತದೆ. ಜನಸಾಮಾನ್ಯರೊಂದಿಗೆ ಉತ್ತಮ ಒಡನಾಟ ಇರಿಸಿಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುತ್ತೇನೆ ಎಂದು ತಿಳಿಸಿದರು.ಜನರ ಅಹವಾಲುಗಳನ್ನು ಸ್ವೀಕರಿಸಿ ಶೀಘ್ರವೇ ಪರಿಹರಿಸಲು ಗಮನ ಹರಿಸುತ್ತೇನೆ. ಉತ್ತಮವಾಗಿ ಕಾರ್ಯ ನಿರ್ವಹಿಸಲು ನಗರದ ಜನತೆ, ಸಿಬ್ಬಂದಿ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಮುಖಂಡರು ಸಹಕಾರ ನೀಡಬೇಕು ಎಂದರು.`ಪೊಲೀಸ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ನಗರದಲ್ಲಿ ಕೋಮು ಗಲಭೆಯಂತಹ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಕಾನ್‌ಸ್ಟೆಬಲ್ ದರ್ಜೆಯಿಂದ ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಉತ್ತಮ ಸಹಕಾರ ನೀಡಿದರು. ಕೆಳ ಹಂತದ ಸಿಬ್ಬಂದಿ ಶಕ್ತಿ ಮೀರಿ ಕಾರ್ಯ ನಿರ್ವಹಿಸುವ ಮೂಲಕ ಬಹುತೇಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ನಿರ್ಗಮಿತ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಪೊಲೀಸ್ ಕಮಿಷನರ್‌ಗೆ ಶುಭ ಕೋರಿದರು.1987ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ರಾಘವೇಂದ್ರ ಔರಾದಕರ್ ಅವರು ಹಾವೇರಿ ಮತ್ತು ಗುಲ್ಬರ್ಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎ.ಎಸ್ಪಿ) ಕಾರ್ಯ ನಿರ್ವಹಿಸಿದ್ದಾರೆ. ಮಂಡ್ಯ, ಗದಗ, ಗುಲ್ಬರ್ಗ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ), ಗುಪ್ತಚರ ದಳ ಹಾಗೂ ನಕಲಿ ಛಾಪಾ ಕಾಗದ ಹಗರಣದ ತನಿಖೆಗೆ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಡಿಐಜಿ ಆಗಿದ್ದರು. ಅಲ್ಲದೇ ಉತ್ತರ ವಲಯ ಐಜಿಪಿ, ಬೆಂಗಳೂರು ನಗರ (ಆಡಳಿತ) ಹೆಚ್ಚುವರಿ ಪೊಲೀಸ್ ಕಮಿಷನರ್, ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಆಗಿ ಸೇವೆ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)