ಮಂಗಳವಾರ, ನವೆಂಬರ್ 19, 2019
21 °C

ಔರಾದ್: ಮುಂದುವರಿದ ಟಿಕೆಟ್ ಹಗ್ಗ-ಜಗ್ಗಾಟ

Published:
Updated:

ಔರಾದ್: ಇಲ್ಲಿಯ ಮೀಸಲು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಸಮೀಪಿಸುತ್ತಿದ್ದರೂ ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಹೊರತುಪಡಿಸಿ ಇತರೆ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗದೇ ಗೊಂದಲ ಮುಂದುವರಿದಿದೆ.ಶಾಸಕ ಪ್ರಭು ಚವ್ಹಾಣ್ ಅವರ ಹೆಸರು ಬಿಜೆಪಿ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದ್ದರೂ ಅವರಿಗೆ ಪ್ರತಿಸ್ಪರ್ಧಿಯಾಗಬೇಕಾದ ಕೆಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗದೆ ತಾಲ್ಲೂಕಿನಲ್ಲಿ ಸಾರ್ವತ್ರಿಕ ಚುನಾವಣೆ ಕಾವು ಕಾಣದಾಗಿದೆ. ಪ್ರಭು ಚವ್ಹಾಣ್ ಅವರನ್ನು ಸೋಲಿಸುವುದಾಗಿ ಬಹಿರಂಗ ಸವಾಲು ಹಾಕಿದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಇನ್ನು ತನಕ ಕೆಜೆಪಿ ಅಭ್ಯರ್ಥಿ ಹೆಸರು ಘೋಷಿಸದೆ ಇರುವುದು ಪಕ್ಷದ ಕಾರ್ಯಕರ್ತರಲ್ಲಿ ತಳಮಳ ವ್ಯಕ್ತವಾಗಿದೆ.ಕೆಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ಭಾನುವಾರ ತಡ ರಾತ್ರಿ ವರೆಗೆ ಯುವ ನಾಯಕ ಉಮಾಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ಸಭೆ ನಡೆದಿದೆ. ಯುವ ಧುರೀಣ ಚರಣಸಿಂಗ ರಾಠೋಡ, ನಾಗನಾಥ ಸಡಾಂಗಲೆ ಅವರ ಹೆಸರು ಸಭೆಯಲ್ಲಿ ಚರ್ಚೆಗೆ ಬಂತಾದರೂ ಯಾವುದೇ ನಿರ್ಣಯಕ್ಕೆ ಬರಲಾಗಿಲ್ಲ. ಸೋಮವಾರ ರಾತ್ರಿ ಮತ್ತೆ ಸಭೆ ಸೇರಿ ಒಂದು ನಿರ್ಣಯಕ್ಕೆ ಬರಲಾಗುವುದು ಕೆಜೆಪಿ ಯುವ ಧುರೀಣರೊಬ್ಬರು ತಿಳಿಸಿದ್ದಾರೆ.ಕಾಂಗ್ರೆಸ್ ಘೋಷಣೆ ಮಾಡಿದ ಮೊದಲ ಪಟ್ಟಿಯಲ್ಲಿ ಇಲ್ಲಿಯ ಅಭ್ಯರ್ಥಿ ಹೆಸರಿಲ್ಲದಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿಯೂ ತಳಮಳ ಆವರಿಸಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲಿಕರಾವ, ಬಕ್ಕಪ್ಪ ಕೋಟೆ, ವಿಜಯ ಗಾಯಕವಾಡ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಲಕ್ಷ್ಮಣರಾವ ಸೋರಳ್ಳಿ ಸೇರಿದಂತೆ ದಿನಕೊಂದು ಹೆಸರು ತೇಲಿ ಬರುತ್ತಿರುವುದು ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.ಜೆಡಿಎಸ್‌ನ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎಂ. ಯಾತನೂರ ಕಳೆದ ಹಲವು ತಿಂಗಳಿನಿಂದ ಔರಾದ್‌ನಲ್ಲಿ ವಾಸ್ತವ್ಯ ಹೂಡಿ ಜನತೆ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದರೂ ಅಧಿಕೃತವಾಗಿ ಅವರ ಹೆಸರು ಘೋಷಣೆಯಾಗಿಲ್ಲ. ರಾಮಣ್ಣ ವಡೆಯರ್ ಸೇರಿದಂತೆ ಇತರೆ ಹೆಸರು ಸುಳಿದಾಡುತ್ತಿರುವುದರಿಂದ ಇವರೇ ಅಭ್ಯರ್ಥಿ ಎಂದು ಖಚಿತವಾಗಿ ಹೇಳಲಾಗದು ಎಂದು ಜೆಡಿಎಸ್ ಧುರೀಣರೊಬ್ಬರು ತಿಳಿಸಿದ್ದಾರೆ.ಬಿಎಸ್‌ಆರ್‌ನಿಂದ ಶಿವಕುಮಾರ ಬೆಲ್ದಾಳ ಹೆಸರು ಘೋಷಣೆಯಾಗಿ ಭಾನುವಾರದಿಂದ ಪ್ರಚಾರ ಶುರು ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಬಿಎಸ್‌ಪಿ, ಮಕ್ಕಳ ಪಕ್ಷ ಮತ್ತು ಸ್ವತಂತ್ರರು ಸೇರಿದಂತೆ ಇಲ್ಲಿಯ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿಯುವವರ ಸಂಖ್ಯೆ ಹೆಚ್ಚಾಗಲಿದೆ.ಪಕ್ಷಗಳ ಆಕಾಂಕ್ಷಿಗಳು ಟಿಕೆಟ್ ಸಿಗದೆ ಇದ್ದಾಗ ಬಂಡಾಯ ಇಲ್ಲವೇ ಪಕ್ಷಾಂತರ ಭೀತಿ ಹಿನ್ನೆಲೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆ ವಿಳಂಬ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಚುನಾವಣೆ ದಿನ ಸಮೀಪಿಸುತ್ತಿರುವುದರಿಂದ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಅಭ್ಯರ್ಥಿ ಹೆಸರು ಮುಂಚಿತವಾಗಿ ಘೋಷಣೆ ಮಾಡುವುದು ಸೂಕ್ತ ಎಂಬ ಮಾತು ಎಲ್ಲ ಪಕ್ಷಗಳಲ್ಲಿ ಕೇಳಿ ಬರುತ್ತಿದೆ.

ಪ್ರತಿಕ್ರಿಯಿಸಿ (+)