ಔರಾದ್: ಮೂಲ ಸೌಲಭ್ಯಕ್ಕಾಗಿ ಪ್ರತಿಭಟನೆ
ಔರಾದ್: ದಾಬಕಾ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಲ್ಲಿಯ ಜನರು ಮಂಗಳವಾರ ದಾಬಕಾದಲ್ಲಿ ರಸ್ತೆತಡೆ ಚಳವಳಿ ನಡೆಸಿದರು.
ಮಾಜಿ ಗ್ರಾಪಂ. ಅಧ್ಯಕ್ಷ ಗುಲಾಮ್ ದಸ್ತಗೀರ್, ನಿವೃತ್ತಿ ಬನ್ಸೂಡೆ, ಮಾಧವರಾವ ಸುತಾರ, ಭವರಾವ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುತ್ತಲಿನ ಗ್ರಾಮ ಮತ್ತು ತಾಂಡಾ ಜನರು ಪಾಲ್ಗೊಂಡರು.
ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೆ ಇಂದಿಗೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಸೌಲಭ್ಯ ಮರಿಚೀಕೆಯಾಗಿವೆ. ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
30 ಹಾಸಿಗೆ ಆಸ್ಪತ್ರೆ, ರಾಷ್ಟ್ರೀಕೃತ ಬ್ಯಾಂಕ್ ಸ್ಥಾಪನೆ, ಮುರ್ಕಿಯಿಂದ ಗಣೇಶಪುರ ಕ್ರಾಸ್ ವರೆಗೆ ರಸ್ತೆ ಡಾಂಬರೀಕರಣ, ನಂದಿಬಿಜಲಗಾಂವ್ದಿಂದ ದಾಸನಾಯಕ ತಾಂಡಾ ವರೆಗೆ ರಸ್ತೆ ಡಾಂಬರೀಕರಣ, ಖಾಲಿ ಶಿಕ್ಷಕರ ಹುದ್ದೆ ಭರ್ತಿ, ಪ್ರತಿ ಪಂಚಾಯಿತಿಯಲ್ಲಿ ನೆಮ್ಮದಿ ಕೇಂದ್ರ ಸ್ಥಾಪನೆ, ಮಾಸಾಶನ ಬಿಡುಗಡೆ, ಈಚೆಗೆ ಮಳೆಯಿಂದ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆವುಳ್ಳ ಮನವಿಪತ್ರ ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗೆ ಸಲ್ಲಿಸಿದರು. ಹೊಕ್ರಾಣಾ ಪೊಲೀಸರು ಬಂದೋಬಸ್ತ್ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.