ಔಷಧಗಳ ರಾಶಿ ಈ ಸಸ್ಯಕಾಶಿ

7

ಔಷಧಗಳ ರಾಶಿ ಈ ಸಸ್ಯಕಾಶಿ

Published:
Updated:

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ಚನ್ನಪ್ಪ ಬಡಾವಣೆಯಲ್ಲಿ ಯಾರಿಗೂ ಬೇಡದೇ ಖಾಲಿ ಇದ್ದ ನಿವೇಶನ ಈಗ ಎಲ್ಲರ ಕಣ್ಣು ಸೆಳೆಯುತ್ತಿದೆ. ಕಲ್ಲು- ಮಣ್ಣಿನಿಂದ ಕೂಡಿದ  ಜಾಗದಲ್ಲೀಗ ಹಸಿರಿನ ಅನಾವರಣ. ಕಣ್ಣು ಹಾಯಿಸಿದಷ್ಟೂ ಅಗಾಧ ಚೆಲುವು, ಜೊತೆಗೆ ಔಷಧೀಯ ಆಗರ.ಮಾಲಿನ್ಯಭರಿತ ಪರಿಸರದಿಂದ ದೂರವಾಗಿ, ಮನಸ್ಸಿಗೆ ಆಹ್ಲಾದ ನೀಡುವುದರ ಜೊತೆಗೆ ಸ್ಥಳೀಯರ ಚಿಕ್ಕಪುಟ್ಟ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಶಕ್ತಿ ಈ ಉದ್ಯಾನಕ್ಕಿದೆ. 120/30ಅಡಿ ಅಳತೆಯ ಜಾಗದಲ್ಲಿರುವ ಇಂಥದ್ದೊಂದು ಅಪೂರ್ವ ಉದ್ಯಾನಕ್ಕೆ ಕಾರಣೀಕರ್ತರು ಮಡಿಕೇರಿ ಮೂಲದ ಅಯ್ಯಪ್ಪ. ನೂರಕ್ಕೂ ಅಧಿಕ ಗಿಡಗಳನ್ನು ಪೋಷಿಸುತ್ತಿದ್ದಾರೆ ಇವರು.

ಆಡುಸೋಗೆ ಸೊಪ್ಪು, ನಕಲಿ ಪತ್ರೆ ಸೊಪ್ಪು, ತುಳಸಿ, ಕಾಸಿ ಕಣಗಲು, ಜಿನಿಯಾ, ಲೋಳೆಸರ, ನೆಲ ನೆಲ್ಲಿ, ಬೇವು, ಮಂಚ್‌ಪತ್ರೆ, ಮಜ್ಜಿಗೆ ಹುಲ್ಲು, ಭಜಿ, ಇನ್ಸುಲಿನ್, ಕಾಡು ಶುಂಠಿ, ಬಸಳೆ, ಶಂಖ ಪುಷ್ಪ, ಮೋಳೆ ಕಾಲಿನ ಸೊಪ್ಪು, ಅಶ್ವಗಂಧ, ದೊಡ್ಡಪತ್ರೆ, ಕಾಮ ಕಸ್ತೂರಿ, ತುಂಬೆ... ಹೀಗೆ ಕಾಯಿಲೆಗಳ ವಿರುದ್ಧ ರಾಮಬಾಣದಂತೆ ಕೆಲಸ ಮಾಡುವ  ಅನೇಕ ಔಷಧೀಯ ಸಸ್ಯಗಳೇ ಇಲ್ಲಿಯ ಸಂಪತ್ತು.

ಅಯ್ಯಪ್ಪ ಅವರು ಸ್ವಂತ ಖರ್ಚಿನಲ್ಲಿ ಬೆಂಗಳೂರು ಹಾಗೂ ಮಡಿಕೇರಿಯ ವಿವಿಧ ಉದ್ಯಾನಗಳಿಂದ ಈ ಸಸ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಪೋಷಿಸುತ್ತಿದ್ದಾರೆ. ಉದ್ಯಾನದ ಗಿಡಗಳಿಗೆ ನೀರುಣಿಸಲು ಸ್ಪ್ರಿಂಕ್ಲರ್ ಪದ್ಧತಿ ಅಳವಡಿಸಿದ್ದಾರೆ. ಕಾಲಕಾಲಕ್ಕೆ ಸರಿಯಾಗಿ ಗಿಡಗಳಿಗೆ ಔಷಧಿ ಸಿಂಪಡಿಸುವುದು, ಸರಿಯಾದ ಆಕೃತಿಗಳಲ್ಲಿ ಅವುಗಳನ್ನು ಕತ್ತರಿಸುವುದು ಎಲ್ಲಾ ಜವಾಬ್ದಾರಿಯೂ ಇವರದ್ದೇ.ನೀಗಿದ ನೀರಿನ ಸಮಸ್ಯೆ

ಇವರ ಸಸ್ಯ ಕಾಳಜಿಗೆ ಸ್ಪಂದಿಸಿರುವ ಬಡಾವಣೆಯ ಜನರು ಕೊಳವೆ ಬಾವಿ ಕೊರೆಸಿ ಪುರಸಭೆಗೆ ಹಸ್ತಾಂತರಿಸಿದ್ದಾರೆ. ಈ ಕೊಳವೆ ಬಾವಿ ಕೊರೆಯುವುದಕ್ಕೂ ಮೊದಲು ಬಡಾವಣೆಯ ಜನರು ಬೇರೆ ಕಡೆಗಳಿಂದ ನೀರು ತಂದು ಸಸ್ಯಗಳಿಗೆ ಉಣಬಡಿಸುತ್ತಿದ್ದರು. ರಸ್ತೆ ದಾಟಿ ನೀರು ತರಬೇಕಾಗಿದ್ದರಿಂದ ಕೆಲವು ಬಾರಿ ಅಪಘಾತಗಳು ಸಂಭವಿಸಿದ್ದೂ ಉಂಟು.

ಈಗ ನೀರಿಗಾಗಿ ರಸ್ತೆ ದಾಟುವ ಪ್ರಮೇಯ ಇಲ್ಲ. ನೆಲಮಂಗಲ ತಾಲ್ಲೂಕಿನಲ್ಲಿ ನೀರಿನ ಬವಣೆ ಎದುರಾದರೂ ಇಲ್ಲಿ ಕೊರತೆ ಇರುವುದಿಲ್ಲ. ಬಡಾವಣೆಯ ಯಾವುದಾದರೂ ಮನೆಯಲ್ಲಿ ಶುಭಕಾರ್ಯ ನಡೆದರೆ ಆ ಮನೆಗೆ ಇಲ್ಲಿಂದಲೇ ನೀರು ಪೂರೈಕೆ ಆಗುತ್ತದೆ! ಸುತ್ತಲಿನ ಜನರು ಯಾರಾದರೂ ಅಸ್ವಸ್ಥರಾದರೆ ಉದ್ಯಾನದಲ್ಲಿ ಸಿಗುವ ಔಷಧಿಯನ್ನು ಬಳಸಿಕೊಳ್ಳಲು ಅಯ್ಯಪ್ಪ ಸೂಚಿಸುತ್ತಾರೆ. ಗಿಡಗಳ ಹೆಸರು ಸುಲಭದಲ್ಲಿ ತಿಳಿಯಲು ಅನುಕೂಲ ಆಗುವಂತೆ ಗಿಡಗಳ ಪಕ್ಕದಲ್ಲಿ ಅವುಗಳ ಹೆಸರು ಸೂಚಿಸುವ ಫಲಕ ಅಳವಡಿಸಲಾಗಿದೆ.ಉದ್ಯಾನದಲ್ಲಿ ಅಲ್ಲಲ್ಲಿ ಸಸ್ಯಗಳ ಬಗ್ಗೆ, ಕಾಯಿಲೆಗಳ ಬಗ್ಗೆ ಹಾಗೂ ದಿನನಿತ್ಯ ಎದುರಾಗುವ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನೂ ಹಾಕಲಾಗಿದೆ. ಡೆಂಗೆ ಜ್ವರ ಬಂದರೆ ಏನು ಮಾಡಬೇಕು, ಹಾವು ಕಂಡರೆ ಹೇಗೆ ವರ್ತಿಸಬೇಕು, ತುರ್ತು ದೂರವಾಣಿ ಸಂಖ್ಯೆಗಳು ಯಾವುವು... ಹೀಗೆ ಅನೇಕ ಉಪಯುಕ್ತ ಫಲಕಗಳು ಅಲ್ಲಿವೆ.ಪರಿಸರ ದಿನಾಚರಣೆಯಂದು ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸುತ್ತಾರೆ ಅಯ್ಯಪ್ಪ. ಇದರಿಂದ ಜನರೂ ಜಾಗೃತರಾಗಿ ತಮ್ಮ ಮನೆಗಳಲ್ಲಿ ಗಿಡ ಬೆಳೆಸಬಹುದು ಎನ್ನುವ ಆಶಾಭಾವನೆ ಅವರದ್ದು. ‘ಈ ಉದ್ಯಾನ ಆರಂಭವಾಗಿ ಒಂದು ವರ್ಷವಾಗಿದೆ. ನಾರಾಯಣಪ್ಪ ಅವರು ನಿವೇಶನ ನೀಡಿದರು. ಜನರ ಪ್ರೋತ್ಸಾಹ, ನೆರವಿನಿಂದ ಉದ್ಯಾನ ಈ ಮಟ್ಟಿನ ಯಶ ಕಂಡಿದೆ. ಇಲ್ಲಿ ಮಕ್ಕಳಿಗಾಗಿ ಜೋಕಾಲಿ ವ್ಯವಸ್ಥೆಯೂ ಇರುವುದರಿಂದ ಇದು ಆಬಾಲವೃದ್ಧರಿಗೂ ಹೇಳಿ ಮಾಡಿಸಿದಂತಹ ಉದ್ಯಾನ ಎನ್ನುವುದು ಅವರ ಮಾತು.

ಸಂಪರ್ಕಕ್ಕೆ 9535120605

-ಮಹಾಂತೇಶ್ ನೆಗಳೂರ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry