ಶನಿವಾರ, ಜನವರಿ 18, 2020
21 °C

ಔಷಧಗಳ ಸರಮಾಲೆ ನೆಲನೆಲ್ಲಿ

ಯು. ಕಿರಣಾ Updated:

ಅಕ್ಷರ ಗಾತ್ರ : | |

‘ನೆಲನೆಲ್ಲಿ’ ಇದು ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕೇಳಿಬರುವ ಸಸ್ಯ. ಹೆಸರೇ ಹೇಳುವಂತೆ ಇದು ನೆಲದ ಮೇಲೆ ಹರಡಿಕೊಂಡಂತೆ ಬೆಳೆಯುವ ಪುಟ್ಟ ಗಿಡ. ಮಳೆಗಾಲದಲ್ಲಿ ಇಳೆಯಿಂದ ಹೊರಬಂದು ಇತರ ಗಿಡಗಳೊಂದಿಗೆ ಕಳೆಯಂತೆಯೂ ಬೆಳೆಯಬಲ್ಲ ಈ ಪುಟಾಣಿ ಗಿಡದಲ್ಲಿನ ಔಷಧೀಯ ಗುಣ ಬೆಟ್ಟದಷ್ಟಿದೆ.ಕಾಮಾಲೆ, ಹೊಟ್ಟೆನೋವು, ಶ್ಲೇಷ್ಮಾತೀಸಾರ, ಕಣ್ಣು ನೋವು, ಪಿತ್ತಜನಕಾಂಗದ ಸಮಸ್ಯೆ, ಮೂತ್ರಾಂಗಗಳ ತೊಂದರೆ, ಅಜೀರ್ಣ, ಜ್ವರ, ಅತಿಸಾರ ಹೀಗೆ ಹಲವು ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಬಲ್ಲದು. ಅದಕ್ಕಾಗಿಯೇ ಆಯುರ್ವೇದದಲ್ಲಿ ಈ ಸಸ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಹಸಿ ಸಸ್ಯ ಮಾತ್ರವಲ್ಲದೇ ಇದನ್ನು ಕೊಯ್ಲು ಮಾಡಿದ ನಂತರ ಒಣಗಿಸಿ ಒಂದು ವರ್ಷ ಶೇಖರಿಸಿಟ್ಟು ಕೂಡ ಔಷಧ ರೂಪದಲ್ಲಿ ಉಪಯೋಗಿಸಬಹುದು.ಹೆಚ್ಚಿನ ಖರ್ಚಿಲ್ಲದೇ ಬೆಳೆಯಬಹುದಾದ ಈ ಸಸ್ಯ ಆರ್ಥಿಕವಾಗಿಯೂ ರೈತರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ.

ಏನಿದು ನೆಲನೆಲ್ಲಿ?ಸೂಕ್ಷ್ಮವಾಗಿ ಅವಲೋಕಿಸಿದರೆ ಇದರ ಎಲೆಗಳು ಬೆಟ್ಟದ ನೆಲ್ಲಿಯಂತೆ ಕಾಣುತ್ತದೆ. ಸಾಸಿವೆ ಗಾತ್ರದ ಕಾಯಿಯು ಎಲೆಯ ಹಿಂಭಾಗದಲ್ಲಿ ಇರುವುದು ವಿಶೇಷ. ಇದು ನೆಲ್ಲಿಕಾಯಿ ಕುಟುಂಬಕ್ಕೆ ಸೇರಿರುವ ಸಸ್ಯ. ‘ಪೈಲಂಥಸ್‌ ಅಮರಸ್‌’ ಎಂಬುದು ಇದರ ವೈಜ್ಞಾನಿಕ ಹೆಸರು. ಯುಪೋರೆಬೇಸಿಯಾ ಕುಟುಂಬಕ್ಕೆ ಇದು ಸೇರಿದೆ. ಕನ್ನಡದಲ್ಲಿ ನೆಲನೆಲ್ಲಿಯಾಗಿರುವ ಇದು ಸಂಸ್ಕೃತದಲ್ಲಿ ಭೂಮ್ಯಾಮಲಕ, ಹಿಂದಿಯಲ್ಲಿ ಭೂ ಆಮ್ಲ ಎಂದೂ ಕರೆಸಿಕೊಳ್ಳುತ್ತದೆ.ಇದಕ್ಕೆ ತೇವಾಂಶವೆಂದರೆ ಪ್ರೀತಿ. ಅದಕ್ಕಾಗಿ ಮಳೆಗಾಲದಲ್ಲಿ ಹುಟ್ಟಿ, ಚಳಿಗಾಲದಲ್ಲಿ ಚಿಗುರಲು ಆರಂಭಿಸುತ್ತದೆ. ಇದನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಶಾದಲ್ಲಿಯೂ ಹೇರಳವಾಗಿ ಕಾಣಬಹುದು. 10ಸೆಂ.ಮೀ ನಿಂದ 50–60 ಸೆಂ.ಮೀ ಎತ್ತರಕ್ಕೆ ಇದು ಬೆಳೆಯಬಲ್ಲದು.ಹೀಗೆ ಬೆಳೆಯಬಹುದು

ಇದನ್ನು ಬೆಳೆಯಲು ಇಂಥದ್ದೇ ಮಣ್ಣು ಬೇಕೆಂದೇನೂ ಇಲ್ಲ. ಸಾಮಾನ್ಯವಾಗಿ ಎಲ್ಲಾ ಮಣ್ಣಿನ ಗುಣಕ್ಕೂ, ಎಲ್ಲ ವಿಧದ ಹವಾಮಾನಕ್ಕೂ ಇದು ಹೊಂದಿಕೊಳ್ಳಬಲ್ಲದು. ಆದರೆ ಅತ್ಯಂತ ಒಣ ಹವೆ ಇದಕ್ಕೆ ಆಗದು.ಮೊದಲೇ ಹೇಳಿದ ಹಾಗೆ ಇದು ಕಳೆಯಂತೆ ಬೆಳೆಯಬಲ್ಲುದಾದರೂ ಬೀಜಗಳ ಮೂಲಕ ಈ ಸಸ್ಯದ ಕೃಷಿ ಮಾಡಬಹುದು. ಏಪ್ರಿಲ್‌ – ಮೇ ತಿಂಗಳು ಬೀಜದ ಬಿತ್ತನೆಗೆ ಉತ್ತಮ ಕಾಲ. ಒಂದು ಎಕರೆ ಪ್ರದೇಶದಲ್ಲಿ ಈ ಬೆಳೆ ಬೆಳೆಯಲು ಅರ್ಧ ಕಿ.ಗ್ರಾಂ ಬೀಜ ಸಾಕು. ಇದೊಂದು ಔಷಧೀಯ ಸಸ್ಯವಾಗಿರುವ ಕಾರಣ, ಯಾವುದೇ ಸಂದರ್ಭದಲ್ಲಿಯೂ ರಾಸಾಯನಿಕವನ್ನು ಇದರ ಹತ್ತಿರ ತರಬೇಡಿ.ಸಾವಯವ ವಿಧಾನದಲ್ಲಿ ಇದನ್ನು ಬೆಳೆಯಿರಿ. ಹಟ್ಟಿಗೊಬ್ಬರ ಮಿಶ್ರಣ ಮಾಡಿರುವ ಮಣ್ಣನ್ನು ಹಾಕಿ ಬೀಜವನ್ನು ಬಿತ್ತಬೇಕು. ಇದರ ಬೀಜಗಳು ಬಲು ಸೂಕ್ಷ್ಮ. ಆದ್ದರಿಂದ ಇದನ್ನು ಮರಳು ಮಿಶ್ರಿತ ಒಣಮಣ್ಣಿನಲ್ಲಿ ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಉತ್ತಮ. ಬಿತ್ತನೆ ಮಾಡಿದ ನಂತರ ತೆಳುವಾದ ಮಣ್ಣಿನ ಮುಚ್ಚುವಿಕೆ ಇದರ ಮೇಲೆ ಹಾಕಬೇಕು. ಈ ಸಸ್ಯದ ಬೆಳವಣಿಗೆಗೆ ತೇವಾಂಶ ಬಹಳ ಅಗತ್ಯ. ಆದುದರಿಂದ ಬೀಜಗಳು ಮೊಳಕೆಯೊಡೆಯುವ ತನಕ ತೇವಾಂಶ ಇರುವಂತೆ ನೋಡಿಕೊಳ್ಳಬೇಕು.ಹೀಗೆ ನಾಟಿ ಮಾಡಿ

೧೫ ರಿಂದ ೩೦ ದಿನಗಳಲ್ಲಿ ಈ ಗಿಡವು ಸುಮಾರು ೧೦ ಸೆಂ.ಮೀ ಎತ್ತರ ಬೆಳೆಯುತ್ತದೆ. ಅದನ್ನು ೧೫ ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಈ ಸಂದರ್ಭದಲ್ಲಿ ನೀರು ಹಾಕುವುದನ್ನು ಮರೆಯಬೇಡಿ. ಇಷ್ಟು ಮಾಡಿದರೆ ಸಸ್ಯ ಚೆನ್ನಾಗಿಯೇ ಬೆಳೆಯುತ್ತದೆ.ಇದು ಕಳೆಯ ರೂಪದಲ್ಲಿ ಬೆಳೆಯುವ ಸಸ್ಯವಾದರೂ ಇದರ ಸುತ್ತಲೂ ಕಳೆ ಬೆಳೆದರೆ ಅದನ್ನು ತಿಂಗಳಿಗೊಮ್ಮೆ ಕೀಳುತ್ತಲೇ ಇರಬೇಕು. ನೆಲನಲ್ಲಿ ಚಿಕ್ಕ ಸಸ್ಯವಾಗಿರುವ ಕಾರಣ, ಕಳೆಗಳನ್ನು ಯಂತ್ರ ಉಪಯೋಗಿಸದೇ ಕೈಯಿಂದಲೇ ಕಿತ್ತರೆ ಉತ್ತಮ. ಗಿಡ ೩೦ ಸೆಂ.ಮೀ ಎತ್ತರಕ್ಕೆ ಬೆಳೆದಾಗ ಹಟ್ಟಿಗೊಬ್ಬರ ಕೊಡಿ.ಮಳೆಗಾಲ ಮುಗಿದ ತಕ್ಷಣ ಗಿಡವನ್ನು ಕೊಯ್ಲು ಮಾಡಬಹುದು. ಹಳದಿ ಬಣ್ಣದ ಹೂವುಗಳನ್ನು ಹೊಂದಿ­ರುವ ಈ ಗಿಡದಲ್ಲಿ ಆಗಸ್ಟ್-– ಸೆಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಸಣ್ಣ ಹಸಿರು ಬಣ್ಣದ ಗುಂಡಾಕಾರದ ಕಾಯಿ ಬಿಡಲು ಆರಂಭಿಸುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇದರ ಎಲೆಯಲ್ಲಿ ಅಧಿಕ ಪ್ರಮಾಣದ ಔಷಧೀಯ ಗುಣವಿರುವುದರಿಂದ ಆಗ ಕಟಾವು ಮಾಡುವುದು ಉತ್ತಮ.ಒಂದು ಹೆಕ್ಟೇರ್‌ (ಎರಡೂವರೆ ಎಕರೆ) ಜಮೀನಿನಲ್ಲಿ ಈ ಸಸ್ಯ ಬೆಳೆಯಲು ತಗುಲುವ ವೆಚ್ಚ ಐದರಿಂದ ಆರು ಸಾವಿರ ರೂಪಾಯಿ. ಆದರೆ 20 ರಿಂದ 25 ಸಾವಿರ ರೂಪಾಯಿವರೆಗೂ ಆದಾಯ ಗಳಿಸಬಹುದು. ಏಕೆಂದರೆ ಒಂದು ಕಿ.ಗ್ರಾಂ ನೆಲನೆಲ್ಲಿಯ ಮಾರುಕಟ್ಟೆ ಬೆಲೆ ೪೦ರಿಂದ 50 ರೂಪಾಯಿವರೆಗೆ ಇದೆ.

ಪ್ರತಿಕ್ರಿಯಿಸಿ (+)