ಔಷಧಿ ಖರೀದಿಗೆ ಚೀಟಿ ಕೊಟ್ಟರೆ ಅಮಾನತು

7

ಔಷಧಿ ಖರೀದಿಗೆ ಚೀಟಿ ಕೊಟ್ಟರೆ ಅಮಾನತು

Published:
Updated:

ಹುಬ್ಬಳ್ಳಿ: ‘ಸರ್ಕಾರಿ ವೈದ್ಯರು ಹೊರಗಡೆ ಔಷಧಿ ಖರೀದಿಸಿರೆಂದು ರೋಗಿಗಳಿಗೆ ಚೀಟಿ ಬರೆದುಕೊಟ್ಟಿರುವುದು ಗೊತ್ತಾದರೆ ಅಮಾನತುಗೊಳಿಸಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಎಚ್ಚರಿಸಿದರು.ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ ವಾಜಪೇಯಿ ಆರೋಗ್ಯಶ್ರೀ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸರ್ಕಾರಿ ಆಸ್ಪತ್ರೆಗಳನ್ನು ನಂಬಿಕೊಂಡು ಬಡವರು ಬರುತ್ತಾರೆ. ಅವರು ಸ್ವಾಭಿಮಾನದಿಂದ ಬದುಕುವವರು. ಅವರನ್ನು ಗೌರವದಿಂದ ಕಾಣಿರಿ ಮತ್ತು ಪ್ರೀತಿಯಿಂದ ಮಾತನಾಡಿಸಿರಿ’ ಎಂದು ಅವರು ವೈದ್ಯರಲ್ಲಿ ವಿನಂತಿಸಿಕೊಂಡರು.‘ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರುವುದಿಲ್ಲ. ಇದಕ್ಕಾಗಿ 1400 ವೈದ್ಯರ ನೇಮಕಾತಿ ಆಗಿದೆ. ಅವರೆಲ್ಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಜೊತೆಗೆ 24 ಗಂಟೆಯೂ ಲಭ್ಯ ಇರಬೇಕು. ಇವರೊಂದಿಗೆ ಐದು ಸಾವಿರ ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.‘ಆರೋಗ್ಯಶ್ರೀ ಶಿಬಿರದಲ್ಲಿ ಅನೇಕ ಕಾಯಿಲೆಗಳಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ರಾಜ್ಯದ 120 ಸುಸಜ್ಜಿತ ಆಸ್ಪತ್ರೆಗಳಲ್ಲಿ ದಾಖಲಾಗಬಹುದು. ಬಸ್ ದರ ಕೊಡುವುದರ ಜೊತೆಗೆ ಉಚಿತ ಊಟ ಹಾಗೂ ವಸತಿಯನ್ನೂ ಕಲ್ಪಿಸಲಾಗುತ್ತದೆ. ಇದೆಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಬೇಕು ಎನ್ನುವುದು ನನಸಾಗಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.‘ಆರೋಗ್ಯಶ್ರೀ ಶಿಬಿರದ ಜೊತೆಗೆ 108 ಆ್ಯಂಬುಲೆನ್ಸ್ ವಾಹನಗಳು ರಾಜ್ಯದಲ್ಲಿ 117 ಇವೆ. ಇವುಗಳಿಂದ  ಗರ್ಭಿಣಿಯರಲ್ಲದೆ ಹಾವು, ಚೇಳು ಕಡಿಸಿಕೊಂಡವರೂ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಹೀಗಾಗಿ ಅಸಂಖ್ಯ ಜೀವಗಳು ಉಳಿದಿವೆ. ಒಟ್ಟು 2.5 ಕೋಟಿ ಜನರು ಲಾಭ ಪಡೆದಿದ್ದಾರೆ. ಇದರೊಂದಿಗೆ 104 ಎಂಬ ಸಂಚಾರಿ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯಿದೆ. ಗ್ರಾಮಗಳಿಗೆ ತೆರಳಿ ರಕ್ತ, ಮೂತ್ರ ಪರೀಕ್ಷೆ ಜೊತೆಗೆ ಶಸ್ತ್ರಚಿಕಿತ್ಸೆಯನ್ನೂ ಸಂಚಾರಿ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ‘ಹೈದ್ರಾಬಾದ ಕರ್ನಾಟಕಕ್ಕೆ ಮಾತ್ರವಿದ್ದ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಿಸಲಾಗಿದೆ.  ಇಂಥ ಶಿಬಿರಗಳು ಪ್ರತಿ ತಿಂಗಳು ಜಿಲ್ಲಾಸ್ಪತ್ರೆಗಳಲ್ಲಿ ನಡೆಯಲಿವೆ ’ ಎಂದು ಆಶ್ವಾಸನೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ‘ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಈ ಶಿಬಿರದಲ್ಲಿ 36 ಆಸ್ಪತ್ರೆಗಳು ಪಾಲ್ಗೊಂಡಿವೆ. 80 ತಜ್ಞ ವೈದ್ಯರು ಕಾರ್ಯ ನಿರ್ವಹಿಸಿದ್ದಾರೆ. 16 ಗಂಭೀರ ಸ್ವರೂಪದ ಕಾಯಿಲೆಗಳನ್ನು ಗುರುತಿಸಲಾಗಿದೆ.402 ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ’ ಎಂದರು. ಇದೇ ಸಂದರ್ಭದಲ್ಲಿ ವಾಜಪೇಯಿ ಆರೋಗ್ಯಶ್ರೀ ಕಿರುಪುಸ್ತಕವನ್ನು ಶಾಸಕ ಚಂದ್ರಕಾಂತ ಬೆಲ್ಲದ ಬಿಡುಗಡೆಗೊಳಿಸಿದರು. ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಮೇಯರ್ ವೆಂಕಟೇಶ ಮೇಸ್ತ್ರಿ, ಉಪಮೇಯರ್ ಭಾರತಿ ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ದೇವರಾಜ ಅರಸು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಜಿಲ್ಲಾಧಿಕಾರಿ ದರ್ಪಣ ಜೈನ್ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ. ಶಿಖಾ  ಹಾಜರಿದ್ದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ. ಅಂಗಡಿ ವಂದಿಸಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಮೂರು ಸಾವಿರ ರೋಗಿಗಳು ಪರೀಕ್ಷೆಗೆ ಒಳಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry