ಸೋಮವಾರ, ಸೆಪ್ಟೆಂಬರ್ 20, 2021
26 °C

ಔಷಧಿ-ಬ್ಯಾಂಕಿಂಗ್ ಕ್ಷೇತ್ರ ನೇಮಕ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔಷಧಿ-ಬ್ಯಾಂಕಿಂಗ್ ಕ್ಷೇತ್ರ ನೇಮಕ ಚುರುಕು

ನವದೆಹಲಿ (ಪಿಟಿಐ): ದೇಶದಲ್ಲಿ ಸದ್ಯ ಉದ್ಯೋಗಾವಕಾಶ ಉತ್ತಮವಾಗಿದ್ದು, ಜೂನ್ ತಿಂಗಳಲ್ಲಿ ಸಿಬ್ಬಂದಿ ನೇಮಕ ಪ್ರಕ್ರಿಯೆ ಬಹಳ ಚುರುಕಾಗಿದ್ದಿತು. ಮುಖ್ಯವಾಗಿ, ವಾಹನ ಉದ್ಯಮ, ಔಷಧ ತಯಾರಿಕೆ ಕ್ಷೇತ್ರದಲ್ಲಿ ಸಂದರ್ಶನ-ನೇಮಕ ಬಹಳ ಚಟುವಟಿಕೆಯಿಂದಿದ್ದಿತು.ಜಾಬ್ ಪೋರ್ಟಲ್ `ನೌಕ್ರಿ ಡಾಟ್‌ಕಾಂ~ ಪ್ರಕಾರ; ಕೆಲವು ಆಯ್ದ ಕ್ಷೇತ್ರಗಳಲ್ಲಿ ನೌಕರರ ನೇಮಕ ಗರಿಷ್ಠ ಮಟ್ಟದಲ್ಲಿದ್ದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪರಿಸ್ಥಿತಿ ಮಾತ್ರ ಆಶಾದಾಯಕವಾಗಿರಲಿಲ್ಲ.

`ಎಲ್ಲ ಕ್ಷೇತ್ರಗಳತ್ತ ನೋಟ ಹರಿಸಿದರೆ ಜೂನ್‌ನಲ್ಲಿ ಆಯ್ದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಹೆಚ್ಚು ನಡೆದಿದೆ.ಮುಂದಿನ ಕೆಲವು ತಿಂಗಳು ಉದ್ಯೋಗಿಗಳ ನೇಮಕ ಕ್ಷೇತ್ರಕ್ಕೆ ನೈಜ ಸವಾಲಿನ ದಿನಗಳಾಗಿರಲಿವೆ~ ಎಂದು `ಇನ್ಫೊ ಎಡ್ಜ್ ಇಂಡಿಯ~ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಒಬೆರಾಯ್ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.`ಇನ್ಫೊ ಎಡ್ಜ್ ಇಂಡಿಯ~ ಸಮೂಹದ ಅಂಗಸಂಸ್ಥೆಯಾಗಿರುವ `ನೌಕ್ರಿ ಡಾಟ್‌ಕಾಂ~ ಪ್ರಕಾರ; ವಾಹನ ಉದ್ಯಮ ಮತ್ತು ಔಷಧ ತಯಾರಿಕಾ ಕ್ಷೇತ್ರದ ಉದ್ದಿಮೆಗಳು ಸಿಬ್ಬಂದಿ ನೇಮಕದಲ್ಲಿ ಹೊಸಬರಿಗೆ ಹೆಚ್ಚು ಅವಕಾಶ ನೀಡುತ್ತಿವೆ. ಆದರೆ, ಕಟ್ಟಡ ನಿರ್ಮಾಣ, ವಿಮೆ, ತೈಲೋತ್ಪನ್ನ ಮತ್ತು ಅನಿಲ ಕ್ಷೇತ್ರದ ಉದ್ದಿಮೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಆಧರಿಸಿದ ಕಂಪೆನಿಗಳು ಮಾತ್ರ ಉದ್ಯೋಗಿಗಳ ನೇಮಕ ಪ್ರಮಾಣವನ್ನು ಸದ್ಯಕ್ಕೆ ಕಡಿಮೆ ಮಾಡಿವೆ.ಇದೇ ವೇಳೆ, `ನೌಕ್ರಿ ಜಾಬ್ ಸ್ಪೀಕ್ ಇಂಡೆಕ್ಸ್~ (ಆನ್‌ಲೈನ್ ಮಾರ್ಗದ ಉದ್ಯೋಗ ಬೇಡಿಕೆಯ ದರ ಸೂಚಿ) ಮೇನಲ್ಲಿ 1194ರಲ್ಲಿದ್ದುದು, ಜೂನ್‌ನಲ್ಲಿ 1210ಕ್ಕೆ ಏರಿದೆ.ನುರಿತವರಿಗೆ, ಪ್ರತಿಭಾವಂತರಿಗೆ ಹೆಚ್ಚು ಅವಕಾಶಗಳ ಬಾಗಿಲು ತೆರೆಯುತ್ತಿದ್ದ ಹಾಗೂ ಅತಿ ಹೆಚ್ಚು ಉದ್ಯೋಗವನ್ನೂ ನೀಡುತ್ತಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೆಗ ನೇಮಕ ಪ್ರಕ್ರಿಯೆ ಮಂದಗತಿಯಲ್ಲಿದೆ.ಜತೆಗೆ ವರ್ಷದಿಂದ ವರ್ಷಕ್ಕೆ ನೌಕರಿ ನೀಡುವ ಪ್ರಮಾಣವೂ ಕಡಿಮೆ ಆಗುತ್ತಲೇ ಇದೆ. ಕೆಲವು ಐಟಿ ಕಂಪೆನಿಗಳಲ್ಲಿಯಂತೂ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಅಂಶವೇ ಈಗ ಮುಖ್ಯವಾಗಿ ಗಮನ ಸೆಳೆಯುವಂತಹುದಾಗಿದೆ.`2011ರ ಜೂನ್‌ಗೆ ಹೋಲಿಸಿದಲ್ಲಿ 2012ರಲ್ಲಿ ಸಾಫ್ಟ್‌ವೇರ್ ಸೇವಾ ಕ್ಷೇತ್ರದಲ್ಲಿನ ಸಿಬ್ಬಂದಿ ನೇಮಕ ಪ್ರಮಾಣದಲ್ಲಿ ಶೇ 9, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ 16 ಹಾಗೂ ಔಷಧ ತಯಾರಿಕೆ ರಂಗದಲ್ಲಿ ಶೇ 19ರಷ್ಟು ಪ್ರಗತಿ ಕಂಡುಬಂದಿದೆ~ ಎಂದು ನೌಕ್ರಿ ಡಾಟ್ ಕಾಂ ಅಂಕಿ-ಅಂಶ ನೀಡಿದೆ.ದೇಶದ ಪ್ರಮುಖ ನಗರಗಳತ್ತ ನೋಡಿದಾಗ ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ನೇಮಕ ಪ್ರಮಾಣ ಋಣಾತ್ಮಕವಾಗಿದ್ದರೆ (ಮೈನಸ್ 5), ಮುಂಬೈ ಮತ್ತು ಚೆನ್ನೈನಲ್ಲಿ ಶೇ 9ರಷ್ಟು ಪ್ರಗತಿ ದಾಖಲಾಗಿದೆ. ನವದೆಹಲಿ, ಪುಣೆ ಮತ್ತು ಕೋಲ್ಕತಾದಲ್ಲಿ ಶೇ 3ರಿಂದ ಶೇ 6ರಷ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.