ಔಷಧಿ ಸಸ್ಯ ಸಂರಕ್ಷಣೆಗೆ ಕ್ರಮ

7

ಔಷಧಿ ಸಸ್ಯ ಸಂರಕ್ಷಣೆಗೆ ಕ್ರಮ

Published:
Updated:

ಧಾರವಾಡ: “ರಾಜ್ಯದ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿರುವ ಅಪಾರ ಹಾಗೂ ಅಮೂಲ್ಯ ಔಷಧಿ ಸಸ್ಯ, ಗಿಡಮೂಲಿಕೆಗಳ ಸಂರಕ್ಷಣೆ ಸಂವರ್ಧನೆ ಕುರಿತಂತೆ ಸಮಗ್ರ ನೀತಿಯನ್ನು ರೂಪಿಸಲು ಕ್ರಮಕೈಕೊಳ್ಳಲಾಗುತ್ತಿದೆ” ಎಂದು ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.ಇಲ್ಲಿನ ಗುಂಗಾರಗಟ್ಟಿಯ ಅರಣ್ಯ ಇಲಾಖೆಯ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿ ಹಾಗೂ ಎಫ್‌ಆರ್‌ಎಲ್‌ಎಚ್‌ಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮುಂಚೂಣಿ ಅರಣ್ಯ ಸಿಬ್ಬಂದಿಗೆ ಔಷಧಿ ಸಸ್ಯ ಸಂಪನ್ಮೂಲಗಳ ಗುರುತು ಮತ್ತು ನಿರ್ವಹಣೆ ಕುರಿತು ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾರುಕಟ್ಟೆಯಲ್ಲಿ ದೊರೆಯುವ ಔಷಧಿ ಸಸ್ಯಗಳ ಕಚ್ಚಾ ಸರಕಿನಲ್ಲಿ ಶೇ. 80 ರಷ್ಟು ಕಳ್ಳತನದಿದ್ದು, ಇದನ್ನು ತಡೆಯಲು ಅರಣ್ಯ ಸಿಬ್ಬಂದಿಗೆ, ಅಧಿಕಾರಿಗಳಿಗೆ ಈ ಸಸ್ಯಗಳ ಪರಿಚಯ ಮಾಡಿಕೊಡುವುದು ಅವಶ್ಯವಿದೆ. ಈ ತರಬೇತಿಯನ್ನು ಸಂಬಂಧಿತ ಅರಣ್ಯ ಪ್ರದೇಶಗಳ ಸಮೀಪದ ಜನರಿಗೂ, ಸ್ಥಾನಿಕ ಅರಣ್ಯ ಸಮಿತಿಗಳ ಸದಸ್ಯರಿಗು ನೀಡುವ ಅಗತ್ಯವಿದೆ ಎಂದರು.ಔಷಧಿ ಸಸ್ಯ ಹಾಗೂ ಜೇಣಿನ ವಿನಾಶವನ್ನು ತಡೆಗಟ್ಟಿ, ಯಲ್ಲಪ್ಪ ರೆಡ್ಡಿ ಅವರಂಥ ಅಧಿಕಾರಿಗಳಿಂದಾಗಿ ರಾಜ್ಯದ ಅರಣ್ಯ ಸಂಪತ್ತಿನ, ಔಷಧಿ ಸಸ್ಯಗಳ ಕುರಿತಂತೆ ಒಂದು ಆಂದೋಲನದ ರೂಪದಲ್ಲಿ ಜಾಗೃತಿ ಮೂಡುತ್ತಿದೆ. ಮಕ್ಕಳಿಗೆ ಔಷಧಿ ಸಸ್ಯಗಳ ಪರಿಚಯ, ಮಹತ್ವ ಹಾಗೂ ಬಳಕೆ ತಿಳಿಸಲು ರಾಜ್ಯದ ಶಾಲೆಗಳಲ್ಲಿ 50 ಸವಿರ ನೆಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಔಷಧಿ ಸಸ್ಯದ ಅಮೂಲ್ಯ ಜ್ಞಾನವನ್ನು ದಾಖಲಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.ಕಪ್ಪತಗುಡ್ಡದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 10 ಸಾವಿರ ಹೆಕ್ಟೇರ್‌ನಷ್ಟು ಸಂರಕ್ಷಿತ ಔಷಧಿ ಸಸ್ಯ ಪ್ರದೇಶವೆಂದು ಘೋಷಿಸಿ ಅದರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ಬೀದರನ ದೇವಗಿರಿ, ಗುಲಬರ್ಗಾದ ಚಿಂಚೋಳಿ ಪ್ರದೇಶಗಳನ್ನು ಸಹ ಗುರುತಿಸಲಾಗಿದೆ. ನಾಡಿನ ಪರಂಪರೆಯ ಪ್ರತೀಕವಾದ ಔಷಧಿ ಸಸ್ಯಗಳನ್ನು ಉಳಿಸಲು ರೈತರೂ ಸಹ ಕೈ ಜೋಡಿಸಬೇಕು ಎಂದರು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ತರಬೇತಿ) ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಶಿರೂರ, ಡಾ. ಪಿ.ಶಂಕರ, ರವಿಕುಮಾರ, ವಿ.ಎಂ.ಹಲಗತ್ತಿ ಉಪಸ್ಥಿತರಿದ್ದರು. ಬಿ.ಎಸ್.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನಂತ ಹೆಗಡೆ ಅಶೀಸರ ಅವರು ಗುಂಗಾರಗಟ್ಟಿ ತರಬೇತಿ ಕೇಂದ್ರದ ಆವರಣದಲ್ಲಿ ಅಭಿವೃದ್ಧಿ ಪಡಿಸಿದ 150 ಔಷಧಿ ಸಸ್ಯಗಳ ವೃಕ್ಷವಾಡಿಕೆಯನ್ನು ವೀಕ್ಷಿಸಿದರು. ಎನ್.ಎಂ.ನಾಯಕ ಸ್ವಾಗತಿಸಿ, ನಿರೂಪಿಸಿದರು. ಸಣಕಲ್ಲ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry