ಔಷಧ ಅಕ್ರಮ: ಸಮಿತಿ ರಚನೆ

7

ಔಷಧ ಅಕ್ರಮ: ಸಮಿತಿ ರಚನೆ

Published:
Updated:

ನವದೆಹಲಿ (ಪಿಟಿಐ): ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯ (ಸಿಡಿಎಸ್‌ಸಿಒ) ಅಸಮರ್ಪಕ ಕಾರ್ಯವೈಖರಿ ಕುರಿತು ಸಂಸದೀಯ ಸ್ಥಾಯಿ ಸಮಿತಿ ಸಲ್ಲಿಸಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಹೊಸ ಔಷಧಿಗಳಿಗೆ ಮಂಜೂರಾತಿ ನೀಡುವಾಗ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ಮೂವರು ತಜ್ಞರನ್ನು ಒಳಗೊಂಡ ಸಮಿತಿಯನ್ನು ಶುಕ್ರವಾರ ನೇಮಿಸಿದೆ.ಐಸಿಎಂಆರ್ ಪ್ರಧಾನ ನಿರ್ದೇಶಕ ವಿ.ಎಂ.ಕಟೋಚ್, ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದ ಅಧ್ಯಕ್ಷ ಪಿ.ಎನ್. ಟಂಡನ್ ಮತ್ತು ಲಖನೌದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ನಿರ್ದೇಶಕ ಎಸ್.ಎಸ್.ಅಗರವಾಲ್ ಸಮಿತಿಯ ಸದಸ್ಯರಾಗಿದ್ದಾರೆ. ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ.ಹೊಸ ಔಷಧಗಳನ್ನು ಪರೀಕ್ಷೆಗೆ ಒಳಪಡಿಸದೇ ಮಂಜೂರಾತಿ ನೀಡುತ್ತಿರುವ ಪ್ರಕರಣಗಳನ್ನು ವ್ಯವಸ್ಥಿತ ರೀತಿಯಲ್ಲಿ ತಡೆಗಟ್ಟುವ ಕುರಿತು ಹಾಗೂ ಸಂಘಟನೆಯ ಕಾರ್ಯವೈಖರಿ ಸುಧಾರಣೆಗೆ ಸಲಹೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಸಮಿತಿಗೆ ನಿರ್ದೇಶನ ನೀಡಿದ್ದಾರೆ.ಯಾವುದೇ ರೀತಿಯ ಪರೀಕ್ಷೆ ನಡೆಸದೇ ಹೊಸ ಔಷಧಿಗಳಿಗೆ ಮಂಜೂರಾತಿ ನೀಡಿ ಭಾರಿ ಪ್ರಮಾಣದಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ಸ್ಥಾಯಿ ಸಮಿತಿ ವರದಿಯಲ್ಲಿ ತಿಳಿಸಿತ್ತು.ಔಷಧ ತಯಾರಕರು, ಔಷಧ ನಿಯಂತ್ರಣ ಸಂಘಟನೆ ಮತ್ತು ವೈದ್ಯಕೀಯ ತಜ್ಞರ ಮಧ್ಯೆ ನಂಟು ಇದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿಷೇಧಿಸಿದ, ಬಳಸಲು ಯೋಗ್ಯವಲ್ಲದ ಔಷಧಗಳಿಗೆ ಮಂಜೂರಾತಿ ನೀಡಲಾಗುತ್ತಿದೆ ಎಂದು ಹೇಳಿತ್ತು.ಸಂಘಟನೆಯ ಸ್ವರೂಪ ಮತ್ತು ಬಲಪಡಿಸುವಿಕೆ, ಹೊಸ ಔಷಧಿಗಳಿಗೆ ಮಂಜೂರಾತಿ ನೀಡುವಾಗ ಅನುಸರಿಸಬೇಕಾದ ವಿಧಾನ, ಔಷಧಗಳ ನಿಷೇಧ ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿಯು ಸರ್ಕಾರಕ್ಕೆ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry