ಕಂಕಣ ಬಲದ ಜೊತೆ ಕಾಂಚಾಣ ಭಾಗ್ಯ

7

ಕಂಕಣ ಬಲದ ಜೊತೆ ಕಾಂಚಾಣ ಭಾಗ್ಯ

Published:
Updated:

ಮಡಿಕೇರಿ: ಸರಳ ಸಾಮೂಹಿಕ ವಿವಾಹದಲ್ಲಿ ತಮ್ಮ ಸಂಗಾತಿಯನ್ನು ಕೈಹಿಡಿಯುವ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಯುವತಿಯರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಜಾರಿಗೆ ತಂದಿರುವ `ಆದರ್ಶ ವಿವಾಹ ಯೋಜನೆ~ಯನ್ನು ಕೊಡಗು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ.ಇದಕ್ಕೂ ಮೊದಲು ಈ ಯೋಜನೆಯನ್ನು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿತ್ತು. ಈಗ ಇದನ್ನು ಇನ್ನುಳಿದ ಎಲ್ಲ ಜಿಲ್ಲೆಗಳಲ್ಲೂ ಜಾರಿಗೊಳಿಸುವಂತೆ ರಾಜ್ಯದ ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದೆ.ಮದುವೆಗೆ ವಿಶಿಷ್ಟ ಸ್ಥಾನ

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಎಲ್ಲಿಲ್ಲದ ಮಹತ್ವ ನೀಡಲಾಗಿದೆ. ಮಾನವ ಜೀವನದ ಅತ್ಯಂತ ಪ್ರಮುಖ ಘಟ್ಟವೆಂದೂ ಬಿಂಬಿಸಲಾಗಿದೆ. ಇಡೀ ವಿಶ್ವದಲ್ಲಿಯೇ ವಿವಾಹಕ್ಕೆ ಭಾರತೀಯರು ನೀಡುವಷ್ಟು ಮಹತ್ವ ಬೇರಾವ ದೇಶದ ಪ್ರಜೆಗಳು ನೀಡುವುದು ಅಪರೂಪ.ಮದುವೆ ವಿಷಯದಲ್ಲಿ ಎಷ್ಟೇ ಬಡವರು ಇರಲಿ, ಶ್ರೀಮಂತರು ಇರಲಿ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ವೆಚ್ಚ ಮಾಡುವುದು ಸರ್ವೇಸಾಮಾನ್ಯ. ಅದ್ಧೂರಿ ಮದುವೆ ಮಾಡಲು ಹೋಗಿ ಸಾಲದ ಶೂಲಕ್ಕೆ ಬಲಿಯಾದ ಹಲವು ಕುಟುಂಬಗಳು ನಮ್ಮ ಕಣ್ಮುಂದೆ ಇವೆ.ಬಡವರು, ಹಿಂದುಳಿದವರು, ಪರಿಶಿಷ್ಟ ಕುಟುಂಬಗಳಲ್ಲಿಯೂ ಇದನ್ನು ಕಾಣುತ್ತೇವೆ. ಇದಕ್ಕೆ ತಡೆ ನೀಡಬೇಕು. ಅದ್ಧೂರಿ ಮದುವೆ ವೆಚ್ಚ ಮಾಡುವ ಲಕ್ಷಾಂತರ ರೂಪಾಯಿ ದುಂದುವೆಚ್ಚವನ್ನು ತಡೆಯಬೇಕೆನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ  ಸರಳ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ.ಈ ಪ್ರಯತ್ನದ ಫಲವಾಗಿಯೇ ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಸಿರುವ ಪರಿಶಿಷ್ಟ ಕುಟುಂಬದ ಯುವತಿಯರಿಗೆ ಪ್ರೋತ್ಸಾಹ ನೀಡಲು `ಆದರ್ಶ ವಿವಾಹ ಯೋಜನೆ~ ಜಾರಿಗೊಳಿಸಲಾಗಿದೆ. ಯೋಜನೆಗೆ ತಗಲುವ ಸಂಪೂರ್ಣ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ.ಮೊದಲ ಹಂತದಲ್ಲಿ ಧಾರವಾಡ, ಹಾವೇರಿ, ಗುಲ್ಬರ್ಗಾ, ಇತರೆ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸ ಲಾಗಿತ್ತು. ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣ ಇನ್ನುಳಿದ 24 ಜಿಲ್ಲೆಗಳಿಗೂ ಈ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ.ಕೊಡಗಿನ ಪಾಲು: ಮೂರು ತಾಲ್ಲೂಕುಗಳನ್ನು ಹೊಂದಿರುವ ಚಿಕ್ಕ ಜಿಲ್ಲೆ ಕೊಡಗಿಗೆ ಇತರ ಜಿಲ್ಲೆಗಳಂತೆ ಸಮವಾಗಿಯೇ ಸರ್ಕಾರವು ಅನುದಾನ ನೀಡಿದೆ. ಪ್ರತಿ ಜಿಲ್ಲೆಗಳಂತೆ ಕೊಡಗಿಗೂ 2011-12ನೇ ಸಾಲಿಗಾಗಿ ವಿಶೇಷ ಘಟಕ ಯೋಜನೆಯಡಿ ರೂ 7.98 ಲಕ್ಷ ಹಾಗೂ ಗಿರಿಜನ ಉಪಯೋಜನೆಯಡಿ ರೂ 3.37 ಲಕ್ಷ ನೀಡಲಾಗಿದೆ.ಷರತ್ತುಗಳು 

* ಸಾಮೂಹಿಕ ವಿವಾಹ ನಗರ ಪ್ರದೇಶಗಳಲ್ಲಿ ನಡೆದಿದ್ದರೆ ಕನಿಷ್ಠ 25 ಜೋಡಿಗಳು ಗ್ರಾಮಾಂತರ ಪ್ರದೇಶ ಗಳಲ್ಲಾದರೆ ಕನಿಷ್ಠ 10 ಜೋಡಿಗಳು ಸಪ್ತತುದಿ ತುಳಿದಿರಬೇಕು.* ಪರಿಶಿಷ್ಟ ಕುಟುಂಬದ ಯುವತಿ ತಮ್ಮದೇ ಸ್ವಜಾತಿ ಯುವಕರನ್ನು ವರಿಸಬಹುದು ಅಥವಾ ಬೇರೆ ಜಾತಿ ಯುವಕರನ್ನೂ ವರಿಸಬಹುದು, ವರನಿಗೆ ಜಾತಿಯ ನಿಬಂಧನೆ ಇಲ್ಲ.* ಯುವತಿಯ ಕುಟುಂಬದ ಆರ್ಥಿಕ ಮಾನದಂಡ ಇಲ್ಲಿಲ್ಲ. ಕೇವಲ ಬಡ ಕುಟುಂಬಗಳಿಗೆ ಸೇರಿದ ಯುವತಿ ಯಲ್ಲದೇ ಮಧ್ಯಮ, ಶ್ರೀಮಂತ ಕುಟುಂಬದ ಯುವತಿಯರೂ ಇದರ ಲಾಭ ಪಡೆದುಕೊಳ್ಳಬಹುದು.ರೂ 10,000 ಪ್ರೋತ್ಸಾಹ ಧನ

ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯಕ್ಕೆ ಕಾಲಿರಿಸುವ ಈ ಯುವತಿಯರಿಗೆ ರೂ 10,000 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಎರಡು ವರ್ಷ ನಿಶ್ಚಿತ ಠೇವಣಿ ಇಟ್ಟು, ಅವಧಿ ಪೂರ್ಣಗೊಂಡ ನಂತರ ಹಣ ಅವರ ಕೈಸೇರಲಿದೆ.ಈ ಯೋಜನೆಗಾಗಿ ರಾಜ್ಯ ಸರ್ಕಾರ ಒಟ್ಟು ರೂ 5 ಕೋಟಿ ಹಣ ತೆಗೆದಿರಿಸಿದೆ. ವಿಶೇಷ ಘಟಕ ಯೋಜನೆಯಡಿ ಪ್ರತಿ ಜಿಲ್ಲೆಗೆ ರೂ 7.98 ಲಕ್ಷ ಹಾಗೂ ಗಿರಿಜನ ಉಪಯೋಜನೆಯಡಿ ರೂ 3.37 ಲಕ್ಷ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಿದೆ.ಯೋಜನೆಯನ್ನು ಪ್ರತಿ ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗು ತ್ತದೆ. ತಹಶೀಲ್ದಾರ್ ಅವರೇ ಇದಕ್ಕೆ ಅನುಷ್ಠಾನ ಅಧಿಕಾರಿಯಾಗಿರುತ್ತಾರೆ.ಸಾಮೂಹಿಕ ವಿವಾಹ ನಡೆದಿರುವ ಬಗ್ಗೆ ಫೋಟೋ, ದಾಖಲೆಗಳು ಹಾಗೂ ಜಾತಿ ದೃಢೀಕರಣ ಪ್ರಮಾಣ ಪತ್ರದೊಂದಿಗೆ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry