ಭಾನುವಾರ, ಮೇ 22, 2022
26 °C

ಕಂಕನಾಡಿ ರೈಲು ನಿಲ್ದಾಣದಲ್ಲಿ ಶೀಘ್ರ ಕೌಂಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಕಂಕನಾಡಿ ರೈಲು ನಿಲ್ದಾಣದಲ್ಲಿ ಒಂದು ತಿಂಗಳಲ್ಲಿ ಮುಂಗಡ ಪಾವತಿಯ ರಿಕ್ಷಾ ಕೌಂಟರ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡ ತಿಳಿಸಿದರು. ಬಹುಜನರ ಬೇಡಿಕೆಯ ಮುಂಗಡ ಪಾವತಿ ರಿಕ್ಷಾ ಕೌಂಟರ್ ನಗರದ ಸೆಂಟ್ರಲ್ ರೈಲು ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ಕಂಕನಾಡಿ ನಿಲ್ದಾಣದಲ್ಲಿ ತುಂಬಾ ಸಮಸ್ಯೆಗಳು ಇವೆ ಎಂಬುದು ಗಮನಕ್ಕೆ ಬಂದಿದೆ. ಜನರ ಬೇಡಿಕೆಗೆ ಸ್ಪಂದಿಸಲಾಗುವುದು ಎಂದರು.ಮುಂಗಡ ಪಾವತಿ ಪಟ್ಟಿಗಳನ್ನು ಎರಡೂ ನಿಲ್ದಾಣದಲ್ಲಿ ಹಾಕಲಾಗಿದೆ. ಈ ಕೌಂಟರ್‌ಗಳನ್ನು ಮಂಗಳೂರು ಟ್ರಾವೆಲ್ ಏಜೆನ್ಸಿ ನಿರ್ವಹಣೆ ಮಾಡಲಿದೆ. ಪ್ರತಿ ಟಿಕೆಟ್‌ಗೆ ಅವರಿಗೆ ಒಂದು ರೂಪಾಯಿ ಪಾವತಿಸಲಾಗುವುದು. ನಿರ್ವಹಣೆಗೆ ಕೆಸಿಸಿಐ ಮತ್ತಿತರ ಸಂಸ್ಥೆಗಳ ನೆರವು ಪಡೆಯಲಾಗುವುದು.

 

15 ದಿನಗಳಲ್ಲಿ ಕೌಂಟರ್ ಕಂಪ್ಯೂಟರೀಕರಣ ಮಾಡಲಾಗುವುದು ಎಂದು ಅವರು ವಿವರಿಸಿದರು. ಮುಂಗಡಪಾವತಿ ಆದರೂ ರಿಕ್ಷಾದವರು ಹೊರಡುವ ಮೊದಲು ಕಡ್ಡಾಯವಾಗಿ ಮೀಟರ್ ಹಾಕಬೇಕು. ಪ್ರಯಾಣಿಕರು ಸಹ ಈ ಬಗ್ಗೆ ಹೇಳಬೇಕು. ನಿಗದಿತ ಸ್ಥಳಕ್ಕಿಂತ ಜಾಸ್ತಿ ಪ್ರಯಾಣ ಮಾಡಿದರೆ ಹೆಚ್ಚುವರಿ ಹಣ ನೀಡಬೇಕು.ಮತ್ತೆ ಮೀಟರ್ ಹಾಕಿ ಪ್ರಯಾಣಿಕರನ್ನು ಸುಲಿಗೆ ಮಾಡುವಂತಿಲ್ಲ ಎಂದು ಅವರು ಎಚ್ಚರಿಸಿದರು. ರಿಕ್ಷಾದವರು ಸುಲಿಗೆ ಮಾಡಿದರೆ ಪ್ರಯಾಣಿಕರು ಪ್ರಾದೇಶಿಕ ಸಾರಿಗೆ ಕಚೇರಿಯ ದೂರವಾಣಿ ಸಂಖ್ಯೆ 2220577 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ 100ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದರು.ಮುಂಗಡ ಪಾವತಿ ದರ: 0-1.5 ಕಿ.ಮೀ.ಗೆ ರೂ 17, 1.5-2.5 ಕಿ.ಮೀಗೆ ರೂ 29, 3.5 ಕಿ.ಮೀಗೆ ರೂ 41, 4.5 ಕಿ.ಮೀ.ಗೆ ರೂ 53, 5.5 ಕಿ.ಮೀಗೆ ರೂ 65, 6.5 ಕಿ.ಮೀಗೆ ರೈ 77, 7.5 ಕಿ.ಮೀಗೆ ರೂ 89, 8.5 ಕಿ.ಮೀಗೆ ರೂ 101, 9.5 ಕಿ.ಮೀ.ಗೆ ರೂ 113 ದರ ಪಾವತಿಸಬೇಕು.ಪಾಲಿಕೆ ವ್ಯಾಪ್ತಿಯಿಂದ ಹೊರಗೆ ಪ್ರಯಾಣಿಸಿದರೆ ಒಂದೂವರೆ ಪಟ್ಟು ದರ ಪಾವತಿ ಬೇಕು. ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ನಮೂದಿಸಿದ ದರದ ಒಂದೂವರೆ ಪಟ್ಟು ಮೀರಬಾರದು ಎಂದು ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.ಕಾಯುವ ದರ: ಮೊದಲ 15 ನಿಮಿಷ ಉಚಿತ, ನಂತರದ ಪ್ರತಿ 45 ನಿಮಿಷದ ವರೆಗೆ ಪ್ರಯಾಣ ದರದ ಶೇ 25. ಲಗೇಜು ದರ: ಮೊದಲ 20 ಕೆ.ಜಿ. ಉಚಿತ, ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ರೂ 2ರಂತೆ ನೀಡಬೇಕು. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬೆಳಿಗ್ಗೆ 5ರಿಂದ ರಾತ್ರಿ 11ರ ವರೆಗೆ, ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 4ರಿಂದ ರಾತ್ರಿ 11ರ ವರೆಗೆ ಕೌಂಟರ್ ತೆರೆದಿರುತ್ತದೆ ಎಂದು ಅವರು ಮಾಹಿತಿ ನೀಡಿದರು.ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್, ಕೆಸಿಸಿಐ ಅಧ್ಯಕ್ಷೆ ಲತಾ ಕಿಣಿ, ಡಿಸಿಪಿ ಧರ್ಮಯ್ಯ, ಎಸಿಪಿ ಸುಬ್ರಹ್ಮಣ್ಯ, ಇನ್ಸ್‌ಪೆಕ್ಟರ್ ಮಂಜುನಾಥ ಶೆಟ್ಟಿ, ಮಂಗಳೂರು ಟ್ರಾವೆಲ್ ಏಜೆನ್ಸಿ ಅಧ್ಯಕ್ಷ ರೋಶನ್ ಪಿಂಟೋ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.