ಗುರುವಾರ , ಡಿಸೆಂಬರ್ 12, 2019
17 °C

ಕಂಗೊಳಿಸುತ್ತಿರುವ ಕನಕಗೋಪುರ, ರಥಬೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಗೊಳಿಸುತ್ತಿರುವ ಕನಕಗೋಪುರ, ರಥಬೀದಿ

ಉಡುಪಿ: ಭಾವಿ ಪರ್ಯಾಯ ಪೀಠಾಧೀಶ ಸೋದೆ ವಿಶ್ವವಲ್ಲಭ ಸ್ವಾಮೀಜಿ ಅವರ ಸಂಭ್ರಮದ ಪುರಪ್ರವೇಶವೂ ಮುಗಿಯಿತು. ಪರ್ಯಾಯ ಪೀಠದ ಪೂರ್ವಭಾವಿಯಾಗಿ ನಡೆಯುವ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ, ಭತ್ತ ಮುಹೂರ್ತ, ಕಟ್ಟಿಗೆ ತೇರಿಗೆ ಶಿಖರವಿಡುವುದು, ಚಪ್ಪರ ಮಹೂರ್ತ... ಮೊದಲಾದ ಎಲ್ಲ ಮುಹೂರ್ತಗಳೂ ಮುಕ್ತಾಗೊಂಡಿವೆ.ಇನ್ನು ಪರ್ಯಾಯೋತ್ಸವದ ಮುನ್ನಾದಿನವಾದ ಜ.17 ರಂದು ಹಾಗೂ ಮಾರನೆಯ ದಿನ ನಡೆಯುವ ಪರ್ಯಾಯಪೀಠಾರೋಹಣ ಕಾರ್ಯಕ್ರಮಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ  ಇನ್ನೇನಿದ್ದರೂ ಪ್ರತಿ ದಿನವೂ ಪರ್ಯಾಯ ಪ್ರಾರಂಭವಾಗುವವರೆಗೆ ಹೊರೆಕಾಣಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವೇ ರಥಬಿದಿಯಲ್ಲಿ ನಡೆಯುತ್ತವೆ.ಪರ್ಯಾಯ ಮಹೋತ್ಸವಕ್ಕೆ ಇನ್ನು 15ದಿನಗಳು ಮಾತ್ರವೇ ಬಾಕಿ ಇವೆ. ಈಗಾಗಲೇ ಎಲ್ಲ ಬಗೆಯ ಸಿದ್ಧತೆಗಳು ನಡೆದಿವೆ. ಉಡುಪಿ ಶ್ರೀಕೃಷ್ಣಮಠದ ಬಳಿಯಲ್ಲಿನ ಕನಕಗೋಪುರಕ್ಕೆ ಈಗ ಹೊಸ ಕಳೆ ಬಂದಿದೆ. ತಿಳಿ ಹಳದಿಯೊಂದಿಗೆ ಚಿನ್ನದ ಬಣ್ಣದ ಲೇಪನ ಮಾಡಿರುವ ಗೋಪುರಕ್ಕೆ ಹೊಸ ನೋಟ ಬಂದಿದೆ.ಕನಕಗೋಪುರ ಕೃಷ್ಣಮಠದ ಬಹಳ ಪ್ರಮುಖ ಸ್ಥಳ. ಅಲ್ಲಿಯೇ ಕನಕನಕಿಂಡಿ ಇರುವುದು. ಈ ಹಿಂದೆ ಕಲ್ಲಿನಲ್ಲಿದ್ದ ಈ ಗೋಪುರವನ್ನೇ ಬಳಿಕ ಬದಲಾಯಿಸಿ ಕನಕಗೋಪುರವನ್ನು ನಿರ್ಮಾಣಮಾಡಲಾಗಿದೆ. ಆಯಾ ಸ್ವಾಮೀಜಿಗಳು ತಮ್ಮ ಪರ್ಯಾಯದ ಕಾಲದಲ್ಲಿ ಈ ಕನಕಗೋಪುರಕ್ಕೆ ತಮಗೆ ಬೇಕಾದಂತೆ ಸಿಂಗರಿಸಿಕೊಳ್ಳುವ ಅವಕಾಶವಿದೆ.ಕಳೆದ ಪರ್ಯಾಯದಲ್ಲಿ ಕಾವಿಬಣ್ಣದಲ್ಲಿ ಕಂಗೊಳಿಸುತ್ತಿದ್ದ ಕನಕ ಗೋಪುರ ಈ ಬಾರಿ ತಿಳಿ ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿದೆ. ರಥಬೀದಿಯದ್ದಕ್ಕೂ ಇರುವ ಅಷ್ಟಮಠಗಳ ಮುಂಭಾಗದಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ರಾತ್ರಿಯಲ್ಲಿ ಇಡೀ ರಥಬೀದಿ ಝಗಮಗಿಸುತ್ತಿದೆ.

 

ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಕಮಾನುಗಳನ್ನು ಸಿದ್ಧಪಡಿಸಲಾಗಿದೆ. ನಗರದಲ್ಲಿ ಎಲ್ಲೆಡೆಗಳಲ್ಲಿ ಸ್ವಾಮೀಜಿಗಳ ಪರ್ಯಾಯಕ್ಕೆ ಶುಭಕೋರುವ ಬ್ಯಾನರ್, ದೊಡ್ಡ ದೊಡ್ಡ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ನಗರದ ಅನೇಕ ರಸ್ತೆಗಳನ್ನು ವಿಸ್ತರಿಸುವ, ಗುಂಡಿಮುಚ್ಚುವ, ದುರಸ್ತಿ ಮಾಡುವ ಅಂದಗೊಳಿಸುವ ಹಾಗೂ ಸ್ವಚ್ಛಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.ಎರಡು ವರ್ಷಕ್ಕೊಮ್ಮೆ  ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕೆ ಸ್ವಾಮೀಜಿಗಳು ಬದಲಾಗುವ ಹೊತ್ತಿನಲ್ಲಿ ಇಡೀ ಕೃಷ್ಣಮಠದ ವಾತಾವರಣ, ಚಿತ್ರಣವೇ ಬದಲಾಗುತ್ತದೆ. ಅದಕ್ಕಾಗಿ ಇಡೀ ನಗರವೇ ಸಜ್ಜುಗೊಳ್ಳುತ್ತದೆ. ಪರ್ಯಾಯವೆನ್ನುವುದು ನಾಡಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳೇ ಈ ಪರ್ಯಾಯೋತ್ಸವದ ಗೌರವಾಧ್ಯಕ್ಷರೂ ಆಗಿರುವುದು ಈ ಬಾರಿಯ ಪರ್ಯಾಯದ ವಿಶೇಷವೂ ಹೌದು. ಅಲ್ಲದೇ ಈ ಪರ್ಯಾಯೋತ್ಸವಕ್ಕಾಗಿ ಸರ್ಕಾರ ರೂ. 3 ಕೋಟಿ ಅನುದಾನ ಕೂಡ ಬಿಡುಗಡೆ ಮಾಡಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರೂ.5 ಕೋಟಿ ವೆಚ್ಚಮಾಡುತ್ತಿದೆ. ಒಟ್ಟಿನಲ್ಲಿ ಪರ್ಯಾಯವೆನ್ನುವುದು ಉಡುಪಿ ವಾತಾವರಣಕ್ಕೆ ಸಂಭ್ರಮ ಮೂಡಿಸುತ್ತಿದೆ.ಸೋದೆ ಮಠದ ಪರ್ಯಾಯದ ಹಿನ್ನೆಲೆಯಲ್ಲಿ ಮಠದ ವಿವರಗಳನ್ನು ನೀಡುವ ಹಾಗೂ ದೈನಂದಿನ ಕಾರ್ಯಕ್ರಮ ವಿವರಗಳನ್ನು ನೀಡುವ ಉದ್ದೇಶದಿಂದ ಸೋದೆಮಠದ ಹೊಸ ವೆಬ್‌ಸೈಟ್ ಪ್ರಾರಂಭಿಸಲಾಗಿದೆ. ಜಿಲ್ಲಾ ನ್ಯಾಯಾಧೀಶ ನರೇಂದ್ರ ಕುಮಾರ್ ಗುಣಕಿ ಸೋಮವಾರ ಸಂಜೆ ಈ ವೆಬ್‌ಸೈಟ್‌ಗೆ ಸೋದೆಶ್ರೀ ಸಮ್ಮುಖದಲ್ಲಿ ಚಾಲನೆ ನೀಡಿದ್ದಾರೆ. ಆ ಮೂಲಕ ಹೊರ ನಾಡಿನಲ್ಲಿರುವ, ಹೊರದೇಶದಲ್ಲಿನ ಭಕ್ತರು ಕೂಡ ಅಂತರ್ಜಾಲದ ಮೂಲಕ ಪರ್ಯಾಯ ವೀಕ್ಷಿಸಬಹುದು.

ಪ್ರತಿಕ್ರಿಯಿಸಿ (+)