ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಘಟಕ: ಸಚಿವ ರೈ

7

ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಘಟಕ: ಸಚಿವ ರೈ

Published:
Updated:

ಬಂಟ್ವಾಳ: ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ರೂ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ಬಳಿ ದುರ್ವಾ­ಸನೆ ಬೀರುವ ತ್ಯಾಜ್ಯ ಸಮಸ್ಯೆ ನಿವಾರಣೆ­ಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಇವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಆಡಳಿತದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಈಗಾಗಲೇ ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ರೂ 1.21 ಲಕ್ಷ ವೆಚ್ಚದ ಕಾಮಗಾರಿ ಆರಂಭಿಸಲಾಗಿದ್ದು, ಈ ಅನುದಾನ ವ್ಯರ್ಥವಾಗದಂತೆ ತಡೆಯುವ ನಿಟ್ಟಿನಲ್ಲಿ ಅಲ್ಲೇ ತ್ಯಾಜ್ಯ ಸಂಸ್ಕರಣಾ ಘಟಕ ಕಾಮ­ಗಾರಿ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿ­ದರು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರನ್ನು ಕರೆಸಿ ಮತ್ತೆ ಸ್ಥಳ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು.ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಜಗದೀಶ ಕುಂದರ್ ಅವರು ಈ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಇತರ ಸದಸ್ಯರು ಧ್ವನಿಗೂಡಿಸಿದರು.

12 ವರ್ಷಗಳಿಂದ ಬಾಕಿ ಇರುವ ಪರಿಷ್ಕೃತ ಮನೆ ತೆರಿಗೆಯನ್ನು ದಂಡಸಹಿತ ಸಾವಿರಾರು ಮೊತ್ತದಲ್ಲಿ ಒಂದೇ ಬಾರಿ ನಾಗರಿಕರಿಂದ ವಸೂಲಿ ಮಾಡಲು ಮುಂದಾಗಿರುವ ಪುರಸಭೆ ಕ್ರಮವನ್ನು ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ತರಾಟೆಗೆ ತೆಗೆದುಕೊಂಡರು.ಇನ್ನೊಂದೆಡೆ ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯಿಂದ ಏಕಾಏಕಿ ರಸ್ತೆ ಬದಿ ಅಗೆದುಹಾಕಿ ಬೃಹತ್ ಗಾತ್ರದ ಪೈಪ್ ಅಳವಡಿಸುವ ಮೂಲಕ ಮಂಗಳೂರಿನ ಸೆಝ್ ಕಂಪೆನಿಗೆ ನೀರು ಪೂರೈಸುತ್ತಿರುವ ಕಂಪೆನಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರ್ಯವೈಖರಿಯನ್ನು ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಮತ್ತು ಪಕ್ಷೇತರ ಸದಸ್ಯ ಪ್ರವೀಣ ಜಕ್ರಿಬೆಟ್ಟು ಇವರು ಟೀಕಿಸಿದರು.ಆರೇಳು ವರ್ಷಗಳಿಂದ ರೂ 12 ಕೋಟಿ ವೆಚ್ಚದಲ್ಲಿ ಬಂಟ್ವಾಳ, ಬಿ.ಸಿ.ರೋಡ್ ಮತ್ತು ಪಾಣೆ­ಮಂಗಳೂರು ಪ್ರದೇಶಗಳಲ್ಲಿ ಒಳಚರಂಡಿ ಕಾಮ­ಗಾರಿ ನೆಪದಲ್ಲಿ ರಸ್ತೆ ಹಾಳು ಮಾಡಿರುವ ಬಗ್ಗೆ ವಿರೋಧ ಪಕ್ಷದ ಬಿ.ದೇವದಾಸ ಶೆಟ್ಟಿ ಮತ್ತು ಎ.ಗೋವಿಂದ ಪ್ರಭು ಅವರು ಆಕ್ಷೇಪಿಸಿದರು.ಸಚಿವ ರೈ ಪ್ರತಿಕ್ರಿಯಿಸಿ, ಮುಂದಿನ ಸಭೆಗೆ ಸೆಝ್ ಕಂಪೆನಿ ಮತ್ತು ಒಳಚರಂಡಿ ಮಂಡಳಿ ಅಧಿಕಾರಿ­ಗಳನ್ನು ಕರೆಸುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ಯಾಸ್ಮಿನ್ ಅಹ್ಮದ್, ಮುಖ್ಯಾಧಿಕಾರಿ ಆರ್.ವಿ.­ಜತ್ತನ್ನ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಆರೋಗ್ಯಾಧಿಕಾರಿ ರಾಜಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry