ಕಂಟೇನರ್ ಬಂದರೂ ವಿಲೇವಾರಿಯಾಗದ ಕಸ!

7

ಕಂಟೇನರ್ ಬಂದರೂ ವಿಲೇವಾರಿಯಾಗದ ಕಸ!

Published:
Updated:

ಹಾವೇರಿ: ಸ್ವಚ್ಛತೆ ಇಲ್ಲದೇ ಕಸದ ತೊಟ್ಟೆಯಂತಿರುವ ಹಾವೇರಿ ನಗರದ ಕಸದ ಸಂಗ್ರಹಣೆಗಾಗಿ ವಾರ್ಡಿಗೊಂದು ಕಂಟೇನರ್ (ದೊಡ್ಡ ಕಸದ ತೊಟ್ಟೆ)  ಇಟ್ಟಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಯಾವುದೇ ಪ್ರಯೋಜನಕ್ಕೆ ಬಾರದಾಗಿದೆ.ನಗರದಲ್ಲಿ ಸ್ವಚ್ಛತೆ ಕೊರತೆಯಿದ್ದು, ಎಲ್ಲೆಂದರಲ್ಲಿ ಕಸದ ಗುಡ್ಡೆಗಳೇ ಬಿದ್ದಿವೆ. ಅವುಗಳಲ್ಲಿ ಹಂದಿಗಳು ಹೊರಳಾಡಿ ಕಸವೆಲ್ಲ ರಸ್ತೆ ಮೇಲೆ ಹರಿದಾಡುತ್ತಿದೆ. ಆದರೂ ಕೂಡಾ ನಗರಸಭೆ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ನಗರದಲ್ಲಿ ಸಾಮಾನ್ಯವಾಗಿದೆ.ಸಿಬ್ಬಂದಿ ಕೊರತೆ, ಒಳಚರಂಡಿ ನಿರ್ಮಾಣ ಕಾಮಗಾರಿ, ಹಂದಿಗಳ ಉಪಟಳದಂತಹ ನೆಪಗಳನ್ನು ಹೇಳಿ ನಗರದ ಜನತೆಗೆ ಸಮಜಾಯಿಸಿ ನೀಡುತ್ತಾ ಬಂದ ನಗರಸಭೆ, ಇತ್ತೀಚೆಗಷ್ಟೇ ಸಣ್ಣ ಕಸದತೊಟ್ಟೆಗಳನ್ನು ನಗರದ ವಿವಿಧೆಡೆ ಅಳವಡಿಸಿದೆ. ಆದರೆ, ಅದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡದ ಕಾರಣ ಯಾರೂ ಆ ಕಸದ ತೊಟ್ಟೆಯಲ್ಲಿ ಕಸ ಹಾಕದೇ ರಸ್ತೆ ಬದಿಯಲ್ಲಿ ಬೀಸಾಕುವುದು ಮುಂದುವರೆದಿದೆ.ಹೊಸ ಕಂಟೇನರ್: ಸಣ್ಣ ಕಸದ ತೊಟ್ಟೆಯಿಂದ ಕಸದ ಸಂಗ್ರಹ ಸಾಧ್ಯವಾಗದಿರುವುದರಿಂದ ನಗರಸಭೆ ಕಸದ ನಿರ್ವಹಣೆಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ 31 ಹೊಸ ಕಂಟೇನರ್‌ಗಳನ್ನು, ಆರು ಬಕೇಟ್‌ಗಳುಳ್ಳ 31 ಪುಸ್ಕಾರ್ಟ್ (ತಳ್ಳುವ ಗಾಡಿ) ಗಳನ್ನು ಹಾಗೂ ಎಂಟುವರೆ ಲಕ್ಷ ರೂ.ಗಳಲ್ಲಿ ಕಸದ ಕಂಟೇನರ್ ಎತ್ತಿಕೊಂಡು ಹೋಗಲು ಒಂದು ಟ್ರ್ಯಾಕ್ಟರ್ ಖರೀದಿಸಲಾಗಿದೆ.ಹಾಗೇ ಖರೀದಿಸಿದ ಕಂಟೇನರ್‌ಗಳನ್ನು ಈಗಾಗಲೇ ನಗರದ ಪ್ರತಿಯೊಂದು ವಾರ್ಡಿಗೆ ಒಂದರಂತೆ ಇಡಲಾಗಿದೆ. ವಾರ್ಡಿಗೊಂದು ಪುಸ್ಕಾರ್ಟ್‌ಗಳನ್ನು ಸಹ ನೀಡಲಾಗಿದೆ. ಆದರೆ, ಒಂದೊಂದು ವಾರ್ಡ್‌ನಲ್ಲಿ ಸುಮಾರು 800 ರಿಂದ ಸಾವಿರ ಮನೆಗಳು ಇದ್ದು. ಇಷ್ಟೊಂದು ಮನೆಗಳ ಕಸವನ್ನು ಹಾಕಲು ಒಂದೇ ಕಂಟೇನರ್ ಯಾವುದಕ್ಕೂ ಸಾಕಾಗುವುದಿಲ್ಲ. ಅದು ಅಲ್ಲದೇ ವಾರ್ಡಿನ ಯಾವುದೇ ಮೂಲೆಯಲ್ಲಿ ಕಂಟೇನರ್‌ನ್ನು ಇಟ್ಟರೆ ವಾರ್ಡಿನ ಎಲ್ಲ ಜನರು ಕಸವನ್ನು ಅಲ್ಲಿಗೆ ಹೋಗಿ ಹಾಕುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.ಮಾರುಕಟ್ಟೆ ಪ್ರದೇಶಗಳಲ್ಲಿ ಇಟ್ಟ ಕಂಟೇನರ್‌ನಲ್ಲಿ ಕಸ ತುಂಬಿ ಹೊರ ಚೆಲ್ಲಿದರೂ ಅವುಗಳನ್ನು ಎತ್ತಿಕೊಂಡು ಹೋಗುವ ಕೆಲಸವಾಗಿಲ್ಲ. ಹೀಗಾಗಿ ಕಂಟೇನರ್‌ಗಳನ್ನು ಇಟ್ಟರೂ ಯಾವುದೇ ಪ್ರಯೋಜನಕ್ಕೆ ಬಾರದಾಗಿದೆ ಎಂದು ನಗರದ ಗೂಗಿಕಟ್ಟಿ ಪ್ರದೇಶದ ವ್ಯಾಪಾರಿ ರಾಮಣ್ಣ ಅಗಡಿ ಆರೋಪಿಸುತ್ತಾರೆ.ಕಸ ಸಂಗ್ರಹ: ವಾರ್ಡಿಗೆ ಒಂದು ಕಂಟೇನರ್ ಇಡಲಾಗಿದ್ದು, ಪ್ರತಿ ವಾರ್ಡಿಗೆ ಆರು ಬಕೇಟ್‌ಗಳುಳ್ಳ ಪುಸ್ಕಾರ್ಟ್‌ನ್ನು ನೀಡಲಾಗಿದೆ. ನಗರಸಭೆ ಸಿಬ್ಬಂದಿ ಪ್ರತಿಯೊಂದು ಮನೆಗಳಿಗೆ ತೆರಳಿ ಕಸವನ್ನು ಸಂಗ್ರಹಿಸಿ ಈ ಕಂಟೇನರ್‌ಗಳಲ್ಲಿ ಹಾಕುತ್ತಾರೆ ಎಂದು ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ಹೇಳುತ್ತಾರೆ.ಕಂಟೇನರ್ ಅಳವಡಿಕೆಯಿಂದ ನಗರದ ಸಾರ್ವಜನಿಕರಿಗೆ ಕಸದ ವಿಲೇವಾರಿಗೆ ಅನುಕೂಲವಾಗಿದ್ದು, ಜನರು ಸಹ ತಮ್ಮ ಸುತ್ತ ಮುತ್ತಲಿನ ಬಯಲು ಜಾಗೆಯಲ್ಲಿ ಕಸವನ್ನು ಹಾಕದೇ ಮನೆಗೆ ಆಗಮಿಸುವ ಕಸ ಸಂಗ್ರಹಕಾರರಿಗೆ ಕಸವನ್ನು ನೀಡಿ ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ.ಈಗಾಗಲೇ ಕಸ ತುಂಬಿರುವ ಕಂಟೇನರ್‌ಗಳ ಹೊತ್ತೊಯ್ಯುವ ಕೆಲಸ ಕೂಡಾ ಆರಂಭವಾಗಿದೆ. ಈ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಕಷ್ಟಸಾಧ್ಯ: ನಗರಸಭೆ ಅಧ್ಯಕ್ಷರು ಹೇಳಿದಂತೆ ಯಾವುದೇ ಕಸ ಸಂಗ್ರಹಕಾರರು ಇದುವರೆಗೆ ಆಗಮಿಸಿಲ್ಲ. ಅದು ಅಲ್ಲದೇ ವಾರ್ಡಿನಲ್ಲಿ ಕಂಟೇನರ್ ಇಟ್ಟಿರುವ ಬಗ್ಗೆಯೇ ಮಾಹಿತಿ ಇಲ್ಲ. ಇಡೀ ಒಂದು ವಾರ್ಡಿಗೆ ಒಂದೇ ಪುಸ್ಕಾರ್ಟ್ ನೀಡಿದರೆ, ಅದು ಇಡೀ ವಾರ್ಡಿನ ಕಸವನ್ನು ಸಂಗ್ರಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಬಸವೇಶ್ವರ ನಗರದ ನಿವಾಸಿ ವಿ.ಎಂ.ಪತ್ರಿ ಅವರು, ನಗರಸಭೆ ಸಿಬ್ಬಂದಿಗೆ ಒಂದು ದಿನವಲ್ಲ. ಒಂದು ವಾರ ಕಳೆದರೂ ಇಡೀ ವಾರ್ಡ್‌ನ ಕಸ ಸಂಗ್ರಹ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಜನರು ಅನಿವಾರ್ಯವಾಗಿ ಬಯಲು ಜಾಗೆಯಲ್ಲಿ ಕಸ ಎಸೆಯಬೇಕಾಗುತ್ತದೆ ಎಂದು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry